ಗುರುವಾರ , ಜೂಲೈ 9, 2020
21 °C
ಕೆಪಿಸಿಸಿ ನಿಯೋಜಿತ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಟೀಕೆ

ಇತಿಮಿತಿ ಇಲ್ಲದೆ ಸುಳ್ಳು ಹೇಳುವ ಬಿಜೆಪಿ: ಸತೀಶ ಜಾರಕಿಹೊಳಿ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ಒಂದು ಸುಳ್ಳನ್ನು ಹತ್ತಾರು ಬಾರಿ ಹೇಳುವ ಮೂಲಕ ಬಿಜೆಪಿ ಜನರನ್ನು ನಂಬಿಸುವ ಕೆಲಸ ಮಾಡುತ್ತಿದೆ. ಸುಳ್ಳು ಹೇಳುವುದಕ್ಕೆ ಬಿಜೆಪಿಯವರಿಗೆ ಯಾವುದೇ ಇತಿಮಿತಿಯೇ ಇಲ್ಲ. ಪ್ರಧಾನಿಯಿಂದ ಕಾರ್ಯಕರ್ತರ ವರೆಗೂ ಸುಳ್ಳು ಹೇಳುತ್ತಾರೆ ಎಂದು ಕೆಪಿಸಿಸಿ ನಿಯೋಜಿತ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಟೀಕಿಸಿದರು.

ಕೆಪಿಸಿಸಿ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಅಂಗವಾಗಿ ಇಲ್ಲಿನ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಬುಧವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಕೊರೊನಾ ಲಾಕ್‌ಡೌನ್‌ನಿಂದ ತೊಂದರೆಗೊಳಗಾದವರಿಗಾಗಿ ₹ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್‌ ಘೋಷಣೆ ಮಾಡುತ್ತೇವೆ ಎಂದು ಪ್ರಧಾನಿ ಹೇಳಿದರು. ಆದರೆ, ಬಡವರು, ರೈತರಿಗೆ ಯಾವುದೇ ಸವಲತ್ತು ಕೊಡುವ ಕೆಲಸ ಮಾಡಿಲ್ಲ ಎಂದರು.

ಕಾಂಗ್ರೆಸ್‌ ಪಕ್ಷವನ್ನು ಮುಂದೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಬಿಜೆಪಿಗೆ ಸರಿಸಮನಾಗಿ ಕಟ್ಟಿಬೆಳೆಸಬೇಕಾಗಿದೆ ಎಂದು ಹೇಳಿದರು.

ಡಿಜಿಟಲೈಜ್‌ ವ್ಯವಸ್ಥೆಯಲ್ಲಿ ಬಿಜೆಪಿ ವೇಗವಾಗಿ ಹೆಜ್ಜೆ ಹಾಕಿದೆ. ಈ ನಿಟ್ಟಿನಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಬದಲಾಗಬೇಕಾಗಿದೆ ಎಂದು ಹೇಳಿದರು.

ಶಾಸಕ ಎಂ.ಬಿ.ಪಾಟೀಲ ಮಾತನಾಡಿ, ಕೇಂದ್ರ ಸರ್ಕಾರ ಲಾಕ್‌ಡೌನ್‌ ಅನ್ನು ಆತುರಾತುರವಾಗಿ ಜಾರಿ ಮಾಡುವ ಮೂಲಕ ದೇಶದಲ್ಲಿ ಸಮಸ್ಯೆ ಉಂಟಾಗಲು ಕಾರಣವಾಯಿತು. ಜನರು ತಮ್ಮ ಊರುಗಳಿಗೆ ತೆರಳಲು ಒಂದು ವಾರ ಸಮಯ ನೀಡಿದ್ದರೆ. ದೇಶದಲ್ಲಿ ಬಡವರು, ಕಾರ್ಮಿಕರು ಇಷ್ಟೊಂದು ಸಮಸ್ಯೆ ಎದುರಿಸುತ್ತಿರಲಿಲ್ಲ ಎಂದರು.

ದೆಹಲಿಯಲ್ಲಿ ತಬ್ಲಿಗ್‌ ಸಮಾವೇಶಕ್ಕೆ ಕೇಂದ್ರ ಸರ್ಕಾರವೇ ಅವಕಾಶ ನೀಡಿತು. ಬಳಿಕ ಜಾತಿ, ಧರ್ಮದ ರಾಜಕಾರಣಕ್ಕೆ ಬಿಜೆಪಿ ಮುಖಂಡರು ಬಳಸಿಕೊಂಡರು ಎಂದು ಹೇಳಿದರು.

ಶಾಸಕ ಯಶವಂತ ರಾಯಗೌಡ ಮಾತನಾಡಿ, ಡಿ.ಕೆ.ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷರಾಗಿರುವುರಿಂದ ರಾಜ್ಯದಲ್ಲಿ ಪಕ್ಷ ಸಂಘಟನೆ ವಿಷಯದಲ್ಲಿ ಹೊಸ ಸಂಚಲನ ಮೂಡಿದೆ. ಕಾಂಗ್ರೆಸ್‌ಗೆ ಹೊಸ ದಿಕ್ಕು ಲಭಿಸಿದಂತಾಗಿದೆ ಎಂದರು.

ಕರ್ನಾಟಕ ಕೊರೊನಾ ಮುಕ್ತವಾದರೂ ಬೆಳಗಾವಿ, ವಿಜಯಪುರ ಮತ್ತು ಕಲಬುರ್ಗಿ ಜಿಲ್ಲೆಗಳು ಮಹಾರಾಷ್ಟ್ರದ ಗಡಿಯಲ್ಲಿರುವುದರಿಂದ ಸದಾ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.

ಶಾಸಕ ಶಿವಾನಂದ ಪಾಟೀಲ ಮಾತನಾಡಿ, ಜನರ ನಾಡಿಮಿಡಿತ ಅರಿತಿರುವ ಹಾಗೂ ಎಲ್ಲ ನಾಯಕರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಸಾಮರ್ಥ್ಯ ಡಿ.ಕೆ.ಶಿವಕುಮಾರ್‌ ಅವರಿಗಿದೆ. ಅಂಥ ನಾಯಕರ ಅಗತ್ಯವಿತ್ತು ಎಂದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಪ್ರೊ.ರಾಜು ಆಲಗೂರ, ಮಾಜಿ ಶಾಸಕ  ವಿಠ್ಠಲ ಕಟಕದೊಂಡ, ಮುಖಂಡರಾದ ಅಬ್ದುಲ್‌ಹಮೀದ್‌ ಮುಶ್ರೀಪ್‌, ಮಲ್ಲಣ್ಣ ಸಾಲಿ, ಶಾಕೀರ ಸನದಿ, ರಾಜಶೇಖರ ಮೆಣಸಿನಕಾಯಿ, ಅನ್ವರ್‌ ಮುಧೋಳ, ಚಂದ್ರಶೇಖರ ರಾಠೋಡ, ದಯಾನಂದ ಪಾಟೀಲ, ಸುನೀತಾ ಐಹೊಳೆ, ಶರಣಪ್ಪ ಕೊಟಗಿ, ಚಾಂದಸಾಬ ಗಡಗಲಾವ, ವೈಜನಾಥ ಕರ್ಪೂರಮಠ, ಮಹ್ಮದ್‌ರಫೀಕ ಟಪಾಲ, ರವಿಗೌಡ ಪಾಟೀಲ, ಆರತಿ ಶಹಾಪೂರ, ಮಂಜುಳಾ ಜಾಧವ, ಶಬ್ಬೀರ ಜಾಗೀರದಾರ ಇದ್ದರು.

ಕೆಪಿಸಿಸಿ ಅಧ್ಯಕ್ಷ ಪದಗ್ರಹಣ ಜೂನ್‌ 7ಕ್ಕೆ
ಕೆಪಿಸಿಸಿ ನೂತನ ಅಧ್ಯಕ್ಷ, ಕಾರ್ಯಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಜೂನ್‌ 7ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಕೆಪಿಸಿಸಿ ನಿಯೋಜಿತ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ಕೊರೊನಾ ಹಿನ್ನೆಲೆಯಲ್ಲಿ ಲಕ್ಷಾಂತರ ಜನರು ಒಂದೆಡೆ ಸೇರುವುದು ಬೇಡ ಎಂಬ ಕಾರಣಕ್ಕೆ ಪದಗ್ರಹಣ ಸಮಾರಂಭವನ್ನು ವೀಕ್ಷಿಸಲು ರಾಜ್ಯದ ಎಂಟು ಸಾವಿರ ಸ್ಥಳಗಳಲ್ಲಿ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗುತ್ತಿದ್ದು, ನಾಲ್ಕು ಲಕ್ಷಕ್ಕೂ ಅಧಿಕ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.

ಪ್ರತಿ ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಏಕಕಾಲಕ್ಕೆ ಆಯೋಜಿಸಲಾಗುವ ಕಾರ್ಯಕ್ರಮದಲ್ಲಿ 50ರಿಂದ 100 ಜನ ಮಾತ್ರ ಭಾಗವಹಿಸಬೇಕು. ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್‌ ಧರಿಸಬೇಕು ಎಂದು ಹೇಳಿದರು.

ಸಂವಿಧಾನದ ಪ್ರಸ್ತಾವನೆಯನ್ನು ಓದುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಗುವುದು ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು