ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಲಂಡನ್‌ನಲ್ಲಿ ಸಿಲುಕಿದ ಬಿಡದಿ ಯುವಕ

ಓದಿಗೆಂದು ವಿದೇಶಕ್ಕೆ ಹೋಗಿದ್ದ ನಂದಕಿಶೋರ್; ಹೆತ್ತವರ ಆತಂಕ
Last Updated 6 ಮೇ 2020, 4:07 IST
ಅಕ್ಷರ ಗಾತ್ರ

ರಾಮನಗರ: ಉನ್ನತ ಶಿಕ್ಷಣದ ಕನಸು ಹೊತ್ತು ಲಂಡನ್‌ಗೆ ತೆರಳಿದ್ದ ಬಿಡದಿ ನಂದಕಿಶೋರ್ ಲಾಕ್‌ಡೌನ್‌ ಕಾರಣಕ್ಕೆ ಅಲ್ಲಿಯೇ ಸಿಲುಕಿದ್ದು, ಹೆತ್ತವರು ಆತಂಕದಲ್ಲಿ ದಿನದೂಡುವಂತೆ ಆಗಿದೆ.

ಇಂಗ್ಲೆಂಡ್ ರಾಜಧಾನಿ ಲಂಡನ್‌ನಲ್ಲಿ ಎಂ.ಎಸ್‌ ಮಾಡುವ ಸಲುವಾಗಿ ಕಿಶೋರ್ ಎರಡು ವರ್ಷದ ಹಿಂದೆ ಅಲ್ಲಿಗೆ ತೆರಳಿದ್ದರು. ಇನ್ನೂ ಮೂರ್ನಾಲ್ಕು ತಿಂಗಳಲ್ಲಿ ಅವರ ಓದು ಮುಗಿಯುವುದಿತ್ತು. ಆದರೆ, ಲಾಕ್‌ಡೌನ್‌ ಕಾರಣಕ್ಕೆ ಸದ್ಯ ಓದಿಗೆ ಅಡ್ಡಿಯಾಗಿದೆ.ಲಂಡನ್‌ನಲ್ಲಿಯೇ ಕಿಶೋರ್ ದಿನ ದೂಡುತ್ತಿದ್ದು, ಖರ್ಚು ಹೆಚ್ಚಾಗತೊಡಗಿದೆ.

ಮಧ್ಯಮ ವರ್ಗದ ಕುಟುಂಬ: ಬಿಡದಿ ನೆಲ್ಲಿಗುಡ್ಡ ರಸ್ತೆ ಪ್ರದೇಶದ ನಿವಾಸಿ ಹರೀಶ್ ಅವರ ಒಬ್ಬನೇ ಮಗನಾದ ನಂದಕಿಶೋರ್ 2017ರಲ್ಲಿ ಕುಂಬಳಗೋಡಿನಲ್ಲಿರುವ ಡಾನ್ ಬಾಸ್ಕೋ ಕಾಲೇಜಿನಲ್ಲಿ ಕಂಪ್ಯೂಟರ್‌ ವಿಜ್ಞಾನ ವಿಷಯದಲ್ಲಿ ಎಂಜಿನಿಯರಿಂಗ್‌ ಪದವಿ ಪೂರೈಸಿದ್ದರು. ಬಳಿಕ ವಿದೇಶದಲ್ಲಿ ಉನ್ನತ ಶಿಕ್ಷಣ ಕೈಗೊಳ್ಳುವ ಸಲುವಾ‌ಗಿ ವಿವಿಧ ದೇಶಗಳ ಶಿಕ್ಷಣ ಸಂಸ್ಥೆಗಳಿಗೆ ಅರ್ಜಿ ಸಲ್ಲಿಸಿದ್ದರು. ಇಟಲಿಯ ಕಾಲೇಜೊಂದರಲ್ಲಿ ಅವರಿಗೆ ಅವಕಾಶ ಸಿಕ್ಕಿತ್ತಾದರೂ ಅಲ್ಲಿ ಅವರು ಓದಬಯಸಿದ್ದ ಕಂಪ್ಯೂಟರ್ ನೆಟ್‌ವರ್ಕ್‌ ಮತ್ತು ಅಪ್ಲಿಕೇ‌ಶನ್‌ ವಿಷಯ ಸಿಗಲಿಲ್ಲ. ಹೀಗಾಗಿ ಆರು ತಿಂಗಳ ಕಾಲ ಕಾದ ನಂತರ ಲಂಡನ್‌ನ Hert Ford Shire Universityನಲ್ಲಿ ಸೀಟು ಸಿಕ್ಕಿ ಅಲ್ಲಿ ವಿದ್ಯಾಭ್ಯಾಸಕ್ಕೆ ತೆರಳಿದ್ದರು.

ಕಿಶೋರ್ ತಂದೆ ಹರೀಶ್‌ ಕಟ್ಟಡ ನಿರ್ಮಾಣ ಕಂಪನಿಯೊಂದರ ಉದ್ಯೋಗಿ. ಅವರದ್ದು ಮಧ್ಯಮ ವರ್ಗದ ಕುಟುಂಬ. ಕಿಶೋರ್ ಲಂಡನ್‌ಗೆ ತೆರಳಿದ್ದ ಮೇಲೆ ಅಲ್ಲಿಯೇ ಅರೆಕಾಲಿಕ ಅವಧಿಯ ಉದ್ಯೋಗವನ್ನು ಹುಡುಕಿಕೊಂಡಿದ್ದರು. ವಾರಕ್ಕೆ ಇಪ್ಪತ್ತು ಗಂಟೆಯಷ್ಟು ಕೆಲಸ ಮಾಡಲು ಅನುಮತಿಯೂ ದೊರೆತಿತ್ತು. ಹೀಗಾಗಿ ತಾವೇ ದುಡಿಯುತ್ತಾ ಓದು ಮುಂದುವರಿಸಿದ್ದರು. ಮನೆಯವರೂ ಕೈಲಾದಷ್ಟು ಸಹಾಯ ಮಾಡುತ್ತಿದ್ದರು.

ಕಳೆದ ಫೆಬ್ರುವರಿ ಅಂತ್ಯಕ್ಕೆ ಲಂಡನ್‌ನಲ್ಲಿ ಲಾಕ್‌ಡೌನ್ ಪರಿಣಾಮ ಶುರುವಾಯಿತು. ಮಾರ್ಚ್‌ ಮೊದಲ ವಾರದಿಂದಲೂ ಅವರು ಮನೆಯಲ್ಲೇ ಇದ್ದಾರೆ. ಲಂಡನ್‌ನಲ್ಲಿನ ಮನೆ ಬಾಡಿಗೆಯೇ ₹80 ಸಾವಿರದಷ್ಟಿದೆ. ಉಳಿದೆಲ್ಲ ಖರ್ಚು ಸೇರಿಸಿದರೆ ಒಟ್ಟಾರೆ ತಿಂಗಳಿಗೆ ₹1.25 ಲಕ್ಷದಷ್ಟು ಹಣ ಬೇಕಾಗಿರುವುದಾಗಿ ಅವರ ಕುಟುಂಬದವರು ಹೇಳುತ್ತಾರೆ. ಆದರೆ, ಸದ್ಯ ಕಿಶೋರ್‌ಗೆ ಉದ್ಯೋಗ ಇಲ್ಲದ ಕಾರಣ ಹಣ ಹೊಂದಿಸುವುದು ಕಷ್ಟವಾಗಿದೆ.

’ಲಂಡನ್‌ನಲ್ಲಿ ಲಾಕ್‌ಡೌನ್‌ ಆದ ಮೇಲೆ ಅಲ್ಲಿ ದೈನಂದಿನ ವೆಚ್ಚಗಳೂ ಹೆಚ್ಚುತ್ತಿವೆ. ಅಲ್ಲಿನ ಸರ್ಕಾರ ಬ್ರಿಟಿಷ್ ಪ್ರಜೆಗಳ ಉಪಚಾರಕ್ಕೆ ಮೊದಲ ಆದ್ಯತೆ ನೀಡುತ್ತಿದೆ. ಭಾರತೀಯರಿಗೆ ಹೆಚ್ಚಿನ ಸೌಲಭ್ಯಗಳು ಸಿಗುತ್ತಿಲ್ಲ. ಯಾರೂ ಸಹಾಯಕ್ಕೆ ಧಾವಿಸುವುದಿಲ್ಲ ಎಂದು ಪುತ್ರ ಹೇಳಿದ್ದಾನೆ. ಭಾರತೀಯ ಆಹಾರ, ದಿನಸಿ ಸಹಿತ ಅಗತ್ಯ ಪದಾರ್ಥಗಳು ಸಿಗುತ್ತಿಲ್ಲ. ಆನ್‌ಲೈನ್‌ ಮೂಲಕವೇ ಎಲ್ಲವನ್ನೂ ತರಿಸಿಕೊಳ್ಳುತ್ತಿದ್ದಾನೆ. ಜೂನ್‌ವರೆಗೂ ಈ ಪರಿಸ್ಥಿತಿ ಮುಂದುವರಿಯಬಹುದು ಎಂದಿದ್ದಾನೆ’ ಎಂದು ಪುತ್ರನ ಪರಿಸ್ಥಿತಿ ಕುರಿತು ಹರೀಶ್ ಮಾಹಿತಿ ನೀಡಿದರು.

ವಿದೇಶಗಳಲ್ಲಿ ಓದುತ್ತಿರುವ ಭಾರತೀಯರ ನೆರವಿಗೆ ಸರ್ಕಾರ ಧಾವಿಸಬೇಕು. ಅಗತ್ಯ ಸೌಕರ್ಯ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT