ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಡಗೇರಾ: ಹೆಸರಿಗಷ್ಟೇ ಇರುವ ಶುದ್ಧ ನೀರಿನ ಘಟಕಗಳು

ಅಧಿಕಾರಿಗಳು, ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯ
Last Updated 16 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ವಡಗೇರಾ: ಹಳ್ಳಿಗಳಲ್ಲಿ ಶುದ್ಧೀಕರಿಸಿದ ನೀರು ಕೊಡಲು ಅವುಗಳನ್ನು ಸ್ಥಾಪನೆ ಮಾಡಿಲ್ಲ. ತಮ್ಮ ಲಾಭಕ್ಕಾಗಿ ಬಿಲ್ ಎತ್ತಲು ನಿರ್ಮಾಣ ಮಾಡಿದ್ದಾರೆ. ಇವಾಗ ಬಿಲ್ ಆಗಿದೆ. ಹೀಗಾಗಿ ಅವುಗಳನ್ನು ಮರೆತಿದ್ದಾರೆ. ಹಳ್ಳಿ ಜನ ಹೆಂಗಿದ್ರೇನು. ಅವರು ಮಾತ್ರ ಶುದ್ಧ ನೀರು ಕುಡಿದು ಪಟ್ಟಣದಲ್ಲಿ ಆರಾಮವಾಗಿ ವಾಸ ಮಾಡುತ್ತಾರೆ. ನಮ್ಮ ಹಣೆಬರಹ, ನಾವು ಅನುಭವಿಸಬೇಕು ಅಷ್ಟೇ...

ಗ್ರಾಮಸ್ಥರು ಅಸಹಾಯಕತೆಯಿಂದ ಹೇಳುವ ಈ ಮಾತುಗಳು ಶುದ್ಧ ಕುಡಿಯುವ ನೀರಿನ ಘಟಕಗಳ ದುಃಸ್ಥಿತಿ ಬಗ್ಗೆ ಕನ್ನಡಿ ಹಿಡಿಯುತ್ತವೆ.

ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳ ನೈಜ ಸ್ಥಿತಿಗತಿಯ ಬಗ್ಗೆ ಗ್ರಾಮೀಣ ಭಾಗದ ಜನರು ನಿರಂತರವಾಗಿ ದೂರುತ್ತಲೇ ಇದ್ದಾರೆ.

ಗ್ರಾಮೀಣ ಭಾಗಕ್ಕೆ ನೀರಿಗಾಗಿ ಸರ್ಕಾರದಿಂದ ನೂರಾರು ಕೋಟಿ ಅನುದಾನ ಬಿಡುಗಡೆ ಆಗುತ್ತದೆ. ಬಹುತೇಕ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರು ದೊರೆಯುತ್ತಿಲ್ಲ. ಅಶುದ್ಧ ನೀರು ಕುಡಿಯುವ ಜನರು ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ.

ತಾಲ್ಲೂಕಿನ ಕಾಡಂಗೇರಾ ಬಿ, ಕುರಕುಂದಾ, ಮಳ್ಳಳ್ಳಿ, ಹೊರಟೂರು, ವಡಗೇರಾ ಪಟ್ಟಣ, ಕ್ಯಾತನಾಳ, ಹಂಚಿನಾಳ, ಬೊಮ್ಮನಹಳ್ಳಿ, ಜೋಳದಡಗಿ, ಕಂದಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ನೀರಿನ ಘಟಕಗಳನ್ನು ಹೆಸರಿಗಷ್ಟೆ ನಿರ್ಮಿಸಿದ್ದಾರೆ. ಆದರೆ ಅವುಗಳನ್ನು ಸುಸ್ಥಿತಿಯಲ್ಲಿ ಇರಿಸುವುದಕ್ಕೆ ಗಮನ ನೀಡದೆ ಹಾಳಾಗಿವೆ.

ಶಂಕರಬಂಡಿ ಮತ್ತು ಹಂಚಿನಾಳ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸದೆ ಬೇರೊಂದು ಗ್ರಾಮದ ಫೋಟೋ ಹಾಕಿ ಬಿಲ್ ಪಾವತಿಸಿ ಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಘಟಕಗಳ ನಿರ್ವಹಣೆಗಾಗಿ ಕೋಟಿ ಕೋಟಿ ರೂಪಾಯಿಗಳ ಟೆಂಡರ್ ಸಹ ಆಗಿದೆ. ಆದರೆ ಅವುಗಳ ನಿರ್ವಹಣೆ ಯಾಕೆ ಆಗುತ್ತಿಲ್ಲ. ಅಧಿಕಾರಿಗಳಿಗೆ ಕೇಳಿದರೆ ಉಡಾಫೆಯ ಉತ್ತರ ನೀಡುತ್ತಾರೆ. ಇಷ್ಟೆಲ್ಲ ಭ್ರಷ್ಟಾಚಾರ ನಡೆದರೂ ಮೇಲಧಿಕಾರಿಗಳು ಮಾತ್ರ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

ಬೇಸಿಗೆ ಆರಂಭವಾಗಿದೆ. ನದಿಯಲ್ಲಿ ಹಾಗೂ ಕೊಳವೆ ಬಾವಿಗಳಲ್ಲಿ ನೀರು ಬತ್ತುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದರಿಂದ ನದಿಯಿಂದ ಸರಬರಾಜು ಆಗುವ ಶುದ್ಧೀಕರಿಸದ ನೀರು ಹಾಗೂ ಕೊಳವೆ ಬಾವಿಯಿಂದ ಬರುವ ಗಡುಸು ನೀರು ಕುಡಿಯುವುದು ಗ್ರಾಮೀಣ ಜನರಿಗೆ ಅನಿವಾರ್ಯವಾಗಿದೆ.

‘ನಮ್ಮ ಊರಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ತಿಂಗಳುಗಳೇ ಕಳೆದಿವೆ. ಇನ್ನೂ ಸಹ ದುರಸ್ತಿ ಮಾಡಿಸುತ್ತಿಲ್ಲ. ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಬರುತ್ತಾರೆ ಎಂದು ಆ ಸಮಯದಲ್ಲಿ ಮಾತ್ರ ಎರಡು ದಿನ ಅದಕ್ಕೆ ಚಾಲನೆ ನೀಡಿದ್ದರು. ಈಗ ಮತ್ತೆ ಅದು ಹದಗೆಟ್ಟಿದೆ. ಸಂಬಂಧಿಸಿದ ಅಧಿಕಾರಿಗಳಿಗೆ ಸಮಸ್ಯೆ ಹೇಳಿದರೆ, ಇಲ್ಲ ಸಲ್ಲದ ನೆಪ ಹೇಳಿ ಕೈ ತೊಳೆದುಕೊಳ್ಳುತ್ತಿದ್ದಾರೆ’ ಎಂದು ಬೊಮ್ಮನಹಳ್ಳಿ ಗ್ರಾಮದ ಯುವಕ ನಿಂಗಪ್ಪ ಬಡಿಗೇರಾ ಹೇಳಿದ್ದಾರೆ.

‘ನಮ್ಮ ಗ್ರಾಮದ ಶಾಲೆಯ ಹತ್ತಿರದಲ್ಲಿ ಆರ್‌ಒ ಪ್ಲಾಂಟ್ ಸ್ಥಾಪನೆಯಾಗಿ ಮೂರು ವರ್ಷಗಳ ಕಳೆದರೂ ಅದು ಇನ್ನೂ ಉಪಯೋಗಕ್ಕೆ ಬಂದಿಲ್ಲ. ಈ ಸಮಸ್ಯೆ ಕುರಿತು ಅನೇಕ ಸಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಅಶುದ್ಧ ನೀರು ಕುಡಿಯುವುದು ಅನಿವಾರ್ಯವಾಗಿದೆ’ ಎನ್ನುತ್ತಾರೆ ಕುರಕುಂದಾ ಗ್ರಾಮದ ಅಂಬ್ರೇಶಗೌಡ.

ಈ ಸಮಸ್ಯೆ ಕುರಿತು ಮಾಹಿತಿ ಕೇಳಲು ಗ್ರಾಮೀಣ ನೀರು ಸರಬರಾಜು ಇಲಾಖೆಯ ಎಇ ರಾಹುಲ್ ಅವರಿಗೆ ಕರೆ ಮಾಡಿದರೆ ಅವರು ಕರೆಗೆ ಸ್ಪಂದಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT