ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ’

₹11 ಕೋಟಿ ವೆಚ್ಚದಲ್ಲಿ 200 ಮನೆಗಳ ನಿರ್ಮಾಣ
Last Updated 5 ಸೆಪ್ಟೆಂಬರ್ 2020, 16:05 IST
ಅಕ್ಷರ ಗಾತ್ರ

ಶಹಾಪುರ: ‘ನಗರದ ಹೊರವಲಯದಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯ ಆಶ್ರಯದಲ್ಲಿ ₹11 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ 200 ಮನೆಗಳ ಕಟ್ಟಡ ಕಾಮಗಾರಿ ಮುಕ್ತಾಯಕ್ಕೆ ಬಂದಿದೆ. ಈಗಾಗಲೇ 150 ಮನೆ ಸಿದ್ಧಗೊಂಡಿವೆ. ಉಳಿದ ಕಾಮಗಾರಿ ತ್ವರಿತ ಪೂರ್ಣಗೊಳಿಸಬೇಕು’ ಎಂದು ಗುತ್ತಿಗೆದಾರನಿಗೆ ಶಾಸಕ ಶರಣಬಸಪ್ಪ ಗೌಡ ದರ್ಶನಾಪುರ ಸೂಚಿಸಿದರು.

ಇಲ್ಲಿನ ಹೊರವಲಯದಲ್ಲಿ ನಿರ್ಮಿಸುತ್ತಿರುವ ಮನೆಗಳ ಕಟ್ಟಡ ಕಾಮಗಾರಿ ಪರಿಶೀಲಿಸಿ, ಮಾತನಾಡಿದರು.

‘ಜಿ ಪ್ಲಸ್ 2 ಅಡಿಯಲ್ಲಿ ಮನೆ ಸಿದ್ದಗೊಂಡಿವೆ. ಪ್ರತಿ ಮನೆ ನಿರ್ಮಾಣಕ್ಕೆ ₹4.90 ಲಕ್ಷ ವೆಚ್ಚ ತಗುಲಿದೆ. 3.20 ಗುಂಟೆ ಜಮೀನು ವಶಪಡಿಸಿಕೊಂಡು ಉತ್ತಮ ಮನೆ ನಿರ್ಮಾಣಕ್ಕೆ ಅವಕಾಶ ನೀಡಲಾಗಿದೆ. ನಿರೀಕ್ಷೆಯಂತೆ ಕೆಲಸ ಮುಕ್ತಾಯವಾದರೆ ಜನವರಿಯಲ್ಲಿ ಮನೆ ಹಂಚಿಕೆ ಮಾಡಲಾಗುವುದು. ಈಗಾಗಲೇ ಫಲಾನುಭವಿಗಳ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಿ ಅನುಮೋದನೆಗೆ ಸಲ್ಲಿಸಲಾಗಿದೆ’ ಎಂದರು.

‘ಇನ್ನೂ 138 ಮನೆ ನಿರ್ಮಾಣಕ್ಕೆ ಅನುಮೋದನೆ ನೀಡುವಂತೆ ಕೊಳಚೆ ನಿರ್ಮೂಲನಾ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೆ ಇನ್ನೂ ಒಂದು ಸಾವಿರ ಮನೆ ನಿರ್ಮಾಣಕ್ಕೆ ಅವಕಾಶ ನೀಡುವಂತೆ ವಸತಿ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿರುವೆ. ಸಕರಾತ್ಮವಾಗಿ ಸ್ಪಂದಿಸಿದ್ದಾರೆ. ಅನುಮೋದನೆ ದೊರೆತರೆ ಬಡ ಜನತೆಗೆ ಸೂರಿನ ಭಾಗ್ಯ ಲಭಿಸಲಿದೆ’ ಎಂದರು.

ಎಂಜಿನಿಯರ್ ಹೊನ್ನೇಶ ಯಾಳಗಿ, ಅಮರನಾಥ, ಸಯ್ಯದ ಮನನ್ ಹಾಜರಿದ್ದರು.

***

‘ನಯಾ ಪೈಸೆ ಬಿಡುಗಡೆ ಆಗಿಲ್ಲ’

‘ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಪೂರೈಸಿದರೂ ಅಭಿವೃದ್ಧಿ ಕಾಮಗಾರಿಗಳಿಗೆ ನಯಾ ಪೈಸೆ ಅನುದಾನ ನೀಡಿಲ್ಲ. ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ, ಸಣ್ಣ ನೀರಾವರಿ, ನೀರಾವರಿ ಹೀಗೆ ಹಲವಾರು ಪ್ರಮುಖ ಇಲಾಖೆಗಳಿಗೆ ಅನುದಾನ ಬಂದಿಲ್ಲ. ಆದರೆ, ಬಿಜೆಪಿ ಶಾಸಕರು ಇರುವ ಸುರಪುರ ಮತ್ತು ದೇವದುರ್ಗ ಕ್ಷೇತ್ರಗಳಿಗೆ ₹100 ಕೋಟಿ ಅನುದಾನ ನೀಡಿದ್ದಾರೆ. ತಾರತಮ್ಯ ನೀತಿ ಕೈಬಿಡಿ. ರಾಜ್ಯದ ಎಲ್ಲಾ ತಾಲ್ಲೂಕು ಕ್ಷೇತ್ರಗಳು ಅಭಿವೃದ್ಧಿ ಹೊಂದಿದರೆ ಮಾತ್ರ ರಾಜ್ಯ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯ’ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಟೀಕಿಸಿದರು.

***

ಕ್ಷೇತ್ರದ ಪೀರಾಪುರ-ಬೂದಿಹಾಳ ಏತ ನೀರಾವರಿಯ ₹600 ಕೋಟಿ ವೆಚ್ಚ ಯೋಜನೆ ಹಣಕಾಸು ಇಲಾಖೆಗೆ ಅನುಮೋದನೆ ಸಲ್ಲಿಸಲಾಗಿದೆ. ರೈತರ ಹಿತದೃಷ್ಟಿಯಿಂದ ಮಂಜೂರಾತಿ ನೀಡಬೇಕು

- ಶರಣಬಸಪ್ಪಗೌಡ ದರ್ಶನಾಪುರ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT