ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೇತರಿಕೆ ಹಾದಿಯಲ್ಲಿ ವಿಜಯಪುರ ವಿಭಾಗ

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ
Last Updated 5 ಜನವರಿ 2021, 13:56 IST
ಅಕ್ಷರ ಗಾತ್ರ

ವಿಜಯಪುರ: ಕೋವಿಡ್‌ ಸಂಕಷ್ಟದಿಂದ ನಷ್ಠದ ಹಾದಿಯಲ್ಲಿ ಆರೇಳು ತಿಂಗಳು ಕ್ರಮಿಸಿದ್ದ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಜಯಪುರ ವಿಭಾಗವು ಎರಡು–ಮೂರು ತಿಂಗಳಿಂದೀಚೆಗೆ ಚೇತರಿಕೆ ಕಂಡಿದ್ದು, ನಿರೀಕ್ಷಿತ ಆದಾಯ ಗಳಿಸತೊಡಗಿದೆ.

ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲೇ ಹೆಚ್ಚು ಆದಾಯ ಗಳಿಸುವ ವಿಭಾಗವಾಗಿ ವಿಜಯಪುರ ಹೊರಹೊಮ್ಮಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ‘ಪ್ರಜಾವಾಣಿ’ಗೆ ತಿಳಿಸಿದರು.

ಕೋವಿಡ್‌ ಲಾಕ್‌ಡೌನ್‌ ತೆರವಾದ ಬಳಿಕ ತಿಂಗಳಿಂದ ತಿಂಗಳಿಗೆ ಆದಾಯದಲ್ಲಿ ಏರಿಕೆಯಾಗುತ್ತಿದೆ. ಸೆಪ್ಟೆಂಬರ್‌ನಲ್ಲಿ ₹ 12.22 ಕೋಟಿ, ಅಕ್ಟೋಬರ್‌ನಲ್ಲಿ ₹14.17 ಕೋಟಿ, ನವೆಂಬರ್‌ನಲ್ಲಿ ₹18.30 ಕೋಟಿ, ಡಿಸೆಂಬರ್‌ನಲ್ಲಿ ₹18.31 ಕೋಟಿ ಆದಾಯ ಗಳಿಸಲಾಗಿದೆ ಎಂದು ಹೇಳಿದರು.

ವಿಜಯಪುರ ವಿಭಾಗದ 701 ರೂಟ್‌ಗಳ ಪೈಕಿ ಸದ್ಯ 656 ರೂಟ್‌ಗಳಲ್ಲಿ ಬಸ್‌ಗಳು ಪ್ರತಿ ದಿನ 2.21 ಲಕ್ಷ ಕಿ.ಮೀ.ಕ್ರಮಿಸುತ್ತಿವೆ. ಒಟ್ಟು ಸಿಬ್ಬಂದಿಯಲ್ಲಿ ಸದ್ಯ 100 ಜನ ಸಿಬ್ಬಂದಿ ನಿವೃತ್ತರಾಗಿದ್ದು, ಇನ್ನುಳಿದ 2144 ಸಿಬ್ಬಂದಿಗಳು ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಆದಾಯಕ್ಕೆ ಕುತ್ತು:

ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳ ಪ್ರವಾಸದಿಂದಲೂ ವಿಜಯಪುರ ವಿಭಾಗಕ್ಕೆ ಅಂದಾಜು ₹ 1 ಕೋಟಿ ಆದಾಯ ಬರುತ್ತಿತ್ತು. ಆದರೆ, ಈ ಬಾರಿ ಕೋವಿಡ್‌ನಿಂದ ಪ್ರವಾಸವೂ ರದ್ದಾಗಿರುವುದರಿಂದ ಸಾರಿಗೆ ಸಂಸ್ಥೆಗೆ ನಷ್ಠವಾಗಿದೆ ಎಂದು ತಿಳಿಸಿದರು.

ಅಲ್ಲದೇ, ಸಾರಿಗೆ ನೌಕರರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿಸೆಂಬರ್‌ನಲ್ಲಿ ನಾಲ್ಕು ದಿನಗಳ ಕಾಲ ಮುಷ್ಕರ ನಡೆಸಿದ ಕಾರಣವೂ ಆದಾಯ ಕುಸಿತವಾಯಿತು ಎಂದು ಹೇಳಿದರು.

₹119.49 ಕೋಟಿ ನಷ್ಠ:

ಕೋವಿಡ್‌ ಲಾಕ್‌ಡೌನ್‌ ಘೋಷಣೆಯಾದ ಬಳಿಕ ಅಂದರೆ, 2020ರ ಮಾರ್ಚ್‌‌ನಿಂದ ಡಿಸೆಂಬರ್‌ ವರೆಗೆ ₹119.49 ಕೋಟಿ ನಷ್ಠವಾಗಿದೆ. ಏಪ್ರಿಲ್‌ನಲ್ಲಿ 11.69 ಕೋಟಿ, ಮೇ ₹16.30 ಕೋಟಿ, ಜೂನ್‌ ₹9.90 ಕೋಟಿ, ಜುಲೈ ₹11.74, ಆಗಸ್ಟ್‌ ₹ 9.64 ಕೋಟಿ, ಸೆಪ್ಟೆಂಬರ್‌ ₹9.22 ಕೋಟಿ, ಅಕ್ಟೋಬರ್‌ ₹8.26 ಕೋಟಿ ನವೆಂಬರ್‌ ₹ 5.07 ಕೋಟಿ ಹಾಗೂ ಡಿಸೆಂಬರ್‌ ₹ 6.13 ಕೋಟಿ ನಷ್ಠವಾಗಿದೆ ಎಂದು ಹೇಳಿದರು.

ತಿಂಗಳವಾರ ಕ್ರಮಿಸಿದ ದೂರ:

ಏಪ್ರಿಲ್‌ನಲ್ಲಿ 4 ಸಾವಿರ ಕಿ.ಮೀ., ಮೇ 10.62 ಲಕ್ಷ ಕಿ.ಮೀ., ಜೂನ್‌ 35.58 ಲಕ್ಷ ಕಿ.ಮೀ., ಜುಲೈ 26.80 ಲಕ್ಷ ಕಿ.ಮೀ., ಆಗಸ್ಟ್‌ 37.65 ಲಕ್ಷ ಕಿ.ಮೀ., ಸೆಪ್ಟೆಂಬರ್‌ 50.31 ಲಕ್ಷ ಕಿ.ಮೀ., ಅಕ್ಟೋಬರ್‌ 58.55 ಲಕ್ಷ ಕಿ.ಮೀ., ನವೆಂಬರ್‌ 58.68 ಲಕ್ಷ ಕಿ.ಮೀ. ಹಾಗೂ ಡಿಸೆಂಬರ್‌ನಲ್ಲಿ 56.06 ಲಕ್ಷ ಕಿ.ಮೀ. ದೂರವನ್ನು ವಿಭಾಗದ ಬಸ್‌ಗಳು ವಿವಿಧ ಮಾರ್ಗಗಳಲ್ಲಿ ಕ್ರಮಿಸಿವೆ ಎಂದು ತಿಳಿಸಿದರು.

***

ಸವದತ್ತಿ, ಬನಶಂಕರಿ, ಕೊಕಟನೂರ, ಫಂಡರಾಪುರ, ಹುಲಜಂತಿ, ಗುಡ್ನಾಪುರ, ಅರಕೇರಿ, ಶ್ರೀಶೈಲ ಸೇರಿದಂತೆ ಪ್ರಮುಖ ಜಾತ್ರೆಗಳು ರದ್ದಾಗಿರುವುದರಿಂದ ಹೆಚ್ಚಿನ ಲಾಭ ಗಳಿಸಲು ಸಾಧ್ಯವಾಗಿಲ್ಲ

ನಾರಾಯಣಪ್ಪ ಕುರುಬರ, ವಿಭಾಗೀಯ ನಿಯಂತ್ರಣಾಧಿಕಾರಿ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT