ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಸಿಎಂ ಆಪ್ತನಿಗೆ ಒಲಿದ ಅಧ್ಯಕ್ಷ ಸ್ಥಾನ, ಖರ್ಗೆ ಬೆಂಬಲಿಗರಿಗೆ ನಿರಾಸೆ

Published 1 ಮಾರ್ಚ್ 2024, 6:07 IST
Last Updated 1 ಮಾರ್ಚ್ 2024, 6:07 IST
ಅಕ್ಷರ ಗಾತ್ರ

ಯಾದಗಿರಿ: ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಟ್ಟಾ ಬೆಂಬಲಿಗರಿಗೆ ಈ ಬಾರಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಗಲಿದೆ ಎನ್ನುವ ನಿರೀಕ್ಷೆ ಹುಸಿಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಮರಿಗೌಡ ಪಾಟೀಲ ಅವರಿಗೆ ರಾಜ್ಯ ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಸ್ಥಾನ ಲಭಿಸಿದೆ.

ಯಾದಗಿರಿ ಮತ್ತು ಗುರುಮಠಕಲ್‌ ಮತಕ್ಷೇತ್ರದ ಕಾರ್ಯಕರ್ತರು, ಅಭಿಮಾನಿಗಳು ತೀವ್ರ ನಿರಾಶರಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತ‍ಪಡಿಸಿದ್ದಾರೆ.

ಜಿಲ್ಲೆಯಲ್ಲಿ ಯಾದಗಿರಿ, ಶಹಾಪುರ, ಸುರಪುರ, ಗುರುಮಠಕಲ್‌ ವಿಧಾನಸಭಾ ಕ್ಷೇತ್ರಗಳಿದ್ದು, ಮೂರು ಕಡೆ ಕಾಂಗ್ರೆಸ್‌ ಶಾಸಕರಿದ್ದಾರೆ. ಗುರುಮಠಕಲ್‌ ಮತಕ್ಷೇತ್ರದಲ್ಲಿ ಮಾತ್ರ ಜೆಡಿಎಸ್‌ ಶಾಸಕರಿದ್ದಾರೆ. ಈ ಬಾರಿ ನಮ್ಮ ಭಾಗದವರಿಗೆ ನಿಗಮ ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನ ಸಿಗುತ್ತದೆ ಎಂದು ಎರಡು ಕ್ಷೇತ್ರದ ಕಾರ್ಯಕರ್ತರು ಕಾಯುತ್ತಿದ್ದರು. ಆದರೆ, ಆದ್ಯತೆ ಸಿಕ್ಕಿಲ್ಲ.

ಶಹಾಪುರ ಮತಕ್ಷೇತ್ರಕ್ಕೆ ಈಗಾಗಲೇ ಸಚಿವ ಸ್ಥಾನ ಸಿಕ್ಕಿದೆ. ಈಗ ನಿಗಮ ಮಂಡಳಿಗೆ ಆಯ್ಕೆಯಾದವರು ಅದೇ ಕ್ಷೇತ್ರದವರು. ಹೀಗಾಗಿ ಸಹಜವಾಗಿ ಯಾದಗಿರಿ, ಗುರುಮಠಕಲ್‌ ಕ್ಷೇತ್ರದವರಿಗೆ ಅಸಮಾಧಾನ ಉಂಟಾಗಿದೆ.

ಅಸಮಾಧಾನ ಸ್ಫೋಟ: ಜಿಲ್ಲೆಯಲ್ಲಿ ಹಲವಾರು ವರ್ಷಗಳಿಂದ ಕಾಂಗ್ರೆಸ್‌ ಪಕ್ಷಕ್ಕಾಗಿ ದುಡಿದ ನಿಷ್ಠಾವಂತ ಕಾರ್ಯಕರ್ತರು ನಿಗಮ ಮಂಡಳಿ ಸ್ಥಾನ ಸಿಗುವುದೇ ಎನ್ನುವ ನಿರೀಕ್ಷೆಯಲ್ಲಿದ್ದರು. ಆದರೆ, ಅವಕಾಶ ಸಿಕ್ಕವರಿಗೆ ಮತ್ತೆ ಅಧಿಕಾರ ಸಿಕ್ಕಿರುವುದು ಯಾದಗಿರಿ, ಗುರಮಠಕಲ್‌ ಮತಕ್ಷೇತ್ರದ ಕಾರ್ಯಕರ್ತರಲ್ಲಿ ಆಕ್ರೋಶ ಸ್ಫೋಟಗೊಂಡಿದೆ.


ಈಗಾಗಲೇ ಮರಿಗೌಡ ಪಾಟೀಲ ಅವರು ಕುರಿ ಉಣ್ಣೆ ನಿಗಮ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ನೂತನ ಜಿಲ್ಲೆಯ ಅಧ್ಯಕ್ಷರಾಗಿ 12 ವರ್ಷಗಳ ಕಾಲ ಅಧಿಕಾರ ಅನುಭವಿಸಿದ್ದಾರೆ. ಇದರ ಜೊತೆಗೆ ಕೃಷ್ಣಾ ಕಾಡಾ ಅಧ್ಯಕ್ಷರಾಗಿದ್ದರು. ಇಷ್ಟೆಲ್ಲ ಅಧಿಕಾರ ಅನುಭವಿಸಿದವರಿಗೆ ಮತ್ತೆ ಮಣೆ ಹಾಕಿರುವುದು ಎಷ್ಟು ಸರಿ ಎಂದು ಕಾರ್ಯಕರ್ತರು ಸರ್ಕಾರವನ್ನು ಜಾಲತಾಣದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಮತ್ತೊಬ್ಬರಿಗೆ ಈ ಅವಧಿಯಲ್ಲಿ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಒದಗಿಸಿ ಕೊಡಬಹುದಿತ್ತು ಎಂಬುದು ಮಲ್ಲಿಕಾರ್ಜುನ ಖರ್ಗೆ ಬೆಂಬಲಿಗರ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗುತ್ತದೆ.

‘ಯಾದಗಿರಿ, ಗುರುಮಠಕಲ್‌ ಮತಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರು ಚುನಾವಣೆಯಲ್ಲಿ ಕೆಲಸ ಮಾಡಲು ಮಾತ್ರಬೇಕು. ಆ ನಂತರ ಬೇರೆಯವರಿಗೆ ಅಧಿಕಾರ ಸಿಗುತ್ತದೆ. ಕಳೆದ 50 ವರ್ಷಗಳಿಂದ ಇದೇ ರೀತಿ ಕಾರ್ಯಕರ್ತರಿಗೆ ಅನ್ಯಾಯವಾಗುತ್ತಿದೆ. ಇದನ್ನು ಸರಿ ಮಾಡುವವರು ಯಾರು’ ಎಂದು ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ.

‘ಪಕ್ಷಕ್ಕಾಗಿ ಹಗಲು ರಾತ್ರಿ ದುಡಿದವರನ್ನು ಕಡೆಗಣಿಸಲಾಗಿದೆ. ನಮ್ಮ ಕ್ಷೇತ್ರದವರು ಏನು ಪಾಪ ಮಾಡಿದ್ದಾರೆ. ನಮ್ಮನ್ನು ಯಾಕೆ ಪರಿಗಣಿಸಿಲ್ಲ. ಇದರಿಂದ ನಮಗೆ ಸಾಕಷ್ಟು ನೋವಾಗಿದೆ’ ಎಂದು ನೊಂದ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ವಾಟ್ಸ್‌ ಆ್ಯ‍ಪ್‌ಗಳಲ್ಲಿ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಯಾದಗಿರಿ ಗುರುಮಠಕಲ್‌ ಮತಕ್ಷೇತ್ರದ ಕಾಂಗ್ರೆಸ್‌ ಕಾರ್ಯಕರ್ತರು ಅಭಿಮಾನಿಗಳು ನಿರಾಶರಾಗಬಾರದು. ಎರಡನೇ ಅವಧಿಗೆ ನಮ್ಮ ಭಾಗದವರಿಗೆ ನಿಗಮ ಮಂಡಳಿಯಲ್ಲಿ ಆದ್ಯತೆ ಸಿಗಲಿದೆ
ಸಂಸ್ಯಾನ್‌ ಮಾಳಿಕೇರಿ ಕಾಂಗ್ರೆಸ್‌ ಮಾಧ್ಯಮ ವಕ್ತಾರ
ಲೋಕಸಭೆ ಚುನಾವಣೆ ಮೇಲೆ ಪರಿಣಾಮ?
ಜಿಲ್ಲೆಯ ನಾಲ್ಕು ಮತಕ್ಷೇತ್ರಗಳು ರಾಯಚೂರು ಲೋಕಸಭೆಯ ಎರಡು ಕ್ಷೇತ್ರಕ್ಕೆ ಹಂಚಿಕೆಯಾಗಿವೆ. ಯಾದಗಿರಿ ಸುರಪುರ ಶಹಾಪುರ ರಾಯಚೂರು ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟರೆ ಗುರುಮಠಕಲ್‌ ಮತಕ್ಷೇತ್ರ ಕಲಬುರಗಿ ಲೋಕಸಭೆ ವ್ಯಾಪ್ತಿಗೆ ಸೇರಿದೆ. ಮೊದಲೇ ಲೋಕಸಭೆ ಕ್ಷೇತ್ರ ಬಿಜೆಪಿ ವಶದಲ್ಲಿದೆ. ಈ ಬಾರಿಯ ಲೋಕಸಭೆ ಚುನಾವಣೆಗಾಗಿ ಬಿಜೆಪಿ–ಜೆಡಿಎಸ್‌ ಮೈತ್ರಿ ಮಾಡಿಕೊಂಡಿವೆ. ಯಾದಗಿರಿ ಗುರುಮಠಕಲ್‌ ಮತಕ್ಷೇತ್ರದವರಿಗೆ ನಿಗಮ ಮಂಡಳಿಯಲ್ಲಿ ಆದ್ಯತೆ ಸಿಗದ ಕಾರಣ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT