ಯಾದಗಿರಿ: ರಾಜ್ಯದ ವಿಧಾನಸಭೆಗೆ ಯಾದಗಿರಿ ಜಿಲ್ಲೆಯ ನಾಲ್ಕು ಮತಕ್ಷೇತ್ರಗಳಿಂದ ಈವರೆಗೆ ಮಹಿಳಾ ಪ್ರತಿನಿಧಿಗಳು ಆಯ್ಕೆಯಾಗಿಲ್ಲ. ಯಾದಗಿರಿ ಜಿಲ್ಲೆಯಾಗಿ 13 ವರ್ಷಗಳಾಗಿದ್ದು, ಜಿಲ್ಲೆಯಾದ ಬಳಿಕ 2013 ಮತ್ತು 2018ರ ಚುನಾವಣೆ ನಡೆದಿವೆ. ಇದಕ್ಕೂ ಮುನ್ನ ಕಲಬುರಗಿ ಜಿಲ್ಲೆಯ ವ್ಯಾಪ್ತಿಯಲ್ಲಿ ಇದ್ದಾಗಲೂ ಮಹಿಳೆಯರು ಸ್ಪರ್ಧಿಸಿಲ್ಲ ಮತ್ತು ಗೆದ್ದಿಲ್ಲ.
ಎರಡು ಕಡೆ ಮಾತ್ರ ಆಕಾಂಕ್ಷಿಗಳು:
ಜಿಲ್ಲೆಯಲ್ಲಿ ನಾಲ್ಕು ಮತಕ್ಷೇತ್ರಗಳಿದ್ದು, ಯಾದಗಿರಿ ಮತ್ತು ಗುರುಮಠಕಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಮಹಿಳೆಯರು ತಮ್ಮ ಪಕ್ಷದ ಮುಖಂಡರನ್ನು ಕೋರಿದ್ದಾರೆ. ಸುರಪುರ ಮತ್ತು ಶಹಾಪುರದಲ್ಲಿ ಇಂಥ ಸ್ಥಿತಿಯಿಲ್ಲ.
ಸುರಪುರ ಮತಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದು, ಹಾಲಿ ಶಾಸಕ ನರಸಿಂಹ ನಾಯಕ (ರಾಜೂಗೌಡ) ಬಿಜೆಪಿ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಿದೆ. ಮಾಜಿ ಶಾಸಕ ವೆಂಕಟಪ್ಪ ನಾಯಕ ಕಾಂಗ್ರೆಸ್‌ನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಇನ್ನೂ ಶಹಾಪುರದಲ್ಲಿ ಹಾಲಿ ಕಾಂಗ್ರೆಸ್ ಶಾಸಕ ಶರಣಬಸಪ್ಪ ದರ್ಶನಾಪುರ ಹುರಿಯಾಳಾಗಿದ್ದರೆ, ಬೇರೆ ಪಕ್ಷದಿಂದ ಮಹಿಳೆಯರು ಸ್ಪರ್ಧೆಗೆ ಮುಂದೆ ಬಂದಿಲ್ಲ.
ರಾಷ್ಟ್ರೀಯ ಪಕ್ಷಗಳಲ್ಲಿ ಮಾತ್ರ ಆಕಾಂಕ್ಷಿಗಳು:
ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ರಾಷ್ಟ್ರೀಯ ಪಕ್ಷಗಳಲ್ಲಿ ಮಾತ್ರ ಮಹಿಳಾ ಟಿಕೆಟ್ ಆಕಾಂಕ್ಷಿಗಳು ಇದ್ದಾರೆ. ಪ್ರಾದೇಶಿಕ ಪಕ್ಷಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನಗಳು ಸಿಕ್ಕಿಲ್ಲ.
ಮಾಜಿ ಸಚಿವ ಡಾ.ಮಾಲಕರೆಡ್ಡಿ ಪುತ್ರಿ ಡಾ.ಅನುರಾಗ ಮಾಲಕರೆಡ್ಡಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಆಕಾಂಕ್ಷಿಯಾಗಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ ಏಕೈಕ ಮಹಿಳೆಯಾಗಿದ್ದಾರೆ. ‘ಅಪ್ಪ ಬಿಜೆಪಿಯಲ್ಲಿದ್ದಾರೆ. ಆದರೆ, ನಾನು ಕಾಂಗ್ರೆಸ್‌ನಲ್ಲಿದ್ದು, ಟಿಕೆಟ್ ಆಕಾಂಕ್ಷಿಯಾಗಿದ್ದೇನೆ’ ಎಂದು ಅವರು ಹೇಳಿಕೊಂಡಿದ್ದಾರೆ.
ಗುರುಮಠಕಲ್ ಮತಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಪಕ್ಷದ ರಾಜ್ಯ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಲಲಿತಾ ಅನಪುರ ಆಕಾಂಕ್ಷಿ ಆಗಿದ್ದಾರೆ. ಕೋಲಿ ಸಮುದಾಯದ ಮತಗಳು ಹೆಚ್ಚಿದ್ದು, ಪಕ್ಷದ ಹೈಕಮಾಂಡ್ ತಮ್ಮನ್ನು ಟಿಕೆಟ್‌ಗೆ ಪರಿಗಣಿಸಬೇಕು ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ಇದರ ಜೊತೆಗೆ ಹಲವಾರು ವರ್ಷಗಳಿಂದ ಗುರುಮಠಕಲ್ ಮತಕ್ಷೇತ್ರವನ್ನು ಗುರಿಯಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಬಿಜೆಪಿ ರಾಜ್ಯ ವಿಶೇಷ ಸದಸ್ಯೆ ನಾಗರತ್ನ ಕುಪ್ಪಿ ಈ ಬಾರಿ ಟಿಕೆಟ್ ಬಯಿಸಿದ್ದಾರೆ. ಟಿಕೆಟ್ ನೀಡುವಾಗ ಮಹಿಳೆಯರಿಗೆ ಆದ್ಯತೆ ನೀಡಬೇಕು ಎಂದು ಪಕ್ಷದ ಮುಖಂಡರಲ್ಲಿ ಮನವಿ ಮಾಡಿಕೊಂಡಿದ್ದಾರೆ.
***
ಮಹಿಳಾ ಶಾಸಕಿಯಾಗುವ ಅವಕಾಶ ಯಾರಿಗೆ?
ಜಿಲ್ಲೆಯಲ್ಲಿ ಎರಡು ಮತಕ್ಷೇತ್ರಗಳಲ್ಲಿ ಮಾತ್ರ ಮೂವರು ಮಹಿಳೆಯರು ಟಿಕೆಟ್ ಆಕಾಂಕ್ಷಿಗಳಿದ್ದು, ಯಾರಿಗೆ ಮೊದಲ ಮಹಿಳಾ ಶಾಸಕಿಯಾಗುವ ಅವಕಾಶ ಇದೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಯಾರಿಗೆ ಟಿಕೆಟ್ ಸಿಗಲಿದೆ, ಯಾರಿಗೆ ಸಿಗಲ್ಲ ಎಂಬುದರ ಬಗ್ಗೆ ಜಿಲ್ಲೆಯಲ್ಲಿ ಚರ್ಚೆ ನಡೆದಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.