ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | 'ರಕ್ತಹೀನತೆಗೆ ಕಾರಣವಾಗುವ ಜಂತುಹುಳು'

ಜಿಲ್ಲೆಯಾದ್ಯಂತ ಮೇ 13 ರಿಂದ 27ರ ವರೆಗೆ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮ
Published 13 ಮೇ 2024, 15:38 IST
Last Updated 13 ಮೇ 2024, 15:38 IST
ಅಕ್ಷರ ಗಾತ್ರ

ಯಾದಗಿರಿ: ಜಂತುಹುಳು ರಕ್ತಹೀನತೆಗೆ ಕಾರಣವಾಗುತ್ತದೆ. ಜೊತೆಗೆ ಅಪೌಷ್ಟಿಕತೆ ಹಾಗೂ ವ್ಯಕ್ತಿಯ ಬೌದ್ಧಿಕ ದೇಹದ ಬೆಳವಣೆಗೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಈ ಸಮಸ್ಯೆಯಿಂದ ಮಕ್ಕಳು ಆಗಾಗ ಕಾಯಿಲೆ ಬೀಳುವ ಹಾಗೂ ಶಾಲೆಯಲ್ಲಿ ಪಠ್ಯದ ಮೇಲೆ ಗಮನಿಸಲು ಅಸಮರ್ಥರಾಗಿರುತ್ತಾರೆ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ಮಲ್ಲಪ್ಪ ಹೇಳಿದರು.

ಮೇ 13 ರಿಂದ 27ರ ವರೆಗೆ ಜಿಲ್ಲೆಯಾದ್ಯಂತ ನಡೆಯುವ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮವನ್ನು ನಗರದ ಹೊಸಳ್ಳಿ ಕ್ರಾಸ್‌ ಬಳಿಯ ವಿದ್ಯಾರಣ್ಯ ಅಂತರರಾಷ್ಟ್ರೀಯ ಶಾಲೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನ ಸಹಯೋಗದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಕಾರ್ಯಕ್ರಮ ರೂಪಿಸಿದೆ. ಶಾಲಾ ಕಾಲೇಜು ಇಲ್ಲಿಯವರೆಗೂ ತೆರೆಯದೇ ಇರುವುದರಿಂದ 1 ರಿಂದ 2 ವರ್ಷ ಮಕ್ಕಳಿಗೆ ಮತ್ತು 2 ರಿಂದ 19 ವರ್ಷದವರೆಗಿನ ಮಕ್ಕಳಿಗೆ ‘ಅಲ್ಬೆಂಡಜೋಲ್’ (ಕ್ರಮವಾಗಿ 200 ಮತ್ತು 400 ಎಂಜಿ) ಮಾತ್ರೆಯನ್ನು ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಮನೆ-ಮನೆಗೆ ಭೇಟಿ ನೀಡಿ ಎಲ್ಲಾ ಮಕ್ಕಳನ್ನು ಪತ್ತೆ ಹಚ್ಚಿ ಮಾತ್ರೆಗಳನ್ನು ಚೀಪಿಸುವ ವ್ಯವಸ್ಥೆಯನ್ನು ಆರೋಗ್ಯ ಇಲಾಖೆಯ ವತಿಯಿಂದ ಮಾಡಲಾಗಿದೆ ಎಂದು ಹೇಳಿದರು.

ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಕೊಳಕು ಸ್ಥಿತಿ ಹಾಗೂ ಮಣ್ಣಿನ ಸಂಪರ್ಕದಿಂದ ಜಂತುಹುಳು ಬಾಧೆ ತಗುಲುತ್ತದೆ. ಸಾಮಾನ್ಯವಾಗಿ ಮಕ್ಕಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಬಾಧೆಯಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ 1 ರಿಂದ 19 ವರ್ಷದ ಮಕ್ಕಳು 5,93,386 ಗುರಿ ಇದೆ. ಈ ತಿಂಗಳಲ್ಲಿ ಹುಟ್ಟಿನಿಂದ 5 ವರ್ಷದೊಳಗಿನ ಮಕ್ಕಳ ಗುರಿ 1,98,449 ಇದೆ. ಇವರೆಲ್ಲರಿಗೂ ‘ಅಲ್ಬೆಂಡಜೋಲ್’ ಮಾತ್ರೆ ನೀಡುವುದರಿಂದ ಮಕ್ಕಳ ರಕ್ತಹೀನತೆ ಪ್ರಮಾಣ ತಗ್ಗಿಸುತ್ತದೆ. ಜಿಲ್ಲೆಯ ಸಾರ್ವಜನಿಕರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ಉಚಿತ ಆರೋಗ್ಯ ಸಹಾಯವಾಣಿ 104ಕ್ಕೆ ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.

ಇದೇ ವೇಳೆ ಶಾಲಾ ಮಕ್ಕಳಿಗೆ ‘ಅಲ್ಬೆಂಡಜೋಲ್’ ಮಾತ್ರೆಗಳ ಕುರಿತು ಅರಿವು ಮೂಡಿಸಿ ಚೀಪಿಸುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಪ್ರಾಂಶುಪಾಲೆ ರಜನಿರಾವ್, ನಗರ ಆರೋಗ್ಯ ವೈದ್ಯಾಧಿಕಾರಿ ಡಾ.ವಿನುತಾ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ತುಳಸಿರಾಮ, ಶಾಂತಿಲಾಲ್ ಎಚ್.ಎಸ್, ರಾಣೋಜಿ ಆರ್.ಕೆ.ಎಸ್.ಕೆ, ಜಿಲ್ಲಾ ಸಂಯೋಜಕ ಅಬ್ದುಲ್ ಅಜೀಜ್ ಆರ್‌ಕೆಎಸ್‌ಕೆ, ಅಧಿಕಾರಿ, ಸಿಬ್ಬಂದಿ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT