ಚಿಕ್ಕಮಗಳೂರು: ಅಘಾದ ಸಸ್ಯರಾಶಿ ಮತ್ತು ಅಪಾರ ವನ್ಯಜೀವಿಗಳ ಸಂಕುಲ ಹೊಂದಿರುವ ಭದ್ರಾ ಹುಲಿ ಸಂರಕ್ಷಿತ ಪ್ರದೇಶವು ಪರಿಸರಾಸಕ್ತರ ನೆಚ್ಚಿನ ತಾಣ. ಸಫಾರಿ ಪ್ರಿಯರನ್ನು ಕೈಬಿಸಿ ಕರೆಯುವ ಲಕ್ಕವಳ್ಳಿ ವಲಯದಲ್ಲಿ ಇತ್ತೀಚೆಗೆ ಆಗಾಗ ಕಾಣಿಸಿಕೊಂಡ ಕರಿ ಚಿರತೆ ಜನರನ್ನು ಹೆಚ್ಚು ಆಕರ್ಷಿಸುತ್ತಿದೆ.

ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಸಫಾರಿ ಎಂದರೆ ವನ್ಯಜೀವಿ ಪ್ರಿಯರಿಗೆ ಅಚ್ಚುಮೆಚ್ಚಿನ ತಾಣ. ಒಂದೆಡೆ ಜೀಪ್ ಸಫಾರಿ, ಮತ್ತೊಂದೆಡೆ ಬೋಟ್ ಸಫಾರಿ. ಇವೆರಡೂ ಪ್ರವಾಸಿಗರನ್ನು ಸೆಳೆಯುತ್ತಿವೆ. ಇತ್ತೀಚೆಗೆ ಕರಿ ಚಿರತೆಯೊಂದ ಲಕ್ಕವಳ್ಳಿ ವಲಯದಲ್ಲಿ ಸಫಾರಿ ಹೋಗುವವರಿಗೆ ಕಾಣಿಸಿಕೊಳ್ಳುತ್ತಿದ್ದು, ಅದನ್ನು ನೋಡಲೆಂದೇ ವನ್ಯಜೀವಿ ಪ್ರಿಯರು ಬರುತ್ತಿದ್ದಾರೆ.

ಕರಿ ಚಿರತೆ(ಬ್ಲಾಕ್ ಪ್ಯಾಂಥರ್) ಹಗಲಿನಲ್ಲಿ ವಿರಳವಾಗಿ ಕಾಣಿಸುತ್ತದೆ. ಅಲ್ಲದೆ ಸಾಮಾನ್ಯ ಬಣ್ಣದ ಸಹೋದರರ ಜತೆ ಕಾಣಿಸಿಕೊಳ್ಳುವುದು ಕೂಡ ಅಪರೂಪ. ಸಾಮಾನ್ಯ ಬಣ್ಣದ(ಚುಕ್ಕಿ) ಚಿರತೆಯೊಂದಿಗೆ ಕಪ್ಪು ಚಿರತೆ ಕಾಲ ಕಳೆಯುತ್ತಿರುವುದನ್ನು ವನ್ಯಜೀವಿ ಛಾಯಾಗ್ರಾಹಕರು ಸೆರೆ ಹಿಡಿದಿದ್ದಾರೆ.

ಕರಿ ಚಿರತೆ: ಏನಿದರ ವಿಶೇಷ

ಭದ್ರಾ ಕಾಡಿನಲ್ಲಿ 2025ರ ಕೊನೆಯಲ್ಲಿ ಹೆಚ್ಚಾಗಿ ಪ್ರವಾಸಿಗರನ್ನು ಆಕರ್ಷಣೆ ಮಾಡಿರುವುದು ಕರಿ ಚಿರತೆ. ಈ ಕರಿ ಚಿರತೆ ಬೇರೆ ಜಾತಿಯ ಪ್ರಾಣಿಯಲ್ಲ. ಸಾಮಾನ್ಯ ಚಿರತೆಗಳ ಜಾತಿಗೆ ಸೇರಿದ ವನ್ಯಜೀವಿ. ಚರ್ಮದ ಮೇಲೆ ಸಾಮಾನ್ಯ ಚುಕ್ಕಿಗಳನ್ನು ಹೊಂದಿರುವ ಚಿರತೆಗಳಿಂದಲೇ ಜನ್ಮ ತಾಳುವ ಚಿರತೆ. ಚರ್ಮದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೆಲಾನಿನ್ ಉತ್ಪತ್ತಿಯಾದ ಕಾರಣ ಸಂಪೂರ್ಣ ಕಪ್ಪಾಗಿ ಕಾಣಿಸುತ್ತದೆ. ವಾಸ್ತವವಾಗಿ ಇದು ಬೇರೆ ಜಾತಿಯಲ್ಲ. ಸಾಮಾನ್ಯ ಚಿರತೆಯೇ ಆಗಿದ್ದು ಬಣ್ಣ ಮಾತ್ರ ಭಿನ್ನವಾಗಿರುತ್ತದೆ ಎಂದು ವನ್ಯಜೀವಿ ತಜ್ಞರು ಹೇಳುತ್ತಾರೆ.

ಭದ್ರಾ ಕಾಡಿನ ವೈಶಿಷ್ಠ್ಯ

ಮುತ್ತೋಡಿಯಿಂದ ಲಕ್ಕವಳ್ಳಿ ತನಕ ಜಾಗರ ಕಣಿವೆಯಲ್ಲಿ ಹುದುಗಿರುವ ಭದ್ರಾ ಹುಲಿ ಸಂರಕ್ಷಿತ ಪ್ರದೇಶವೆಂದರೆ ಅದೊಂದು ಕೌತಕ ತಾಣ. ಮುಗಿಲೆತ್ತರದ ಗಿರಿಗಳು, ಎತ್ತ ನೋಡಿದರೂ ವನರಾಶಿ, ಬೇಡವೆಂದರೂ ಕಣ್ಣೆದುರಿಗೆ ಬಂದು ನರ್ತಿಸುವ ನವಿಲುಗಳು, ಗಿಳಿ– ಗುಬ್ಬಚ್ಚಿಗಳ ಕಲರವದ ಇಂಚರ, ಮಂಗ– ಮಂಗಟ್ಟೆ ಗುಟುರು, ಆನೆ–ಹುಲಿಗಳ ಗಾಂಭೀರ್ಯ, ಜಿಂಕೆ–ಚಿರತೆಗಳ ಮಿಂಚಿನೋಟ, ಉಡ, ಉರುಗ, ಇಲಿ, ಮೊಲಗಳ ಕಳ್ಳ ನೋಟ... ಇವೆಲ್ಲವನ್ನೂ ಒಂದೆಡೆ ಕೂಡಿಟ್ಟುಕೊಂಡಿರುವುದೇ ಭದ್ರಾ ಹುಲಿ ಸಂರಕ್ಷಿತ ಪ್ರದೇಶ.

ಹುಲಿಗಳು ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳ ಪಟ್ಟಿಯಲ್ಲಿದ್ದರೂ ಇಲ್ಲಿ ವರ್ಷದಿಂದ ವರ್ಷಕ್ಕೆ ಸಂಖ್ಯೆ ಹೆಚ್ಚಾಗುತ್ತಿದೆ. ಹುಲಿಗಳನ್ನು ಸಂಕರ್ಷಿಸುವ ರಾಜ್ಯದ ಎರಡನೇ ಕಾಡೆಂದರೆ ಅದು ಭದ್ರಾ ವನ್ಯಜೀವಿ ಪ್ರದೇಶ.

1915ರಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲೇ ಮೀಸಲು ಅರಣ್ಯ ಎಂದು ಘೋಷಣೆಯಾಗಿತ್ತು. ಬಳಿಕ 1951ರಲ್ಲಿ ಮೈಸೂರು ರಾಜ್ಯವಾಗಿದ್ದಾಗ ಪಶ್ಚಿಮ ಘಟ್ಟಗಳ 124.63 ಚದರ ಕಿಲೋ ಮೀಟರ್ ಅರಣ್ಯ ಪ್ರದೇಶವನ್ನು ಜಾಗರ ಕಣಿವೆ ವನ್ಯಜೀವಿ ಅಭಯಾರಣ್ಯ ಎಂದು ಘೋಷಣೆ ಮಾಡಲಾಯಿತು.

ಅತ್ಯಂತ ವೈವಿಧ್ಯಮಯ ಈ ಪರಿಸರ ತಾಣವನ್ನು 1974ರಲ್ಲಿ 492.46 ಚದರ ಕಿಲೋ ಮೀಟರ್ಗೆ ವಿಸ್ತರಿಸಲಾಯಿತು. ಬಳಿಕ ಭದ್ರಾ ವನ್ಯಜೀವಿ ಅಭಯಾರಣ್ಯ ಎಂದು ಮರುನಾಮಕರಣ ಮಾಡಲಾಯಿತು. ಒಂದೆಡೆ ಮುಳ್ಳಯ್ಯನಗಿರಿ, ಹೆಬ್ಬೆಗಿರಿ, ಗಂಗೆಗಿರಿ, ಬಾಬಾ ಬುಡನ್ಗಿರಿಯ ರಮಣಿಯ ಬೆಟ್ಟಗಳು ಮತ್ತು ಇಳಿಜಾರು ಪ್ರದೇಶಗಳಿಂದ ಈ ವನ್ಯಜೀವಿ ತಾಣ ಆವೃತಗೊಂಡಿದೆ.

ಈ ಪ್ರದೇಶವನ್ನು 1998ರಲ್ಲಿ ಭದ್ರಾ ಹುಲಿ ಸಂರಕ್ಷಿತ ಪ್ರದೇಶ(ಬಿಟಿಆರ್) ಎಂದು ಘೋಷಣೆ ಮಾಡಲಾಯಿತು. ಭಾರತದ 25ನೇ ಮತ್ತು ಕರ್ನಾಟಕದ ಎರಡನೇ ಹುಲಿ ಸಂರಕ್ಷಿತ ಪ್ರದೇಶ ಎಂಬ ಹೆಗ್ಗಳಿಕೆ ಪಾತ್ರವಾಯಿತು. ಇದರ ನಡುವೆಯೇ ಉಳಿದಿದ್ದ ಊರುಗಳಲ್ಲಿದ್ದ ಜನರನ್ನು ಬೇರೆಡೆಗೆ ಸ್ಥಳಾಂತರಿಸುವ ಪ್ರಕ್ರಿಯೆ 2000ನೇ ಇಸವಿಯಿಂದ ಆರಂಭವಾಯಿತು. 16 ಗ್ರಾಮಗಳ 736ಕ್ಕೂ ಹೆಚ್ಚು ಕುಟುಂಬಗಳನ್ನು ತರೀಕೆರೆ ತಾಲೂಕಿನ ಎಂ.ಸಿ.ಹಳ್ಳಿ ಮತ್ತು ಮೂಡಿಗೆರೆ ತಾಲ್ಲೂಕಿನ ಕೆಳಗೂರಿಗೆ ಸ್ಥಳಾಂತರ ಮಾಡಲಾಯಿತು. 2002ರಿಂದ ಈಚೆಗೆ ಸಂಪೂರ್ಣ ಜನವಸತಿಯಿಂದ ಈ ಪ್ರದೇಶ ಮುಕ್ತವಾಯಿತು. ಬಳಿಕ ಅರಣ್ಯ ಮತ್ತು ವನ್ಯಜೀವಿ ಸಂಪತ್ತು ಸಂವೃದ್ಧಿಗೊಂಡಿದೆ.

ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ 2023ರಲ್ಲಿ ನಡೆಸಿರುವ ಹುಲಿ ಅಂದಾಜು ವರದಿಯ ಪ್ರಕಾರ 500.16 ಚದರ ಕಿಲೋ ಮೀಟರ್ ಹುಲಿ ಆವಾಸಸ್ಥಾನವಾದರೆ, 571.84 ಚದರ ಕಿಲೋ ಮೀಟರ್ ಬಫರ್ ಪ್ರದೇಶವನ್ನು ಹೊಂದಿದೆ. ಇಲ್ಲಿ 35ಕ್ಕೂ ಹೆಚ್ಚು ಹುಲಿಗಳು, 116 ಚಿರತೆಗಳು, 445 ಆನೆಗಳಿವೆ. ಈಗ ಹುಲಿ ಗಣತಿ ನಡೆಯುತ್ತಿದ್ದು, ಅವುಗಳ ಈಗಿನ ಸಂಖ್ಯೆ ಸದ್ಯದಲ್ಲೇ ಗೊತ್ತಾಗಲಿದೆ.

ಹುಲಿ ಬೆಕ್ಕು, ಕೆನ್ನಾಯಿ, ಕೆಂದಳಿಲು, ನರಿ, ಕರಡಿ, ಕಾಡು ಕುರಿ, ಕಾಡು ಹಂದಿ, ಕಡವೆ, ಮುಸೆಯಾ, ಕಾಡು ಪಾಪ, ಹಾರುವ ಓತಿ, ಮುಳ್ಳು ಹಂದಿ, ನೀರು ನಾಯಿ, ಪುನುಗಿನ ಬೆಕ್ಕು, ಮೊಸಳೆ ಸೇರಿ ಅಪಾರ ಪ್ರಮಾಣದ ವನ್ಯಜೀವಿ ಸಂಪತ್ತಿದೆ. 25 ವರ್ಷಗಳ ಹಿಂದೆ ಮೂರರಿಂದ ನಾಲ್ಕು ಮಾತ್ರ ಉಳಿದಿದ್ದ ಕಾಟಿಗಳ ಸಂಖ್ಯೆ ಅಚ್ಚರಿಗೊಳ್ಳುವಷ್ಟು ಜಾಸ್ತಿಯಾಗಿವೆ. ಲಕ್ಕವಳ್ಳಿ ವಲಯದ ಸಫಾರಿ ಮತ್ತು ಮುತ್ತೋಡಿ ವಲಯದ ಸಫಾರಿ ವೇಳೆ ಹೇರಳವಾಗಿ ಕಾಣಿಸಿಕೊಳ್ಳುತ್ತವೆ. ಅಲ್ಲದೇ ಎಲ್ಲಾ ವಯಸ್ಸಿನ ಕಾಟಿಗಳು ಇರುವುದು ವಿಶೇಷ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ಇದಕ್ಕೆ ಹೊಂದಿಕೊಂಡಂತೆ ಇರುವ ಭದ್ರಾ ಹಿನ್ನೀರು, ವರ್ಷವಿಡೀ ಹಿರಿಯವ ಸೋಮವಾಹಿನಿ ನದಿಯು ಈ ಜೀವ ವೈವಿದ್ಯತೆಯನ್ನು ಹಿಡಿದಿಟ್ಟುಕೊಂಡಿವೆ. 40 ಸಸ್ತನಿಗಳು, 250ಕ್ಕೂ ಹೆಚ್ಚು ಪ್ರಭೇದದ ಪಕ್ಷಿಗಳು, 30ಕ್ಕೂ ಹೆಚ್ಚು ಸರೀಸೃಪ ಪ್ರಭೇದಗಳು, 20 ಜಾತಿಯ ಉಭಯಚರಗಳು, 40ಕ್ಕೂ ಹೆಚ್ಚು ರೀತಿಯ ಮೀನುಗಳು, 250 ವಿಧದ ಚಿಟ್ಟೆಗಳಿಗೆ ನೆಲೆಯಾಗಿದೆ.

350 ವರ್ಷದ ತೇಗದ ಮರ

ಭದ್ರಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ 120ಕ್ಕೂ ಹೆಚ್ಚು ವಿಧದ ಮರಗಳಿವೆ ಎಂದು ಅಂದಾಜಿಸಲಾಗಿದೆ. ಅವುಗಳಲ್ಲಿ ಪ್ರಮುಖ ಆಕರ್ಷಣೆಯೆಂದರೆ 350 ವರ್ಷಗಳಷ್ಟು ಹಳೆಯದಾದ ತೇಗದ ಮರ. ಇದು 32 ಮೀಟರ್ ಎತ್ತರ ಮತ್ತು 5.1 ಮೀಟರ್ ಸುತ್ತಳತೆ ಹೊಂದಿರುವ ಮರ ಇದಾಗಿದೆ. ಮುತ್ತೋಡಿ ವಲಯದಲ್ಲಿ ಸಫಾರಿ ಹೋಗುವ ಜನರಿಗೂ ಈ ದೈತ್ಯ ಮರ ದರ್ಶನವಾಗುತ್ತದೆ.

ವರ್ಷದ ಅತಿಥಿ ರಿವರ್ ಟರ್ನ್

ಲಕ್ಕವಳ್ಳಿ ಬಳಿಯ ಭದ್ರಾ ಜಲಾಶಯದ ಹಿನ್ನೀರಿಗೆ ವರ್ಷಕ್ಕೊಮ್ಮೆ ಅತಿಥಿಯಾಗಿ ಬರುವುದು ರಿವರ್ ಟರ್ನ್ ಎಂಬ ವಲಸೆ ಹಕ್ಕಿಗಳು. ಜಲಾಶಯದಲ್ಲಿ ನೀರು ಕಡಿಮೆಯಾದಂತೆ ನಡುಗಡ್ಡೆಗಳು ತೆರೆದುಕೊಳ್ಳುತ್ತವೆ. ಸುತ್ತಲೂ ನೀರಿರುವ ಈ ನಡುಗಡ್ಡಗೆ ಯಾವ ಪ್ರಾಣಿಗಳಿಂದಲೂ ಆಪಾಯ ಇಲ್ಲ. ಇನ್ನು ಆಹಾರಕ್ಕೆ ಮೀನುಗಳ ಕೊರತೆ ಇಲ್ಲ. ಆದ್ದರಿಂದ ಈ ನಡುಗಡ್ಡೆಗಳನ್ನು ವಂಶಾಭಿವೃದ್ಧಿಗೆ ಅತ್ಯಂತ ಸುರಕ್ಷಿತ ಪ್ರದೇಶ ಎಂದು ಅವು ಆಯ್ಕೆ ಮಾಡಿಕೊಂಡಿವೆ.

ಪ್ರತಿ ವರ್ಷ ಫೆಬ್ರುವರಿ ತಿಂಗಳಿನಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬರುವ ಹಕ್ಕಿಗಳ ಕಲರವ ನೋಡುವುದೇ ಸೋಜಿಗ. ಬೋಟಿಂಗ್ ಸಫಾರಿಯಲ್ಲಿ ಈ ನಡುಗಡ್ಡೆಗಳನ್ನು ಸುತ್ತುವರಿದು ಕರೆದೊಯ್ಯುವುದರಿಂದ ಪ್ರವಾಸಿಗರಿಗೆ ಈ ಹಕ್ಕಿಗಳ ಜೀವನ ಕ್ರಮವನ್ನು ಹತ್ತಿರದಿಂದ ನೋಡುವ ಅವಕಾಶವೂ ದೊರಯುತ್ತಿದೆ. ಈ ವರ್ಷ ಭದ್ರಾ ಜಲಾಶಯ ಭರ್ತಿಯಾಗಿದ್ದು, ಈಗ ನಾಲೆಗಳಲ್ಲಿ ನೀರು ಹರಿಯಲಿದೆ. ಬಳಿಕ ನಡುಗಡ್ಡೆಗಳು ತೆರೆದುಕೊಳ್ಳುತ್ತವೆ. ಆ ಬಳಿಕ ರಿವರ್ ಟರ್ನ್ ಪಕ್ಷಿಗಳು ಬರಲಿವೆ.