ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ದೇಶ ಮಾರುವುದರಲ್ಲಿ ಅನುಮಾನವಿಲ್ಲ: ಕಾಂಗ್ರೆಸ್‌ ನಾಯಕ ಎಸ್‌.ಆರ್‌.ಪಾಟೀಲ

Last Updated 26 ಜೂನ್ 2021, 12:08 IST
ಅಕ್ಷರ ಗಾತ್ರ

ವಿಜಯಪುರ: ‘ಪ್ರಧಾನಿ ನರೇಂದ್ರ ಮೋದಿ ಅವರು ಈ ಹಿಂದೆ ಚಹಾ ಮಾರಾಟ ಮಾಡಿರುವುದು ಗೊತ್ತಿಲ್ಲ. ಆದರೆ, ದೇಶವನ್ನು ಮಾರಾಟ ಮಾಡುವುದರಲ್ಲಿ ಅನುಮಾನವಿಲ್ಲ’ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌.ಪಾಟೀಲ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಅದಾನಿ, ಅಂಬಾನಿ ಈ ದೇಶದ ಮಾಲೀಕರಾಗುವ ಕಾಲ ದೂರ ಉಳಿದಿಲ್ಲ. ಈಗಾಗಲೇ ಇವರ ಒಡತನಕ್ಕೆ ವಿಮಾನ ನಿಲ್ದಾಣ, ಬಂದರ್‌, ತೈಲ ಕಂಪನಿಗಳನ್ನು ಮೋದಿ ಅವರು ಮಾರಾಟ ಮಾಡಿದ್ದಾರೆ. ರೈಲ್ವೆಯನ್ನು ಖಾಸಗಿಕರಣ ಮಾಡಿದ್ದಾರೆ. ಇನ್ನು ದೇಶದ ಜನರನ್ನು ಇವರಿಗೆ ಒತ್ತೆ ಇಡುವುದು ಮಾತ್ರ ಬಾಕಿ ಇದೆ ಎಂದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ದೇಶದಲ್ಲಿ ಬಿಜೆಪಿ ಧೂಳಿಪಟವಾಗಲಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಸೂರ್ಯ, ಚಂದ್ರರಷ್ಟೇ ನಿಶ್ಚಿತ ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಎಷ್ಟು ದಿನ ಅಧಿಕಾರದಲ್ಲಿ ಇರುತ್ತದೆಯೋ ಅಷ್ಟು ದಿನ ರಾಜ್ಯದ ಜನತೆಗೆ ಸಂಕಷ್ಟ ತಪ್ಪಿದಲ್ಲ. ಬಿಜೆಪಿಯವರು ಅಧಿಕಾರದಿಂದ ಎಷ್ಟು ಬೇಗ ತೊಲಗುತ್ತಾರೋ ರಾಜ್ಯದ ಜನತೆಗೆ ಅಷ್ಟು ಅನುಕೂಲ ಎಂದರು.

ಎಲ್ಲರಿಗೂ ಲಸಿಕೆ ಹಾಕಿಸಿ: ದೇಶದಲ್ಲಿ ಇದುವರೆಗೆ ಶೇ 5ರಷ್ಟು ಜನರಿಗೆ ಮಾತ್ರ ಕೋವಿಡ್‌ ಲಸಿಕೆ ಹಾಕಲಾಗಿದೆ. ಮೂರನೇ ಅಲೆ ಭಯ ವ್ಯಾಪಕವಾಗಿದೆ. ಆದಷ್ಟು ಶೀಘ್ರ ದೇಶದ 18 ವರ್ಷ ಮೇಲ್ಪಟ್ಟ ಎಲ್ಲ ಅರ್ಹರಿಗೆ ತ್ವರಿತವಾಗಿ ಲಸಿಕೆ ನೀಡಲು ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರ ದೇಶದ ಜನರಿಗೆ ಕೋವಿಡ್‌ ಲಸಿಕೆ ಹಾಕುವುದನ್ನು ಬಿಟ್ಟು 196 ದೇಶಗಳಿಗೆ ಲಸಿಕೆಯನ್ನು ರಫ್ತು ಮಾಡಿದರು. ದೇಶದ ಜನರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಾಳಜಿ ಇಲ್ಲ ಎಂಬುದು ಇದರಿಂದ ಸಾಬೀತಾಗಿದೆ ಆರೋಪಿಸಿದರು.

ಮೂರನೇ ಅಲೆ ಎದುರಿಸಲು ರಾಜ್ಯ ಸರ್ಕಾರ ಇದುವರೆಗೆ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ಎರಡನೇ ಅಲೆಯ ಸಂದರ್ಭದಲ್ಲಿ ಪರಿಸ್ಥಿತಿ ಏನಿತ್ತೋ ಅದೇ ಪರಿಸ್ಥಿತಿ ಈಗಲೂ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ಕೋವಿಡ್‌ನಿಂದ ದೇಶದ ಅರ್ಥವ್ಯವಸ್ಥೆ ಸಂಪೂರ್ಣ ಕುಸಿದಿದೆ. ಕೋಟ್ಯಂತರ ಜನ ನಿರುದ್ಯೋಗಿಗಳಾಗಿದ್ದಾರೆ ಎಂದು ಅರೋಪಿಸಿದರು.

ಸರ್ಕಾರ ವಿಫಲ: ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಅನುಷ್ಠಾನದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಮುಳುಗಡೆಯಾಗಲಿರುವ ಕೃಷಿ ಭೂಮಿ ಸ್ವಾಧೀನವಾಗಬೇಕಿದೆ, ಮನೆಗಳಿಗೆ ಪರಿಹಾರ ನೀಡಬೇಕಿದೆ. ಆದರೆ, ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಯೋಜನೆಯ ಅನುಷ್ಠಾನಕ್ಕೆ ಮೊದಲ ಆದ್ಯತೆ ನೀಡಲಿದೆ. ಇದರಿಂದ ವಿಜಯಪುರ ಜಿಲ್ಲೆ ಸಂಪೂರ್ಣ ನೀರಾವರಿಗೆ ಒಳಪಡಲಿದೆ ಎಂದು ಹೇಳಿದರು.

ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಅಲಗೂರ, ಮಹಿಳಾ ಕಾಂಗ್ರೆಸ್‌ಜಿಲ್ಲಾ ಘಟಕದ ಅಧ್ಯಕ್ಷೆ ವಿದ್ಯಾರಾಣಿ ತುಂಗಳ, ಮುಖಂಡರಾದ ಅಬ್ದುಲ್‌ ಹಮೀದ್‌ ಮುಶ್ರೀಫ್‌, ವಿಠಲ ಕಟಕದೊಂಡ, ಎಸ್‌.ಎಂ.ಪಾಟೀಲ ಗಣಿಯಾರ, ರಫೀಕ್‌ ಟಪಾಲ್‌, ಉಸ್ಮಾನ್‌ ಪಟೇಲ್‌, ಜಮೀರ್‌ ಅಹ್ಮದ್‌ ಭಕ್ಷಿ, ಆರ್‌.ಪಿ.ಶಹಾಪೂರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

***

ಕಾಂಗ್ರೆಸ್‌ನಲ್ಲಿ ವಲಸೆ ಬಂದವರು, ಮೂಲ ಕಾಂಗ್ರೆಸಿಗರು ಎಂಬುದಿಲ್ಲ. ಒಂದೇ ಬಣ ಇದೆ. ಯಾವುದೇ ಭಿನ್ನಾಭಿಪ್ರಾಯವಿಲ್ಲ

–ಎಸ್‌.ಆರ್‌.ಪಾಟೀಲ, ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT