ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈದಾಪುರ | ಸಮಯಪ್ರಜ್ಞೆಯಿಂದ ಲಾಭ ಗಳಿಸಿದ ಖರಬೂಜ ಬೆಳೆಗಾರ

ಕೊರೊನಾ ಲಾಕ್‍ಡೌನ್ ವಿನಾಯ್ತಿಯ ಅನುಕೂಲ ಪಡೆದ ರೈತ
Last Updated 24 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಸೈದಾಪುರ: ಕೊರೊನಾ ಸಂಕಷ್ಟದಿಂದಾಗಿ ಕಂಗೆಟ್ಟಿರುವ ರೈತರ ನಡುವೆ ಖರಬೂಜ ಹಣ್ಣುಗಳನ್ನು ಬೆಳೆದ ರೈತರೊಬ್ಬರು ಲಾಕ್‌ಡೌನ್‌ ವಿನಾಯ್ತಿಯ ಅನುಕೂಲ ಪಡೆದು ಹಣ್ಣು ಮಾರಾಟ ಮಾಡಿ ಉತ್ತಮ ಆದಾಯ ಗಳಿಸಿದ್ದಾರೆ.

ಸಮೀಪದ ಲಿಂಗೇರಿ ಗ್ರಾಮದ ಸಾಂಬಶಿವ ರೆಡ್ಡಿ ವೆಂಕಟಕೃಷ್ಣಯ್ಯ ಅವರು ತಮ್ಮ 3 ಎಕರೆ ಒಣ ಭೂಮಿಯಲ್ಲಿ ಒಂದು ಕೊಳವೆ ಬಾವಿ ಕೊರೆಸಿಕೊಂಡು, ತೋಟಗಾರಿಕೆ ಇಲಾಖೆಯಿಂದ ಹನಿ ನಿರಾವರಿ, ಬೆಡ್, ಪ್ಲಾಸ್ಟಿಕ್ ಹೊದಿಕೆಯ ಸಹಾಯ ಪಡೆದು ಒಂದೂವರೆ ಕೆ.ಜಿ ಖರಬೂಜ ಬೀಜಗಳನ್ನು ತಂದು ಬಿತ್ತಿದ್ದರು.

ಒಟ್ಟು 3 ಎಕರೆ ಜಮೀನಿನಲ್ಲಿ ಖರಬೂಜ ಬೆಳೆಯಲು ಸುಮಾರು ₹2 ರಿಂದ 3 ಲಕ್ಷ ಖರ್ಚು ಮಾಡಿದ್ದಾರೆ. ಇದರಲ್ಲಿ ಈಗಾಗಲೇ 7 ಟನ್ ಕರಬೂಜ ಹಣ್ಣುಗಳನ್ನು ಕೆ.ಜಿ.ಗೆ ₹20ರಂತೆ ಮಾರಾಟ ಮಾಡಿದ್ದಾರೆ. ಇನ್ನು 20 ಟನ್‍ಗಿಂತ ಅಧಿಕ ಹಣ್ಣುಗಳು ಕಟಾವು ಆಗದೆ ಹೊಲದಲ್ಲಿ ಇವೆ. ಲಾಕ್‍ಡೌನ್ ಮಧ್ಯೆಯೂ ಸರ್ಕಾರ ಹಣ್ಣು– ತರಕಾರಿಗಳ ಮಾರಾಟಕ್ಕೆ ರಿಯಾಯಿತಿ ನೀಡಿರುವುದರಿಂದ ಹಣ್ಣುಗಳನ್ನು ಪ್ರತಿ ನಿತ್ಯ ಕಟಾವು ಮಾಡಿ ಸಮೀಪದ ಯಾದಗಿರಿ, ಶಹಾಪುರ, ರಾಯಚೂರು, ನಾರಾಯಣಪೇಠ ಮಾರುಕಟ್ಟೆಗಳಿಗೆ ಬಾಡಿಗೆ ವಾಹನದ ಮೂಲಕ ತಲುಪಿಸುತ್ತಾರೆ.

‘ಲಾಕ್‍ಡೌನ್‍ನಿಂದ ಕಟಾವು ಮಾಡಲು ಕಾರ್ಮಿಕರು ಸಿಗುತ್ತಿಲ್ಲ. ವಾಹನ ಸಂಚಾರ ಇಲ್ಲ, ಮಾರಾಟಕ್ಕೆ ಯಾವುದೇ ಸಮರ್ಪಕ ವ್ಯವಸ್ಥೆ ಇಲ್ಲ ಎಂದು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳವ ಬದಲು, ಸಮಸ್ಯೆಗಳನ್ನು ಪರಿಹರಿಸಲು ಇರುವ ಮಾರ್ಗವನ್ನು ಕಂಡುಕೊಳ್ಳುವ ಛಲ ನಮ್ಮಲ್ಲಿ ಇರಬೇಕು’ ಎಂದು ಸಾಂಬಶಿವ ರೆಡ್ಡಿ ವೆಂಕಟಕೃಷ್ಣಯ್ಯ ಹೇಳುತ್ತಾರೆ.

***

ಬೇಸಿಗೆಯಲ್ಲಿ ಈ ಹಣ್ಣಿಗೆ ಬಾರಿ ಬೇಡಿಕೆ ಇರುತ್ತದೆ. ಆದ್ದರಿಂದ ನಾವು ಖರಬೂಜ ಬೆಳೆಯಲು ಆಯ್ಕೆ ಮಾಡಿಕೊಂಡೆವು. ಇಂದು ಉತ್ತಮ ಲಾಭ ಪಡೆಯುತ್ತಿದ್ದೇವೆ.
-ಸಾಂಬಶಿವರೆಡ್ಡಿ, ಖರಬೂಜ ಬೆಳೆಗಾರ

***

ರೈತರು ತಾಳ್ಮೆ ಕಳೆದುಕೊಳ್ಳಬಾರದು. ಇಂಥ ಸ್ಫೂರ್ತಿದಾಯಕ ರೈತರಿಗೆ ಸಹಾಯ ಮಾಡಲು ನಮ್ಮ ಇಲಾಖೆಯು ಸದಾ ಸಿದ್ಧ ಇರುತ್ತದೆ.
-ಬೀರಲಿಂಗ ಪೂಜಾರಿ, ಸಹಾಯಕ ತೋಟಗಾರಿಕೆ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT