ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ: 4.01 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ

Published 20 ಮೇ 2024, 5:12 IST
Last Updated 20 ಮೇ 2024, 5:12 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ 2024-25 ನೇ ಸಾಲಿನ ಮುಂಗಾರು ಹಂಗಾಮಿಗೆ ಸಿದ್ಧತೆ ನಡೆದಿದ್ದು, ಬಿತ್ತನೆಗೆ ರೈತರು ಅಣಿಯಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಮೇ ತಿಂಗಳಿನ ವಾಡಿಕೆ ಮಳೆ 41 ಮಿಲಿ ಮೀಟರ್‌ ಇದ್ದು, 29 ಎಂಎಂ ಮಳೆಯಾಗಿದೆ. ಮುಂಗಾರು ಹಂಗಾಮಿನಲ್ಲಿ 4,01,637 ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು, ರೈತರು ಭೂಮಿ ಸಿದ್ದತೆಯಲ್ಲಿ ತೊಡಗಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಉತ್ತಮ ಮಳೆಯಾಗಿದ್ದು, ಭೂಮಿ ಸಿದ್ದತೆಗೆ ಅನುಕೂಲವಾಗಿದೆ.

ಮುಂಗಾರು ಬಿತ್ತನೆ ಬೀಜಗಳ ದಾಸ್ತಾನು: ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಾದ ತೊಗರಿ, ಹೆಸರು ಮತ್ತು ಭತ್ತ 2,975.45 ಕ್ವಿಂಟಲ್‌ ಬಿತ್ತನೆ ಬೀಜಗಳ ಬೇಡಿಕೆ ಇದ್ದು, ಜಿಲ್ಲೆಯ 16 ರೈತ ಸಂಪರ್ಕ ಕೇಂದ್ರಗಳ ಮೂಲಕ ರಿಯಾಯ್ತಿ ದರದಲ್ಲಿ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕರ್ನಾಟಕ ರಾಜ್ಯ ಬೀಜ ನಿಗಮ ಮತ್ತು ರಾಷ್ಟ್ರೀಯ ಬೀಜ ನಿಗಮದಲ್ಲಿ 2,683 ಕ್ವಿಂಟಲ್‌ ಬೀಜಗಳ ದಾಸ್ತಾನು ಲಭ್ಯವಿದ್ದು, ಬಿತ್ತನೆ ಬೀಜಗಳ ಯಾವುದೇ ಕೊರತೆ ಇಲ್ಲ.

ರಸಗೊಬ್ಬರ ದಾಸ್ತಾನು: ಮೇ ತಿಂಗಳಿಂದ ಸೆಪ್ಟೆಂಬರ್ ತಿಂಗಳವರೆಗೆ ಬೆಳೆಗಳ ಕ್ಷೇತ್ರಕ್ಕನುಗುಣವಾಗಿ ವೈಜ್ಞಾನಿಕವಾಗಿ ಶಿಫಾರಸು ಮಾಡಿದ ಪೋಷಕಾಂಶಗಳ ಆಧಾರದ ಮೇಲೆ ಜಿಲ್ಲೆಗೆ ಬೇಕಾಗುವ ವಿವಿಧ ರಸಗೊಬ್ಬರಗಳ ಬೇಡಿಕೆ 1,22,766 ಮೆಟ್ರಿಕ್‌ ಟನ್ ಇದ್ದು, ಮೇ ತಿಂಗಳ ಬೇಡಿಕೆ 13,729 ಮೆಟ್ರಿಕ್‌ ಟನ್ ಇದ್ದು 54,169 ಮೆಟ್ರಿಕ್‌ ದಾಸ್ತಾನು ಲಭ್ಯವಿದೆ. ಮುಂದಿನ ತಿಂಗಳಲ್ಲಿ ಬೇಡಿಕೆ ಬೇಕಾದಷ್ಟು ಸರಬರಾಜು ಮಾಡಲು ರಸಗೊಬ್ಬರ ಲಭ್ಯವಿದೆ. ಯಾವುದೇ ರೀತಿಯ ಕೊರತೆ ಇಲ್ಲ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.

ಬೇಗನೇ ಪ್ರವೇಶಿಸಿರುವ ಮುಂಗಾರು

ಸುರಪುರ ವರದಿ: ಈ ಬಾರಿಯ ಮುಂಗಾರು ಬೇಗನೆ ಪ್ರವೇಶಿಸಿದೆ. ಈಗಾಗಲೇ ತಾಲ್ಲೂಕಿನಲ್ಲಿ ಎರಡು ಮೂರು ಬಾರಿ ಸಾಧಾರಣ ಮಳೆಯಾಗಿದೆ. ರೈತರು ಭೂಮಿ ಹದಗೊಳಿಸಲು ಸಿದ್ಧತೆ ನಡೆಸಿದ್ದಾರೆ.

ತಾಲ್ಲೂಕಿನಲ್ಲಿ ಒಟ್ಟು 63,507 ಹೆಕ್ಟೇರ್ ಕೃಷಿ ಭೂಮಿ ಇದೆ. ಅದರಲ್ಲಿ 46,497 ನೀರಾವರಿ, 17,010 ಖುಷ್ಕಿ ವ್ಯಾಪ್ತಿಗೆ ಒಳಪಟ್ಟಿದೆ. ಕಾಲುವೆ ಕೊನೆ ಭಾಗ, ನೀರಾವರಿ ವಂಚಿತ ಪ್ರದೇಶ ಎಂದು ದಾಖಲೆಯಲ್ಲಿ ನೀರಾವರಿಗೆ ಒಳಪಟ್ಟ ಶೇ 20 ಕ್ಕೂ ಹೆಚ್ಚು ಜಮೀನು ಮಳೆಯನ್ನೆ ಆಶ್ರಯಿಸಿದೆ.

ಕೃಷಿ ಇಲಾಖೆ ಬಿತ್ತನೆ ಬೀಜ ಮತ್ತು ಲಘು ಪೋಷಕಾಂಶ ಗೊಬ್ಬರ ಸಂಗ್ರಹಕ್ಕೆ ಸಿದ್ದತೆ ನಡೆಸಿದೆ. 550 ಕ್ವಿಂಟಲ್‌ ತೊಗರಿ, 50 ಕ್ವಿಂಟಲ್‌ ಹೆಸರು, 20 ಕ್ವಿಂಟಲ್‌ ಸಜ್ಜೆ, 10 ಕ್ವಿಂಟಲ್‌ ಸೂರ್ಯಕಾಂತಿ ಬೀಜಕ್ಕೆ ಬೇಡಿಕೆ ಸಲ್ಲಿಸಲಾಗಿದೆ.

ಕೃಷಿ ಅಧಿಕಾರಿಗಳು ರಸಗೊಬ್ಬರ ಮಾರಾಟ ಅಂಗಡಿಗಳಿಗೆ ಭೇಟಿ ನೀಡಿ ಬಿತ್ತನೆ ಬೀಜದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಗುಣಮಟ್ಟದ ಪರೀಕ್ಷೆಗೆ ಕಳಿಸುತ್ತಿದ್ದಾರೆ. ಕಳಪೆ ಬೀಜ ಮಾರಾಟ ಮಾಡಿದರೆ ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ್ದಾರೆ.

ಪೂರಕ ವರದಿ: ಟಿ.ನಾಗೇಂದ್ರ, ಅಶೋಕ ಸಾಲವಾಡಗಿ, ಭೀಮಶೇನರಾವ ಕುಲಕರ್ಣಿ, ಎಂ.ಪಿ.ಚಪೆಟ್ಲಾಕೃಷಿ ಇಲಾಖೆ ಮುಂಗಾರು ಅವಧಿಗೆ ಸನ್ನದ್ಧವಾಗಿದೆ. ರೈತರು ಅಧಿಕೃತ ಮಾರಾಟಗಾರರಿಂದ ಮಾತ್ರ ಬೀಜ ಖರೀದಿಸಿ ರಸೀದಿ ಪಡೆಯಬೇಕು ಮಲ್ಲಿಕಾರ್ಜುನ ವಾರದ ಕೃಷಿ ಅಧಿಕಾರಿ

ಯಾದಗಿರಿ ತಾಲ್ಲೂಕಿನ ಬಂದಳ್ಳಿ ಗ್ರಾಮದ ಜಮೀನಿನನ್ನು ಎತ್ತುಗಳ ಮೂಲಕ ಹದಗೊಳಿಸಿದ ರೈತ
ಪ್ರಜಾವಾಣಿ ಚಿತ್ರ/ ರಾಜಕುಮಾರ ನಳ್ಳಿಕರ
ಯಾದಗಿರಿ ತಾಲ್ಲೂಕಿನ ಬಂದಳ್ಳಿ ಗ್ರಾಮದ ಜಮೀನಿನನ್ನು ಎತ್ತುಗಳ ಮೂಲಕ ಹದಗೊಳಿಸಿದ ರೈತ ಪ್ರಜಾವಾಣಿ ಚಿತ್ರ/ ರಾಜಕುಮಾರ ನಳ್ಳಿಕರ
ಜಿಲ್ಲೆಯಲ್ಲಿ ಪೂರ್ವ ಮುಂಗಾರಿನ ಉತ್ತಮ ಮಳೆಯಾಗುತ್ತಿದ್ದು ರೈತರಿಗೆ ಬೇಕಾದ ಬೀಜ ಗೊಬ್ಬರಕ್ಕೆ ಯಾವುದೇ ಸಮಸ್ಯೆಯಾಗದಂತೆ ಕೃಷಿ ಇಲಾಖೆ ಅಧಿಕಾರಿಗಳು ಕ್ರಮವಹಿಸಬೇಕು. ಅಲ್ಲದೇ ಮಳೆಯಾಶ್ರಿತ ನೀರಾವರಿಗೆ ಬೇಕಾದ ಯೂರಿಯಾ ಡಿಎಪಿ ಕಾಂಪ್ಲೆಕ್ಸ್ ಗೊಬ್ಬರ ಹತ್ತಿ ಬೀಜ ನಕಲಿ ಹಾವಳಿ ತಡೆಯವಲ್ಲಿ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು
ಅಶೋಕ ಮಲ್ಲಾಬಾದಿ ರಾಜ್ಯ ಕೃಷಿ ಪ್ರಶಸ್ತಿ ಪುರಸ್ಕೃತ ರೈತ
ರೈತರು ಅಧಿಕೃತ ಮಾರಾಟಗಾರರಲ್ಲಿ ಮಾತ್ರ ಬಿತ್ತನೆ ಬೀಜ ಖರೀದಿಸಿ ಕಡ್ಡಾಯವಾಗಿ ರಸೀದಿ ಪಡೆಯಬೇಕು. ರೈತರು ರೈತ ಸಂಪರ್ಕ ಕೇಂದ್ರಗಳಲ್ಲಿ ಕೃಷಿ ಬಗ್ಗೆ ಮಾಹಿತಿ ಪಡೆಯಬೇಕು
ಭೀಮರಾಯ ಹವಾಲ್ದಾರ ಸಹಾಯಕ ಕೃಷಿ ನಿರ್ದೇಶಕ
ಕಳೆದ ವರ್ಷ ಬರಗಾಲದಿಂದ ರೈತ ಸಂಕಷ್ಟ ಎದುರಿಸಿದ್ದಾನೆ. ಅದೃಷ್ಟಕ್ಕೆ ಮಳೆ ಬರುತ್ತಿದೆ. ಕೃಷಿ ಇಲಾಖೆ ಸರಿಯಾದ ಸಮಯಕ್ಕೆ ರೈತನ ನೆರವಿಗೆ ಬರಬೇಕು
ವಿಶ್ವರಾಜ ಒಂಟೂರ ರೈತ ಚಂದಲಾಪುರ
ಕೃಷಿ ಇಲಾಖೆ ಮುಂಗಾರು ಅವಧಿಗೆ ಸನ್ನದ್ಧವಾಗಿದೆ. ರೈತರು ಅಧಿಕೃತ ಮಾರಾಟಗಾರರಿಂದ ಮಾತ್ರ ಬೀಜ ಖರೀದಿಸಿ ರಸೀದಿ ಪಡೆಯಬೇಕು
ಮಲ್ಲಿಕಾರ್ಜುನ ವಾರದ ಕೃಷಿ ಅಧಿಕಾರಿ
‘ನಕಲಿ ಹತ್ತಿ ಬೀಜ ಹಾವಳಿ ನಿಯಂತ್ರಿಸಿ’
ಶಹಾಪುರ: ಕೃಷ್ಣಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಪ್ರತಿ ವರ್ಷ ಒಂದಿಲ್ಲ ಒಂದು ನಕಲಿ ಹತ್ತಿ ಬೀಜ ಮಾರಾಟ ಪ್ರಕರಣ ಬೆಳಕಿಗೆ ಬರುತ್ತಲಿವೆ. ಬಿತ್ತನೆಯ ಸಮಯದ ವಾರದ ಸಂತೆಯಲ್ಲಿ ಹಾಗೂ ನೆರೆ ರಾಜ್ಯ ತೆಲಂಗಾಣದಿಂದ ಮತ್ತು ಗುಂಟೂರು ಆದೋನಿ ಮುಂತಾದ ಕಡೆಯಿಂದ ನಕಲಿ ಹತ್ತಿ ಬೀಜ ಬರುತ್ತವೆ. ಅದನ್ನು ನಿಯಂತ್ರಿಸಬೇಕು ಎನ್ನುತ್ತಾರೆ ರೈತರು. ‘ಬಹುತೇಕ ಹತ್ತಿಯ ವಿವಿಧ ತಳಿಯ ಬೀಜದ ಕಂಪನಿಗಳು ಶಹಾಪುರದಲ್ಲಿ ನೆಲೆಸಿವೆ. ರೈತರು ಸಿಂದಗಿ ಜೇವರ್ಗಿ ದೇವದುರ್ಗ ಸುರಪುರ ಮುಂತಾದ ಕಡೆಯಿಂದ ರೈತರು ಆಗಮಿಸಿ ಖರೀದಿಸುತ್ತಾರೆ. ಆಗ ಬೀಜಗಳ ಕೃತಕ ಅಭಾವ ಸೃಷ್ಟಿ ಮಾಡುವುದರ ಜತೆಗೆ ದುಬಾರಿ ಬೆಲೆಗೆ ಮಾರಾಟ ಮಾಡುತ್ತಾರೆ. ಅಂಥ ಸಮಯದಲ್ಲಿಯೇ ಕೆಲ ರಸಗೊಬ್ಬರ ಅಂಗಡಿಯವರು ನಕಲಿ ಹತ್ತಿ ಬೀಜ ಮಾರಾಟ ಮಾಡುತ್ತಾರೆ ರೈತರು ಜಾಗೃತರಾಗಬೇಕು. ಕಡ್ಡಾಯವಾಗಿ ಬೀಜ ಖರೀದಿಯ ರಸೀದಿ ಪಡೆಯಬೇಕು’ ಎಂದು ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಚೆನ್ನಪ್ಪ ಆನೆಗುಂದಿ ರೈತರಲ್ಲಿ ಮನವಿ ಮಾಡಿದ್ದಾರೆ. ‘ನೆರೆ ರಾಜ್ಯದಿಂದ ಕೆಲ ವ್ಯಕ್ತಿಗಳು ನಗರದ ಶುಕ್ರವಾರ ಸಂತೆಯ ದಿನ ಆಯಕಟ್ಟಿನ ಸ್ಥಳದಲ್ಲಿ ಉಳಿದುಕೊಂಡು ಕಡಿಮೆ ಬೆಲೆಗೆ ಹತ್ತಿ ಬೀಜ ನೀಡುತ್ತೇವೆ ಎಂದು ನಂಬಿಸಿ ನಕಲಿ ಬೀಜ ನೀಡುತ್ತಾರೆ. ಇದರ ಬಗ್ಗೆ ಕೃಷಿ ಇಲಾಖೆ ಹಾಗೂ ರೈತರು ಎಚ್ಚರಿಕೆ ವಹಿಸಬೇಕು. ಕಳೆದ ವರ್ಷ ನಕಲಿ ಬೀಜ ಮಾರಾಟ ಮಾಡಿದ ಬಗ್ಗೆ ಕಂಪನಿ ಒಂದರ ಮೇಲೆ ಶಹಾಪುರ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗುವಂತೆ ಮಾಡಿದ್ದೆವು’ ಎನ್ನುತ್ತಾರೆ ಅವರು.
‘ಕೃತಕ ರಸಗೊಬ್ಬರ ಅಭಾವ ಸೃಷ್ಟಿ’
ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ನಿಷೇಧಿತ ಬೆಳೆ ಭತ್ತ ಹಾಗೂ ಹತ್ತಿ ಬೆಳೆಯನ್ನು ಬಿತ್ತನೆ ಮಾಡಿದಾಗ ಎರಡು ಬೆಳೆಗೆ ಹೆಚ್ಚಿನ ರಸಗೊಬ್ಬರದ ಬೇಡಿಕೆ ಇರುತ್ತದೆ. ಆಗ ಕೆಲ ಕಂಪನಿಗಳು ಸಾಕಷ್ಟು ದಾಸ್ತಾನು ಇಟ್ಟುಕೊಂಡರೂ ಕೃತಕ ರಸಗೊಬ್ಬರ ಸೃಷ್ಟಿ ಮಾಡಿ ರೈತರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಾರೆ. ‘ಕೃಷಿ ಇಲಾಖೆ ಹಾಗೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಕೃತಕ ರಸಗೊಬ್ಬರ ಅಭಾವ ಉಂಟು ಮಾಡದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ರೈತ ಮುಖಂಡ ಸಿದ್ದಯ್ಯ ಹಿರೇಮಠ ಮನವಿ ಮಾಡಿದ್ದಾರೆ.
ಗುರುಮಠಕಲ್‌: 55 ಸಾವಿರ ಹೆಕ್ಟೇರ್‌ ಬಿತ್ತನೆ ಗುರಿ
ಗುರುಮಠಕಲ್‌: ತಾಲ್ಲೂಕು ವ್ಯಾಪ್ತಿಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಅವಧಿಯಲ್ಲಿ 55 ಸಾವಿರ ಹೆಕ್ಟೇರ್‌ ಬಿತ್ತನೆ ಗುರಿ ಹೊಂದಿದೆ ಎಂದು ಕೃಷಿ ಇಲಾಖೆ ತಿಳಿಸಿದೆ. 21 ಸಾವಿರ ಹೆಕ್ಟೇರ್‌ ಹತ್ತಿ 12 ಸಾವಿರ ಹೆಕ್ಟೇರ್‌ ತೊಗರಿ 3.5 ಸಾವಿರ ಹೆಕ್ಟೇರ್‌ ಹೆಸರು 300 ಹೆಕ್ಟೇರ್‌ ಉದ್ದು ಹೀಗೆ ವಿವಿಧ ಬಗೆಯ ಮುಂಗಾರು ಅವಧಿಯ ಬೆಳೆಗಳ ಒಟ್ಟು 55 ಸಾವಿರ ಹೆಕ್ಟೇರ್‌ ಬಿತ್ತನೆಯ ನಿರೀಕ್ಷೆಯಿದೆ. ‘ಈಗಾಗಲೇ 500 ಕ್ವಿಂಟಲ್‌ ಭತ್ತ 200 ಕ್ವಿಂಟಲ್‌ ತೊಗರಿ 70 ಕ್ವಿಂಟಲ್‌ ಹೆಸರು 10 ಕ್ವಿಂಟಲ್‌ ಉದ್ದು ಬಿತ್ತನೆ ಬೀಜಕ್ಕಾಗಿ ಪ್ರಸ್ತಾವನೆ ಸಲ್ಲಿಸಿದ್ದು ಸದ್ಯ 9 ಕ್ವಿಂಟಲ್‌ ತೊಗರಿ 6 ಕ್ವಿಂಟಲ್‌ ಹೆಸರು ಬೀಜದ ದಾಸ್ತಾನು ಲಭ್ಯವಿದೆ. ಇನ್ನೂ ರೈತರಿಂದ ಯಾವುದೇ ಬೇಡಿಕೆ ಬಂದಿಲ್ಲ. ಆದರೆ ಮುಂಗಾರು ಕೃಷಿ ಚಟುವಟಿಕೆಗಾಗಿ ನಾವು ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ಕೃಷಿ ಅಧಿಕಾರಿ ಮಲ್ಲಿಕಾರ್ಜುನ ವಾರದ ತಿಳಿಸಿದರು. ‘ಸಮಪರ್ಕ ಪೂರ್ವ ಮುಂಗಾರು ಮಳೆಯಾಗಿದ್ದರೆ ಜಮೀನಿನ ಮಣ್ಣು ಹದಗೊಳ್ಳುತ್ತಿತ್ತು. ಸದ್ಯ ಕುಂಟೆ ಹೊಡೆದು ಜಮೀನನ್ನು ಹಸನುಗೊಳಿಸಿದ್ದಾಗಿದೆ. ಸಮಯಕ್ಕೆ ಸರಿಯಾಗಿ ಮಳೆಯಾದರೆ ಬಿತ್ತನೆ ಮಾಡಲು ಸಿದ್ಧತೆ ಮಾಡಿಕೊಳ್ಳಬಹುದು’ ಎಂದು ರೈತರಾದ ಪ್ರಸಾದ ಮಹಾದೇವ ಹೇಳಿದರು. ‘ಈ ವರ್ಷವೂ ಸರಿಯಾಗಿ ಮಳೆಯಾಗುವ ಕುರಿತು ಸಂಶಯವಿದೆ. ರೈತರ ಬದುಕು ಸದಾ ಅದೃಷ್ಟದ ಬೆನ್ನತ್ತಿದವರಿಗೆ ದುರಾದೃಷ್ಟವೇ ಬೆನ್ನತ್ತಿದಂತಿದೆ ಮತ್ತು ದಿನೇ-ದಿನೆ ಬೀಜ ಗೊಬ್ಬರ ಸಾಮಾಗ್ರಿಗಳ ಬೆಲೆ ಹೆಚ್ಚುತ್ತಿದೆ. ಆದರೆ ನಿರೀಕ್ಷಿತ ಫಸಲು ಬೆಳೆಗೆ ಸರಿಯಾದ ಬೆಲೆ ಮಾತ್ರ ಸಿಗದು’ ಎಂದು ಹಿರಿಯ ರೈತರೊಬ್ಬರು ನೋವು ತೋಡಿಕೊಂಡರು.
ಕೃಷಿ ಇಲಾಖೆಯಿಂದ ಅಗತ್ಯ ಸಿದ್ಧತೆ
ಹುಣಸಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಹಳ್ಳಿಯಲ್ಲಿ ಮುಂಗಾರು ಹಂಗಾಮಿಗೆ ಬೇಕಾಗಿರುವ ಬೀಜ ಗೊಬ್ಬರದ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಹುಣಸಗಿ ರೈತ ಸಂಪರ್ಕ ಕೇಂದ್ರದ ಅಧಿಕಾರಿ ಸಿದ್ದಾರ್ಥ್ ಪಾಟೀಲ ತಿಳಿಸಿದರು. ಈಗಾಗಲೇ ರಸಗೊಬ್ಬರ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಹಾಗೂ ಸರಬರಾಜು ಮಾಡಲಾಗಿರುವ ಬೀಜ ಹಾಗೂ ಗೊಬ್ಬರ ಕುರಿತಂತೆ ಸ್ಯಾಂಪಲ್ ಪಡೆದುಕೊಳ್ಳಲಾಗಿದೆ ಎಂದು ಹೇಳಿದರು. ತಾಲ್ಲೂಕಿನಲ್ಲಿ ಕಳಪೆ ಬೀಜ ವಿತರಣೆಯಾಗದಂತೆ ಮುಂಜಾಗ್ರತೆ ವಹಿಸಲಾಗಿದ್ದು ರೈತರು ಕೂಡ ಖರೀದಿಸಿದ ಬೀಜ ಹಾಗೂ ರಸಗೊಬ್ಬರಕ್ಕೆ ರಸೀದಿ ಪಡೆಯುವಂತೆ ಹೇಳಿದರು. ಹುಣಸಗಿ ತಾಲ್ಲೂಕಿನಲ್ಲಿ ಬಹುತೇಕ ಭತ್ತ ನಾಟಿ ಮಾಡಲಿದ್ದು ಉಳಿದಂತೆ ಸುಮಾರು 2000 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಹೆಸರು ಸಜ್ಜಿ ಸೂರ್ಯಕಾಂತಿ ಬಿತ್ತನೆ ಮಾಡಲಿದ್ದಾರೆ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT