ಶನಿವಾರ, ಜುಲೈ 24, 2021
23 °C
ಯಾದಗಿರಿ ಜಿಲ್ಲೆಯಲ್ಲಿ ವಿನೂತನ ಪ್ರಯೋಗ, ಗ್ರಾಹಕರು ಖುಷ್‌

ಯಾದಗಿರಿ: ಕ್ಷೌರದಂಗಡಿಯಲ್ಲಿ ಬಳಸಿ ಬಿಸಾಕುವ ಬಟ್ಟೆ ಬಳಕೆ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಕೊರೊನಾ ವೈರಸ್‌ ಭೀತಿಯಿಂದ ಕ್ಷೌರದಂಗಡಿಗಳಿಗೆ ಬರಲು ಭಯಪಡುವ ಗ್ರಾಹಕರಿಗೆ ಇಲ್ಲಿನ ಕ್ಷೌರದಂಗಡಿಯ ಮಾಲೀಕರೊಬ್ಬರು ವಿನೂತನ ಪ್ರಯೋಗಕ್ಕೆ ಕೈ ಹಾಕಿದ್ದಾರೆ.

ನಗರದ ಹೊಸಳ್ಳಿ ಕ್ರಾಸ್‌ ಬಳಿ ಲಕ್ಷ್ಮಿ ಹೇರ್ ಡ್ರೆಸರ್ ಹೊಂದಿರುವ ರಾಜಪ್ಪ ಕೃಷ್ಣಪ್ಪ ಹಡಪದ ಕ್ಷೌರದಂಗಡಿಯಲ್ಲಿ ಬಳಸಿ ಬಿಸಾಕುವ ಬಟ್ಟೆ ಬಳಕೆ ಮಾಡುತ್ತಿದ್ದಾರೆ. ಇದು ಗ್ರಾಹಕರಿಗೆ ಮೆಚ್ಚುಕೆಯಾಗಿದ್ದು, ಖುಷ್‌ ಆಗಿದ್ದಾರೆ.

ವಾರದ ಹಿಂದೆ ಆರಂಭ

ವಾರದ ಹಿಂದೆ ಕ್ಷೌರದಂಗಡಿಯಲ್ಲಿ ಬಳಸಿ ಬಿಸಾಕುವ ಬಟ್ಟೆ ಬಳಕೆ ಮಾಡುತ್ತಿದ್ದಾರೆ. ಇದಕ್ಕೆ ₹30 ಹೆಚ್ಚುವರಿಯಾಗಿ ತೆಗೆದುಕೊಳ್ಳುತ್ತಾರೆ. ಆದರೆ, ಗ್ರಾಹಕರು ಹಣ ಹೆಚ್ಚಾದರೂ ಪರವಾಗಿಲ್ಲ. ನಮ್ಮ ಸುರಕ್ಷತೆ ಮುಖ್ಯ ಎಂದು ಇದನ್ನು ಧರಿಸಿಕೊಂಡು ಕ್ಷೌರ ಮಾಡಿಸಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ರಾಜಪ್ಪ ಹಡಪದ.

‘ಕಲಬುರ್ಗಿಯಿಂದ ಮೂರು ಡಜನ್‌ ಬಳಸಿ ಬಿಡಾಡುವ ಏಫ್ರಾನ್‌ ತರಿಸಲಾಗಿದೆ. ಗ್ರಾಹಕರು ಇದರ ಅಗತ್ಯತೆ ಮನಗಂಡು ಧರಿಸಿಕೊಳ್ಳುತ್ತಾರೆ. ಈಗಾಗಲೇ ಎರಡು ಡಜನ್‌ ಖಾಲಿಯಾಗಿದ್ದು, ಮತ್ತೆ ಬೇಡಿಕೆ ಸಲ್ಲಿಸಲಾಗಿದೆ’ ಎನ್ನುತ್ತಾರೆ ಅವರು. 

ಟವೆಲ್‌ ಕೂಡ ಬರಲಿದೆ: ಈಗ ಉದ್ದನೆಯ ಎಫ್ರಾನ್‌ ಮಾದರಿಯಲ್ಲಿರುವ ಬಟ್ಟೆ ಬಳಸಲಾಗುತ್ತಿದೆ. 2– 3 ದಿನಗಳಲ್ಲಿ ಗಡ್ಡ ಮಾಡಿಸಿಕೊಳ್ಳುವವರಿಗಾಗಿ ಟವೆಲ್‌ ಕೂಡ ಬರಲಿದೆ. ಇದನ್ನು ಕೂಡ ಬಳಸಿ ಬಿಸಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಕ್ರಿಮಿನಾಶಕ ಪೆಟ್ಟಿಗೆ ಬಳಕೆ

ಆಸ್ಪತ್ರೆಗಳಲ್ಲಿ ಬಳಸುವ ಕ್ರಿಮಿನಾಶಕ ಪೆಟ್ಟಿಗೆ (ಸ್ಟೇರಿಲಿಜಿಷನ್‌) ಅನ್ನು ಕ್ಷೌರದಂಗಡಿಯಲ್ಲಿ ಬಳಸಲಾಗುತ್ತಿದೆ. ಒಬ್ಬರಿಗೆ ಬಳಕೆ ಮಾಡಿದ ಕತ್ತರಿ ಮತ್ತಿತರ ಸಾಮಾನುಗಳನ್ನು ಯಂತ್ರದಲ್ಲಿ ಹಾಕಿದ ನಂತರವೇ ಮತ್ತೊಬ್ಬರಿಗೆ ಬಳಸುವ ವ್ಯವಸ್ಥೆ ರೂಢಿಸಿಕೊಂಡಿದ್ದಾರೆ.

ದುಬೈನಲ್ಲಿ 8 ವರ್ಷ ಇದ್ದರು

ರಾಜಪ್ಪ ಹಡಪದ ಅವರು, 8 ವರ್ಷಗಳ ಕಾಲ ದುಬೈನಲ್ಲಿ ಕೆಲಸ ಮಾಡಿ ಬಂದಿದ್ದಾರೆ. ಅಲ್ಲಿ ಇಂಥದನ್ನು ಆಗಲೇ ಬಳಕೆ ಮಾಡುತ್ತಿದ್ದಾರೆ. ಈಗ ಕೊರೊನಾ ಕಾರಣದಿಂದ ನಮ್ಮಲ್ಲಿ ಬಳಸುತ್ತಿದ್ದೇವೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

ಈಗ ಇಲ್ಲಿಗೆ ಬಂದು 13 ವರ್ಷವಾಗಿದೆ. ಅಲ್ಲಿಯದ್ದನ್ನು ನೋಡಿ ನಮ್ಮಲ್ಲಿ ಯಾಕೆ ಬಳಕೆ ಮಾಡಬಾರದು ಎನ್ನುವ ಆಲೋಚನೆ ಬಂದಿತು. ಹೀಗಾಗಿ ನಮ್ಮಲ್ಲೆ ಮೊದಲು ಇದನ್ನು ಬಳಕೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಸದ್ಯ ಹೇರ್‌ ಕಟಿಂಗ್‌, ಗಡ್ಡಕ್ಕೆ ₹120 ದರ ಇದೆ. ಏಫ್ರಾನ್‌ ಹಾಕಿದರೆ ₹30 ಹೆಚ್ಚುವರಿ ತೆಗೆದುಕೊಳ್ಳುವುದರಿಂದ ₹150 ಆಗುತ್ತದೆ. ಗ್ರಾಹಕರು ಹಣಕ್ಕಿಂತ ತಮ್ಮ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎನ್ನುತ್ತಾರೆ ಅವರು.

ಹಳ್ಳಿಯಿಂದಲೂ ಬರುತ್ತಾರೆ

‘ಇವರ ಅಂಗಡಿಗೆ ನಗರದವರು ಮಾತ್ರವಲ್ಲದೆ ಹಳ್ಳಿ ಕಡೆಯಿಂದಲೂ ಜನ ಬರುತ್ತಿದ್ದಾರೆ. ಹೀಗಾಗಿ ಇಂಥ ಸುರಕ್ಷತಾ ಕ್ರಮ ಅವಶ್ಯವಿದೆ. ಇದನ್ನು ಜಿಲ್ಲೆಯ ಎಲ್ಲ ಕ್ಷೌರದ ಅಂಗಡಿಗಳ ಮಾಲೀಕರು ಅವಳಸಿಕೊಳ್ಳುವ ಮನಸ್ಸು ಮಾಡಬೇಕು. ನಮ್ಮ ಸುರಕ್ಷತೆ ಜೊತೆಗೆ ಎಲ್ಲರ ಸುರಕ್ಷತೆ ಇದರಿಂದ ಸಾಧ್ಯವಾಗಲಿದೆ’ ಎಂದು ಗ್ರಾಹಕ ವಿಜಯಕುಮಾರ ಯೇಸುದಾಸ್‌ ಹೇಳುತ್ತಾರೆ.

***

ಕ್ಷೌರಕ್ಕೆ ಬರುವವರಿಗೆ ಥರ್ಮಲ್‌ ಸ್ಕ್ಯಾನಿಂಗ್‌!

ಸಾರ್ವಜನಿಕ ಸಾರಿಗೆ ಮತ್ತಿತರ ಕಡೆಗಳಲ್ಲಿ ಜ್ವರ ತಪಾಸಣೆಗೆ ಬಳಸುವ ಥರ್ಮಲ್‌ ಸ್ಕ್ಯಾನಿಂಗ್‌‌ ಕ್ಷೌರದ ಅಂಗಡಿಯಲ್ಲಿ ಮಾಡಲಾಗುತ್ತಿದೆ. ಅಂಗಡಿಯೊಳಗೆ ಪ್ರವೇಶ ಪಡೆದ ತಕ್ಷಣ ಗ್ರಾಹಕರು ಥರ್ಮಲ್‌ ಸ್ಕ್ಯಾನಿಂಗ್‌ ಒಳಗಾಗಬೇಕಾಗಿತ್ತದೆ. ಆ ನಂತರ ಅವರಿಗೆ ಕ್ಷೌರ ಮಾಡುವ ಕೆಲಸ ಶುರು ಮಾಡಲಾಗುತ್ತಿದೆ. 

‘ಆನ್‌ಲೈನ್‌ ಮೂಲಕ ₹4500 ಕೊಟ್ಟು ಯಂತ್ರವನ್ನು ಖರೀದಿಸಿದ್ದೇನೆ. ಇದು ಕೋವಿಡ್‌ ಕಾಲ. ಹೀಗಾಗಿ ಸುರಕ್ಷತೆ ಹೆಚ್ಚು ಬೇಕಾಗುತ್ತದೆ. ಹೀಗಾಗಿ ಇದನ್ನು ನಮ್ಮಲ್ಲಿ ಅಳವಡಿಸಿಕೊಂಡಿದ್ದೇನೆ’ ಎಂದು ‘ಪ್ರಜಾವಾಣಿ’ ಜೊತೆ ಮಾಹಿತಿ ಹಂಚಿಕೊಂಡರು.

***

ಗ್ರಾಹಕ ಸ್ನೇಹಿ ಕ್ರಮಗಳನ್ನು ಬೇರೆ ಅಂಗಡಿಗಳವರು ಇದನ್ನು ಅಳವಡಿಸಿಕೊಳ್ಳಬೇಕು. ಜನರ ಸುರಕ್ಷತೆ ಮತ್ತು ಅವರ ಸುರಕ್ಷಿತೆ ಇದರಲ್ಲಿ ಸೇರಿದೆ. ಮುನ್ನಚ್ಚರಿಕೆ ಕ್ರಮ ಎಲ್ಲಕ್ಕಿಂತ ಒಳ್ಳೆಯದು

-ವಿಜಯಕುಮಾರ ಯೇಸುದಾಸ್, ಗ್ರಾಹಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು