ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ಗೆ ವಿಜಯಪುರ ಸಂಪೂರ್ಣ ಸ್ತಬ್ಧ

Last Updated 24 ಮೇ 2020, 13:19 IST
ಅಕ್ಷರ ಗಾತ್ರ

ವಿಜಯಪುರ: ಕೊರೊನಾ ಲಾಕ್‌ಡೌನ್‌ಗೆ ಭಾನುವಾರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಸ್ಪಂದನೆ ದೊರೆಯಿತು. ಜನರು ಸ್ವಯಂ ಪ್ರೇರಿತವಾಗಿ ಲಾಕ್‌ಡೌನ್‌ಗೆ ಬೆಂಬಲ ವ್ಯಕ್ತಪಡಿಸಿದರು.

ಬಸ್, ಅಟೊ ಸೇರಿದಂತೆ ಬಹುತೇಕ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಅಂಗಡಿ, ಬೇಕರಿ, ಸ್ವೀಟ್ ಹೌಸ್, ಎಲೆಕ್ಟ್ರಕಲ್‌ ಅಂಗಡಿಗಳು, ಜವಳಿ ಅಂಗಡಿಗಳು, ಹೋಟೆಲ್‌ಗಳೂ ಬಂದ್ ಆಗಿದ್ದವು.

ತರಕಾರಿ, ಹಾಲು, ಔಷಧ ಸೇರಿದಂತೆ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಕೋಳಿ, ಕುರಿ ಮಾಂಸ ಮತ್ತು ಮೀನು ಮಾರಾಟಕ್ಕೆ ಯಾವುದೇ ಅಡಚಣೆ ಇರಲಿಲ್ಲ. ಸೋಮವಾರ ಈದ್ ಉಲ್ ಫಿತರ್ ಇರುವುದರಿಂದ ಕುರಿ, ಕೋಳಿ ಮಾಂಸ ಮಾರಾಟದ ಅಂಗಡಿಗಳ ಎದುರು ಹೆಚ್ಚಿನ ಜನರು ಕಂಡುಬಂದರು.

ಪೊಲೀಸರು ನಗರದ ಅಲ್ಲಲ್ಲಿ ಚೆಕ್ ಪೋಸ್ಟ್ ಹಾಕಿದ್ದು, ಅನಗತ್ಯವಾಗಿ ವಾಹನಗಳಲ್ಲಿ ಓಡಾಡುವವರನ್ನು ತಡೆದು, ಎಚ್ಚರಿಕೆ ನೀಡಿ ಕಳುಹಿಸಿದರು.

ಸೊಲ್ಲಾಪುರ-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿ ಮತ್ತು ವಿಜಯಪುರ-ಹುಬ್ಬಳ್ಳಿ ಹೆದ್ದಾರಿಯಲ್ಲೂ ವಾಹನಗಳ ಸಂಚಾರ ವಿರಳವಾಗಿತ್ತು.

ರಂಜಾನ್‌ ಹಬ್ಬಕ್ಕೆ ಅಗತ್ಯವಿರುವ ಬಟ್ಟೆ, ಆಹಾರ ಸಾಮಾಗ್ರಿಗಳ ಖರೀದಿ ಬಹುತೇಕ ಶನಿವಾರವೇ ನಡೆದಿತ್ತು. ಹೀಗಾಗಿ ಭಾನುವಾರ ಮಾಂಸ, ಹಾಲು, ತರಕಾರಿ ಖರೀದಿ ಮಾತ್ರ ನಡೆಯಿತು.

ಕಂಡುಬಂದ ಚೇತರಿಕೆ: ಲಾಕ್‌ಡೌನ್‌ ನಾಲ್ಕು ಆರಂಭವಾದ ಬಳಿಕ ಬಹುತೇಕ ಅಂಗಡಿ, ಮಳಿಗೆಗೆಳು ಬಾಗಿಲು ತೆರೆದು ವ್ಯಾಪಾರ, ವಹಿವಾಟು ಆರಂಭಿಸಿದ್ದವು. ಬಸ್‌ ಸಂಚಾರವೂ ಆರಂಭವಾಗಿದ್ದರಿಂದ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಜನ ಸಂಚಾರ ಚುರುಕುಗೊಂಡಿತ್ತು. ರಂಜಾನ್‌ ಹಿನ್ನೆಲೆಯಲ್ಲಿ ಒಂದಷ್ಟು ವ್ಯಾಪಾರ, ವಹಿವಾಟು ನಡೆದಿತ್ತು. ಇದರಿಂದ ಒಂದಷ್ಟು ಆರ್ಥಿಕ ಚಟುವಟಿಕೆಗಳಲ್ಲಿ ಚೇತರಿಕೆ ಕಂಡುಬಂದಿತ್ತು.

ವೃದ್ಧರೊಬ್ಬರಿಗೆ ಕೋವಿಡ್‌

ಜಿಲ್ಲೆಯಲ್ಲಿ 80 ವರ್ಷ ವಯಸ್ಸಿನ ವೃದ್ಧರೊಬ್ಬರಿಗೆ(ಪಿ2011) ಕೋವಿಡ್‌–19 ಸೋಂಕು ತಗುಲಿರುವುದು ಭಾನುವಾರ ದೃಢವಾಗಿದೆ.

1661 ಸಂಪರ್ಕದಿಂದ ವೃದ್ಧಗೆ ಸೋಂಕು ತಗುಲಿದೆ. ವೃದ್ಧ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್‌ ಸೋಂಕಿತರ ಸಂಖ್ಯೆ 69ಕ್ಕೆ ಏರಿಕೆಯಾಗಿದೆ. ಇದರಲ್ಲಿ ಈಗಾಗಲೇ 4 ಜನ ಸಾವಿಗೀಡಾಗಿದ್ದು, 42 ಜನ ಗುಣಮುಖರಾಗಿದ್ದಾರೆ. ಇನ್ನುಳಿದ 23 ಜನ ಕೋವಿಡ್‌ 19 ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT