ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷ್ಣಾ ವೈಭವ ಹೆಚ್ಚಿಸುವ ಸೂರ್ಯಾಸ್ತ

ನಮ್ಮ ಊರು ನಮ್ಮ ಜಿಲ್ಲೆ
Last Updated 19 ಏಪ್ರಿಲ್ 2015, 12:54 IST
ಅಕ್ಷರ ಗಾತ್ರ

‘ಅಂಬರದ ಅಂಜೂರದಿ ನೇಸರನು
ಅಂಗೈಯಿಗೆ ಹತ್ತಿರವೀ ನೇಸರನು
ಕಾಸಗಲ ಕುಂಕುಮದ ನೇಸರನು
ಬಾನಗಲ ಬೀಗುವವನೀ ನೇಸರನು
ಕಣ್ಣ ತುಂಬ ತುಂಬಿಕೊಂಡ ಬಾಳತುಂಬ ಸೇರಿಕೊಂಡ...’
‘ಆಗುಂಬೆಯಾ... ಪ್ರೇಮ ಸಂಜೆಯಾ... ಮರೆಯಲಾರೆ ನಾನು ಎಂದಿಗೂ ಓ ಗೆಳತಿಯೇ... ಓ ಗೆಳತಿಯೇ...’
ಮುಸ್ಸಂಜೆಯ ಸೊಬಗನ್ನು ಕವಿ ಮನಸ್ಸು ಆನಂದದಿಂದ ವರ್ಣಿಸಿದ ಪರಿಯಿದು.

ಬೇಸಿಗೆ ಆರಂಭವಾಗುತ್ತಿದ್ದಂತೆ ಬಿಸಿಲ ನಾಡಿನ ಜನತೆ ಇಂಥ ಸುಂದರ ಮುಸ್ಸಂಜೆ ಆಸ್ವಾದಿಸಬೇಕಾದರೆ ಕೆನೆ ಮೊಸರಿನ ಖ್ಯಾತಿಯ ಕೊಲ್ಹಾರದ ದೊಡ್ಡ ಸೇತುವೆ ಮೇಲೆ ನಿಲ್ಲಬೇಕು. ಇಲ್ಲಿ ಪ್ರಕೃತಿ ನಿಮಗೆ ಹೊಸ ಲೋಕವೊಂದನ್ನು ಅನಾ­ವರಣಗೊಳಿಸಿ ಅವ್ಯಕ್ತ ಆನಂದ ಒದಗಿಸುತ್ತದೆ.

‘ಸದಾ ಕಡು ಬಿಸಿ­ಲನ್ನೇ ಹೊದ್ದು, ಕುಳಿ­ತೇ­ಳಲೂ ಬೆವ­ರುವ ಬಯಲ­ನಾಡು ವಿಜ­ಯ­ಪುರ–ಬಾಗಲ­ಕೋಟೆ ಅವಳಿ ಜಿಲ್ಲೆಗಳನ್ನು ಬೆಸೆ­ಯಲು ಕೃಷ್ಣಾನದಿಗೆ ಅಡ್ಡಲಾಗಿ ಕಟ್ಟಿರುವ 3 ಕಿ.ಮೀ. ಉದ್ದದ ಸೇತುವೆ ಹಾಗೂ ಇಲ್ಲಿನ ಮುಸ್ಸಂಜೆಯ ವಾತಾವರಣ ಪ್ರವಾಸಿಗರನ್ನು ಬೆರಗುಗೊಳಿಸುತ್ತದೆ.

ಕೃಷ್ಣಾ ನದಿ ದಡದಲ್ಲಿ ನಿಂತು ಮುಸ್ಸಂಜೆಯಲ್ಲಿ ಹಕ್ಕಿಗಳ ಸ್ವಚ್ಛಂದದ ಹಾರಾಟ, ಚಿಲಿಪಿಲಿ ಸದ್ದಿನ ಹಿಮ್ಮೇಳ­ದಲ್ಲಿ ಸೂರ್ಯಾಸ್ತವನ್ನು ವೀಕ್ಷಿಸುವುದೇ ಒಂದು ಸೌಭಾಗ್ಯ.

ನೋಡಲು ಕಡಲನ್ನೇ ನೆನಪಿಸುವ ಈ ಭಾಗದ ‘ಮಹಾ ನದಿ’ ಕೃಷ್ಣೆಯ ‘ತೆರೆದೆದೆಯ’ ನೀರಿನ ಮೇಲೆ ಸೂರ್ಯನು ತನ್ನ ಸಮಸ್ತ ಶಕ್ತಿಯನ್ನು ಧಾರೆಯೆರೆದಿದ್ದಾನೋ ಎಂಬಂತೆ ಹೊಂಗಿ­ರಣ­ಗಳ ರಸವನ್ನೇ ಎರಕ ಹೊಯ್ದಂತೆ ಭಾಸವಾಗುತ್ತದೆ.

ಈ ನೀರಿನಲ್ಲಿ ಅಲ್ಲಲ್ಲಿ ಮೀನು ಹಿಡಿಯುವ ಮೀನುಗಾರರ ಸಣ್ಣ ದೋಣಿಗಳು, ಮಕ್ಕಳು ಮಾಡುವ ಕಾಗದದ ದೋಣಿಯಂತೆ ಕಂಡುಬರು­ತ್ತವೆ. ಆಗಾಗ ನದಿ ನೀರಿನ ಮೇಲೆ ಜಿಗಿಜಿಗಿದು ಮೇಲೆದ್ದು ಬೀಳುವ ಸಣ್ಣ ದೊಡ್ಡ ಮೀನುಗಳು, ಅವುಗಳನ್ನು ಹಿಡಿದು ತಿನ್ನಲು ನೀರಿನ ಮೇಲೆ ಹಾರಾಡುವ ಹಕ್ಕಿಗಳು ರಾಕೆಟ್‌ನಂತೆ ಕೆಳಗಿಳಿಯುವ ದೃಶ್ಯವನ್ನು ವರ್ಣಿಸಲಸದಳ.

ಇದಕ್ಕೆ ಕಳಸವಿಟ್ಟಂತೆ ದೂರದಲ್ಲಿ ಕಾಣುವ ಬೀಳಗಿಬೆಟ್ಟ, ನದಿ ದಂಡೆಯ ತೆಂಗಿನ ತೋಟ. ಅದರಾಚೆಯ ಗುಡ್ಡದಲ್ಲಿ ಚೆಲ್ಲಾಟವಾಡುತ್ತಾ ಸೂರ್ಯನೆಂಬ ಮನ್ಮಥ (ಕಾಮಣ್ಣ) ಬಣ್ಣಗಳನ್ನೆಲ್ಲಾ ಒಂದು ಮಾಡಿ ಭಂಡಾರದ(ಅರಿಷಿಣ) ಧೂಳನ್ನು ಮುಗಿಲಿಗೆಲ್ಲ ಬಳಿದು ರಂಗಿನಾಟವಾಡುತ್ತಿದ್ದಾನೆ ಎಂದು ಭಾಸವಾಗುತ್ತದೆ.

ಸುತ್ತಮುತ್ತಲಿನ ಪ್ರಕೃತಿ ಪ್ರೇಮಿಗಳನ್ನು ಕೊರ್ತಿ ಕೊಲ್ಹಾರದ ಈ ಸೇತುವೆ ಹಾಗೂ ಮುಸ್ಸಂಜೆ ಸೂರ್ಯನ ಹೊಂಬಣ್ಣ ಕೈಬೀಸಿ ಕರೆಯುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT