ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಿಸೆ’ಯಿಲ್ಲದ ವೈರಾಗ್ಯಮೂರ್ತಿ ಸಿದ್ಧೇಶ್ವರ ಸ್ವಾಮೀಜಿ

ನಾಡು ಕಂಡ ಅಪರೂಪದ ಸಂತ, ತತ್ವಜ್ಞಾನಿ, ಭಕ್ತರ ಪಾಲಿಗೆ ಸಾಕ್ಷಾತ್‌ ದೇವರು
Last Updated 2 ಜನವರಿ 2023, 21:27 IST
ಅಕ್ಷರ ಗಾತ್ರ

ವಿಜಯಪುರ: ಬಿಜ್ಜರಗಿ ಎಂಬ ಪುಟ್ಟ ಗ್ರಾಮದ ‘ಸಿದ್ಧು’ ಎಂಬ ಶಾಂತ ಸ್ವಭಾವದ ಬಾಲಕ ‘ಸಿದ್ಧೇಶ್ವರ ಶ್ರೀ’ ಎಂಬ ಮಹಾನ್‌ ‘ಜ್ಞಾನಯೋಗಿ’ ಯಾಗಿ, ತತ್ವಜ್ಞಾನಿಯಾಗಿ, ಸದಾ ಶ್ವೇತವಸ್ತ್ರಧಾರಿಯಾಗಿ ‘ಕಿಸೆ’ಯಿಲ್ಲದ ವೈರಾಗ್ಯ ಮೂರ್ತಿಯಾಗಿ ಬೆಳೆದು ಬಂದ ದಾರಿ ಅಕ್ಷರಶಃ ವಿಸ್ಮಯ.

ವಿಜಯಪುರ ಜಿಲ್ಲೆ ತಿಕೋಟಾ ತಾಲ್ಲೂಕಿನ ಬಿಜ್ಜರಗಿಯಲ್ಲಿ 1940ರ ಸೆಪ್ಟೆಂಬರ್‌ 5 ರಂದು ಕೃಷಿಕರಾದ ಓಗೆಪ್ಪ ಗೌಡ ಬಿರಾದಾರ, ಸಂಗವ್ವ ದಂಪತಿಯ ಆರು ಜನ ಮಕ್ಕಳಲ್ಲಿ ಹಿರಿಯ ಪುತ್ರರಾಗಿ ಜನಿಸಿದ ಸಿದಗೊಂಡ ಓಗೆಪ್ಪ ಬಿರಾದಾರ(ಪೂರ್ವಾಶ್ರಮದ ಹೆಸರು) ಬಾಲ್ಯದಿಂದಲೇ ಅಧ್ಯಾತ್ಮದತ್ತ ಅತೀವ ಒಲವು ಬೆಳೆಸಿಕೊಂಡಿದ್ದರು.

ಬಿಜ್ಜರಗಿಯ ಬಾಲ್ಯದ ಸಹಪಾಠಿಗಳ ಪಾಲಿಗೆ ‘ಸಿದ್ಧು’ ಆಗಿದ್ದ ಸಿದ್ಧೇಶ್ವರ ಶ್ರೀಗಳು ಭಕ್ತರ ಪಾಲಿಗೆ ನಡೆದಾಡುವ ದೇವರಾಗಿ ರೂಪುಗೊಂಡ ಪರಿ ಸೋಜಿಗವೇ ಸರಿ.

‘ಬಾಲ್ಯದ ದಿನಗಳಲ್ಲೇ ಆತ ಸಂಭಾವಿತ. ಸೂಕ್ಷ್ಮ ವ್ಯಕ್ತಿತ್ವದವ, ಅಧ್ಯಾತ್ಮದ ಸೆಳೆತ ಆಗಲೇ ಇತ್ತು’ ಎಂದು ನೆನಪಿಸಿಕೊಳ್ಳುತ್ತಾರೆ ಅವರ ಬಾಲ್ಯದ ಸಹಪಾಠಿ ಬಿ.ಎಸ್.ಪಟ್ಟಣ. ‘ಶ್ರೀಗಳಿಗೆ ತಾವು ಹುಟ್ಟಿ, ಬೆಳೆದ ಬಿಜ್ಜರಗಿ ಗ್ರಾಮದಲ್ಲಿ ಸಹಪಾಠಿಗಳೊಂದಿಗೆ ಈಜುವುದು, ಸೈಕಲ್‌ ಓಡಿಸುವುದು ಎಂದರೆ ಅಚ್ಚುಮೆಚ್ಚಾಗಿತ್ತು. ಊಟ, ಉಪಾಹಾರದಲ್ಲಿ ಖಾರ, ಉಪ್ಪು ಇತಿಮಿತಿ ಇರಬೇಕಿತ್ತು’ ಎಂದು ಹೇಳುತ್ತಾರೆ ಅವರು.

ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ: ಬಿಜ್ಜರಗಿಯ ಸರ್ಕಾರಿ ಗಂಡು ಮಕ್ಕಳ ಪ್ರಾಥಮಿಕ ಶಾಲೆ ಯಲ್ಲಿ ಏಳನೇ ತರಗತಿಯವರೆಗೆ ಅಭ್ಯಾಸ. ವಿಜಯಪುರದ ಎಸ್.ಎಸ್. ಪ್ರೌಢಶಾಲೆಯಲ್ಲಿ 8ನೇ ತರಗತಿ, ನಂತರ ಚಡಚಣದ ಸಂಗಮೇಶ್ವರ ಪ್ರೌಢಶಾಲೆಯಲ್ಲಿ 10ನೇ ತರಗತಿವರೆಗೆ ಕಲಿಕೆ, ವಿಜಯಪುರದ ವಿಜಯ ಕಾಲೇಜಿನಲ್ಲಿ ಪಿಯುಸಿ, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪದವಿ, ಆ ನಂತರದಲ್ಲಿ ನೆರೆಯ ಮಹಾರಾಷ್ಟ್ರದ ಕೊಲ್ಹಾಪುರದ ಶಿವಾಜಿ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.

ವಿಜಯಪುರ ಜ್ಞಾನಯೋಗಾಶ್ರಮದ ಸಂಸ್ಥಾಪಕರಾದ ವೇದಾಂತ ಕೇಸರಿ ಮಲ್ಲಿಕಾರ್ಜುನ ಶಿವಯೋಗಿಗಳ ಪ್ರವಚನ ಕೇಳಿ ಆಕರ್ಷಿತರಾದ ಸಿದ್ಧೇಶ್ವರ ಶ್ರೀಗಳು, ಮುಂದೆ ಅದೇ ಆಶ್ರಮದ ಅಧ್ಯಕ್ಷರಾದದ್ದು ವಿಶೇಷ.

ಸದಾ ಶ್ವೇತವಸ್ತ್ರಧಾರಿ: ಸದಾಕಾಲ ಶ್ವೇತವಸ್ತ್ರಧಾರಿಯಾಗಿರುತ್ತಿದ್ದ ಸಿದ್ಧೇಶ್ವರ ಶ್ರೀಗಳು ಎಂದಿಗೂ ಹಣ, ಅಧಿಕಾರ, ಅಂತಸ್ತು, ಕೀರ್ತಿ, ‘ಪ್ರಭಾವ’ ಬೀರುವ ವ್ಯಕ್ತಿತ್ವಕ್ಕೆ ಆಸೆ ಪಟ್ಟವರಲ್ಲ. ತಮ್ಮ ಬಳಿ ಅದಾವುದೂ ಸುಳಿಯದಂತೆ ಎಚ್ಚರಿಕೆ ವಹಿಸಿದ್ದರು. ‘ಕಿಸೆ’ ಇಲ್ಲದ ಅಂಗಿಯನ್ನೇ ತೊಟ್ಟು ಪಾರದರ್ಶಕತೆಗೆ ಸಾಕ್ಷಿಯಾಗಿದ್ದರು.

ಕನ್ನಡ, ಮರಾಠಿ, ಇಂಗ್ಲಿಷ್, ಹಿಂದಿ ಭಾಷೆಯಲ್ಲಿ ನಿರರ್ಗಳವಾಗಿ ಪ್ರವಚನ ನೀಡುತ್ತಿದ್ದರು. ತಾವು ಓದಿ, ಅಧ್ಯಯನ ಮಾಡಿ, ಪ್ರಪಂಚ ಪರ್ಯಟನೆ ಮೂಲಕ ಕಂಡುಕೊಂಡ ನೈಜ ಅನುಭವಾಮೃತವನ್ನು ತಮ್ಮ ಪ್ರವಚನದಲ್ಲಿ ಭಕ್ತರಿಗೆ ಮನಮುಟ್ಟುವಂತೆ ಅವರದೇ ಶೈಲಿಯಲ್ಲಿ ಉಣಬಡಿಸುತ್ತಿದ್ದರು.

ಅವರ ಪ್ರವಚನ ಕೇಳಲು ಬೆಳ್ಳಂಬೆಳಿಗ್ಗೆಯೇ ಧರ್ಮ, ಜಾತಿ ಭೇದವಿಲ್ಲದೇ ಸಹಸ್ರಾರು ಜನರು ನೆರೆಯುತ್ತಿದ್ದರು. ಪ್ರವಚನದ ವೇಳೆ ಒಂದು ಸೂಜಿ ಬಿದ್ದರೂ ಕೇಳುವಷ್ಟು ನಿಶ್ಶಬ್ದ. ಭಕ್ತರು ಅಷ್ಟೊಂದು ಏಕಾಗ್ರತೆಯಿದ ಪ್ರವಚನ ಆಲಿಸುತ್ತಿದ್ದರು.

ಆಳವಾದ ಅಧ್ಯಯನ: ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್‌, ಅಲ್ಲಮ ಪ್ರಭು, ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ, ಏಸುಕ್ರಿಸ್ತ, ಪೈಗಂಬರ್‌, ಮಹಾವೀರ, ಲೆನಿನ್‌, ಕಾರ್ಲ್ ಮಾರ್ಕ್ಸ್‌, ನೆಲ್ಸನ್‌ ಮಂಡೇಲಾ ಸೇರಿದಂತೆ ವಿಶ್ವದ ಎಲ್ಲ ದಾರ್ಶನಿಕರನ್ನು ಆಳವಾಗಿ ಅಧ್ಯಯನ ಮಾಡಿ ಅರಗಿಸಿಕೊಂಡಿದ್ದ ಶ್ರೀಗಳು ಅವರೆಲ್ಲರ ಚಿಂತನೆಗಳನ್ನು ತಮ್ಮ ಪ್ರವಚನದ ಮೂಲಕ ಜನಮಾನಸಕ್ಕೆ ತಲುಪಿಸುತ್ತಿದ್ದರು.

ಶ್ರೀಗಳ ಬಳಿ ಯಾವುದೇ ಜಾತಿ, ಧರ್ಮ, ಲಿಂಗ ತಾರತಮ್ಯ ಇರಲಿಲ್ಲ. ಅವರ ಮಾತು, ನಡೆ, ನುಡಿಯಲ್ಲಿ ಯಾವುದೇ ಟೀಕೆ, ಟಿಪ್ಪಣಿ ಇರಲಿಲ್ಲ. ಯಾವುದೇ ರಾಗ, ದ್ವೇಷಕ್ಕೆ ಅಲ್ಲಿ ಅವಕಾಶ ಇರಲಿಲ್ಲ. ಸಕಾರಾತ್ಮಕ ಚಿಂತನೆಯೇ ಪ್ರವಚನದ ಸಾರವಾಗಿತ್ತು.

‘ಹೃದಯ ಸ್ವಚ್ಛ ಇರಬೇಕು, ತಲೆ ಖಾಲಿ ಇರಬೇಕು, ಯಾವುದೂ ಇರುವ ಹಾಗೇ ಇರುವುದಿಲ್ಲ’ ಎಂದು ಸರಳ, ಸುಲಲಿತ ಭಾಷೆಯಲ್ಲಿ ಅಕ್ಕರೆಯಿಂದ ಹೇಳುತ್ತ ಭಕ್ತರ ಹೃದಯದೊಳಗೆ ಪ್ರವೇಶಿಸುತ್ತಿದ್ದರು.

ಸಿದ್ಧಾಂತ ಶಿಖಾಮಣಿ, ಭಗವದ್ಗೀತೆಯನ್ನು ಕನ್ನಡಕ್ಕೆ ಸರಳೀಕರಿಸಿ, ಅನುವಾದ ಮಾಡಿದ್ದರು. ಅವರ ಪ್ರವಚನದ ನೂರಾರು ಪುಸ್ತಕಗಳು ಪ್ರಕಟವಾಗಿವೆ. ಆದರೆ, ತಾವು ಬದುಕಿರುವವರೆಗೂ ತಮ್ಮ ಬಗ್ಗೆ ಯಾರೊಬ್ಬರೂ ಒಂದಕ್ಷರ ಬರೆಯಲು ಅವರು ಅವಕಾಶವನ್ನು ನೀಡಿರಲಿಲ್ಲ.

ಕಿಸೆಯಿಲ್ಲದ ಸಂತನನ್ನು ರಾಜಕೀಯ, ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಹುನ್ನಾರವೂ ನಡೆಯಿತು. ಆದರೆ, ಯಾವುದೇ ವಿವಾದಕ್ಕೆ ಒಳಗಾಗದೇ ಕಪ್ಪುಚುಕ್ಕೆ, ಕಳಂಕವೂ ಸುಳಿಯದಂತೆ ಎಚ್ಚರದಿಂದ ಅವರು ಆದರ್ಶಪ್ರಾಯ ಜೀವನವನ್ನು ಅಕ್ಷರಶಃ ಬಾಳಿದರು, ಬದುಕಿದರು.

ಪ್ರಶಸ್ತಿ, ಪುರಸ್ಕಾರಗಳಿಂದ ದೂರ

ಸಿದ್ಧೇಶ್ವರ ಶ್ರೀಗಳು ತಮ್ಮ ನಡೆ, ನುಡಿಗಳಲ್ಲಿ ಒಂದೇ ಆಗಿದ್ದ, ಅಪರೂಪದಲ್ಲೇ ಅಪರೂಪದ ಸಂತರಾಗಿದ್ದರು. ಎಂದಿಗೂ ಡಂಬಾಚಾರ, ಪಾದಪೂಜೆಯನ್ನು ಭಕ್ತರಿಂದ ಬಯಸದ ಅವರು, ತಾವು ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಹೂವು, ಫಲತಾಂಬೂಲ, ಕಾಣಿಕೆ ನೀಡಿದರೂ ಸ್ವೀಕರಿಸದ ಅಪ್ಪಟ ಸಂತರಾಗಿದ್ದರು.

2019ರಲ್ಲಿ ಭಾರತ ಸರ್ಕಾರದ ಅತ್ಯುನ್ನತ ನಾಗರಿಕ ಗೌರವ ‘ಪದ್ಮಶ್ರೀ’ ಪ್ರಶಸ್ತಿಗೆ ಆಯ್ಕೆಯಾದಾಗ, ‘ನಾನೊಬ್ಬ ಸರಳ ಸನ್ಯಾಸಿ, ಪ್ರಶಸ್ತಿ, ಪುರಸ್ಕಾರಗಳ ಅಗತ್ಯ ನನಗಿಲ್ಲ’ ಎಂದು ನಯವಾಗಿ ನಿರಾಕರಿಸಿದ್ದರು.

ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ಪ್ರಕಟಿಸಿದಾಗಲೂ ಅದನ್ನೂ ಶ್ರೀಗಳು ಸ್ವೀಕರಿಸಲಿಲ್ಲ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಆಶ್ರಮದ ಅಭಿವೃದ್ಧಿಗಾಗಿ ₹25 ಲಕ್ಷ ಅನುದಾನ ನೀಡಿದಾಗಲೂ ಸ್ವೀಕರಿಸದೇ ಮರಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT