ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಸರ್ಕಾರದಿಂದ ತೆರಿಗೆ ಭಯೋತ್ಪಾದನೆ: ಪ್ರಕಾಶ ರಾಠೋಡ ಆರೋಪ

Last Updated 2 ಜುಲೈ 2021, 12:36 IST
ಅಕ್ಷರ ಗಾತ್ರ

ವಿಜಯಪುರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ದೇಶದಲ್ಲಿ ತೆರಿಗೆ ಭಯೋತ್ಪಾದನೆ ನಡೆಸುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ ಆರೋಪಿಸಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಅನುಸರಿಸುತ್ತಿರುವ ತೆರಿಗೆ ನೀತಿ ದೇಶದ ಮಧ್ಯಮ ಮತ್ತು ದುಡಿಯುವ ವರ್ಗಗಳ ಮೇಲೆ ಭೀಕರ ಪರಿಣಾಮ ಭೀರಿದೆ ಎಂದು ಹೇಳಿದರು.

ದೇಶದ ಪ್ರಗತಿ–ನೆಮ್ಮದಿಗಳೆರಡೂ ಆ ದೇಶದ ತೆರಿಗೆ ನೀತಿ ಹೇಗಿದೆ ಎಂಬುದರ ಮೇಲೆ ತೀರ್ಮಾನವಾಗುತ್ತದೆ. ದೇಶದ ಆರ್ಥಿಕತೆ ಮೋದಿ ಅವರ ಅಪಕ್ವ, ಕಾರ್ಪೊರೇಟ್‌ ಪರ ನೀತಿಯಿಂದಾಗಿ ನೆಲ ಕಚ್ಚಿದೆಎಂದರು.

ಮನಮೋಹನ್‌ ಸಿಂಗ್‌ ಅಧಿಕಾರದಲ್ಲಿದ್ದಾಗ ಇಡೀ ಜಗತ್ತಿನಲ್ಲೇ ವೇಗವಾಗಿ ಬೆಳೆಯುತ್ತಿದ್ದ ಆರ್ಥಿಕತೆಗಳಲ್ಲಿ ಭಾರತ 5ನೇ ಸ್ಥಾನದಲ್ಲಿತ್ತು. ಆದರೆ, 2020ರ ಜಿಡಿಪಿ ಬೆಳವಣಿಗೆಯನ್ನು ಆಧರಿಸಿ ವಿಶ್ವದ 193 ದೇಶಗಳಲ್ಲಿ ಭಾರತ 164ನೇ ಸ್ಥಾನಕ್ಕೆ ಕುಸಿದಿದೆ ಎಂದು ಅರ್ಥಶಾಸ್ತ್ರಜ್ಞರು ಅಂದಾಜು ಮಾಡಿದ್ದಾರೆ ಎಂದು ಹೇಳಿದರು.

2004ರಲ್ಲಿ ವಾಜಪೇಯಿ ಸರ್ಕಾರವು ಜನರಿಂದ ಶೇ72ರಷ್ಟು ಮತ್ತು ಕಾರ್ಪೊರೇಟ್‌ ಬಂಡವಾಳಶಾಹಿಗಳಿಂದ ಶೇ28ರಷ್ಟು ತೆರಿಗೆಯನ್ನು ಸಂಗ್ರಹಿಸುತ್ತಿತ್ತು. ಆದರೆ, 2010ರಲ್ಲಿ ಮನಮೋಹನ್‌ ಸಿಂಗ್‌ ಸರ್ಕಾರ ಜನರಿಂದ ಸಂಗ್ರಹಿಸುವ ತೆರಿಗೆಯನ್ನು ಶೇ58ಕ್ಕೆ ಇಳಿಸಿದರು. ಕಾರ್ಪೊರೇಟ್‌ ಕಂಪನಿಗಳಿಂದ ಸಂಗ್ರಹಿಸುವ ತೆರಿಗೆಯನ್ನು ಶೇ 28ರಿಂದ ಶೇ 40ಕ್ಕೆ ಹೆಚ್ಚಿಸಿದರು ಎಂದು ಆರೋಪಿಸಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ 2014ರ ವರೆಗೆ 67 ವರ್ಷಗಳ ಆಡಳಿತಾವಧಿಯಲ್ಲಿ ಮಾಡಿದ್ದ ಸಾಲ ₹53.11 ಲಕ್ಷ ಕೋಟಿಗಳಾದರೆ. 2014ರಿಂದ 2021ರ ಅವಧಿಯಲ್ಲಿ ಮಾಡಿರುವ ಸಾಲ ₹82.7 ಲಕ್ಷ ಕೋಟಿ. ಈ ಎರಡೂ ಸೇರಿ ಈ ವರ್ಷದ ಅಂತ್ಯಕ್ಕೆ ₹ 135.87 ಲಕ್ಷ ಕೋಟಿಗಳಾಗುತ್ತದೆ ಎಂದು ಹೇಳಿದರು.

ಪ್ರಧಾನಿ ಮೋದಿ ಅವರ ಪರಮಾಪ್ತ ಕಾರ್ಪೊರೇಟ್‌ ಬಂಡವಾಳಿಗರ ಸುಮಾರು ₹11 ಲಕ್ಷ ಕೋಟಿ ಸಾಲವನ್ನು ವಸೂಲಾಗದ ಸಾಲ(ಎನ್‌ಪಿಎ) ಎಂದು ಘೋಷಿಸಲಾಗಿದೆ. ಕಳೆದ 7 ವರ್ಷಗಳಲ್ಲಿ ₹7 ಲಕ್ಷ ಕೋಟಿಗೂ ಅಧಿಕ ಮೊತ್ತವನ್ನು ಮನ್ನಾ(ರೈಟ್‌ ಆಫ್‌) ಮಾಡಲಾಗಿದೆ ಎಂದರು.

ಮಾರಾಟವಾಗುತ್ತಿರುವ ಇಂಡಿಯಾ: ಮೋದಿ ಅವರು ಘೋಷಣೆ ಮಾಡಿರುವುದು ಮೇಕ್‌ ಇನ್‌ ಇಂಡಿಯಾ ಅಲ್ಲ, ಮಾರಾಟವಾಗುತ್ತಿರುವ ಇಂಡಿಯಾ ಎಂದು ಅವರುಟೀಕಿಸಿದರು.

ಮೇಕ್‌ ಇನ್‌ ಇಂಡಿಯಾ ಪ್ರಕಾರಆಮದು ಕಡಿಮೆಯಾಗಿ, ರಫ್ತು ಹೆಚ್ಚಾಗಬೇಕಿತ್ತು. ಆದರೆ, ರಫ್ತು ಕಡಿಮೆಯಾಗಿ ಆಮದು ಹೆಚ್ಚಾಗಿದೆ. ಮೇಕ್‌ ಇನ್‌ ಇಂಡಿಯಾ ಘೋಷಣೆ ಬರೀ ಬುರ್ನಾಸು ಎನಿಸಿಕೊಂಡಿದೆ ಎಂದು ಹೇಳಿದರು.

ದೇಶದಲ್ಲಿ ಇರುವ ದೊಡ್ಡ ಸಂಖ್ಯೆಯ ಯುವಕರು ಉದ್ಯೋಗವಿಲ್ಲದೇ ವಯಸ್ಸು ಕಳೆಯುತ್ತಿದ್ದಾರೆ. ಬದುಕು ಕಟ್ಟಿಕೊಳ್ಳುವ ಅವರ ಕನಸುಗಳೆಲ್ಲ ಕಣ್ಣೆದುರೇ ಕಮರಿ ಹೋಗಿವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಅಬ್ದುಲ್‌ ಹಮೀದ್‌ ಮುಶ್ರೀಫ್‌, ಎಸ್‌.ಎಂ.ಪಾಟೀಲ ಗಣಿಯಾರ, ಮಹಮ್ಮದ್‌ ರಫೀಕ್‌ ಟಪಾಲ್‌, ವೈಜನಾಥ ಕರ್ಪೂರಮಠ, ಜಮೀರ್‌ ಅಹ್ಮದ್‌ ಬಕ್ಷಿ, ಐ.ಎಂ.ಇಂಡಿಕರ್‌, ಆರ್‌.ಪಿ.ಶಹಪೂರ, ವಸಂತ ಹೊನಮೋಡೆ ಉಪಸ್ಥಿತರಿದ್ದರು.

ಲಸಿಕೆ ಪೂರೈಕೆಯಲ್ಲಿ ತಾರತಮ್ಯ
ವಿಜಯಪುರ:
ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ವಿಜಯಪುರಕ್ಕೆ ಪೂರೈಕೆಯಾಗುತ್ತಿರುವ ಕೋವಿಡ್‌ ಲಸಿಕೆ ಪ್ರಮಾಣ ತೀರಾ ಕಡಿಕೆಯಾಗಿದ್ದು, ರಾಜ್ಯ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ವಿಧಾನ ಪರಿಷತ್‌ ಸದಸ್ಯ ಪ್ರಕಾಶ ರಾಠೋಡ ಆರೋಪಿಸಿದರು.

ಜಿಲ್ಲೆಯಲ್ಲಿ 16 ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ನಿಗದಿಯಾಗಿದೆ. ಆದರೆ, ಕಳೆದ ಮೂರು ತಿಂಗಳ ಅವಧಿಯಲ್ಲಿ 4 ಲಕ್ಷ ಜನರಿಗೆ ಒಂದು ಡೋಸ್‌ ಹಾಗೂ 1 ಲಕ್ಷ ಜನರಿಗೆ ಎರಡನೇ ಡೋಸ್‌ ನೀಡಲಾಗಿದೆ ಎಂದು ಹೇಳಿದರು.

ಸಿಂದಗಿ, ದೇವರ ಹಿಪ್ಪರಗಿ ತಾಲ್ಲೂಕಿನಕಟ್ಟಡ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆಯಾಗಿಲ್ಲ ಎಂದು ಆರೋಪಿಸಿದರು.

***
ಯುಪಿಎ ಸರ್ಕಾರದ ಅವಧಿಯಲ್ಲಿ ಬೆಲೆ ಏರಿಕೆ ವಿರೋಧಿಸಿ ಬಿಜೆಪಿಯಿಂದ ಹಣ ಪಡೆದು ಹೇಳಿಕೆ ನೀಡುತ್ತಿದ್ದ ಅಮಿತಾ ಬಚ್ಚನ್‌, ಅಕ್ಷಯಕುಮಾರ್‌, ಅನುಪಮ್‌ ಕೇರ್‌, ಅಣ್ಣಾ ಹಜಾರೆ, ಬಾಬಾ ರಾಮದೇವ್‌ ಈಗ ಎಲ್ಲಿ ಅಡಗಿದ್ದಾರೆ?
–ಪ್ರಕಾಶ ರಾಠೋಡ, ವಿಧಾನ ಪರಿಷತ್‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT