ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇ ವರ್ಷವೂ ರದ್ದಾದ ಕಾಳಗಿ ರಥೋತ್ಸವ

Last Updated 5 ಮೇ 2021, 13:23 IST
ಅಕ್ಷರ ಗಾತ್ರ

ಕಾಳಗಿ: ತೀರ್ಥಕ್ಷೇತ್ರ, ದಕ್ಷಿಣಕಾಶಿಯ ಆರಾಧ್ಯದೇವ ಇಲ್ಲಿನ ನೀಲಕಂಠ ಕಾಳೇಶ್ವರ ಜಾತ್ರೆಗೆ ಕೋವಿಡ್ ಕರಿನೆರಳು ಆವರಿಸಿ ಬುಧವಾರ ರಥೋತ್ಸವ ಜರುಗಲಿಲ್ಲ.

ಕಲಬುರ್ಗಿ, ಬೀದರ್, ಸೊಲ್ಲಾಪುರ, ಆಂಧ್ರ, ತೆಲಂಗಾಣದ ಅಪಾರ ಜನರ ಶ್ರದ್ಧಾ, ಭಕ್ತಿಯ ಸಂಗಮದೊಂದಿಗೆ ಪ್ರತಿವರ್ಷ ಕನಿಷ್ಠ ಇಪ್ಪತ್ತೈದು ದಿನ ಜರುಗುವ ಜಾತ್ರೆಗೆ ಕಳೆದವರ್ಷ ಕೋವಿಡ್ ಲಾಕ್‌ಡೌನ್ ಅಪ್ಪಳಿಸಿದ್ದರಿಂದಾಗಿ ಜಾತ್ರೆ ರದ್ದುಗೊಳಿಸಿತು. ಪ್ರಸ್ತುತ ವರ್ಷವೂ ಅದೇ ಪರಿಸ್ಥಿತಿ ನಿರ್ಮಾಣವಾಗಿ ಜಾತ್ರೆ ಕಳೆಗುಂದಿತು.

ಯುಗಾದಿ ಹಬ್ಬದ ದಿನ ಅರ್ಚಕರ ಮನೆಯಿಂದ ಪಲ್ಲಕ್ಕಿಯ ಆಗಮನದೊಂದಿಗೆ ಪ್ರಾರಂಭವಾಗುವ ಜಾತ್ರೆಯಲ್ಲಿ ಪಂಚಾಂಗ ವಾಚನ, ದೇವಸ್ಥಾನದ ಸುತ್ತಲು ನಿತ್ಯ ಪಲ್ಲಕ್ಕಿ ಪ್ರದಕ್ಷಿಣೆ, ಪ್ರಸಾದ ವಿತರಣೆ, ವಿಶೇಷ ಪೂಜೆ ನಡೆಯುತ್ತಿರುವ ಇಲ್ಲಿ ಎಲ್ಲವೂ ಮೌನವಾಗಿದ್ದವು.

ಸದಾ ಭಕ್ತರಿಂದ ತುಂಬಿತುಳುಕುವ ದೇವಸ್ಥಾನದಲ್ಲಿ ಸೋಮವಾರ ದೀಪೋತ್ಸವ, ಮಂಗಳವಾರ ಅಗ್ನಿಪೂಜೆ, ಬುಧವಾರ ರಥೋತ್ಸವ ಈ ಎಲ್ಲವೂ ಶಾಸ್ತ್ರಕ್ಕಷ್ಟೇ ಸೀಮಿತವಾದವು.

ಜನಜಂಗುಳಿ, ವಾದ್ಯಮೇಳಗಳ ಝೇಂಕಾರ ಮೊಳಗುತ್ತಿದ್ದ ದೇವಸ್ಥಾನದ ಪ್ರಾಂಗಣ ಯಾವುದೇ ಸಡಗರ ಸಂಭ್ರಮವಿಲ್ಲದೆ, ಭಕ್ತರಿಲ್ಲದೆ ಭಣಗಟ್ಟಿತು.

ಎರಡನೇ ವರ್ಷವು ದೇವಸ್ಥಾನ ಬಂದ್ ಆಗಿ ಜಾತ್ರೆ ರದ್ದಾಗಿದ್ದಕ್ಕೆ ತೀವ್ರ ಬೇಸರದಲ್ಲಿರುವ ಭಕ್ತಸ್ತೋಮ ದೇವಸ್ಥಾನದ ಕಡೆಗೆ ಸುಳಿಯದೆ ಮನೆಯೊಳಗಿದ್ದೆ ಹರಿಕೆ ಸಲ್ಲಿಸಿದರು.

ಗ್ರೇಡ್-2 ತಹಶೀಲ್ದಾರ್ ನಾಗನಾಥ ತರಗೆ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೆಂಕಟೇಶ ತೆಲಂಗ, ಸಿಪಿಐ ವಿನಾಯಕ ನಾಯಕ್ ಅವರು ಆಗಾಗ ದೇವಸ್ಥಾನದ ಕಡೆಗೆ ಮುಖಮಾಡಿ ಸಿಬ್ಬಂದಿ ಮೂಲಕ ಜಾತ್ರೆ ನಿಷೇಧದ ವ್ಯವಸ್ಥೆ ಅಚ್ಚುಕಟ್ಟಾಗಿ ಮಾಡಿದರು.

ಪ್ರತಿವರ್ಷ ರಥೋತ್ಸವದ ದಿನ ಬರುವ ಮಳೆ ಈ ದಿನವೂ ಅರ್ಧತಾಸು ಧರೆಗಿಳಿದು ಸಂಪ್ರದಾಯಕ್ಕೆ ಸಾಕ್ಷಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT