ಯಾದಗಿರಿ: ‘ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಈಗಾಗಲೇ ಶೇ 95ರಷ್ಟು ರೈತರ ಮಾಹಿತಿಯನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ನಮೂದಿಸಲಾಗಿದೆ. ಆದರೆ, ಯಾದಗಿರಿಯಲ್ಲಿ ಮಾತ್ರ ಶೇ 77ರಷ್ಟು ಮಾತ್ರ ನಮೂದಿಸಲಾಗಿದೆ. 80 ಸಾವಿರ ರೈತರ ಮಾಹಿತಿ ಇನ್ನೂ ಅಪ್ಡೇಟ್ ಆಗಿಲ್ಲ. ಅಧಿಕಾರಿಗಳು ಮಾಡುವ ತಪ್ಪಿಗೆ ಸರ್ಕಾರ ತಪ್ಪಿತಸ್ಥ ಸ್ಥಾನದಲ್ಲಿ ನಿಲ್ಲಬೇಕಾ? ಎಂದು ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯ ಎರಡು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಬೆಳೆ ಸಮೀಕ್ಷೆ ಕುರಿತ ಎಲ್ಲಾ ರೈತರ ಸಂಪೂರ್ಣ ಮಾಹಿತಿಯನ್ನು ಮುಂದಿನ 10 ದಿನಗಳಲ್ಲಿ ಮುಗಿಸಿ ‘ಫ್ರೂಟ್ಸ್’ (Fruits) ತಂತ್ರಾಂಶದಲ್ಲಿ ನಮೂದಿಸಿ, ರೈತರಿಗೆ ನ್ಯಾಯಯುತ ಪರಿಹಾರ ತಲುಪಿಸಿ ಎಂದು ಸೂಚಿಸಿದರು.
‘ಅಧಿಕಾರಿಗಳು ಜಿಲ್ಲೆಯಲ್ಲಿ ಈಗಾಗಲೇ ಬೆಳೆ ಸಮೀಕ್ಷೆ ನಡೆಸಿದ್ದಾರೆ. 2015-16ರ ಸಮೀಕ್ಷೆಯ ಪ್ರಕಾರ ಜಿಲ್ಲೆಯಲ್ಲಿ 2.30 ಲಕ್ಷ ರೈತರಿದ್ದಾರೆ. ಆದರೆ, 1.80 ಲಕ್ಷ ರೈತರ ಮಾಹಿತಿ ಮಾತ್ರ ಫ್ರೂಟ್ಸ್ ತಂತ್ರಾಂಶದಲ್ಲಿ ನಮೂದಿಸಲಾಗಿದೆ. ಉಳಿದ 80 ಸಾವಿರ ರೈತರ ಬೆಳೆ ಮಾಹಿತಿ ಏಕೆ ಮಾಡಿಲ್ಲ? ಎಂದು ಸಚಿವರು ಕಿಡಿಕಾರಿದರು.
‘ರಾಜ್ಯ ಈ ವರ್ಷ ಇತಿಹಾಸ ಕಾಣದ ಬರಕ್ಕೆ ತುತ್ತಾಗಿದೆ. ಮಳೆ ಇಲ್ಲದ ಕಾರಣ ರೈತರು ಪರಿತಪಿಸುವಂತಾಗಿದೆ. ಬೆಳೆ ಕೈಸೇರದೆ ಸಂಕಷ್ಟಕ್ಕೀಡಾಗಿದ್ದಾರೆ. ಇಂತಹ ಸಂದರ್ಭದಲ್ಲಿ ನಾವು ರೈತರ ಪರ ನಿಲ್ಲಬೇಕಾಗಿದೆ’ ಎಂದು ಕಿವಿಮಾತು ಹೇಳಿದರು.
ಕುಡಿಯುವ ನೀರು ಪೂರೈಸಿ: ‘ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾದರೆ ಖಾಸಗಿ ಟ್ಯಾಂಕರ್ ಮೂಲಕ ನೀರು ಪೂರೈಸಿ’ ಎಂದು ಸಚಿವ ಬೈರೇಗೌಡ ಸೂಚಿಸಿದರು.
‘ಈ ವರ್ಷ ಬರಗಾಲ ಎದುರಾಗಿದೆ. ಮುಂದಿನ ಬೇಸಿಗೆಯಲ್ಲಿ ಜಿಲ್ಲೆಯ ಕೆಲವೆಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇರುತ್ತದೆ. ಅಧಿಕಾರಿಗಳು ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆ ಎಂದು ಸರ್ವೆ ನಡೆಸಿ ನೀರಿನ ಸಮಸ್ಯೆ ಕಂಡುಬರುವ ಕಡೆಗಳಲ್ಲಿ ಖಾಸಗಿ ಟ್ಯಾಂಕರ್ ಮೂಲಕ ನೀರನ್ನು ಪೂರೈಸಿ. ಯಾವ ಭಾಗದಲ್ಲೂ ಸಾರ್ವಜನಿಕರು ನೀರಿನ ಸಮಸ್ಯೆ ಎದುರಿಸದಂತೆ ನೋಡಿಕೊಳ್ಳಿ, ಈ ಖರ್ಚಿಗೆ ಜಿಲ್ಲಾಧಿಕಾರಿಗಳ ಖಾತೆಯಿಂದ ಎಸ್‌ಡಿಆರ್‌ಎಫ್ ಹಣವನ್ನು ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.
ತಕರಾರು ಅರ್ಜಿಗಳ ವಿಲೇವಾರಿ- ಮೆಚ್ಚುಗೆ: ‘ಕಳೆದ ಮೂರು ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತಕರಾರು ಪ್ರಕರಣಗಳ ಇತ್ಯರ್ಥ ವೇಗ ಪಡೆದುಕೊಂಡಿದೆ’ ಎಂದು ಸಚಿವ ಕೃಷ್ಣ ಬೈರೇಗೌಡ ಮೆಚ್ಚುಗೆ ಸೂಚಿಸಿದರು.
ಈ ಬಗ್ಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಉಪವಿಭಾಗಾಧಿಕಾರಿ ಕೋರ್ಟ್‌ಗಳಲ್ಲಿ ಐದು ವರ್ಷಕ್ಕೆ ಮೇಲ್ಪಟ್ಟ 32,710 ಪ್ರಕರಣಗಳು ಇದ್ದವು. ಆದರೆ, ಕಳೆದ ಮೂರೇ ತಿಂಗಳಲ್ಲಿ 20,519 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳ ಕೋರ್ಟ್‌ನಲ್ಲಿರುವ ಪ್ರಕರಣಗಳು ತ್ವರಿತ ಗತಿಯಲ್ಲಿ ಇತ್ಯರ್ಥವಾಗುತ್ತಿದೆ’ ಎಂದು ತಿಳಿಸಿದರು.
‘ತಕರಾರು ಪ್ರಕರಣಗಳ ಕಾರಣಕ್ಕೆ ಸಾರ್ವಜನಿಕರು ದಿನಂಪ್ರತಿ ಸರ್ಕಾರಿ ಕಚೇರಿಗಳಿಗೆ ಅಲೆಯುವಂತಾಗಿತ್ತು. ಆದರೆ, ಈಗ ಅಧಿಕಾರಿಗಳು ಸೂಚನೆಯಂತೆ ತಕರಾರು ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸುತ್ತಿರುವುದು ಉತ್ತಮ ಬೆಳವಣಿಗೆ. ಮುಂದಿನ ದಿನಗಳಲ್ಲೂ ತ್ವರಿತಗತಿಯಲ್ಲಿ ಈ ಪ್ರಕರಣಗಳನ್ನು ಮುಗಿಸಿ ಜನರಿಗೆ ತುಸು ನೆಮ್ಮದಿ ನೀಡಿ’ ಎಂದರು.
ಸರ್ಕಾರಿ ಭೂಮಿ ಗುರುತಿಸಲು ಬೀಟ್ ವ್ಯವಸ್ಥೆ: ‘ಜಿಲ್ಲಾ ಸರಹದ್ದಿನಲ್ಲಿ ಸರ್ಕಾರಿ ಜಮೀನು ಎಷ್ಟಿದೆ? ಎಸ್ಸಿ-ಎಸ್ಟಿ ಭೂಮಿ ಎಷ್ಟಿದೆ? ಈ ಪೈಕಿ ಎಷ್ಟು ಒತ್ತುವರಿಯಾಗಿದೆ ಎಂಬ ಕುರಿತು ಅಧಿಕಾರಿಗಳು ಸಂಪೂರ್ಣ ಮಾಹಿತಿ ಕಲೆಹಾಕಬೇಕು. ಈ ಭೂಮಿಯನ್ನು ರಕ್ಷಿಸುವ ಕೆಲಸ ಆಗಬೇಕು’ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
‘ಸರ್ಕಾರಿ ಭೂಮಿಯನ್ನು ಗುರುತಿಸಿದ ನಂತರ ಮೂರು ತಿಂಗಳಿಗೊಮ್ಮೆ ಸರ್ಕಾರಿ ಭೂಮಿಗಳನ್ನು ಬೀಟ್ ವ್ಯವಸ್ಥೆ ಮೂಲಕ ಒತ್ತುವರಿಯಾಗಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು. ಈ ಮಾಹಿತಿಯನ್ನು ನಮೂದಿಸಲು ‘ಬೀಟ್’ ಆ್ಯಪ್ ಅಭಿವೃದ್ಧಿಪಡಿಸುತ್ತಿದ್ದು, ಶೀಘ್ರದಲ್ಲಿ ಅಧಿಕಾರಿಗಳ ಬಳಕೆಗೆ ಮುಕ್ತವಾಗಲಿದೆ’ ಎಂದರು.
ಹೈಕೋರ್ಟ್ ಕೇಸ್‌ಗಳ ಬಗ್ಗೆ ಅಸಡ್ಡೆ ಏಕೆ?: ಜಿಲ್ಲೆಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಹೈಕೋರ್ಟ್‌ನಲ್ಲಿ 187 ಪ್ರಕರಣಗಳಿವೆ. ಈ ಪೈಕಿ 114 ಪ್ರಕರಣಗಳಲ್ಲಿ ತೆಗೆದುಕೊಂಡಿರುವ ಕ್ರಮ ಶೂನ್ಯ. ಅಲ್ಲದೆ, ನ್ಯಾಯಾಲಯದಲ್ಲಿ ವಕಾಲತ್ತನ್ನೂ ಸಲ್ಲಿಸುವ ಕೆಲಸವನ್ನು ಅಧಿಕಾರಿಗಳು ಮಾಡಿಲ್ಲ. ಹೀಗಾಗಿ ನ್ಯಾಯಾಲಯ ಇಲಾಖೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದೆ ಎಂದು ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಗೆ ಅಸಮಾಧಾನ ಹೊರಹಾಕಿದ ಸಚಿವರು, ನೀವು ಮಾಡುವ ಕೆಲಸಕ್ಕೆ ಸರ್ಕಾರದ ಜಮೀನು ಖಾಸಗಿಯವರ ಪಾಲಾಗಲು ನಾವು ಸಹಿ ಹಾಕಬೇಕಾ? ಎಂದು ಕಿಡಿಕಾರಿದರು. ಅಲ್ಲದೆ, ಈ ಸಮಸ್ಯೆಯನ್ನು ಶೀಘ್ರ ಪರಿಹರಿಸಿ ಪ್ರತಿ 15 ದಿನಗಳಿಗೊಮ್ಮೆ ಜಿಲ್ಲಾಧಿಕಾರಿಗಳಿಗೆ ವರದಿ ನೀಡುವಂತೆ ಸೂಚಿಸಿದರು.
ಸರ್ಕಾರಿ ಕಚೇರಿಗಳಿಗೆ ದಿಢೀರ್ ಭೇಟಿ: ಯಾದಗಿರಿ ಪ್ರಗತಿ ಪರಿಶೀಲನಾ ಸಭೆಗೆ ಮುನ್ನವೇ ಸಚಿವ ಕೃಷ್ಣ ಬೈರೇಗೌಡ ಅವರು, ಜಿಲ್ಲೆಯ ವಿವಿಧ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗುರುವಾರ ಬೆಳಿಗ್ಗೆಯೇ ಗುರುಮಠಕಲ್ ನಾಡ ಕಚೇರಿಗೆ ಭೇಟಿ ನೀಡಿದ ಸಚಿವರು, ಅಲ್ಲಿನ ಕಚೇರಿ ಹೇಗೆ ಕಾರ್ಯನಿರ್ವಹಿಸುತ್ತಿದೆ. ಜನರ ಸಮಸ್ಯೆಗೆ ಅಧಿಕಾರಿಗಳು ಹೇಗೆ ಸ್ಪಂದಿಸುತ್ತಿದ್ದಾರೆ? ಪಹಣಿ ಸೇರಿದಂತೆ ಯಾವೆಲ್ಲಾ ಸೇವೆಯನ್ನು ನಾಡಕಚೇರಿಯಲ್ಲಿ ನೀಡಲಾಗುತ್ತಿದೆ. ಯಾವೆಲ್ಲಾ ಸೇವೆಯನ್ನು ಆನ್‌ಲೈನ್ ಮಾಡಲಾಗಿದೆ ಎಂಬ ಕುರಿತು ಮಾಹಿತಿ ಪಡೆದರು.
ನಂತರ ಯಾದಗಿರಿ ತಾಲ್ಲೂಕು ಕಚೇರಿಯಲ್ಲಿ ಇ-ಆಫೀಸ್ ಅನುಷ್ಠಾನವಾಗದಿರುವ ಮತ್ತು ರೆಕಾರ್ಡ್ ರೂಂನಲ್ಲಿ 50 ವರ್ಷಗಳ ಹಳೆಯ ದಾಖಲೆಗಳನ್ನು ಸುರಕ್ಷಿತವಾಗಿಡದ ಹಾಗೂ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಿಸದ ಸಂಬಂಧ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಅಲ್ಲದೆ, ಶೀಘ್ರದಲ್ಲೇ ಎಲ್ಲಾ ದಾಖಲೆಗಳನ್ನೂ ಡಿಜಿಟಲೀಕರಿಸುವಂತೆಯೂ ಸೂಚಿಸಿದರು.
ಸಣ್ಣ ಕೈಗಾರಿಕಾ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ, ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ಸುರಪುರ ಶಾಸಕ ರಾಜಾ ವೆಂಕಟಪ್ಪನಾಯಕ, ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ, ಕಂದಾಯ ಇಲಾಖೆ ಆಯುಕ್ತ ಪಿ.ಸುನಿಲ್ ಕುಮಾರ, ಭೂ ಮಾಪನ ಇಲಾಖೆ ಆಯುಕ್ತ ಹಾಗೂ ಭೂಮಿ ಮತ್ತು ಯುಪಿಒಆರ್ ನಿರ್ದೇಶಕ ಜೆ.ಮಂಜುನಾಥ, ಕಲಬುರಗಿ ಪ್ರಾದೇಶಿಕ ಆಯುಕ್ತ ಕೃಷ್ಣ ಭಾಜಪೈ, ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ, ಹೆಚ್ಚುವರಿ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಉಪವಿಭಾಗಾಧಿಕಾರಿ ಹಂಪಣ್ಣ ಸಜ್ಜನ್ ಸೇರಿದಂತೆ ಜಿಲ್ಲೆಯ ಎಲ್ಲಾ ತಹಶೀಲ್ದಾರರು ಹಾಗೂ ಕಂದಾಯ ಮತ್ತು ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.
‘ಬರ ಪರಿಸ್ಥಿತಿ ವಿವರಿಸಲು ಭೇಟಿಗೆ ಅನುಮತಿ’ : ‘ರಾಜ್ಯದ ಬರಪರಿಸ್ಥಿತಿ ಬಗ್ಗೆ ವಿವರಿಸಲು ಕೇಂದ್ರ ಸಚಿವರ ಭೇಟಿಗೆ ಅನುಮತಿ ಕೇಳಿದ್ದೇವೆ. ನವದೆಹಲಿ ಅಥವಾ ಬೇರೆ ರಾಜ್ಯದಲ್ಲಿ ಅನುಮತಿ ಕೊಟ್ಟರೆ ಅಲ್ಲಿಗೆ ಹೋಗಿ ಭೇಟಿ ಆಗುತ್ತೇವೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ‘ಬರ ಪರಿಹಾರವನ್ನು ಈ ಬಾರಿ ಆನ್‌ಲೈನ್ ಮೂಲಕ ವಿತರಿಸಲಾಗುತ್ತಿದೆ. ಈ ಮೂಲಕ ರೈತರಿಗೆ ನೇರವಾಗಿ ಪರಿಹಾರ ಸಿಗಲಿದೆ’ ಎಂದು ಗುರುವಾರ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ‘ದೇಶದ 12 ರಾಜ್ಯಗಳಲ್ಲಿ ಬರ ಪರಿಸ್ಥಿತಿಯಿಂದ ವಿದ್ಯುತ್ ಅಭಾವ ಎದುರಾಗಿದೆ. ಅಲ್ಲದೇ ಕಲ್ಲಿದ್ದಲು ಕೊರತೆ ಇದೆ. ಹೀಗಾಗಿ ನಮ್ಮ ಸರ್ಕಾರ ಇದಕ್ಕೆ ಪರಿಹಾರತ್ಮಾಕ ಕೆಲಸಗಳನ್ನು ಮಾಡುತ್ತಿದೆ’ ಎಂದು ತಿಳಿಸಿದರು. ‘ಉಪವಿಭಾಗಾಧಿಕಾರಿ ತಹಶೀಲ್ದಾರ್ ಕೋರ್ಟ್‌ನಲ್ಲಿ 180 ದಿನಕ್ಕಿಂತ ಹೆಚ್ಚು ಅವಧಿಯಲ್ಲಿ ತೆರವಾಗದೇ ಬಾಕಿ ಉಳಿದಿರುವ ಅರ್ಜಿ ವಿಲೇವಾರಿ ಮಾಡಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಂದಾಯ ಗ್ರಾಮ ಘೋಷಿಸಿ: ‘ಕಂದಾಯ ಇಲಾಖೆಗೆ ಸೇರದ ಕಾರಣ ಕಂದಾಯೇತರ ಜನವಸತಿ ನಿವಾಸಿಗಳು ಅಭಿವೃದ್ಧಿ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ. ಹೀಗಾಗಿ ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ತಾಂಡಾ-ಗೊಲ್ಲರಹಟ್ಟಿ ಪ್ರದೇಶಗಳನ್ನು ಕಂದಾಯ ಗ್ರಾಮ ಎಂದು ಘೋಷಿಸಲು ಅನುವು ಮಾಡಿಕೊಡಲಾಗಿತ್ತು. ಸಾರ್ವಜನಿಕರ 30 ವರ್ಷಗಳ ಬೇಡಿಕೆಗೆ ಅನುಗುಣವಾಗಿ 2013ರ ಕಾಂಗ್ರೆಸ್ ಸರ್ಕಾರ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಹತ್ವದ ನಿರ್ಧಾರ ತೆಗದುಕೊಂಡಿದ್ದರು. ಆದರೆ ಜಿಲ್ಲೆಯಲ್ಲಿ ಈ ಸಂಬಂಧ ನಿರೀಕ್ಷಿತ ಕೆಲಸ ಆಗದಿರುವುದು ವಿಷಾದನೀಯ’ ಎಂದು ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ ಹೊರಹಾಕಿದರು. ‘ಜಿಲ್ಲೆಯಲ್ಲಿ 93 ಕಂದಾಯ ಗ್ರಾಮಗಳು ರಚನೆಯಾಗಬೇಕಿತ್ತು. ಆದರೆ ಈವರೆಗೆ 61 ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಿದ್ದರೆ 24 ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಬಾಕಿ ಇದೆ. 8 ಗ್ರಾಮಗಳನ್ನು ಕೈಬಿಡಲಾಗಿದೆ. ಆದರೆ ಅಂತಿಮ ಅಧಿಸೂಚನೆ ಹೊರಡಿಸದೆ ಫಲಾನುಭವಿಗಳಿಗೆ ಹೇಗೆ ಹಕ್ಕುಪತ್ರ ವಿತರಿಸಿದಿರಿ? ಎಂದು ಪ್ರಶ್ನಿಸಿದ ಸಚಿವರು ಎಲ್ಲಾ ಅರ್ಹ ಗ್ರಾಮಗಳನ್ನು ಶೀಘ್ರ ಕಂದಾಯ ಗ್ರಾಮಗಳಾಗಿ ಘೋಷಿಸಿ ಬಡವರ ಪರವಾಗಿ ಕೆಲಸ ಮಾಡಿ’ ಎಂದು ಸೂಚಿಸಿದರು.
ಇ–ಆಫೀಸ್ ಬಳಸಿ: 15 ದಿನಗಳ ಗಡುವು ಸಭೆಯ ವೇಳೆ ಇ-ಆಫೀಸ್ ಬಳಕೆಯ ಬಗ್ಗೆಯೂ ಚರ್ಚೆ ನಡೆಸಿದ ಸಚಿವರು ಜಿಲ್ಲೆಯಲ್ಲಿ ಬಹುತೇಕ ಯಾವ ತಾಲ್ಲೂಕುಗಳಲ್ಲೂ ಇ-ಆಫೀಸ್ ಅನುಷ್ಠಾನಗೊಳ್ಳದಿರಲು ಕಾರಣವೇನು? ಎಂದು ಅಧಿಕಾರಿಗಳ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ಕಿಡಿಕಾರಿದರು. ಯಾದಗಿರಿಗಿಂತ ಹಿಂದುಳಿದ ಜಿಲ್ಲೆಗಳಲ್ಲೂ ಈಗಾಗಲೇ ಶೇ 100ರಷ್ಟು ಇ-ಆಫೀಸ್ ಜಾರಿಯಾಗಿದೆ. ಇ-ಆಫೀಸ್ ಮೂಲಕವೇ ಎಲ್ಲಾ ಕಡತಗಳನ್ನೂ ವಿಲೇವಾರಿ ಮಾಡಲಾಗುತ್ತಿದೆ. ಹೀಗಾಗಿ ಎಲ್ಲಾ ಕೆಲಸಗಳೂ ವೇಗ ಪಡೆಯುತ್ತಿದ್ದು ಅಧಿಕಾರಿಗಳ-ಜನರ ಸಮಯವೂ ಉಳಿಯುತ್ತಿದೆ. ಹೀಗಾಗಿ ಮುಂದಿನ 15 ದಿನಗಳಲ್ಲಿ ಇ-ಆಫೀಸ್ ಅನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.