ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ಜಿಲ್ಲೆಯ ಕೆರೆಗಳ ಸಂರಕ್ಷಣೆಗಿಲ್ಲ ಆದ್ಯತೆ

ಸಣ್ಣ ನೀರಾವರಿ, ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ 352 ಕೆರೆಗಳು, ಗಡಿ ಗುರುತಿಸದ ಅಧಿಕಾರಿಗಳು
Last Updated 22 ಫೆಬ್ರುವರಿ 2021, 4:09 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಸಣ್ಣ ನೀರಾವರಿ ಮತ್ತು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ 352 ಕೆರೆಗಳಿವೆ. ಅವುಗಳಲ್ಲಿ ಬಹುತೇಕ ಕಡೆ ನಾಮಫಲಕ ಹಾಕಿಲ್ಲ. ಗಡಿ ಗುರುತಿಸಿಲ್ಲ. ಇದರಿಂದ ಎಲ್ಲೆಡೆಯೂಒತ್ತುವರಿಯಾಗಿದೆ.

ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ ಹೆಸರಿಗೆ ಮಾತ್ರ ಇರುವಂತಿದೆ. ಕೆರೆಗಳ ಒತ್ತುವರಿಯಾಗುತ್ತಿದ್ದರೂ ಯಾವುದೇ ಕ್ರಮ ಕೈಗೊಂಡ ನಿದರ್ಶನಗಳಿಲ್ಲ ಎಂದು ಪರಿಸರವಾದಿಗಳು ಬೇಸರ ವ್ಯಕ್ತಪಡಿಸುತ್ತಾರೆ.

ಹೈದರಾಬಾದ್‌ ನಿಜಾಮರ ಆಳ್ವಿಕೆ ವೇಳೆ ಯಾದಗಿರಿ,ಗುರುಮಠಕಲ್‌ ತಾಲ್ಲೂಕಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೆರೆಗಳನ್ನು ನಿರ್ಮಿಸಲಾಗಿದೆ. ಆದರೆ, ಬಹುತೇಕ ಕಡೆ ನಿರ್ಲಕ್ಷ್ಯಕ್ಕೆ ಒಳಗಾಗಿ ಕೆರೆಗಳು ಜಮೀನುಗಳಾಗಿ ಮಾರ್ಪಟ್ಟಿವೆ.

ಆಶಾನಾಳ ಗ್ರಾಮದ ಬೂಸನಾಯಕ ಕೆರೆ, ಕಟಗಿ ಶಹಾಪುರ, ಕಡೇಚೂರಿನಲ್ಲಿ ಸೋಮಾದೇವಿಕೆರೆಗಳು 100ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿವೆ. ಇಂದಿಗೂ ಕೆರೆಗಳ ಸರ್ವೆ ನಂಬರ್‌ ರೈತರ ಹೆಸರಿನಲ್ಲಿವೆ. ಜಿಲ್ಲೆಯಲ್ಲಿ 8 ರಿಂದ 10 ಕೆರೆಗಳನ್ನು ಹೊಸದಾಗಿ ನಿರ್ಮಿಸಲಾಗಿದ್ದು, ಅವುಗಳಿಗೆ ಗಡಿ ಗುರ್ತಿಸಿ, ನಾಮಫಲಕ ಹಾಕಲಾಗಿದೆ.

ಜಿಲ್ಲೆಯ ಗುರುಮಠಕಲ್‌ ತಾಲ್ಲೂಕಿನ ಗಡಿ ಗ್ರಾಮದ ನಸಲವಾಯಿ ವ್ಯಾಪ್ತಿಯಲ್ಲಿ ಮೂರು ಕೆರೆಗಳಿವೆ. ಕೆರೆಗಳು ತೆಲಂಗಾಣ ಜಾಗದಲ್ಲಿದ್ದರೆ, ನೀರು ಮತ್ತು ನೀರಾವರಿ ಎಲ್ಲ ಕರ್ನಾಟಕಕ್ಕೆ ಸೇರಿದ್ದಾಗಿದೆ. ಜಿಲ್ಲಾ ಪಂಚಾಯಿತಿಯಲ್ಲಿ ಸಣ್ಣ ಕೆರೆಗಳಿವೆ. ಸಣ್ಣ ನೀರಾವರಿ ಇಲಾಖೆಯಲ್ಲಿ 100ರಿಂದ 300 ಎಕರೆ ತನಕ ವಿಶಾಲ ವ್ಯಾಪ್ತಿ ಹೊಂದಿವೆ.

ಕುಡಿಯುವ ನೀರಿಗೆ ಯೋಗ್ಯವಲ್ಲ:

ಜಿಲ್ಲೆಯ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿರುವ 71 ಕೆರೆಗಳು ಕುಡಿಯುವ ನೀರು ಬಳಕೆಗೆ ಯೋಗ್ಯವಿಲ್ಲ. ನೀರಾವರಿಗೆ ಮಾತ್ರ ಬಳಸಬಹುದು. ಅಲ್ಲದೆ ಕೆರೆ ನೀರನ್ನು ಕುಡಿಯಲು ಯಾರೂ ಬಳಸುತ್ತಿಲ್ಲ. ನೀರನ್ನು ಪರೀಕ್ಷಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ನೆರೆ ಜಿಲ್ಲೆಗೆ ನೀರು:

ವಿಜಯಪುರ ಜಿಲ್ಲೆಯ ಗ್ರಾಮಗಳಿಗೆ ಅಲ್ಲಿನ ಜಿಲ್ಲಾಡಳಿತ ಮುದ್ದೇಬಿಹಾಳ ತಾಲ್ಲೂಕಿನ 18 ಗ್ರಾಮಗಳಿಗೆ ನೀರು ಪೂರೈಸಲು ಜಿಲ್ಲೆಯ ಅಂಬಲಿಹಾಳ ಗ್ರಾಮದ 12 ಎಕರೆ ಪ್ರದೇಶದಲ್ಲಿ ಕೃಷ್ಣಾ ಮೇಲ್ದಂಡೆಯ ಮುಖ್ಯ ಕಾಲುವೆಯ ನೀರನ್ನು ಬಳಸಿ ಕೆರೆ ನಿರ್ಮಿಸಿಕೊಂಡಿದೆ. ಆ ಮೂಲಕ ವಿಜಯಪುರ ಜಿಲ್ಲೆಯ 14 ಹಳ್ಳಿಗಳಿಗೆ ಪೈಪ್‌ಲೈನ್ ಮುಖಾಂತರ ನೀರು ಹರಿಸುತ್ತಿದ್ದಾರೆ. ಆದರೆ, ನಮ್ಮ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದರೂ ಇಂಥ ಯೋಜನೆಯನ್ನು ಜಾರಿಗೆ ತಂದಿಲ್ಲ ಎಂದು ರೈತರು ಹೇಳುತ್ತಾರೆ.

ಜಿಲ್ಲಾಧಿಕಾರಿ ಮಾತಿಗೆ ಬೆಲೆ ಇಲ್ಲ:

ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರು ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾಮಟ್ಟದ ಸಭೆ ನಡೆಸಿದ್ದರು. ಆ ಸಭೆಯಲ್ಲಿ ಕೆರೆಗಳ ಸಂರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಈಚೆಗೆ ಸಲಹೆ ನೀಡಿದ್ದರು.

ಕೆರೆಗಳ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ ಒತ್ತುವರಿಯಾಗಿದ್ದರೆ ತೆರವುಗೊಳಿಸುವಂತೆ ತಿಳಿಸಿದ್ದರು. ಸಭೆ ನಡೆಸಿ 18 ದಿನಗಳಾದರೂ ಅಧಿಕಾರಿಗಳು ಇಲ್ಲಿಯವರೆಗೆ ಒತ್ತುವರಿ ತೆರವುಗೊಳಿಸಿಲ್ಲ. ಕೆರೆಗಳ ಸುತ್ತ ಗಿಡ ಬೆಳೆಸಿ ವಾಯು ವಿಹಾರಕ್ಕೆ ತೆರಳುವ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು. ಆದರೆ, ಅಧಿಕಾರಿಗಳು ಮಾತ್ರ ಈವರೆಗೂ ಒತ್ತುವರಿ ತೆರವುಗೊಳಿಸಲು ಮುಂದಾಗಿಲ್ಲ ಎಂಬ ದೂರುಗಳಿವೆ.

ಖಾಸಗಿ ಒಡೆತನದಲ್ಲಿ ಕೆರೆಗಳು:

ಜಿಲ್ಲೆಯ ಬಹುತೇಕ ಕಡೆ ಖಾಸಗಿ ವ್ಯಕ್ತಿಗಳ ಒಡೆತನದಲ್ಲಿ ಕೆರೆಗಳಿವೆ. ಸರ್ಕಾರಕ್ಕೆ ಸಂಬಂಧಿಸಿದ ಕೆರೆ ಎಂದು ಹೇಳಿಕೊಳ್ಳುವ ಯಾವ ಆಧಾರವೂ ಇಲ್ಲ ಎಂದು ಖುದ್ದು ಅಧಿಕಾರಿಗಳೇ ಹೇಳುತ್ತಾರೆ.

‘ಕೆರೆ ಒತ್ತುವರಿ ತೆರವು ಮಾಡಲು ತೆರಳಿದರೆ ಖಾಸಗಿ ವ್ಯಕ್ತಿಗಳ ತಮ್ಮ ಸರ್ವೆ ನಂಬರ್‌ ತಂದು ತೋರಿಸುತ್ತಾರೆ. ಇಂದಿಗೂ ಸರ್ಕಾರದ ಹೆಸರಿಗೆ ಮಾತ್ರ ಕೆರೆಗಳಿವೆ. ಆದರೆ, ದಾಖಲೆಗಳು ಮಾತ್ರ ರೈತರ ಹೆಸರಿನಲ್ಲಿವೆ. ಹೀಗಾಗಿ ದೊಡ್ಡಮಟ್ಟದಲ್ಲಿ ಮಾತ್ರ ಬದಲಾವಣೆ ತರಲು ಸಾಧ್ಯ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಸಣ್ಣ ನೀರಾವರಿ ಇಲಾಖೆಯ ಕೆರೆಗಳು

ಯಾದಗಿರಿ;31
ಗುರುಮಠಕಲ್‌;25
ಶಹಾಪುರ;6
ವಡಗೇರಾ;3
ಸುರಪುರ;4
ಹುಣಸಗಿ;2
ಒಟ್ಟು;71

ಆಧಾರ: ಸಣ್ಣ ನೀರಾವರಿ ಇಲಾಖೆ

ಜಿಲ್ಲೆಯ ಕೆರೆಗಳ ವಿವರ

ತಾಲ್ಲೂಕು;ಪಂಚಾಯತ್‌ ರಾಜ್‌ ಎಂಜಿನಿಯರ್;ಸಣ್ಣ ನಿರಾವರಿ ಇಲಾಖೆ;ಒಟ್ಟು
ಯಾದಗಿರಿ;190;56;246
ಶಹಾಪುರ;60;09;69
ಸುರಪುರ;31;06;37
ಒಟ್ಟು;281;71;352

ಲುಂಬಿನಿ (ಸಣ್ಣಕೆರೆ) ಮಾತ್ರ ಅಭಿವೃದ್ಧಿ

ಯಾದಗಿರಿ: ನಗರದ ಹೃದಯಭಾಗದಲ್ಲಿರುವ ಲುಂಬಿನಿ (ಸಣ್ಣಕೆರೆ) ಮಾತ್ರ ಅಭಿವೃದ್ಧಿಯಾಗಿದ್ದು, ಇದು ನಗರಸಭೆ ವ್ಯಾಪ್ತಿಗೆ ಒಳಪಟ್ಟಿದೆ. ₹5 ಕೋಟಿಗೂ ಹೆಚ್ಚು ಅನುದಾನದಲ್ಲಿ ವಿವಿಧ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ, ಕಳೆದ ಮಳೆಗಾಲದಲ್ಲಿ ನೀರು ಹೆಚ್ಚು ಬಂದು ಅಸ್ತವ್ಯಸ್ತವಾಗಿದೆ. ಇನ್ನೂ ಪೂರ್ಣ ಪ್ರಮಾಣದಲ್ಲಿ ದುರಸ್ತಿಯಾಗಿಲ್ಲ.

ನಗರದ ಚರಂಡಿ ನೀರನ್ನು ಸಣ್ಣ ಕೆರೆಗೆ ಹರಿಸಲಾಗುತ್ತಿದೆ ಎನ್ನುವ ಆರೋಪ ಸಾರ್ವಜನಿಕರದ್ದು. ಮಕ್ಕಳ ಆಟಿಕೆ ಸಾಮಾನುಗಳು ತುಕ್ಕು ಹಿಡಿದು ಉಪಯೋಗಕ್ಕೆ ಬಾರದಂತಾಗಿವೆ.

ಚರಂಡಿ ನೀರನ್ನು ದೊಡ್ಡಕೆರೆಗೆ ಹರಿಸಲಾಗುತ್ತಿದೆ. ಇದರಿಂದ ನೀರು ದುರ್ವಾಸನೆ ಬೀರುತ್ತಿದೆ. ಕಸ, ಕಡ್ಡಿ ತ್ಯಾಜ್ಯ ಬಿದ್ದಿದೆ. ಪಾಚಿಕಟ್ಟಿದ್ದು, ನೀರು ಕಲುಷಿತಗೊಂಡಿವೆ.

ನಿರ್ವಹಣೆ ಇಲ್ಲದೆ ಸೊರಗಿರುವ ಕೆರೆಗಳು

ಸುರಪುರ: ಅವಿಭಿಜಿತ ಸುರಪುರ ತಾಲ್ಲೂಕಿನಲ್ಲಿ ಸಾಕಷ್ಟು ಕೆರೆಗಳಿವೆ. ಆದರೆ, ನಿರ್ವಹಣೆಯಿಲ್ಲದೆ ಸೊರಗುತ್ತಿವೆ. ಕೆಲವು ಒತ್ತುವರಿಯಾಗಿವೆ. ಇನ್ನು ಕೆಲವು ಹೂಳು, ಪಾಚಿ, ಜಾಲಿಗಿಡಗಳಿಂದ ವಿಸ್ತಾರ ವ್ಯಾಪ್ತಿ ಕಳೆದುಕೊಂಡಿವೆ.

ಜಿಲ್ಲಾ ಪಂಚಾಯಿತಿ ಸುಪರ್ದಿಯಲ್ಲಿ ಒಟ್ಟು 31 ಕೆರೆಗಳು ಇವೆ. ಅವುಗಳಲ್ಲಿ ಒತ್ತುವರಿಯಾಗಿದ್ದ ಕೆಲ ಕೆರೆಗಳನ್ನು ತೆರವುಗೊಳಿಸುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. 12 ಕೆರೆಗಳ ಹೆಚ್ಚುವರಿ ನೀರನ್ನು ಕೆಳಗಿನ ರೈತರು ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಾರೆ. ಬೇಸಿಗೆ ದಿನಗಳಲ್ಲಿ ನೀರು ಇಲ್ಲದಾಗ ಕೆರೆ ಜಾಗದಲ್ಲಿ ಬೇಸಾಯ ಮಾಡುತ್ತಾರೆ.

ಮಾಲಗತ್ತಿಯ ಮಶಾಕನ ಕೆರೆ 159 ಎಕರೆ, ಭೈರಿಮಡ್ಡಿಯ ಸರ್ಕಾರಿ ಕೆರೆ 56 ಎಕರೆ, ಬೋನ್ಹಾಳ ಕೆರೆ 676 ಎಕರೆ, ಜಾಲಿಬೆಂಚಿಯ ಸರ್ಕಾರಿ ಕೆರೆ 104 ಎಕರೆ ಹೆಚ್ಚು ವಿಸ್ತಾರ ವ್ಯಾಪ್ತಿ ಹೊಂದಿವೆ.

ಮಾಲಗತ್ತಿ ಕೆರೆ, ಹಸನಾಪುರ ವಾರಿ ಕೆರೆ, ಹಸನಾಪುರ ಕುಂಚನಕೆರೆ, ಜಾಲಿಬೆಂಚಿ ಕೆರೆ, ಗೌಡಗೇರಾ ಕೆರೆ, ಗೋಡಿಹಾಳ ಕೆರೆ, ದೇವರಗೋನಾಲ ಕೆರೆ ಮೀನುಗಾರಿಕೆ ಇಲಾಖೆಯ ಸುಪರ್ದಿಯಲ್ಲಿ ಬರುತ್ತವೆ. ಇಲ್ಲಿ ಮೀನು ಸಾಕಾಣಿಕೆ ಮತ್ತು ಬೇಟೆಗೆ ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಟೆಂಡರ್ ನಡೆಯುತ್ತದೆ.

ಬಹುತೇಕ ಕೆರೆಗಳ ನಿರ್ವಹಣೆ ಇಲ್ಲ. ಅವುಗಳಲ್ಲಿ ಹೂಳು, ಪಾಚಿ, ದಂಡೆಯಲ್ಲಿ ಜಾಲಿಗಿಡಗಳು ಬೆಳೆದಿವೆ. ಕೆಲವು ಅತಿಕ್ರಮಣವಾಗಿವೆ. ಹೀಗಾಗಿ ಅಂಥ ಕೆರೆಗಳ ವಿಸ್ತಾರ ವ್ಯಾಪ್ತಿ ಕಡಿಮೆಯಾಗುತ್ತಿದೆ.

ಸನ್ನತಿ ಯೋಜನೆಯಿಂದ ಬಾರದ ನೀರು

ಯರಗೋಳ: ಹತ್ತಿಕುಣಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ಯರಗೋಳ ದೊಡ್ಡ ಕೆರೆಗೆ ಸನ್ನತಿ ಯೋಜನೆಯ ನೀರು ತಲುಪಿಲ್ಲ. ಆದರೆ, ಕಾಮಗಾರಿ ಮಾತ್ರ ಪ್ರಗತಿಯಲ್ಲಿದೆ.

ಬಾಚವಾರ ಗ್ರಾಮದ ಕೆರೆಯ ಒಡ್ಡಿನ ಮಣ್ಣು ಹಲವು ಸಲ ಕುಸಿದಿದೆ. ನಾಮಫಲಕಗಳಿಲ್ಲ. ಖಾನಳ್ಳಿ ಗ್ರಾಮದ ಕೆರೆಯ ಒಡ್ಡು ಒಡೆದು ಸುಮಾರು 4 ವರ್ಷ ಕಳೆದಿವೆ. ಜೋರು ಮಳೆಯಾದರೆ ಸಂಪೂರ್ಣ ಕೊಚ್ಚಿಕೊಂಡು ಹೋಗುವ ಸಾಧ್ಯತೆ ಇದೆ ಎನ್ನುತ್ತಾರೆ ಗ್ರಾಮಸ್ಥರು.

‘ಕಳೆದ ಸಾಲಿನಲ್ಲಿ ಸುರಿದ ಜೋರು ಮಳೆಗೆ ಚಾಮನಳ್ಳಿ ಕೆರೆ ತುಂಬಿ ಹೊಲಗಳಲ್ಲಿ ನೀರು ಹೊಕ್ಕಿತ್ತು. ಕೆಲವರು ಕೆರೆಯ ಒಡ್ಡು ಕಿತ್ತು ಹಾಕಿದ್ದು, ಇಂದಿಗೂ ದುರಸ್ತಿಯಾಗಿಲ್ಲ. ಇದೇ ಗ್ರಾಮದ ವ್ಯಾಪ್ತಿಯಲ್ಲಿರುವ ತಿಮ್ಮನಾಯಕನ ಕೆರೆಯು ಖಾಸಗಿಯವರ ಪಾಲಗುತ್ತಿದೆ’ ಎಂದು ಮುದುಕಪ್ಪ ಆರೋಪಿಸಿದರು.

ಯರಗೋಳ ಕೆರೆಯ ಅಂಕಿ-ಅಂಶಗಳು

24 ಚದುರ ಕಿ.ಮೀ ಕೆರೆಯ ಜಲಾನಯನ ಪ್ರದೇಶ
129.28 ಹೆಕ್ಟೇರ್ ನೀರು ನಿಲ್ಲುವ ಪ್ರದೇಶ
5.08 ಕ್ಯುಸೆಕ್ ನೀರಿನ ಸಾಮರ್ಥ್ಯ
364 ಮೀ ಕೆರೆಯ ಒಡ್ಡು ಪ್ರದೇಶ
202 ಹೆಕ್ಟೇರ್ ನೀರಾವರಿ ಪ್ರದೇಶ

‘ವಿಶಾಲ ಕೆರೆ ಅಭಿವೃದ್ಧಿ ಪಡಿಸಲಿ’

ಹುಣಸಗಿ: ತಾಲ್ಲೂಕಿನ ಬಲಶೆಟ್ಟಿಹಾಳ ಮತ್ತು ರಾಯನಪಾಳಾ ಗ್ರಾಮಗಳಲ್ಲಿ ಮಾತ್ರ ಹಿಂದಿನಿಂದಲೂ ಕೆರೆಗಳಿದ್ದು, ಸದ್ಯ ನಿರ್ವಹಣೆಗೆ ಆದ್ಯತೆ ನೀಡಬೇಕಿದೆ.

ತಾಲ್ಲೂಕಿನ ಬಲಶೆಟ್ಟಿಹಾಳ ಗ್ರಾಮದಲ್ಲಿ ಸ.ನಂ 67/1ರಲ್ಲಿ 25.30 ಎಕರೆ ಹಾಗೂ 67/2 ರಲ್ಲಿ 16.5 ಎಕರೆ ಪ್ರದೇಶದಲ್ಲಿ ವಿಶಾಲವಾದ ಕೆರೆ ಇದ್ದು, ನೀರು ಕೂಡಾ ಇದೆ. ಆದರೆ, ಕೆಲಭಾಗ ಒತ್ತುವರಿಯಾಗಿದೆ. ಕೆರೆಯ ಅಂಗಳಲ್ಲಿ ಕೆಲವರು ಮನೆ ನಿರ್ಮಿಸಿಕೊಂಡಿದ್ದಾರೆ. ರಾಯನಪಾಳಾ ಗ್ರಾಮದಲ್ಲಿ ಸರ್ವೆ ನಂ.1 ರಲ್ಲಿ ಅಂದಾಜು 25 ಎಕರೆ ಪ್ರದೇಶದಷ್ಟು ಕೆರೆ ಇದೆ.

ಇನ್ನು ಮಾಳನೂರು ಗ್ರಾಮದ ಬಳಿ ಎಡದಂಡೆ ಮುಖ್ಯ ಕಾಲುವೆಯ ನೀರು ಬಳಸಿಕೊಂಡು ತಾಳಿಕೋಟೆ ಪಟ್ಟಣಕ್ಕೆ ನೀರು ಸರಬರಾಜು ಮಾಡಲು ಕೆರೆ ನಿರ್ಮಿಸಲಾಗಿದೆ. ಆ ಕೆರೆಯಿಂದ ನಮ್ಮ ಗ್ರಾಮಕ್ಕೂ ಸಿಹಿ ಕುಡಿಯುವ ನೀರು ಒದಗಿಸಬೇಕು ಎಂದು ಮಾರಲಬಾವಿ ಗ್ರಾಮಸ್ಥರು ಹೇಳುತ್ತಾರೆ.

‘ಹುಣಸಗಿ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ಅಡಿಯಲ್ಲಿ ಲಭ್ಯವಿರುವ ಜಮೀನು ಬಳಕೆ ಮಾಡಿಕೊಂಡು ಕುಡಿಯುವ ನೀರಿಗೆ ಆದ್ಯತೆ ನೀಡಬೇಕು ಎಂಬುದು ಪಟ್ಟಣದ ಬಹು ದಿನಗಳ ಬೇಡಿಕೆಯಾಗಿದ್ದು, ಇಂದಿನವರೆಗೂ ಕಾಲ ಕೂಡಿ ಬಂದಿಲ್ಲ’ ಎಂದು ಪಟ್ಟಣದ ರವಿ ಮಲಗಲದಿನ್ನಿ ಹೇಳುತ್ತಾರೆ.

ಕೆರೆಗಳ ಒತ್ತುವರಿ ತಡೆಗೆ ಗಡಿ ಗುರುತು ಹಾಕಿ

ಶಹಾಪುರ: ಕೆರೆಯಲ್ಲಿ ನೀರು ಸಂಗ್ರಹದಿಂದ ಅಂತರ್ಜಲಮಟ್ಟ ಹೆಚ್ಚಳವಾಗುತ್ತದೆ. ಕೆರೆಯ ಅಕ್ಕಪಕ್ಕದ ಜಮೀನುಗಳಲ್ಲಿ ಬೋರವೆಲ್ ಕೊರೆಯಿಸಿದರೆ ನೀರು ಲಭ್ಯವಾಗುತ್ತದೆ ಎಂಬ ಕಾರಣಕ್ಕೆ ತಾಲ್ಲೂಕಿನಲ್ಲಿ ಮೂರು ಕೆರೆಗಳ ಹೂಳೆತ್ತಿ ನೀರು ಸಂಗ್ರಹಿಸಲಾಗಿದೆ. ಆದರೆ, ಕೆರೆಯ ಒತ್ತುವರಿ ತೆರವಿಗೆ ಒಬ್ಬ ಅಧಿಕಾರಿಯೂ ಮುಂದಾಗುತ್ತಿಲ್ಲ ಎಂಬ ದೂರು ಕೇಳಿ ಬಂದಿವೆ.

ಕೃಷ್ಣಾ ಭಾಗ್ಯ ಜಲ ನಿಗಮದ ಅನುದಾನದಲ್ಲಿ ತಾಲ್ಲೂಕಿನ ಹೊಸಕೇರಾ, ನಡಿಹಾಳ ಎರಡು ಕೆರೆಗಳ ಹೂಳೆತ್ತಿ ನೀರು ಸಂಗ್ರಹಿಸಿದ್ದರಿಂದ ಅಲ್ಲಿನ ಸುತ್ತಮುತ್ತಲಿನ ಗ್ರಾಮದ ರೈತರ ಬದುಕು ಹಸಿರುಮಯವಾಗಿದೆ. ಇನ್ನೂ ಕೆಲ ಕೆರೆಗಳ ಹೂಳೆತ್ತುವ ಕಾರ್ಯ ಸಾಗಿದೆ.

‘ಕೆರೆ ನೀರು ಸಂಗ್ರಹದಿಂದ ಜಮೀನಿನಲ್ಲಿ ಕೊರೆಯಿಸಿದ ಬೊರವೆಲ್‌ಗಳಲ್ಲಿ ನೀರು ಸಾಕಷ್ಟು ಪ್ರಮಾಣದಲ್ಲಿ ಬರುತ್ತಿರುವುದರಿಂದ ತರಕಾರಿ ಬೆಳೆ ಬೆಳೆಯುತ್ತಿದ್ದೇವೆ. ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಣಿಸುವುದಿಲ್ಲ’ ಎಂಬ ವಿಶ್ವಾಸವನ್ನು ತಾಲ್ಲೂಕಿನ ನಡಿಹಾಳ ಗ್ರಾಮದ ಯುವಕ ರಾಜು ಚವಾಣ್‌ ವ್ಯಕ್ತಪಡಿಸಿದ್ದಾರೆ.

‘ಹೈದರಾಬಾದ್‌ ನಿಜಾಮನ ಆಳ್ವಿಕೆಯ ಕಾಲದಲ್ಲಿ ಅಂದಿನ ನಿಜಾಮರು ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಪ್ರತಿ ಗ್ರಾಮಕ್ಕೆ ಒಂದು ಕೆರೆ ನಿರ್ಮಿಸಿದ್ದರು. ಕಾಲ ಬದಲಾದಂತೆ ಕೆರೆಗಳು ಕರಗಿವೆ. ಖಾಸಗಿ ವ್ಯಕ್ತಿಗಳ ಒಡೆತನದಲ್ಲಿನ ಕೆರೆಗಳು ಭತ್ತದ ಗದ್ದೆಗಳಾಗಿ ಬದಲಾಗಿವೆ. ತಾಲ್ಲೂಕಿನಲ್ಲಿ ಕೆಲ ಕೆರೆಗಳು ನಿರ್ವಹಣೆ ಇಲ್ಲದೆ ಹಾಳಾಗಿವೆ. ಒಂದಿಷ್ಟು ಕೋಡಿ ಕಟ್ಟಿ ಇಲ್ಲವೇ ಚೆಕ್‌ ಡ್ಯಾಂ ನಿರ್ಮಿಸಿದರೆ ಮಳೆಗಾಲದಲ್ಲಿ ನೀರು ಸಂಗ್ರಹಕ್ಕೆ ಅನುಕೂಲವಾಗುತ್ತದೆ. ಅಲ್ಲದೆ ಕಾಲುವೆ ಹೆಚ್ಚುವರಿ ನೀರನ್ನು ಕೆರೆಗೆ ತುಂಬಿಸುವ ವ್ಯವಸ್ಥೆ ಮಾಡಬೇಕು’ ಎನ್ನುತ್ತಾರೆ ರೈತ ಮುಖಂಡ ಭಾಸ್ಕರರಾವ ಮುಡಬೂಳ.

‘ನಗರದಲ್ಲಿನ ಮಾವಿನ ಕೆರೆ ಹಾಗೂ ನಾಗರಕೆರೆಗಳಲ್ಲಿ ನೀರು ಸಂಗ್ರಹಿಸಲು ಹಲವು ವರ್ಷದಿಂದ ಮನವಿ ಮಾಡುತ್ತಲೇ ಬರಲಾಗುತ್ತಿದೆ. (ಪ್ರಸಕ್ತ ಬಾರಿ ಉತ್ತಮ ಮಳೆಯಾಗಿದ್ದರಿಂದ ಕೆರೆಯಲ್ಲಿ ನೀರು ಸಂಗ್ರಹವಿದೆ). ನಗರದಲ್ಲಿನ ಕೆರೆಗಳ ಒತ್ತುವರಿ ಮಾಡಿಕೊಳ್ಳಲಾಗಿದೆ. ಸಂರಕ್ಷಣೆಗೆ ಒಬ್ಬ ಅಧಿಕಾರಿಯೂ ಮುಂದಾಗುತ್ತಿಲ್ಲ’ ಎನ್ನುತ್ತಾರೆ ಅವರು.

***

ಪೂರಕ ವರದಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ, ಭೀಮಶೇನರಾವ ಕುಲಕರ್ಣಿ, ತೋಟೇಂದ್ರ ಎಸ್ ಮಾಕಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT