ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವದಾಸಿ ಪದ್ಧತಿ ಕಾನೂನಿಗೆ ವಿರುದ್ಧ

ನೊಂದ ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ತನ್ನಿ: ನ್ಯಾ.ಶಿವನಗೌಡ
Last Updated 27 ಸೆಪ್ಟೆಂಬರ್ 2019, 14:55 IST
ಅಕ್ಷರ ಗಾತ್ರ

ಯಾದಗಿರಿ: ಮೂಢನಂಬಿಕೆಯ ಮೂಲಕ ಆಚರಿಸಲಾಗುವ ದೇವದಾಸಿ ಪದ್ಧತಿಯು ಕಾನೂನಿಗೆ ವಿರುದ್ಧವಾಗಿದ್ದು, ಶಿಕ್ಷಾರ್ಹ ಅಪರಾಧವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ಶಿವನಗೌಡ ಹೇಳಿದರು.

ನಗರದ ತಾಲ್ಲೂಕು ಸ್ತ್ರೀ ಶಕ್ತಿ ಭವನದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದೇವದಾಸಿ ಪುನರ್ವಸತಿ ಯೋಜನೆ ಹಾಗೂ ಶಿಶು ಅಭಿವೃದ್ಧಿ ಯೋಜನೆ ಸಂಯುಕ್ತಾಶ್ರಯದಲ್ಲಿ ದೇವದಾಸಿಯರು ಹಾಗೂ ನೊಂದ ಮಹಿಳೆಯರಿಗಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು.

ಧಾರ್ಮಿಕ ಅಂಧಶ್ರದ್ಧೆ, ಮೂಢನಂಬಿಕೆ, ಆರ್ಥಿಕ ದುಸ್ಥಿತಿ, ಸಾಮಾಜಿಕ ಅಸಮಾನತೆ, ಅನಕ್ಷರತೆ, ಅಸ್ಪ್ಯಶ್ಯತೆ ಕಾರಣದಿಂದ ಮುಗ್ಧ ಹೆಣ್ಣು ಮಕ್ಕಳನ್ನು ದೇವರ ಹೆಸರಿನಲ್ಲಿ ಸಮರ್ಪಿಸಿ ದೇವದಾಸಿ ಎಂಬ ಅನಿಷ್ಠ ಪದ್ಧತಿಯ ಆಚರಣೆ ಮಾಡಲಾಗುತ್ತದೆ. ಇದು ಮಹಿಳಾ ಸಮಾಜಕ್ಕೆ ಕಳಂಕಪ್ರಾಯವಾಗಿದೆ. ಅಧಿಕಾರಿಗಳು ಇದರ ನಿರ್ಮೂಲನೆ ಹಾಗೂ ಮಾಜಿ ದೇವದಾಸಿಯರಿಗೆ ಪುನರ್ವಸತಿ ಕಲ್ಪಿಸುವ ಮೂಲಕ ಮುಖ್ಯ ವಾಹಿನಿಗೆ ತರಬೇಕು ಎಂದು ಸಲಹೆ ನೀಡಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಾಶ ಅರ್ಜುನ ಬನಸೊಡೆ ಮಾತನಾಡಿ, ದೇವದಾಸಿ ಹಾಗೂ ನೊಂದ ಮಹಿಳೆಯರ ಪಿಂಚಣಿ, ಆಸ್ತಿ, ಬ್ಯಾಂಕ್ ಲೋನ್ ಸೇರಿದಂತೆ ಇತರೆ ಯಾವುದೇ ಸಮಸ್ಯೆಗಳಿದ್ದರೆ ಅವರಿಗೆ ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಕಾನೂನು ಸೇವೆಗಳ ಪ್ರಾಧಿಕಾದ ವತಿಯಿಂದ ಉಚಿತವಾಗಿ ಕಾನೂನು ಸಲಹೆ ಮತ್ತು ಸೇವೆ ನೀಡಲಾಗುತ್ತದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪ್ರಭಾಕರ ಮಾತನಾಡಿ, ಮಾಜಿ ದೇವದಾಸಿಯರು ಹಾಗೂ ನೊಂದ ಮಹಿಳೆಯರು ಸರ್ಕಾರದ ಯೋಜನೆಗಳ ಬಗ್ಗೆ ತಿಳಿದುಕೊಳ್ಳಬೇಕು. ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.

ಡ್ಯಾಪ್ಕೂ ಕಚೇರಿ ಜಿಲ್ಲಾ ಮೇಲ್ವಿಚಾರಕಿ ಆರತಿ ಎಂ.ಧನಶ್ರೀ ಉಪನ್ಯಾಸ ನೀಡಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಧಾ ಜೆ.ಮಣ್ಣೂರು, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಸಿ.ಎಸ್. ಮಾಲಿಪಾಟೀಲ, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ನಾಗಯ್ಯ ಗುತ್ತೆದಾರ, ಕಾರ್ಯದರ್ಶಿ ವಿನಯಕುಮಾರ ಕುಲಕರ್ಣಿ ಇದ್ದರು.

ಕಾರ್ಯಕ್ರಮದಲ್ಲಿ ಮಾಜಿ ದೇವದಾಸಿಯರು, ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು. ಮೇಲ್ವಿಚಾರಕಿ ಶರಣಮ್ಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT