ಭಾನುವಾರ, ಏಪ್ರಿಲ್ 2, 2023
32 °C
ಕಲಾ ಗ್ಯಾಲರಿ, ಕರಕುಶಲ ವಸ್ತುಗಳ ಪ್ರದರ್ಶನ, ಮಾರಾಟಕ್ಕೂ ವೇದಿಕೆ

ವಿಜಯಪುರ: ಪ್ರವಾಸೋದ್ಯಮ ವ್ಯಾಖ್ಯಾನ ಕೇಂದ್ರವಾಗಲಿದೆ ‘ಆನಂದ ಮಹಲ್‌’

ಬಸವರಾಜ್‌ ಸಂಪಳ್ಳಿ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಆದಿಲ್‌ ಶಾಹಿ ಅರಸರ ಕಾಲದ ಐತಿಹಾಸಿಕ ಪಾರಂಪರಿಕ ಕಟ್ಟಡ ಆನಂದ ಮಹಲ್‌ ಅನ್ನು ‘ವಿಜಯಪುರ ಪ್ರವಾಸೋದ್ಯಮ ವ್ಯಾಖ್ಯಾನ ಕೇಂದ್ರ’ವಾಗಿ ರೂಪಿಸಬೇಕು ಎಂಬ ಒಂದು ದಶಕದ ಬೇಡಿಕೆಗೆ ಕೊನೆಗೂ ಕಾಲ ಕೂಡಿ ಬಂದಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ ‘ಗುಮ್ಮಟ ನಗರ’ಕ್ಕೆ ಭೇಟಿ ನೀಡುವ ದೇಶ, ವಿದೇಶದ ಪ್ರವಾಸಿಗರಿಗೆ ಮಾಹಿತಿ ನೀಡುವ ಕೇಂದ್ರವಾಗಿ ಪರಿವರ್ತನೆಯಾಗಲಿದೆ.  

ವಿಜಯಪುರ ನಗರವು ಆದಿಲ್‌ಶಾಹಿ ಅರಸರ ಕಾಲದಲ್ಲಿ ಹೇಗಿದ್ದಿರಬಹುದು ಎಂಬ ಕುತೂಹಲ ಈ ನಗರಕ್ಕೆ ಭೇಟಿ ನೀಡುವ ಪ್ರತಿಯೊಬ್ಬರ ಪ್ರವಾಸಿಗರಿಗೆ ಕಾಡುವ ಪ್ರಶ್ನೆಯಾಗಿದೆ. ಆದರೆ, ಸರಿಯಾದ ಮಾಹಿತಿ, ಮಾರ್ಗದರ್ಶನ ಸುಲಭವಾಗಿ ಲಭಿಸುತ್ತಿಲ್ಲ. ನಗರದಲ್ಲಿ ಇರುವ 82ಕ್ಕೂ ಹೆಚ್ಚು ಸ್ಮಾರಕಗಳಲ್ಲಿ ಬಹುತೇಕರು ಗೋಳಗುಮ್ಮಟ, ಇಬ್ರಾಹಿಂ ರೋಜಾ, ಬಾರಾ ಕಮಾನ್‌ನಂತಹ ಒಂದೆರಡು ಸ್ಮಾರಕ ನೋಡಿ, ಇನ್ನುಳಿದ ಹಾಗೂ ನೋಡಲೇ ಬೇಕಾದಂತಹ ಸ್ಥಳಗಳನ್ನು ನೋಡದೆಯೇ ಹಿಂದಿರುಗುವ ಪ್ರಸಂಗಗಳು ಇವೆ. ಈ ಕೊರತೆಯನ್ನು ನೀಗಿಸುವ ಉದ್ದೇಶದಿಂದ ‘ಆನಂದ ಮಹಲ್‌’ ಅನ್ನು ಪ್ರವಾಸೋದ್ಯಮ ವ್ಯಾಖ್ಯಾನ ಕೇಂದ್ರವನ್ನಾಗಿ ರೂಪಿಸಲು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೀಶ್ವರ್‌ ಮಂಗಳವಾರ ಚಾಲನೆ ನೀಡಿದ್ದಾರೆ.

ನವೀಕರಣಕ್ಕೆ ಷರತ್ತು: ₹5 ಕೋಟಿ ಮೊತ್ತದಲ್ಲಿ ಆನಂದ ಮಹಲ್‌ ಅನ್ನು ನವೀಕರಣ ಮಾಡಲು ಕರ್ನಾಟಕ ರಾಜ್ಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ವಹಿಸಲಾಗಿದೆ. ಕೆಎಸ್‌ಐ ಮತ್ತು ಎಎಸ್‌ಐನಲ್ಲಿ ನೋಂದಾಯಿತ ಗುತ್ತಿಗೆದಾರರಿಂದ ಸ್ಮಾರಕದ ಐತಿಹಾಸಿಕ ಸೌಂದರ್ಯಕ್ಕೆ ದಕ್ಕೆಯಾಗದಂತೆ(16 ಷರತ್ತುಗಳೊಂದಿಗೆ) ಆನಂದ ಮಹಲ್‌ ನವೀಕರಣ ಕಾರ್ಯ ನಡೆಯಲಿದೆ ಎನ್ನುತ್ತಾರೆ ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ ಬಜಂತ್ರಿ.

ಆನಂದ ಮಹಲ್‌ ಆವರಣದಲ್ಲಿರುವ ತೋಟಗಾರಿಕೆ ಇಲಾಖೆಯ ಕಚೇರಿಯನ್ನು ಪ್ರವಾಸೋದ್ಯಮ ಇಲಾಖೆಯ ಕಟ್ಟಡಕ್ಕೆ ಹಾಗೂ ಪ್ರವಾಸೋದ್ಯಮ ಇಲಾಖೆ ಕಚೇರಿಯನ್ನು ತೋಟಗಾರಿಕೆ ಇಲಾಖೆ ಕಟ್ಟಡಕ್ಕೆ ಸ್ಥಳಾಂತರಿಸಲು ಉದ್ದೇಶಿಸಲಾಗಿದೆ. ಇದರಿಂದ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಜಿಲ್ಲೆಯ ಎಲ್ಲ ಕಚೇರಿಗಳು ಒಂದೇ ಕಡೆ ಇರಲಿದೆ ಎಂದರು.

ಆರ್ಟ್‌ ಗ್ಯಾಲರಿ ಸಲಹೆ: ಆನಂದ ಮಹಲ್‌ ಪ್ರವಾಸಿ ವ್ಯಾಖ್ಯಾನ ಕೇಂದ್ರವಾಗಿ ರೂಪಗೊಂಡ ಬಳಿಕ ಆರ್ಟ್‌ ಗ್ಯಾಲರಿ ಮಾಡಬೇಕು. ದೇಶ, ವಿದೇಶದಲ್ಲಿ ಇರುವ ಆದಿಲ್‌ಶಾಹಿ ಅರಸರ ಕಾಲದ ಪ್ರಮುಖ ಕಲಾಕೃತಿಗಳು ಸಾಧ್ಯವಾದರೆ ತಂದು ಇಲ್ಲಿ ಸಂರಕ್ಷಿಸಬೇಕು. ಜೊತೆಗೆ ಸ್ಥಳೀಯ ಕರಕುಶಲ ಕಲೆಗಳ ಪ್ರದರ್ಶನ, ಮಾರಾಟಕ್ಕೆ ಇಲ್ಲಿ ಅವಕಾಶ ಕಲ್ಪಿಸಬೇಕು ಎಂಬ ಪ್ರಸ್ತಾವನೆಯನ್ನು ಜಿಲ್ಲಾಡಳಿತಕ್ಕೆ ಈ ಹಿಂದೆ ಸಲ್ಲಿಸಲಾಗಿದೆ ಎಂದು ಇತಿಹಾಸತಜ್ಞ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆನಂದ ಮಹಲ್‌’ ಇತಿಹಾಸ
ವಿಜಯಪುರ: 
ಎರಡನೇ ಇಬ್ರಾಹಿಂ ಆದಿಲ್‌ ಶಾಹಿ ಕಾಲದಲ್ಲಿ (1595–1605) ಆನಂದ ಮಹಲ್‌ ಅನ್ನು ಇಂಡೋ–ಇಸ್ಲಾಮಿಕ್‌ ಶೈಲಿಯಲ್ಲಿ ಆಕರ್ಷಕ ಮತ್ತು ಭವ್ಯವಾಗಿ ನಿರ್ಮಾಣ ಮಾಡಲಾಗಿದೆ.

ಆದಿಲ್‌ಶಾಹಿಗಳ ಆಳ್ವಿಕೆ ಕಾಲದಲ್ಲಿ ದೇಶ, ವಿದೇಶದ ರಾಯಬಾರಿಗಳು ಬಿಜಾಪುರಕ್ಕೆ ಬಂದಾಗ ಅವರನ್ನು ‘ಆನಂದ ಮಹಲ್‌’ನಲ್ಲಿ ರಾಜ ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದರು.

ಆನಂದ ಮಹಲ್‌ ಆದಿಲ್‌ಶಾಹಿ ಅರಸರ ಕಾಲದ ‘ಜಾತ್ಯತೀತ ಕಟ್ಟಡ’(ಸೆಕ್ಯುಲರ್‌ ಬಿಲ್ಡಿಂಗ್‌) ಆಗಿತ್ತು ಎನ್ನುತ್ತಾರೆ ಇತಿಹಾಸ ತಜ್ಞ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ. ಕಾರಣ, ಈ ಕಟ್ಟಡವನ್ನು ಗುಮ್ಮಟ, ಮಿನಾರ್‌ಗಳಿಲ್ಲದೇ ನಿರ್ಮಿಸಲಾಗಿದೆ. ಕೇವಲ ಕಮಾನುಗಳನ್ನು ಒಳಗೊಂಡಿದೆ. ರಾಜ ತನ್ನ ಬಿಡುವಿನ ವೇಳೆಯಲ್ಲಿ ಇಲ್ಲಿ ಕಲಾಕೃತಿಗಳನ್ನು ಚಿತ್ರಿಸುತ್ತಿದ್ದ ಎಂಬ ಪ್ರತೀತಿ ಇದೆ ಎನ್ನುತ್ತಾರೆ ಅವರು.

ಆನಂದ ಮಹಲ್‌ ಕಟ್ಟಡವು ಶಿಥಲಿವಾಗಿದ್ದು, ಮಳೆ ಬಂದರೆ ಸೋರುತ್ತದೆ. ನಿರ್ವಹಣೆ ಇಲ್ಲದೇ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಈ ಕಟ್ಟಡವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ(ಎಎಸ್ಐ)ಗಾಗಲಿ ಅಥವಾ ಕರ್ನಾಟಕ ರಾಜ್ಯ ಪುರಾತತ್ವ ಸರ್ವೇಕ್ಷಣಾ ಇಲಾಖೆ‌ಗೆ(ಕೆಎಸ್‌ಐ) ಒಳಪಟ್ಟಿಲ್ಲ. ಹೀಗಾಗಿ ಸದ್ಯ ಜಿಲ್ಲಾಡಳಿತದ ಸುಪರ್ದಿಯಲ್ಲಿದೆ.

ಕೆಲ ವರ್ಷಗಳ ಹಿಂದೆ ಈ ಕಟ್ಟಡವೇ ಜಿಲ್ಲಾ ಪಂಚಾಯ್ತಿ ಕಾರ್ಯಾಲಯವಾಗಿತ್ತು. ಅಲ್ಲದೇ, ಸಂಸದರ ಕಚೇರಿ ಸೇರಿದಂತೆ 10ಕ್ಕೂ ಹೆಚ್ಚು ವಿವಿಧ ಇಲಾಖೆಗಳ ಕಚೇರಿಗಳು ಇದೇ ಕಟ್ಟಡದಲ್ಲಿ ಇದ್ದವು. ಪಾರಂಪರಿಕ ಕಟ್ಟಡವನ್ನು ಸಂರಕ್ಷಿಸಬೇಕು ಎಂಬ ಕೂಗು ಹೆಚ್ಚಾದ ಬಳಿಕ ಎಲ್ಲ ಕಚೇರಿಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದ್ದು, ಸದ್ಯ ಖಾಲಿ ಇದೆ.

**
ಆನಂದ ಮಹಲ್‌ ಸ್ಮಾರಕವನ್ನು ನವೀಕರಣಗೊಳಿಸಿ ವಿಜಯಪುರ ಜಿಲ್ಲೆಯ ಟೂರಿಸಂ ಹಬ್‌ ಆಗಿ ರೂಪಿಸಬೇಕು ಎಂಬ ಉದ್ದೇಶವಿದೆ.
–ಮಲ್ಲಿಕಾರ್ಜುನ ಬಜಂತ್ರಿ, ಉಪ ನಿರ್ದೇಶಕ ಪ್ರವಾಸೋದ್ಯಮ ಇಲಾಖೆ, ವಿಜಯಪುರ

**
ಆನಂದ ಮಹಲ್‌ ಸ್ಮಾರಕದ ನವೀಕರಣ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಅದರ ಐತಿಹಾಸಿಕ ಮಹತ್ವಕ್ಕೆ ದಕ್ಕೆಯಾಗಬಾರದು. ಯಥಾ ರೀತಿ ಉಳಿಸಿಕೊಳ್ಳಬೇಕು
–ಕೃಷ್ಣ ಕೊಲ್ಹಾರ ಕುಲಕರ್ಣಿ, ಇತಿಹಾಸ ತಜ್ಞ, ವಿಜಯಪುರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು