ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜು ಆರಂಭ; ಬೆರಳೆಣಿಕೆ ವಿದ್ಯಾರ್ಥಿಗಳು ಹಾಜರು

ವಿದ್ಯಾರ್ಥಿಗಳಿಗೆ ಕೋವಿಡ್‌ ರ‍್ಯಾಪಿಡ್‌ ಟೆಸ್ಟ್‌ಗೆ ಪದವಿ, ಡಿಪ್ಲೊಮಾ ಕಾಲೇಜು ಪ್ರಾಂಶುಪಾಲರ ಮನವಿ
Last Updated 17 ನವೆಂಬರ್ 2020, 14:35 IST
ಅಕ್ಷರ ಗಾತ್ರ

ವಿಜಯಪುರ: ಕೋವಿಡ್‌ ಹಿನ್ನೆಲೆಯಲ್ಲಿ ಬಂದ್‌ ಆಗಿದ್ದ ಪದವಿ ಮತ್ತು ಡಿಪ್ಲೊಮಾ ಕಾಲೇಜುಗಳುನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಂಗಳವಾರದಿಂದ ಆರಂಭವಾದರೂ ಸಹ ನಿರೀಕ್ಷಿತ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಹಾಜರಾಗಿರಲಿಲ್ಲ.

ದೀಪಾವಳಿ ಹಬ್ಬದ ರಜೆಯಿಂದ ಊರಿಗೆ ತೆರಳಿರುವ ಬಹುತೇಕ ವಿದ್ಯಾರ್ಥಿಗಳು ಒಂದೆರಡು ದಿನಗಳಲ್ಲಿ ಕಾಲೇಜಿಗೆ ಮರಳುವ ಸಾಧ್ಯತೆ ಇದೆ.

ತರಗತಿಗೆ ಹಾಜರಾಗಬೇಕಾದರೆ ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆಗೆ ಒಳಪಟ್ಟಿರಬೇಕು ಹಾಗೂ ಪೋಷಕರಿಂದ ಒಪ್ಪಿಗೆ ಪತ್ರ ತೆಗೆದುಕೊಂಡು ಬರಬೇಕು ಎಂಬ ಸರ್ಕಾರದ ಮಾರ್ಗಸೂಚಿಯೂ ವಿದ್ಯಾರ್ಥಿಗಳ ಹಾಜರಾತಿ ಕಡಿಮೆಯಾಗಲು ಕಾರಣ ಎಂಬ ಅಭಿಪ್ರಾಯ ಕೇಳಿಬಂದಿತು.

ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ವಿಜಯಪುರ ಗಾಂಧಿಚೌಕ್‌ ಬಳಿ ಇರುವ ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಆರ್‌.ಎಸ್‌.ಕಲ್ಲೂರಮಠ, ಪ್ರಸಕ್ತ ವರ್ಷ ಕಾಲೇಜಿನಲ್ಲಿ 250 ವಿದ್ಯಾರ್ಥಿಗಳು ದಾಖಲಾಗಿದ್ದು, ಪ್ರಥಮ ದಿನವಾದ ಮಂಗಳವಾರ ಕೇವಲ 14 ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದರು ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ವಾಟ್ಸ್‌ ಆ್ಯಪ್‌ ಮೂಲಕ ಸರ್ಕಾರದ ಕೋವಿಡ್‌ ಮಾರ್ಗಸೂಚಿಗಳನ್ನು ಕಳುಹಿಸಿದ್ದೇವೆ. ವಿದ್ಯಾರ್ಥಿಗಳು ಕಾಲೇಜಿಗೆ ಹಾಜರಾಗುವ ಮುನ್ನಾ ಕೋವಿಡ್‌ ಪರೀಕ್ಷೆ ಕಡ್ಡಾಯವಾಗಿದೆ. ಹೀಗಾಗಿ ವಿದ್ಯಾರ್ಥಿಗಳ ಕೋವಿಡ್‌ ಸಾಮೂಹಿಕ ಪರೀಕ್ಷೆಗೆ ವ್ಯವಸ್ಥೆ ಮಾಡುವಂತೆ ಆರೋಗ್ಯ ಇಲಾಖೆ ಗಮನಕ್ಕೆ ತಂದಿದ್ದೇವೆ. ಅವರು ತಿಳಿಸುವ ದಿನಾಂಕದಂದು ಎಲ್ಲ ವಿದ್ಯಾರ್ಥಿಗಳಿಗೆ ಹಾಜರಾಗುವಂತೆ ತಿಳಿಸುತ್ತೇವೆ. ಜೊತೆಗೆ ಪೋಷಕರ ಒಪ್ಪಿಗೆ ಪತ್ರವನ್ನು ಪಡೆದುಕೊಂಡು ಬರುವಂತೆ ತಿಳಿಸಿದ್ದೇವೆ ಎಂದರು.

ಕಾಲೇಜಿನಲ್ಲೂ ಕೋವಿಡ್‌ ಮಾರ್ಗಸೂಚಿ ಅನುಸರಿಸುತ್ತಿದ್ದೇವೆ. ವಿದ್ಯಾರ್ಥಿಗಳಿಂದ ನೀರಸ ಪ್ರತಿಕ್ರಿಯೆ ಇತ್ತು. ಬಂದವರಿಗೆ ಪಾಠ ಆರಂಭಿಸಿದ್ದೇವೆ. ಈಗಾಗಲೇ ಜೂನ್‌ನಿಂದಲೇ ಆನ್‌ಲೈನ್‌ ತರಗತಿ ಆರಂಭವಾಗಿದೆ ಎಂದು ಹೇಳಿದರು.

ಬಿಎಲ್‌ಡಿಇ ಸಂಸ್ಥೆಯ ಸಂಗನ ಬಸವ ಮಹಾಸ್ವಾಮಿ ಪಾಲಿಟೆಕ್ನಿಕ್‌ ಪ್ರಾಂಶುಪಾಲ ಎಸ್‌.ಜೆ.ಗೌಡರ್‌ ಮಾತನಾಡಿ, ಪಾಲಿಟೆಕ್ನಿಕ್‌ನ 600 ವಿದ್ಯಾರ್ಥಿಗಳ ಪೈಕಿ ಕೇವಲ 15 ವಿದ್ಯಾರ್ಥಿಗಳು ಪ್ರಥಮ ದಿನ ತರಗತಿಗೆ ಹಾಜರಾಗಿದ್ದರು ಎಂದು ತಿಳಿಸಿದರು.

ಕೋವಿಡ್‌ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ. ಹೀಗಾಗಿ ನಾವು ಕೂಡ ಹೆಚ್ಚು ತೊಂದರೆ ತೆಗೆದುಕೊಂಡಿಲ್ಲ. ಇನ್ನೊಂದು ವಾರ ಆನ್‌ಲೈನ್‌ ತರಗತಿಯನ್ನೇ ನಡೆಸುತ್ತೇವೆ. ಕಾಲೇಜಿಗೆ ಬರುವವರಿಗೆ ಪಾಠ, ಪ್ರವಚನ ಮಾಡುತ್ತಿದ್ದೇವೆ ಎಂದರು.

ಆರೋಗ್ಯ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಕೋವಿಡ್‌ ರ‍್ಯಾ‍ಪಿಡ್‌ ಟೆಸ್ಟ್‌ಗೆ ವ್ಯವಸ್ಥೆ ಮಾಡುವಂತೆ ಮನವಿ ಮಾಡಲಾಗಿದೆ. ಕಾಲೇಜಿನಲ್ಲೂ ಕೋವಿಡ್‌ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಖುಷಿ:

‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಿಎಲ್‌ಡಿಇ ಪಾಲಿಟೆಕ್ನಿಕ್‌ ವಿದ್ಯಾರ್ಥಿಗಳಾದ ಐಶ್ವರ್ಯ ಪಾಟೀಲ ಮತ್ತು ಪ್ರಶಾಂತ್‌ ಬಾಗಾಯತ್‌ ಮಾತನಾಡಿ, ಆನ್‌ಲೈನ್‌ ತರಗತಿಗಳು ಅರ್ಥವಾಗುತ್ತಿರಲಿಲ್ಲ. ಜೊತೆಗೆ ಕೇಳಲು ಆಸಕ್ತಿಯೂ ಇರುತ್ತಿರಲಿಲ್ಲ. ಇದೀಗ ತರಗತಿ ಆರಂಭವಾಗಿರುವುದು ಒಳ್ಳೆಯ ಬೆಳವಣಿಗೆ. ಬಹಳಷ್ಟು ಸ್ನೇಹಿತರಿಗೆ ತರಗತಿ ಆರಂಭವಾಗಿರುವ ಬಗ್ಗೆ ಮಾಹಿತಿ ಇಲ್ಲ. ಊರಿಗೆ ಹೋಗಿದ್ದಾರೆ. ಜೊತೆಗೆ ದೀಪಾವಳಿ ಹಬ್ಬವೂ ಇರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಬಂದಿಲ್ಲ. ನಾಳೆಯಿಂದ ಬರುವ ನಿರೀಕ್ಷೆ ಇದೆ ಎಂದು ಹೇಳಿದರು.

ಕೋವಿಡ್‌ ಲಾಕ್‌ಡೌನ್‌ ಬಳಿಕ ಸ್ನೇಹಿತರೊಂದಿಗೆ ಸೇರಲು ಸಾಧ್ಯವಾಗಿರಲಿಲ್ಲ. ಕೇವಲ ಫೋನ್‌ನಲ್ಲೇ ಮಾತುಕತೆಯಾಗಿತ್ತು. ಇದೀಗ ತರಗತಿ ಆರಂಭವಾಗಿರುವುದರಿಂದ ಭೇಟಿಯಾಗಲು, ಓದಲು ಅನುಕೂಲವಾಯಿತು ಎಂದರು.

ಬಹುತೇಕ ಕೋವಿಡ್‌ ಕಡಿಮೆಯಾಗಿದೆ. ಈ ಬಗ್ಗೆ ಮೊದಲಿದ್ದ ಭಯ ಈಗಿಲ್ಲ. ತರಗತಿ ಆರಂಭವಾಗಿರುವುದು ಚೊಲೊ ಅನಿಸಿದೆ ಎಂದು ಖುಷಿ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT