ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ರಾಜಕೀಯ ಅಸ್ತ್ರವಾದ ಕಾಲುವೆ ನೀರು

ನೀರು ಹರಿಸುವಲ್ಲೂ ರಾಜಕೀಯ ದೊಂಬರಾಟ
Last Updated 26 ಮಾರ್ಚ್ 2023, 13:12 IST
ಅಕ್ಷರ ಗಾತ್ರ

ಯಾದಗಿರಿ: ಬೇಸಿಗೆ ದಿನಗಳಲ್ಲಿ ನಾರಾಯಣಪುರ ಜಲಾಶಯದಿಂದ ಕಾಲುವೆಗೆ ನೀರು ಹರಿಸಲು ಜಿಲ್ಲೆಯ ಕಾಲುವೆ ಜಾಲದಲ್ಲಿ ರಾಜಕೀಯ ದೊಂಬರಾಟ ನಡೆಯುತ್ತದೆ. ಜೊತೆಗೆ ರೈತ ಸಂಘಟನೆಗಳ ಪ್ರತಿಭಟನೆ ಜೋರಾಗಿರುತ್ತದೆ.

ಈ ಬಾರಿ ವಾರಬಂದಿ ಪ್ರಕಾರ ಮಾರ್ಚ್ 30ಕ್ಕೆ ನೀರು ಸ್ಥಗಿತಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಏ. 10 ಅಥವಾ 15ರ ವರೆಗೆ ನೀರು ಹರಿಸಿದರೆ ಎಲ್ಲ ಬೆಳೆಗಳು ಸಮರ್ಪಕವಾಗಿ ಕೊಯ್ಲಾಗುತ್ತವೆ ಎನ್ನುತ್ತಾರೆ ರೈತರು.

ಬೇಸಿಗೆ ಹಂಗಾಮಿನ ಬೆಳೆಗೆ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯದಂತೆ ಮಾರ್ಚ್ 30ವರೆಗೆ ಕಾಲುವೆಗೆ ನೀರು ಹರಿಸುವ ನಿರ್ಣಯ ತೆಗೆದುಕೊಳ್ಳಲಾಗಿತ್ತು. ವಿಧಾನಸಭೆಯ ಚುನಾವಣೆಯ ಹೊಸ್ತಿಲಲ್ಲಿ ಇರುವಾಗ ರೈತರ ಬೇಡಿಕೆ ಇಷ್ಟಾರ್ಥದಂತೆ ಮತ್ತೆ ಹೆಚ್ಚುವರಿಯಾಗಿ 6 ದಿನ ಕಾಲುವೆಗೆ ನೀರು ಹರಿಸುವ ನಿರ್ಧಾರವನ್ನು ಸುರಪುರ ಹಾಗೂ ಶಹಾಪುರ ಶಾಸಕರು ತಿಳಿಸಿದ್ದಾರೆ.

ಕಾಲುವೆಗೆ ನೀರು ಸ್ಥಗಿತಗೊಳಿಸುವ ಸಮಯ ಹತ್ತಿರವಾದಾಗ ಸಂಘಟನೆಗಳ ಮುಖಂಡರು ಇನ್ನೂ ಸ್ವಲ್ಪ ದಿನ ನೀರು ಹರಿಸಬೇಕು ಎಂದು ಮನವಿ ಮಾಡಿದಾಗ, ಜನ ಪ್ರತಿನಿಧಿಗಳು ಹೇಳಿಕೆ ನೀಡುವ ಮೂಲಕ ಸಂಬಂಧಿಸಿದ ಅಧಿಕಾರಿಗಳಿಗೆ ಒತ್ತಾಯ ಮಾಡುತ್ತಾರೆ. ಹೆಚ್ಚಿನ ಅವಧಿಗೆ ನೀರು ಹರಿದಾಗ ಅದರ ಲಾಭ ತೆಗೆದುಕೊಳ್ಳಲು ಯತ್ನಿಸುತ್ತಾರೆ.

ಒತ್ತಡ ಬರುತ್ತದೆ ಎಂದು ನಿರೀಕ್ಷೆ ಇಟ್ಟುಕೊಂಡೆ ಅಧಿಕಾರಿಗಳು 10-15 ದಿನ ಮೊದಲು ನೀರು ಬಂದ್ ಮಾಡಿರುತ್ತಾರೆ. ಹೆಚ್ಚಿನ ಅವಧಿಗೆ ನೀರು ಬಿಡಿಸುವುದು ರಾಜಕೀಯ ನಾಟಕ ಎಂಬುದು ರೈತ ಮುಖಂಡರ ಆರೋಪ.

ಕಾಲುವೆ ಕೊನೆ ಭಾಗದ ರೈತರಿಗೆ ಹೆಚ್ಚಿನ ಅವಧಿಗೆ ನೀರಿನ ಅವಶ್ಯಕತೆ ಇದೆ. ಶೇಂಗಾ, ಸಜ್ಜೆ ಬೆಳೆಗಳು ಪಾರಾಗುತ್ತವೆ. ಆದರೆ, ವಿಳಂಬ ಮಾಡಿ ಬಿತ್ತಿದ ಭತ್ತ ಕೈಗೆ ಬರುವದಿಲ್ಲ. ಶೇ 25 ರಷ್ಟು ಭತ್ತ ಏ. 10ರ ವರೆಗೆ ನೀರು ಹರಿಸಿದರೆ ಮಾತ್ರ ಬರುತ್ತದೆ ಎನ್ನುತ್ತಾರೆ ರೈತರು.

ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ತೋಳ್ಬಲ ಹಾಗೂ ರಾಜಕೀಯ ಬಲ ಇದ್ದವರಿಗೆ ಮಾತ್ರ ನೀರು ಸಿಗುತ್ತದೆ. ಪ್ರತಿ ಬೇಸಿಗೆ ಹಂಗಾಮಿನಲ್ಲಿ ಇದು ಸಾಮಾನ್ಯ ಚಿತ್ರಣವಾಗಿ ಬಿಟ್ಟಿದೆ. ಬೇಸಿಗೆ ಹಂಗಾಮಿನಲ್ಲಿ ಮಾತ್ರ ಕಾಲುವೆ ನೀರು ರಾಜಕೀಯ ಅಸ್ತ್ರವಾಗಿದೆ ಎನ್ನುವುದಕ್ಕೆ ಕಾಲುವೆಗೆ ನೀರಿಸಲು ಪಾದಯಾತ್ರೆ, ಧರಣಿ, ಪ್ರತಿಭಟನೆ ನಡೆಸುವುದು ಹಗ್ಗ ಜಗ್ಗಾಟದಂತೆ ಆಗಿರುವುದು ವಿಪರ್ಯಾಸವೇ ಸೈ.

‘ಒಂದೆಡೆ ಕಾಲುವೆ ಜಾಲದ ಮೇಲ್ಭಾಗದ ರೈತರಿಗೆ ಸಮೃದ್ಧಿಯ ನೀರು ಸಿಕ್ಕರೆ ಅದೆ ಕಾಲುವೆ ಜಾಲದ ಕೊನೆ ಭಾಗದ ರೈತರಿಗೆ ನೀರು ಮರೀಚಿಕೆಯಾಗಿದೆ. ನಮಗೆ ರೈತ ಸಂಘಟನೆಯ ಬೆಂಬಲವಿಲ್ಲ. ಜನಪ್ರತಿನಿಧಿಗಳು ನೋವಿಗೆ ಸ್ಪಂದಿಸುತ್ತಿಲ್ಲ. ರಾಜಕೀಯ ಮುಖಂಡರು ಮಾತ್ರ ಭತ್ತ ಬೆಳೆಗಾರರ ಪರ ವಕಾಲತ್ತು ವಹಿಸಿದವರಂತೆ ಮಾತಾಡುತ್ತಾರೆ. ರೈತರಿಂದ ರೈತರಿಗೆ ಶೋಷಣೆಯಾಗುತ್ತಲಿದೆ’ ಎನ್ನುವುದು ಕಾಲುವೆ ಕೆಳಭಾಗದರ ರೈತರ ಆರೋಪವಾಗಿದೆ.

‘ನೀರಾವರಿ ಸಲಹಾ ಸಮಿತಿಯ ನಿರ್ಣಯಕ್ಕೆ ಕವಡೆ ಕಾಸಿನ ಕಿಮ್ಮತ್ತು ಇಲ್ಲವಾಗಿದೆ. ಸಭೆಯಲ್ಲಿ ಲಘು ಬೆಳೆಗಳಾದ ಶೇಂಗಾ, ಸಜ್ಜೆ, ಮೆಣಸಿನಕಾಯಿ, ಹತ್ತಿ, ಜೋಳ, ಕಡಲೆ ಮುಂತಾದ ಬೆಳೆಗಳನ್ನು ಬೆಳೆಯಲು ಅವಕಾಶವಿದೆ. ನಿಷೇಧಿತ ಬೆಳೆ ಬೆಳೆಯಬಾರದು ಎಂಬ ನಿರ್ಧಾರಕ್ಕೆ ಸಹಿ ಮಾಡಿ ಬರುವ ಸದಸ್ಯರು ಮತ್ತೆ ನಿಷೇಧಿತ ಬೆಳೆ ಬೆಳೆಯಲು ಪ್ರೇರಣೆ ಎನ್ನುವಂತೆ ಹೇಳಿಕೆ ನೀಡುತ್ತಿರುವುದು ಹಲವು ವರ್ಷದಿಂದ ನಡೆದುಕೊಂಡು ಬಂದ ಸಂಪ್ರದಾಯದಂತೆ ಆಗಿದೆ’ ಎನ್ನುತ್ತಾರೆ ರೈತ ಶರಣಪ್ಪ.

‘ಕಾಲುವೆ ಜಾಲದ ಕೊನೆ ಭಾಗದ ರೈತರಿಗೆ ಸಮರ್ಪಕವಾಗಿ ನೀರು ದೊರಕದ ಕಾರಣ ಹೊಟ್ಟೆಪಾಡಿಗೆ ಅನಿವಾರ್ಯವಾಗಿ ಗುಳೆ ಹೋಗುವುದು ತಪ್ಪುತ್ತಿಲ್ಲ. ದಾಖಲೆಯಲ್ಲಿ ಮಾತ್ರ ಪಹಣಿಯಲ್ಲಿ ಕಾಲುವೆಯ ನೀರು ಎಂದು ನಮೂದಿಸಿದ್ದಾರೆ. ಪ್ರವಾಹ ಹಾಗೂ ಬೆಳೆ ನಷ್ಟವಾದರೆ ಬೆಳೆ ಪರಿಹಾರದಿಂದಲೂ ವಂಚಿತರಾಗಿದ್ದೇವೆ’ ಎನ್ನುತ್ತಾರೆ ಕೊಳ್ಳೂರ ಗ್ರಾಮದ ರೈತ ಹಣಮಂತ.

ರೈತರು ಆತ್ಮಾವಲೋಕನ ಮಾಡಿಕೊಂಡು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಸಂಕಷ್ಟ ಎದುರಿಸಬೇಕಾಗುತ್ತದೆ. ನೀರಿನ ಬಳಕೆ ಅಗತ್ಯ ಪ್ರಮಾಣದಷ್ಟೆ ಉಪಯೋಗಿಸಿಕೊಂಡು ಕಾಲುವೆ ಜಾಲದ ಕೊನೆ ಭಾಗದ ರೈತರಿಗೆ ನೀರು ದೊರಕುವಂತೆ ಮಾಡುವುದು. ಪರ್ಯಾಯ ಬೆಳೆ ಬೆಳೆಯುವ ಬಗ್ಗೆ ಚಿಂತನೆ ನಡೆಸಿವುದು ಈಗ ಸಕಾಲವಾಗಿದೆ.

****

ಒಂದೇ ಬೆಳೆ; ಇಳುವರಿ ಕುಂಠಿತ

ಕೃಷ್ಣಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಅಧಿಕ ನೀರು ಹಾಗೂ ನಿರಂತರವಾಗಿ ಒಂದೇ ತರಹದ ಬೆಳೆ ಬೆಳೆಯುತ್ತಿರುವುದರಿಂದ ಇಳುವರಿ ಕಡಿಮೆಯಾಗಿದೆ ಎನ್ನುವುದಕ್ಕೆ ಶಹಾಪುರ ತಾಲ್ಲೂಕಿನ ಮುಡಬೂಳ, ಮದ್ರಿಕಿ, ಶಾರದಹಳ್ಳಿ, ಹುಲಕಲ್, ಶಿರವಾಳ, ಅರಳಹಳ್ಳಿ ಹೀಗೆ ಹಲವಾರು ಹಳ್ಳಿಯಲ್ಲಿ ಹತ್ತಿ ಹಾಗೂ ಮೆಣಸಿನಕಾಯಿ ಬೆಳೆದು ರೈತರು ನಷ್ಟ ಅನುಭವಿಸಿರುವುದು ತಾಜಾ ಉದಾಹರಣೆ.

‘ಅಧಿಕ ರಸಗೊಬ್ಬರ ಬಳಕೆಯಿಂದ ಭೂಮಿಯ ಫಲವತ್ತತೆಯು ಹಾಳಾಗಿ ಜವಳು ಹಾಗೂ ಸವಳು ಭೂಮಿ ಆಗಿವೆ. ರೈತರು ಪರ್ಯಾಯ ಬೆಳೆ ಬೆಳೆಯುವತ್ತ ಗಮನಹರಿಸಬೇಕು ಎಂದು ಭೀಮರಾಯನಗುಡಿ ಕೃಷಿ ಮಹಾ ವಿದ್ಯಾಲಯದ ಕೃಷಿ ವಿಜ್ಞಾನಿಗಳ ತಂಡ ರೈತರಿಗೆ ಎಚ್ಚರಿಕೆ ಹಾಗೂ ಜಾಗೃತಿಯನ್ನು ಮೂಡಿಸಲು ಮುಂದಾಗಿದೆ. ಆದರೆ, ಇದಕ್ಕೆ ರೈತ ಸಂಘಟನೆಗಳು ಹಾಗೂ ಜನಪ್ರತಿನಿಧಿಗಳು ಜಾಣ ಕಿವುಡರಂತೆ ವರ್ತಿಸುತ್ತಿರುವುದು ಬೇಸರ ಮೂಡಿಸಿದೆ’ ಎನ್ನುತ್ತಾರೆ ರೈತ ಮುಖಂಡ ಭಾಸ್ಕರರಾವ ಮುಡಬೂಳ.

****

ಕಾಲುವೆ ಕೊನೆ ಹಂತದವರೆಗೆ ನೀರು ಸಮರ್ಪಕವಾಗಿ ಹರಿದರೆ ಗೊಂದಲವಿರುವುದಿಲ್ಲ. ಜನಪ್ರತಿನಿಧಿಗಳು ಈ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು
- ಹಣಮಂತ್ರಾಯ ಚಂದಲಾಪುರ, ರೈತ ಮುಖಂಡ

ದೇವತ್ಕಲ್, ಕೆ. ತಳ್ಳಳ್ಳಿ, ಭೈರಿಮರಡಿ, ಏದಲಬಾವಿ ಏತ ನೀರಾವರಿ ಟೆಂಡರ್ ಆಗಿದೆ. ಇದರಿಂದ ಕಾಲುವೆ ಕೊನೆ ಹಂತದ ರೈತರಿಗೆ ನೀರು ತಲುಪುತ್ತದೆ
- ರಾಜೂಗೌಡ, ಶಾಸಕ

ಸರ್ಕಾರ ರೈತರೊಂದಿಗೆ ಚೆಲ್ಲಾಟವಾಡಬಾರದು. ನಮ್ಮ ಪಾಲಿನ ನೀರನ್ನು ನಮ್ಮ ರೈತರಿಗೆ ಒದಗಿಸುವ ಕೆಲಸವಾಗಬೇಕು. ಇದರಲ್ಲಿ ರಾಜಕೀಯ ಸಲ್ಲದು.
- ರಾಜಾ ವೆಂಕಟಪ್ಪನಾಯಕ, ಮಾಜಿ ಶಾಸಕ

ಕಾಲುವೆಗೆ ನೀರು ಬಿಡಲು ಕಳೆದ 20 ದಿನಗಳಿಂದ ಮನವಿ ಮಾಡಲಾಗಿದೆ. ಶೇಂಗಾ, ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳಿಗೆ ನೀರಿನ ಅವಶ್ಯವಿದೆ
- ಚಂದ್ರಕಲಾ ಬಾಗೂರು, ಮಹಿಳಾ ಜಿಲ್ಲಾಧ್ಯಕ್ಷೆ, ರೈತ ಸಂಘದ (ಹಸಿರು ಸೇನೆ)

***

***

ಫುರಕ ಮಾಹಿತಿ: ಟಿ.ನಾಗೇಂದ್ರ, ಅಶೋಕ ಸಾಲವಾಡಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT