ಮಂಗಳವಾರ, ಜನವರಿ 26, 2021
28 °C
2008ರಲ್ಲಿ ಹೊಸ ಜಿಲ್ಲೆ ಘೋಷಿಸಿದ್ದ ಯಡಿಯೂರಪ್ಪ, 2009ರಲ್ಲಿ ಅಸ್ತಿತ್ವಕ್ಕೆ

ಜಿಲ್ಲೆಗೆ ಇಂದು ಸಿ.ಎಂ, ನಿರೀಕ್ಷೆಗಳ ಮಹಾಪೂರ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ರಾಜ್ಯದ 30ನೇ ಜಿಲ್ಲೆಯಾಗಿ 2010 ಏಪ್ರಿಲ್ 10 ರಂದು ಅಸ್ತಿತ್ವಕ್ಕೆ ಬಂದ ಯಾದಗಿರಿ ಜಿಲ್ಲೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬುಧವಾರ (ಜ.6) ಆಗಮಿಸಲಿದ್ದಾರೆ. ಅವರೇ ಘೋಷಿಸಿದ ಜಿಲ್ಲೆಗೆ ಬರುತ್ತಿರುವುದರಿಂದ ಅಭಿವೃದ್ಧಿಯ ಕುರಿತ ನಿರೀಕ್ಷೆಗಳು ಗದಿಗೆದರಿವೆ.

ಆಗ ಯಾದಗಿರಿ, ಶಹಾಪುರ ಮತ್ತು ಸುರಪುರ ಮೂರು ತಾಲ್ಲೂಕುಗಳನ್ನು ಸೇರಿಸಿ ಹೊಸ ಜಿಲ್ಲೆ ರಚನೆ ಮಾಡಲಾಗಿತ್ತು. ಈಗ 6 ತಾಲ್ಲೂಕುಗಳಾಗಿದ್ದು, ಗುರುಮಠಕಲ್‌ ಪುರಸಭೆ, ಹುಣಸಗಿ ಪಟ್ಟಣ ಪಂಚಾಯಿತಿ, ವಡಗೇರಾ ಗ್ರಾಮ ಪಂಚಾಯಿತಿ ಸ್ಥಾನವನ್ನು ಹೊಂದಿವೆ.

ಜಿಲ್ಲೆಯಲ್ಲಿ ಎರಡು ನದಿಗಳು ಹರಿಯುತ್ತಿದ್ದರೂ ಹಿಂದುಳಿದ ಪಟ್ಟ ಅಳಿಯುತ್ತಿಲ್ಲ. ಒಂದುಕಡೆ ಕೃಷ್ಣಾ, ಮತ್ತೊಂದು ಕಡೆ ಭೀಮಾ ನದಿ ಪಾತ್ರವನ್ನು ಹೊಂದಿದೆ. ಗುರುಮಠಕಲ್‌ ತಾಲ್ಲೂಕು ವ್ಯಾಪ್ತಿಗೆ ಮಾತ್ರ ನದಿಯಿಲ್ಲ. ಉಳಿದ ಐದು ತಾಲ್ಲೂಕುಗಳಲ್ಲಿ ನದಿಗಳಿವೆ. ನೀರಾವರಿ ಸೌಲಭ್ಯವಿದ್ದರೂ ಗುಳೆ ಹೋಗುವುದು ತಪ್ಪಿಲ್ಲ.

ಲಾಕ್‌ಡೌನ್‌ ವೇಳೆ ಅತಿ ಹೆಚ್ಚು ವಲಸೆ ಕಾರ್ಮಿಕರು ಜಿಲ್ಲೆಗೆ ಆಗಮಿಸಿದ್ದರು. ಇದರಿಂದ ತಿಳಿಯುತ್ತದೆ ಜಿಲ್ಲೆಯಲ್ಲಿ ಔದ್ಯೋಗಿಕ ವಲಯ ಎಷ್ಟು ಹಿಂದುಳಿದಿದೆ ಎಂಬುದು.

ಕಾರ್ಯಾರಂಭ ಮಾಡದ ಕಚೇರಿಗಳು

ಜಿಲ್ಲೆಯಲ್ಲಿ ಗುರುಮಠಕಲ್‌, ವಡಗೇರಾ, ಹುಣಸಗಿ ತಾಲ್ಲೂಕು ಕೇಂದ್ರಗಳಾಗಿ ಘೋಷಿಸಿ ಮೂರು ವರ್ಷ ಕಳೆದರೂ ಪೂರ್ಣ ಪ್ರಮಾಣದ ಕಚೇರಿಗಳು ಕಾರ್ಯಾರಂಭ ಮಾಡಿಲ್ಲ. ಇದರಿಂದ ಹಳೆ ತಾಲ್ಲೂಕು ಕೇಂದ್ರಗಳಿಗೆ ಸಾರ್ವಜನಿಕರ ಅಲೆದಾಟ ಇನ್ನೂ ತಪ್ಪಿಲ್ಲ. ಕಚೇರಿಗಳೇ ಇಲ್ಲದಿದ್ದರಿಂದ ಅಭಿವೃದ್ಧಿ ಇಲ್ಲಿ ಗೌಣವಾಗಿದೆ ಎನ್ನುವುದು ಈ ತಾಲ್ಲೂಕುಗಳ ಜನರ ಅಭಿಪ್ರಾಯವಾಗಿದೆ.

ಸ್ಥಾಪನೆಯಾಗದ ಕೈಗಾರಿಕೆಗಳು

ಜಿಲ್ಲೆಯಲ್ಲಿ ಕೈಗಾರಿಕಾ ವಲಯ ಸ್ಥಾಪಿಸಲು ಹಿಂದಿನ ಸರ್ಕಾರಗಳು ಭೂಮಿ ವಶಪಡಿಸಿಕೊಂಡಿರುವುದೇ ದೊಡ್ಡ ಸಾಧನೆಯಾಗಿದೆ. ಇದರಿಂದ ಸ್ಥಳೀಯರಿಗೆ ಯಾವುದೇ ಉಪಯೋಗವಿಲ್ಲದಂತಾಗಿದೆ ಎನ್ನುವುದು ಜಿಲ್ಲೆಯ ಜನರ ಆರೋಪವಾಗಿದೆ.

ತಾಲ್ಲೂಕಿನ ಕಡೇಚೂರು–ಬಾಡಿಯಾಳ ಸೀಮೆಯಲ್ಲಿ ಕೈಗಾರಿಕಾ ವಲಯ ಸ್ಥಾಪನೆಗೆ 3,300 ಎಕರೆ ಜಮೀನು ವಶಪಡಿಸಿಕೊಳ್ಳಲಾಗಿದೆ. ಆದರೆ, ಸೂಕ್ತ ಕೈಗಾರಿಕೆಗಳು ಬರದೆ ಇದು ಈಗ ರಾಸಾಯನಿಕ ಔಷಧಿ ಕಂಪನಿಗಳಿಗೆ ಜಾಗ ಮಾಡಿಕೊಟ್ಟಂತೆ ಆಗಿದೆ. ಭೂಮಿ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರವೂ ಬಂದಿಲ್ಲ.

ಸಿಗದ ಪರಿಹಾರ

ಜಿಲ್ಲೆಯಲ್ಲಿ ಈ ಬಾರಿ ಎರಡು ನದಿ ಮತ್ತು ಅತ್ಯಧಿಕ ಮಳೆಯಿಂದ ಸಾಕಷ್ಟು ಬೆಳೆ ನಷ್ಟವಾಗಿದೆ. ಆದರೆ, ಸಮರ್ಪಕ ಪರಿಹಾರ ವಿತರಣೆಯಲ್ಲಿ ರೈತರಿಗೆ ಪರಿಹಾರ ಸಿಕ್ಕಿಲ್ಲ ಎನ್ನುವುದು ರೈತರ ಆರೋಪವಾಗಿದೆ.

‘ಜಿಲ್ಲೆಯಲ್ಲಿ ಹತ್ತಿ ಮತ್ತು ಭತ್ತದ ಬೆಳೆಗಳು ಸಾಕಷ್ಟು ಹಾನಿಯಾಗಿವೆ. ಎಕರೆಗೆ ಹತ್ತರಿಂದ ಹದಿನೈದು ಕ್ವಿಂಟಲ್ ಇಳುವರಿ ಬರುತ್ತಿತ್ತು. ಆದರೆ, ಈ ಬಾರಿ 1 ರಿಂದ 2 ಕ್ವಿಂಟಲ್‌ ಮಾತ್ರ ಬಂದಿವೆ. ಇದರಿಂದ ಮುಖ್ಯಮಂತ್ರಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು’ ಎನ್ನುತ್ತಾರೆ ಅರುಣಕುಮಾರ ಗುಂಜಪ್ಪನೊರ.

ಜಿಲ್ಲೆಯು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ರಾಜಕೀಯ, ಆರೋಗ್ಯ ಕ್ಷೇತ್ರದಲ್ಲಿ ಹಿಂದುಳಿದಿದೆ. ಇದನ್ನು ಯಡಿಯೂರಪ್ಪ ಅಳಿಸಿ ಹಾಕಲಿ ಎನ್ನುವುದು ಜಿಲ್ಲೆಯ ಜನರ ಆಶಯವಾಗಿದೆ.

***

ಬಿಎಸ್‌ವೈ ಘೋಷಿಸಿದ್ದ ಜಿಲ್ಲೆ

2009ಕ್ಕೂ ಮುಂಚೆ ಯಾದಗಿರಿ ಕಲಬುರ್ಗಿ ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರವಾಗಿತ್ತು. 2008ರಲ್ಲಿ ಕಲಬುರ್ಗಿಯಲ್ಲಿ ಸಚಿವ ಸಂಪುಟ ಸಭೆ ಆಗಿತ್ತು. ಆಗ ಕಲಬುರ್ಗಿ ಜಿಲ್ಲೆಯನ್ನು ವಿಭಜಿಸಿ ಯಾದಗಿರಿ ಪಟ್ಟಣವನ್ನು ಕೇಂದ್ರವಾಗಿಸಿಕೊಂಡು ಹೊಸ ಜಿಲ್ಲೆ ರಚಿಸಲು ಅಂತಿಮ ನಿರ್ಣಯ ಕೈಗೊಳ್ಳಲಾಗಿತ್ತು. ಈ ನಿರ್ಣಯವನ್ನು ಆಗಿನ ಮುಖ್ಯಮಂತ್ರಿ ಆಗಿದ್ದ ಬಿ.ಎಸ್‌.ಯಡಿಯೂರಪ್ಪ ಕೈಗೊಂಡಿದ್ದರು. ಈಗ ಅದೇ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ.

2009ರ ಡಿಸೆಂಬರ್ 23ರಂದು ವಿಧಾನಸಭೆಯಲ್ಲಿ ಅಧಿಕೃತ ಜಿಲ್ಲೆಯಾಗಿ ಘೋಷಿಸಲಾಯಿತು. ನಂತರ 2009ರ ಡಿಸೆಂಬರ್ 31ರಂದು ಅಂತಿಮ ಅಧಿಸೂಚನೆ ನಂತರ ಯಾದಗಿರಿ ಜಿಲ್ಲೆ ಅಸ್ತಿತ್ವಕ್ಕೆ ಬಂದಿದೆ.

***

ಸಿಎಂ ಶಂಕುಸ್ಥಾಪನೆ, ಚಾಲನೆ ನೀಡಲಿರುವ ಕಾಮಗಾರಿ ವಿವರ

ಯಾದಗಿರಿ ವೈದ್ಯಕೀಯ ಶಿಕ್ಷಣ ಸಂಸ್ಥೆ (₹325 ಕೋಟಿ)

300 ಹಾಸಿಗೆಗಳ ನೂತನ ಜಿಲ್ಲಾಸ್ಪತ್ರೆ (₹56 ಕೋಟಿ)

ಭೀಮಾ ನದಿ ಹೊಸ ಜಾಕ್‌ವೆಲ್‌ ನಿರ್ಮಾಣ (₹19.90 ಕೋಟಿ)

ಕೊಳ್ಳೂರು (ಎಂ)ಗ್ರಾಮದಲ್ಲಿ 110/11 ಕೆವಿ ವಿದ್ಯುತ್ ಉಪಕೇಂದ್ರ ಸ್ಥಾಪನೆ (₹6 ಕೋಟಿ)

ವಡಗೇರಾ–ತುಮಕೂರ–ಸಂಗಮ ರಸ್ತೆ ಅಭಿವೃದ್ಧಿ (₹4.80 ಕೋಟಿ)

ಒಟ್ಟಾರೆ ಅಂದಾಜು ಮೊತ್ತ (₹536.91 ಕೋಟಿ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.