ಸೋಮವಾರ, ಆಗಸ್ಟ್ 15, 2022
24 °C
ಜಿಲ್ಲೆಯ ಶಹಾಪುರ, ಭೀಮರಾಯನಗುಡಿಯಲ್ಲಿ ಹೆಚ್ಚು ಪ್ರಕರಣ ದಾಖಲು

ಯಾದಗಿರಿ: 5 ವರ್ಷಗಳಲ್ಲಿ 19 ಗಾಂಜಾ ಪ್ರಕರಣ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ 19 ಗಾಂಜಾ ಪ್ರಕರಣಗಳು ದಾಖಲಾಗಿವೆ. ಶಹಾಪುರ, ಭೀಮರಾಯನಗುಡಿಯಲ್ಲಿ ಹೆಚ್ಚಿನ ಪ್ರಕರಣ ದಾಖಲಾಗಿವೆ. 

ಬೆಂಗಳೂರಿನಲ್ಲಿ ಡ್ರಗ್ಸ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಪೊಲೀಸ್ ಇಲಾಖೆ ಜಿಲ್ಲೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಿದೆ. 3 ದಿನಗಳ ಹಿಂದೆ ಶಹಾಪುರ ತಾಲ್ಲೂಕಿನ ಭೀಮರಾಯನಗುಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ₹6,600 ಮೌಲ್ಯದ ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಶಹಾಪುರದಲ್ಲಿ ಯಾಕೆ ಹೆಚ್ಚು: ಶಹಾಪುರ ತಾಲ್ಲೂಕಿನ ನೀರಾವರಿ ಮತ್ತು ಮಳೆಯಾಶ್ರಿತ ಪ್ರದೇಶದಲ್ಲಿ ವಾಣಿಜ್ಯ ಬೆಳೆಯಾದ ಹತ್ತಿಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಹತ್ತಿ ಮತ್ತು ಗಾಂಜಾ ಗಿಡ ಒಂದೇ ರೀತಿಯಾಗಿ ಇರುವುದರಿಂದ ಹೆಚ್ಚು ಅನುಮಾನ ಮೂಡುವುದಿಲ್ಲ. ಹೀಗಾಗಿ ಈ ಭಾಗದಲ್ಲಿ ಹೆಚ್ಚು ಬೆಳೆಯುತ್ತಾರೆ. ದಾಳಿ ಮಾಡಿ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡುತ್ತಾರೆ.

‘ಇಂತಹ ಕೃತ್ಯ ನಡೆಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಹಳ್ಳಿಗಳಲ್ಲಿ ಜಾನುವಾರುಗಳು ಸರಿಯಾಗಿ ಮೇವು ತಿನ್ನದಿದ್ದರೆ ರೈತರು ಗಾಂಜಾ ತಿನ್ನಿಸುತ್ತಾರೆ ಎನ್ನುವ ಮಾಹಿತಿ ಇದೆ. ಆದರೆ, ಎನ್‌ಡಿಪಿಎಸ್ ಕಾಯ್ದೆಯಡಿ ಗಾಂಜಾ ಕೃಷಿ ಮಾಡುವುದು ಅಪರಾಧ. ಅಲ್ಲದೆ ಗಾಂಜಾ ಸ್ವಾಧೀನ, ಬಳಕೆ, ಗಾಂಜಾ ಮಾರಾಟ ಅಪರಾಧವಾಗಿದೆ. ಇದಕ್ಕೆ ಜಾಮೀನು ಕೂಡ ಸಿಗುವುದಿಲ್ಲ. ಹೀಗಾಗಿ ಇಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್‌ ಸೋನವಣೆ ಮಾಹಿತಿ ನೀಡುತ್ತಾರೆ.

‘ಪಕ್ಕದ ಕಲಬುರ್ಗಿ ಜಿಲ್ಲೆಯಲ್ಲಿ ಗಾಂಜಾ ಪೂರೈಕೆ ಅಡ್ಡೆ ಪತ್ತೆಯಾಗಿದೆ. ನಮ್ಮ ಜಿಲ್ಲೆ ಸಣ್ಣದಾಗಿದ್ದರೂ ಎಲ್ಲ ಆಯಾಮಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಗಾಂಜಾ ಪೂರೈಕೆ, ಮಾರಾಟ, ಬೆಳೆ ಕಂಡು ಬಂದರೆ ತಕ್ಷಣ ಕಾರ್ಯಪ್ರವೃತ್ತರಾಗಿ ದಾಳಿ ಮಾಡಿ ವಶಪಡಿಸಿಕೊಳ್ಳುತ್ತೇವೆ. ಗಾಂಜಾ ನಿಷೇಧಿತ ಬೆಳೆಯಾಗಿದೆ’ ಎನ್ನುತ್ತಾರೆ ಅವರು. 

‘ಜಿಲ್ಲೆಯಲ್ಲಿ ಗಾಂಜಾ ಬೆಳೆಯವವರ ಮತ್ತು ಪೂರೈಕೆದಾರರ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇದ್ದರೆ ನೇರವಾಗಿ ಎಸ್‌ಪಿಯವರಿಗೆ ತಿಳಿಸಬಹುದು. ಅವರ ಹೆಸರು ಗೌಪ್ಯವಾಗಿ ಇಡಲಾಗುವುದು. ಆರೋಪಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಮಾಹಿತಿ ನೀಡುತ್ತಾರೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ.

ಅಬಕಾರಿಯಲ್ಲೂ ಪ್ರಕರಣ ದಾಖಲು: ಜಿಲ್ಲೆಯಲ್ಲಿ ಮೂರು ವರ್ಷಗಳಲ್ಲಿ 8 ಗಾಂಜಾ ಪ್ರಕರಣಗಳನ್ನು ಅಬಕಾರಿ ಇಲಾಖೆ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ. ಮೂವರನ್ನು ಬಂಧಿಸಿ ಕೋರ್ಟ್‌ಗೆ ಹಾಜರು ಪಡಿಸಲಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. 

ನಿಯಂತ್ರಣಕ್ಕೆ ಕ್ರಮ

'ಜಿಲ್ಲೆಯಲ್ಲಿ ಗಾಂಜಾ ಬೆಳೆಗಾರರ ಮೇಲೆ ಎಲ್ಲ ಕಡೆ ಹದ್ದಿನಕಣ್ಣು ಇಡಲಾಗಿದೆ. ಗಡಿಭಾಗದ ಗುರುಮಠಕಲ್‌ನಲ್ಲಿಯೂ ಜಾಗೃತೆ ವಹಿಸಲಾಗಿದೆ' ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಭಗವಾನ್‌ ಸೋನವಣೆ ಹೇಳಿದರು.

2017ರಿಂದ 2020ರ ಜೂನ್‌ 30ರ ವರೆಗೆ ₹13,91,950 ಮೌಲ್ಯದ 11 ಗಾಂಜಾ ಗಿಡ, 22 ಕೇ.ಜಿ. ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಉಪ ಆಯುಕ್ತೆ ಶಶಿಕಲಾ ಒಡೆಯರ್ ಪ್ರತಿಕ್ರಿಯಿಸಿದರು.

'ಗಾಂಜಾ ಮತ್ತಿತರ ಮಾದಕ ವಸ್ತುಗಳಿಂದ ಯುವ ಜನತೆ ತಮ್ಮ ಜೀವನ ಹಾಳು ಮಾಡಿಕೊಳ್ಳುತ್ತಿದ್ದು, ಪೊಲೀಸ್, ಅಬಕಾರಿ ಇಲಾಖೆ ಅಧಿಕಾರಿಗಳು ಕಡಿವಾಣ ಹಾಕಬೇಕು' ಎಂದು ಕಾಂಗ್ರೆಸ್ ಮುಖಂಡ ಭೀಮಣ್ಣ ಮೇಟಿ ನುಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು