ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೌದ್ಧ ಧರ್ಮ ಸ್ವೀಕಾರ: ಹಿಂದೂ ದೇವರ ಚಿತ್ರ ನದಿಯಲ್ಲಿ ವಿಸರ್ಜನೆ

Last Updated 11 ಅಕ್ಟೋಬರ್ 2022, 4:36 IST
ಅಕ್ಷರ ಗಾತ್ರ

ಸುರಪುರ (ಯಾದಗಿರಿ ಜಿಲ್ಲೆ): ನಗರದ ಗೋಲ್ಡರ್‌ ಕೇವ್‌ ಬುದ್ಧ ವಿಹಾರದಲ್ಲಿ ಅಕ್ಟೋಬರ್ 14ರಂದು ನಡೆಯುವ ಬೌದ್ಧ ಧಮ್ಮ ದೀಕ್ಷಾ ಕಾರ್ಯಕ್ರಮದಲ್ಲಿ ಬುದ್ಧ ವಿಹಾರ ಟ್ರಸ್ಟ್‌ನ ಪದಾಧಿಕಾರಿಗಳು ಸೇರಿ 500ಕ್ಕೂ ಹೆಚ್ಚು ಮಂದಿ ಬೌದ್ಧ ಧರ್ಮ ಸ್ವೀಕರಿಸುವರು. ಹಿಂದೂ ಧರ್ಮ ತ್ಯಜಿಸುವ ಸಂಕೇತದ ರೂಪದಲ್ಲಿ ಸೋಮವಾರ ಟ್ರಸ್ಟ್‌ನ ಪದಾಧಿಕಾರಿಗಳು ಹಿಂದೂ ದೇವರ ಚಿತ್ರಗಳನ್ನು ಕೃಷ್ಣಾ ನದಿಯಲ್ಲಿ ವಿಸರ್ಜಿಸಿದರು.

‘ನಾನು ಮನೆಯಲ್ಲಿ ಪೂಜಿಸುತ್ತಿದ್ದ ವೆಂಕಟರಮಣ, ಸಾಯಿಬಾಬಾ ಮೂರ್ತಿ, ಲಕ್ಷ್ಮಿ, ಸರಸ್ವತಿ, ಗಣಪತಿ, ಕೃಷ್ಣ ರಾಧೆ ಮುಂತಾದ ದೇವರ ಚಿತ್ರಗಳನ್ನು ತಿಂಥಣಿ ಸೇತುವೆಗೆ ಒಯ್ದು, ಅಲ್ಲಿಂದ ನದಿಯಲ್ಲಿ ವಿಸರ್ಜಿಸಿರುವೆ’ ಎಂದು ಟ್ರಸ್ಟ್‌ನ ಅಧ್ಯಕ್ಷ ವೆಂಕಟೇಶ ಹೊಸಮನಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೌದ್ಧ ಧರ್ಮ ಸ್ವೀಕಾರಕ್ಕೆ ನನ್ನ ಪತ್ನಿ ಶಿವಮೊಗ್ಗೆಮ್ಮ ಮತ್ತು ಮೂವರ ಮಕ್ಕಳ ಸಂಪೂರ್ಣ ಒಪ್ಪಿಗೆ ಇದೆ. ಎಲ್ಲರೂ ಸಂತೋಷದಿಂದ ನನ್ನ ನಿರ್ಧಾರ ಸಹಮತ ವ್ಯಕ್ತಪಡಿಸಿದ್ದಾರೆ’ ಎಂದರು.

‘ಮಹಾರಾಷ್ಟ್ರದ ನಾಗಪುರದಲ್ಲಿ 1956ರ ಅಕ್ಟೋಬರ್ 14ರಂದು ಡಾ.ಅಂಬೇಡ್ಕರ್ ಅವರು ನಾಗಪುರದಲ್ಲಿ 5 ಲಕ್ಷ ಅನುಯಾಯಿಗಳ ಜೊತೆ ಬೌದ್ಧ ಧರ್ಮ ಸ್ವೀಕರಿಸಿದ್ದರು. ಈ ಪುಣ್ಯ ದಿನದಂದೇ ನಾವೆಲ್ಲರೂ ಬೌದ್ಧ ಧರ್ಮ ಸ್ವೀಕರಿಸುತ್ತೇವೆ’ ಎಂದರು. ಟ್ರಸ್ಟ್ ಉಪಾಧ್ಯಕ್ಷ ನಾಗಣ್ಣ ಕಲ್ಲದೇವನಹಳ್ಳಿ, ಪ್ರಮುಖರಾದ ಮಾಳಪ್ಪ ಕಿರದಳ್ಳಿ, ಭೀಮಣ್ಣ ಕಟ್ಟಿಮನಿ ಇದ್ದರು.

ಹಿಂದೂ ಧರ್ಮದಲ್ಲಿರುವ ಅಂಧಕಾರ, ಜಾತೀಯತೆ, ಶೋಷಣೆ, ಮೌಢ್ಯತೆಗೆ ಬೇಸತ್ತು ಕುಟುಂಬ ಸಮೇತ ಬೌದ್ಧ ಧರ್ಮ ಸ್ವೀಕರಿಸುತ್ತಿದ್ದೇನೆ.

- ವೆಂಕಟೇಶ ಹೊಸಮನಿ, ಫೋಟೋಗಳನ್ನು ವಿಸರ್ಜಿಸಿದವರು

ಬೌದ್ಧ ಧರ್ಮದಿಂದ ಜಾಗತಿಕ ಶಾಂತಿ, ನೆಮ್ಮದಿ ಸಾಧ್ಯ. ಸುರಪುರದಲ್ಲಿ ನಡೆಯುತ್ತಿರುವ ಧಮ್ಮ ದೀಕ್ಷೆ ಐತಿಹಾಸಿಕವಾದದ್ದು.

- ವರಜ್ಯೋತಿ ಭಂತೇಜಿ, ಟ್ರಸ್ಟ್ ಗೌರವಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT