ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ: ಬರದ ಮಧ್ಯೆಯೂ ಹಿಂಗಾರು ಬೆಳೆ ಕಟಾವು

ಹಿಂಗಾರಿನಲ್ಲಿ ಜೋಳ ಸಿಂಹಪಾಲು ಬಿತ್ತನೆ, 1,985 ಹೆಕ್ಟೇರ್‌ನಲ್ಲಿ ಕಡಲೆ
Published 3 ಫೆಬ್ರುವರಿ 2024, 7:40 IST
Last Updated 3 ಫೆಬ್ರುವರಿ 2024, 7:40 IST
ಅಕ್ಷರ ಗಾತ್ರ

ಯಾದಗಿರಿ: ತೀವ್ರ ಬರದ ಮಧ್ಯೆಯೂ ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನ ಬೆಳೆಗಳ ಕೊಯ್ಲು ಕಾರ್ಯ ನಡೆದಿದೆ. ಜಿಲ್ಲೆಯಲ್ಲಿ ಹಿಂಗಾರು ಹಂಗಾಮಿನ ಶೇಂಗಾ, ಜೋಳ ಮತ್ತು ಕಡಲೆ ಬೆಳೆಯು ಕಟಾವು ಹಂತದಲ್ಲಿವೆ. ಇದರಿಂದ ರೈತರಿಗೆ ಸ್ಪಲ್ಪ ಮಟ್ಟಿಗೆ ಆಸರೆಯಾಗಿದೆ.

ಜಿಲ್ಲೆಯ 16 ಹೋಬಳಿಗಳಲ್ಲಿ ಹಿಂಗಾರು ಹಂಗಾಮಿನ ಬೆಳೆಗಳನ್ನು ಕೆಲವೇ ಹೋಬಳಿಗಳಲ್ಲಿ ಬಿತ್ತನೆ ಮಾಡಲಾಗಿದೆ. ಅದರಲ್ಲೂ ನೀರಾವರಿ ಸೌಲಭ್ಯ ಇದ್ದವರು, ಹೆಚ್ಚಿನ ಬೆಳೆಗಳನ್ನು ಬಿತ್ತನೆ ಮಾಡಿದ್ದರು. ಮಳೆಯಾಶ್ರಿತ ಪ್ರದೇಶದಲ್ಲಿ ಜೋಳ, ಕಡಲೆ ಬಿತ್ತನೆ ಮಾಡಲಾಗಿತ್ತು.

ಪೂರ್ವ ಮುಂಗಾರು(ಮಾರ್ಚ್ 1ರಿಂದ ಮೇ 31ರವರೆಗೆ) ವಾಡಿಕೆಗಿಂತ ಹೆಚ್ಚಿನ ಮಳೆಯಾಗಿತ್ತು. ಆದರೆ, ಮುಂಗಾರು (ಜೂನ್‌ 1ರಿಂದ ಸೆಪ್ಟೆಂಬರ್‌ 30ರವೆಗೆ), ಹಿಂಗಾರು ಮಳೆ ವಿಫಲವಾಗಿ ಶೇಕಡವಾರು ಮಳೆ ಕೊರತೆಯಾಗಿದೆ.

ಹಿಂಗಾರು ಬಿತ್ತನೆ ಕ್ಷೇತ್ರ: 2023-24ನೇ ಸಾಲಿನ ಹಿಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ 43,117.39 ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು, 38,935.40 ಹೆಕ್ಟೇರ್‌ ಶೇ 90.30 ರಷ್ಟು ಬಿತ್ತನೆಯಾಗಿತ್ತು. ಮುಖ್ಯವಾಗಿ ಶೇಂಗಾ 21,524 ಹೆಕ್ಟೇರ್‌, ಕಡಲೆ 1,985 ಹೆಕ್ಟೇರ್‌, ಜೋಳ 14,592 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ.

ರಸಗೊಬ್ಬರ ದಾಸ್ತಾನು: ಹಿಂಗಾರು ಹಂಗಾಮಿನ 2023ರ ಅಕ್ಟೋಬರ್ ತಿಂಗಳಿಂದ 2024ರ ಮಾರ್ಚ್‌ವರೆಗೆ ಬೆಳೆಗಳ ಕ್ಷೇತ್ರಕ್ಕನುಗುಣವಾಗಿ ವೈಜ್ಞಾನಿಕವಾಗಿ ಶಿಫಾರಸು ಮಾಡಿದ ಪೋಶಕಾಂಶಗಳ ಆಧಾರದ ಮೇಲೆ ಜಿಲ್ಲೆಗೆ 98,107 ಮೇಟ್ರಿಕ್‌ ಟನ್ ವಿವಿಧ ರಸಗೊಬ್ಬರಗಳ ಬೇಡಿಕೆ ಇದೆ. ಇಲ್ಲಿಯವರೆಗೆ 68,156.09 ಮೇ.ಟನ್ ಪೂರೈಕೆಯಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ 41,756.14 ಮೇ.ಟನ್ ವಿವಿಧ ರಸಗೊಬ್ಬರಗಳ ದಾಸ್ತಾನು ಇದೆ ಎನ್ನುತ್ತವೆ ಕೃಷಿ ಇಲಾಖೆ ಮೂಲಗಳು.

ಯಾದಗಿರಿ–ವರ್ಕನಳ್ಳಿ ರಸ್ತೆಯ ಬದಿಯ ಜಮೀನೊಂದರಲ್ಲಿ ಕಟಾವಿಗೆ ಬಂದಿರುವ ಜೋಳ
ಪ್ರಜಾವಾಣಿ ಚಿತ್ರಗಳು/ರಾಜಕುಮಾರ ನಳ್ಳಿಕರ್ 
ಯಾದಗಿರಿ–ವರ್ಕನಳ್ಳಿ ರಸ್ತೆಯ ಬದಿಯ ಜಮೀನೊಂದರಲ್ಲಿ ಕಟಾವಿಗೆ ಬಂದಿರುವ ಜೋಳ ಪ್ರಜಾವಾಣಿ ಚಿತ್ರಗಳು/ರಾಜಕುಮಾರ ನಳ್ಳಿಕರ್ 
ಮಳೆಯ ಕೊರತೆ ಬರದ ನಡುವೆ ಮಾಗಿಯ ಚಳಿ ಇಬ್ಬನಿಗೆ ಜೋಳದ ಬೆಳೆ ಉತ್ತಮವಾಗಿ ಬೆಳೆದು ತೆನೆ ಕಟ್ಟಿದೆ. ಉತ್ತಮ ಇಳುವರಿ ಬೆಲೆ ರೈತರ ಕೈ ಹಿಡಿಯಬಹುದು ಎಂಬ ನಿರೀಕ್ಷೆ ಹೊಂದಲಾಗಿದೆ.
ಭೀಮಯ್ಯ ಈಳಿಗೇರ್ ರೈತ
ಅಲ್ಪ ಸ್ವಲ್ಪ ಬೆರಳಣಿಕೆ ರೈತರು ಮಾತ್ರ ಹಿಂಗಾರು ಹಂಗಾಮಿ ಜೋಳ ಬೆಳೆ ಬಿತ್ತನೆ ಮಾಡಿದ್ದಾರೆ. ಒಣ ಖುಷ್ಕಿ ಭೂಮಿಯಲ್ಲಿ ಈ ಭಾಗದಲ್ಲಿ ಜೋಳ (ಬಡವರ ಧ್ಯಾನ) ಎಂಬ ಪ್ರಖ್ಯಾತಿ ಪಡೆದಿದೆ. ಜೋಳದ ರಾಶಿ ಮಾಡಿದ ಬಳಿಕ ಜಾನುವಾರುಗಳಿಗೆ ವರ್ಷವಿಡೀ ಕಣಿಕೆ (ಜೋಳದ ಮೇವು) ಆಹಾರ ಉಪಯೋಗಿಸುತ್ತಾರೆ
ಮಲ್ಲಪ್ಪ ಮುರಡಿ ರೈತ

₹19.30 ಕೋಟಿ ಪರಿಹಾರ ಹಣ ಬಿಡುಗಡೆ

ಬರಗಾಲ ಪರಿಸ್ಥಿತಿಯಿಂದ ಜಿಲ್ಲೆಯಲ್ಲಿ ಮಧ್ಯಂತರ ಪರಿಹಾರವಾಗಿ ತಲಾ ₹2 ಸಾವಿರದಂತೆ 97 706 ರೈತರಿಗೆ ₹19.30 ಕೋಟಿ ಪರಿಹಾರ ಹಣ ಜಮಾ ಮಾಡಲಾಗಿದೆ. ಜಿಲ್ಲೆಯ ಆರು ತಾಲ್ಲೂಕುಗಳನ್ನು ಸರ್ಕಾರ ಬರಪೀಡಿತ ಎಂದು ಘೋಷಿಸಿದ್ದು ಮುಂಗಾರು ಹಿಂಗಾರು ಹಂಗಾಮಿನ ಮಳೆ ಕೈಕೊಟ್ಟಿದ್ದರಿಂದ ಬಿತ್ತಿದ ಫಸಲು ಕೈಗೆ ಬಾರದೇ ರೈತರು ಕಂಗಲಾಗಿದ್ದರಿಂದ ತಾತ್ಕಾಲಿಕ ಪರಿಹಾರವಾಗಿ ಫ್ರೂಟ್ಸ್‌ ದಾಖಲಾತಿ ಸರಿ ಇದ್ದವರಿಗೆ ಡಿಬಿಟಿ ಮೂಲಕ ಹಣ ಒದಗಿಸಿಕೊಡಲಾಗಿದೆ ಎಂದು ಕೃಷಿ ಇಲಾಖೆ ನೀಡುವ ಮಾಹಿತಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT