ಮಂಗಳವಾರ, ಸೆಪ್ಟೆಂಬರ್ 29, 2020
22 °C

ಆಲಮಟ್ಟಿ ಜಲಾಶಯದ 22 ಗೇಟ್‌ಗಳ ಮೂಲಕ ನೀರು ಹೊರಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಹಾಗೂ ಕರ್ನಾಟಕದ ಕೃಷ್ಣಾ ಕಣಿವೆಯಲ್ಲಿ ಸುರಿಯುತ್ತಿರುವ ಮಳೆಯ ಕಾರಣ ಆಲಮಟ್ಟಿ ಜಲಾಶಯ ಒಳಹರಿವು ಹೆಚ್ಚಾಗಿರುವುದರಿಂದ ಮುಂಜಾಗ್ರತೆ ಕ್ರಮವಾಗಿ ಈ ವರ್ಷದಲ್ಲಿ ಇದೇ ಮೊದಲ ಬಾರಿಗೆ 22 ಗೇಟ್ ಗಳನ್ನು ಗುರುವಾರ ಸಂಜೆಯಿಂದ ತೆರೆದು ನೀರನ್ನು ನದಿ ಪಾತ್ರಕ್ಕೆ ಹರಿಸಲಾಗುತ್ತಿದೆ.

ಜಲಾಶಯದ ಒಳಹರಿವಿನಲ್ಲಿ ಭಾರಿ ಏರಿಕೆಯಾಗಿದ್ದು ಬೆಳಿಗ್ಗೆ 57,025 ಕ್ಯುಸೆಕ್ ಇದ್ದ ಒಳಹರಿವು ಸಂಜೆ 6 ರ ವೇಳೆಗೆ 1.00,900 ಕ್ಯುಸೆಕ್ ಗೆ ಏರಿಕೆಯಾಗಿದೆ.

ಸಂಜೆಯ ವೇಳೆಗೆ ಜಲಾಶಯದ ಮಟ್ಟ 518 ಮೀ. ತಲುಪಿದ್ದು, ಭರ್ತಿಗೆ ಇನ್ನೂ 1.6 ಮೀ. ಬಾಕಿಯಿದ್ದರೂ, ಮುಂಜಾಗ್ರತೆ ಕ್ರಮವಾಗಿ ಜಲಾಶಯದ 26 ಗೇಟ್‌ಗಳ ಪೈಕಿ 22 ಗೇಟ್‌ಗಳನ್ನು 4.5 ಮೀಟರ್ ಎತ್ತರಿಸಿ 38 ಸಾವಿರ ಕ್ಯುಸೆಕ್ ಹಾಗೂ ಕೆಪಿಸಿಎಲ್ ಮೂಲಕ 32 ಸಾವಿರ ಕ್ಯುಸೆಕ್ ಸೇರಿ 70 ಸಾವಿರ ಕ್ಯುಸೆಕ್ ನೀರನ್ನು ನದಿ ತಳಪಾತ್ರಕ್ಕೆ ಹಾಗೂ 2000 ಕ್ಯುಸೆಕ್ ನೀರನ್ನು ಕಾಲುವೆಗೆ ಹರಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

215 ಮೆಗಾವಾಟ್ ವಿದ್ಯುತ್ ಉತ್ಪಾದನೆ: ಜಲಾಶಯದ ಬಲಭಾಗದ ಆಲಮಟ್ಟಿ ಜಲವಿದ್ಯುತ್ ಉತ್ಪಾದನಾ ಕೇಂದ್ರ ಪೂರ್ಣ ಪ್ರಮಾಣದಲ್ಲಿ ಉತ್ಪಾದನೆಯಾಗಲು 45 ಸಾವಿರ ಕ್ಯುಸೆಕ್ ನೀರು ಅಗತ್ಯವಿತ್ತು. ಆದರೆ, ರಾಜ್ಯದಲ್ಲಿ ವಿದ್ಯುತ್ ಬೇಡಿಕೆಯಿಲ್ಲದ್ದರಿಂದ ಕೇವಲ 32 ಸಾವಿರ ಕ್ಯುಸೆಕ್ ನೀರನ್ನು ಪಡೆದು ಅದರ ಮೂಲಕ 215 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ ಎಂದು ಕೆಪಿಸಿಎಲ್ ಅಧಿಕಾರಿಗಳು ಸ್ಪಷ್ಟಪಡಿಸಿದರು.

ವಿದ್ಯುತ್ ಬೇಡಿಕೆ ಹೆಚ್ಚಿದರೆ ರಾತ್ರಿಯ ವೇಳೆಗೆ ಇನ್ನಷ್ಟು ನೀರನ್ನು ಪಡೆದು ವಿದ್ಯುತ್ ಉತ್ಪಾದನೆ ಹೆಚ್ಚಿಸಲಾಗುವುದು ಎಂದು ಅವರು ತಿಳಿಸಿದರು.

ಪ್ರವಾಹದ ಆತಂಕವಿಲ್ಲ: ಪ್ರತಿ ವರ್ಷ ಆಲಮಟ್ಟಿಯಲ್ಲಿ 2 ಲಕ್ಷ ಕ್ಯುಸೆಕ್ ವರೆಗೂ ನೀರು ಬರುವುದು, ಹೊರಬಿಡುವುದು ಸಾಮಾನ್ಯ ಪ್ರಕ್ರಿಯೆ. ಕಳೆದ ವರ್ಷವಷ್ಟೇ 5.65 ಲಕ್ಷ ಕ್ಯುಸೆಕ್ ದಾಖಲೆಯ ನೀರು ಹರಿದು ಬಂದಿದ್ದರಿಂದ ಪ್ರವಾಹ ಸ್ಥಿತಿ ಇತ್ತು. ಈಗ ಆ ರೀತಿಯ ಪರಿಸ್ಥಿತಿಯಿಲ್ಲ, ಮಹಾರಾಷ್ಟ್ರ ಅಲ್ಲದೇ, ಜಲಾಶಯದ ಮುಂಭಾಗದ ಕರ್ನಾಟಕ ಹಾಗೂ ಆಂಧ್ರಪ್ರದೇಶದ ಅಧಿಕಾರಿಗಳ ಜತೆಯೂ ಸತತ ಸಂಪರ್ಕದಲ್ಲಿದ್ದೇವೆ ಎಂದು ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಆರ್.ಪಿ. ಕುಲಕರ್ಣಿ ತಿಳಿಸಿದರು.

ಮುಂಜಾಗ್ರತೆ ಕ್ರಮವಾಗಿ ಜಲಾಶಯ ಇನ್ನೂ ಪೂರ್ಣ ಪ್ರಮಾಣದಲ್ಲಿ ಭರ್ತಿ ಮಾಡಿಲ್ಲ, ಒಳಹರಿವು ಇನ್ನಷ್ಟು ಹೆಚ್ಚಾದರೆ ಶುಕ್ರವಾರ ಬೆಳಿಗ್ಗೆಯಿಂದ ಹೊರಹರಿವನ್ನು ಇನ್ನಷ್ಟು ಹೆಚ್ಚಿಸಲಾಗುವುದು ಎಂದು ಅವರು ತಿಳಿಸಿದರು.

ಮುನ್ಸೂಚನೆ: ಆಲಮಟ್ಟಿ ಜಲಾಶಯದಿಂದ ಒಂದು ಲಕ್ಷ ಕ್ಯುಸೆಕ್ ವರೆಗೂ ನೀರನ್ನು ನದಿ ತಳಪಾತ್ರಕ್ಕೆ ಹರಿಸುವ ಸಾಧ್ಯತೆಯಿದ್ದು, ಜನ, ಜಾನುವಾರುಗಳು, ಮೀನುಗಾರರು ನದಿಗೆ ಇಳಿಯಬಾರದು ಎಂದು ನದಿ ಪಾತ್ರದ ಗ್ರಾಮಗಳ ಜನತೆಗೆ ಡಂಗುರ ಮೂಲಕ ಮುನ್ಸೂಚನೆ ನೀಡಲಾಗಿದೆ ಎಂದು ತಹಶೀಲ್ದಾರ್ ಶಿವಲಿಂಗಪ್ರಭು ವಾಲಿ ತಿಳಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಮುಂದುವರೆದ ಮಳೆಯ ಅಬ್ಬರ: ಮಹಾರಾಷ್ಟ್ರದ ಕೃಷ್ಣಾ ಕಣಿವೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಕೊಯ್ನಾದಲ್ಲಿ 202 ಮಿ.ಮೀ, ದೂದಗಂಗಾದಲ್ಲಿ 255 ಮಿ.ಮೀ, ತುಳಶಿಯಲ್ಲಿ 216 ಮಿ.ಮೀ, ರಾಧಾನಗರಿಯಲ್ಲಿ 271 ಮಿ.ಮೀ, ಪಾತಗಾಂವದಲ್ಲಿ 140 ಮಿ.ಮೀ, ಕಾಸರಿಯಲ್ಲಿ 130 ಮಿ.ಮೀ, ವಾರಣಾದಲ್ಲಿ 165 ಮಿ.ಮೀ, ಧೋಮ ಬಾಕಳವಾಡಿಯಲ್ಲಿ 104 ಮಿ.ಮೀ, ತರಳಿಯಲ್ಲಿ 60 ಮಿ.ಮೀ ಮಳೆಯಾಗಿದೆ.

ಕರ್ನಾಟಕಕ್ಕೆ ಬಂದು ಸೇರುವ ರಾಜಾಪುರ ಬ್ಯಾರೇಜ್ ಬಳಿ ಕೃಷ್ಣೆಯ ಹರಿವು 1.02ಲಕ್ಷ  ಕ್ಯುಸೆಕ್ ಹಾಗೂ ದೂಧಗಂಗಾ ನದಿಯಿಂದ 29,920 ಕ್ಯುಸೆಕ್ ಸೇರಿ ಒಟ್ಟು 1,31,920 ಕ್ಯುಸೆಕ್ ನೀರು ಕರ್ನಾಟಕದ ಕುಲ್ಲೋಳಿ ಬ್ಯಾರೇಜ್ ಬಳಿ ಕೃಷ್ಣೆಗೆ ಸೇರುತ್ತಿದೆ. ಇದರಿಂದಾಗಿ ಮುಂದಿನ ಎರಡು ಮೂರು ದಿನಗಳ ಕಾಲ ಆಲಮಟ್ಟಿ ಜಲಾಶಯದ ಒಳಹರಿವು ಇಷ್ಟೇ ಪ್ರಮಾಣದಲ್ಲಿ ಇರಲಿದೆ ಎಂದು ಜಲಾಶಯದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು