ಯಾದಗಿರಿ: ಜಿಲ್ಲೆಯ ಗುಡ್ಡಗಳಲ್ಲಿ ಯಥೇಚ್ಛವಾಗಿ ಬೆಳೆದ ಸೀತಾಫಲ ಹಣ್ಣುಗಳನ್ನು ವ್ಯಾಪಾರಿಗಳು ಅರಣ್ಯಕ್ಕೆ ತೆರಳಿ ಕಿತ್ತು ತಂದು ನಗರ ಪ್ರದೇಶಗಳಲ್ಲಿ ಮಾರುತ್ತಿದ್ದಾರೆ.
ಯಾದಗಿರಿ ತಾಲ್ಲೂಕಿನ ಬಂದಳ್ಳಿ, ಯಡ್ಡಳ್ಳಿ, ಯರಗೋಳ, ಹತ್ತಿಕುಣಿ, ಆಶನಾಳ, ಬೆಳಗೇರಾ, ಅರಕೇರಾ (ಕೆ), ಕಟಗಿ, ಶಹಾಪುರ, ಗುರಮಠಕಲ್ ತಾಲ್ಲೂಕಿನ ಚಿಂತನಹಳ್ಳಿ, ಕಂದಕೂರ, ತಾತಳಗೇರಾ, ಬೋರಾಬಂಡ, ಧರ್ಮಪುರ, ಮಿನಸಾಪುರ ಸೇರಿದಂತೆ ವಿವಿಧ ಗುಡ್ಡಗಾಡು ಪ್ರದೇಶದಲ್ಲಿ ನೈಸರ್ಗಿಕವಾಗಿ ಸೀತಾಫಲ ಬೆಳೆದು ನಿಂತಿದೆ.
ಲಂಬಾಣಿ ಸಮಾಜದ ಮಹಿಳೆಯರು ನಗರದ ಹಳೆ ಬಸ್ ನಿಲ್ದಾಣದ ಮುಂಭಾಗದಲ್ಲಿ ಪ್ರತಿದಿನ ಬೆಳಿಗ್ಗೆ 7ರಿಂದ 10ಗಂಟೆವರೆಗೆ ಮಹಿಳೆಯರು ಬುಟ್ಟಿಗಳಲ್ಲಿ ತಂದು ಮಾರಾಟ ಮಾಡುತ್ತಿದ್ದಾರೆ. ಮಹಿಳೆಯರು ನೈಸರ್ಗಿಕ ಹಣ್ಣುಗಳನ್ನು ತಂದು ಮಾರಾಟ ಮಾಡುತ್ತಾ ಎರಡ್ಮೂರು ತಿಂಗಳು ಆರ್ಥಿಕ ಸ್ವಾವಲಂಬನೆ ಸಾಧಿಸುತ್ತಿದ್ದಾರೆ.
ಸಣ್ಣ ಗಾತ್ರ ಒಂದು ಹಣ್ಣಿಗೆ ₹10, ಮಧ್ಯಮ ಗಾತ್ರದ ಹಣ್ಣಿಗೆ ₹15 ಮಾರಾಟ ಮಾಡುತ್ತಿದ್ದಾರೆ. ಬುಟ್ಟಿಗೆ ಲೆಕ್ಕದಲ್ಲಿ ₹250, ₹300ಕ್ಕೆ ಮಾರಾಟ ಮಾಡುತ್ತಿದ್ದಾರೆ.
ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಗುಡ್ಡಗಳಲ್ಲಿ ಹಣ್ಣು ಸಿಗುತ್ತಿದೆ. ಮಧ್ಯಾಹ್ನ, ಸಂಜೆ ವೇಳೆ ಗಿಡದಿಂದ ಹಣ್ಣುಗಳನ್ನು ಕಿತ್ತು ತಂದು ಬೆಳಿಗ್ಗೆ ವೇಳೆಗೆ ಮಾರಾಟಕ್ಕೆ ತರುವುದು ವಾಡಿಕೆಯಾಗಿದೆ.
‘ಬೆಟ್ಟಗುಡ್ಡಗಳಲ್ಲಿ ಸೀತಾಫಲ ಸಿಗುವುದರಿಂದ ಯಾವುದೇ ರೋಗರುಜಿನ ಭಯವಿಲ್ಲ. ಹೀಗಾಗಿ ನಮ್ಮ ಮನೆಗೆ ಬೇಕಾದ ಹಣ್ಣುಗಳನ್ನು ತೆಗೆದುಕೊಂಡು ಹೋಗುತ್ತೇನೆ’ ಎಂದು ನಗರ ನಿವಾಸಿ ಹಣಮಂತ ಶೆಟ್ಟಿ ಹೇಳಿದರು.
‘ಗ್ರಾಮದ ಬೆಟ್ಟದಲ್ಲಿ ಬೆಳೆಯುವ ಸೀತಾಫಲ ಹಣ್ಣುಗಳನ್ನು ಗುತ್ತಿಗೆ ಪಡೆದಿದ್ದೇವೆ. ಒಂದು ಬುಟ್ಟಿಗೆ ಇಂತಿಷ್ಟು ಎಂದು ಮಾರಾಟಗಾರರಿಗೆ ಹಣ ನಿಗದಿ ಮಾಡಲಾಗಿದೆ. ಇದರಿಂದ ಅವರಿಗೆ, ನಮಗೂ ಇಬ್ಬರಿಗೂ ಲಾಭ ಆಗುತ್ತದೆ’ ಎಂದು ಗುತ್ತಿಗೆದಾರ ಬಸವರಾಜ ನಾಯಕ ಹೇಳಿದರು.
ಸೀತಾಫಲಕ್ಕಾಗಿ ಚಿರತೆ ಹುಲಿ ಪ್ರತ್ಯಕ್ಷ!
‘ಜಿಲ್ಲೆಯಲ್ಲಿ ಸೀತಾಫಲ ಸೀಸನ್‌ನಲ್ಲಿ ಚಿರತೆ ಹುಲಿ ಪ್ರತ್ಯಕ್ಷ ವದಂತಿ ಹಬ್ಬಿಸಲಾಗುತ್ತಿದೆ. ಇದು ಆಶ್ವರ್ಯವಾದರೂ ಸತ್ಯ’ ಎಂದು ಹಿರಿಯರಾದ ಸಿದ್ದಲಿಂಗಯ್ಯ ಸ್ವಾಮಿ ಹೇಳುತ್ತಾರೆ.
‘ಅರಣ್ಯ ಪ್ರದೇಶದಲ್ಲಿ ಅಪಾರ ಸೀತಾಫಲ ಗಿಡಗಳಿದ್ದು ಈ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಣ್ಣುಗಳು ಆಗುತ್ತವೆ. ಸಾರ್ವಜನಿಕರು ಅರಣ್ಯಕ್ಕೆ ತೆರಳಿ ಹಣ್ಣುಗಳನ್ನು ಕಿತ್ತುಕೊಳ್ಳುತ್ತಾರೆ. ಅಲ್ಲದೇ ಕೆಲವರು ನಗರ ಪ್ರದೇಶಗಳಲ್ಲಿ ಹಣ್ಣು ಮಾರಾಟ ಮಾಡುತ್ತಾರೆ. ಇದರಿಂದ ಗುತ್ತಿಗೆ ಪಡೆದವರಿಗೆ ನಷ್ಟವಾಗುತ್ತದೆ. ಹೀಗಾಗಿ ಅವರಲ್ಲಿ ಚಿರತೆ ಹುಲಿ ಭಯ ಹಬ್ಬಸಿದಿರೆ ಅವರು ಭಯದಲ್ಲಿ ಅರಣ್ಯ ಪ್ರದೇಶದಲ್ಲಿ ಓಡಾಡುವುದಿಲ್ಲ. ಹೀಗಾಗಿ ಕೆಲವರು ಕೃತಕವಾಗಿ ಸುಳ್ಳು ಸುದ್ದಿಯನ್ನು ಹಬ್ಬಿಸುತ್ತಾರೆ’ ಎನ್ನುತ್ತಾರೆ ಅವರು.
ಬುಟ್ಟಿ ಸೀತಾಫಲ ಮಾರಾಟ ಮಾಡಿದರೆ ₹250ರಿಂದ ₹300ರತನಕ ಹಣ ಸಿಗುತ್ತದೆ. ಬೆಳಿಗ್ಗೆ ಮಾತ್ರ ವ್ಯಾಪಾರ ಮಾಡುತ್ತಿದ್ದು ಮಧ್ಯಾಹ್ನಕ್ಕೆ ತಾಂಡಾ ಸೇರುತ್ತೇವೆ.ಗಿರಿಬಾಯಿ, ಸೀತಾಫಲ ಹಣ್ಣಿನ ವ್ಯಾಪಾರಿ
ಸಣ್ಣ ಮಧ್ಯಮ ದೊಡ್ಡ ಗಾತ್ರದ ಸೀತಾಫಲ ಹಣ್ಣುಗಳು ಮಾರುಕಟ್ಟೆಯಲ್ಲಿದ್ದು ಗ್ರಾಹಕರನ್ನು ಆಕರ್ಷಿಸುತ್ತವೆ. ಪ್ರತಿವರ್ಷ ಈ ಸೀಸನ್‌ನಲ್ಲಿ ತಪ್ಪದೇ ಹಣ್ಣು ಸೇವಿಸುತ್ತೇನೆ.ಶ್ವೇತಾ ಚಿಂತನಳ್ಳಿ, ತಾಂಡಾ ಗ್ರಾಹಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.