ಶಹಾಪುರ: ‘ಮಹಿಳೆಯನ್ನು ನಗ್ನಗೊಳಿಸಿ ಹಲ್ಲೆ ಮಾಡಿದ ಪ್ರಕರಣವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
‘ಬಂಧಿತ ನಾಲ್ವರು ಆರೋಪಿಗಳು ಇದು ಒಂದೂವರೆ ವರ್ಷದ ಹಿಂದಿನ ವಿಡಿಯೊ ಎಂದು ಹೇಳಿದರೆ, ಒಂದು ವರ್ಷದ ಹಿಂದಿನ ವಿಡಿಯೊ ಎಂದು ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ’ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಆದರೆ ಎಫ್‌ಐಆರ್‌ನಲ್ಲಿ ಎಂಟು ತಿಂಗಳ ಹಿಂದಿನ ಘಟನೆ ಎಂದು ದಾಖಲಾಗಿದೆ.
‘ಎಂಟು ತಿಂಗಳ ಹಿಂದೆ ಮಹಿಳೆಯನ್ನು ನಗ್ನಗೊಳಿಸಿ ವಿಡಿಯೊ ಮಾಡಿ ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರ ಹಿಂದೆ ಹಲವು ಗುಮಾನಿ ಹುಟ್ಟಿಕೊಂಡಿದೆ. ನೊಂದ ಮಹಿಳೆಯು ಠಾಣೆಗೆ ಬಂದು, ದೂರು ನೀಡದೆ ಇರುವುದು ಬಲವಾದ ಕಾರಣ ಇರಬಹುದು. ಇದರಲ್ಲಿ ಕಾಣದ ಕೈಗಳು ಸಹ ಕೆಲಸ ಮಾಡಿವೆ’ ಎಂದು ಅವರು ಹೇಳಿದ್ದಾರೆ.
‘ವಿಡಿಯೊದಲ್ಲಿನ ದೃಶ್ಯಗಳ ಸತ್ಯಾಸತ್ಯತೆ ಪರಿಶೀಲಿಸಬೇಕು. ಆರೋಪಿಗಳು ಮತ್ತು ಮಹಿಳೆ ಮಧ್ಯೆ ಹಣಕಾಸಿನ ವ್ಯವಹಾರಕ್ಕಾಗಿ ಜಗಳವಾಗಿರಬಹುದೇ? ಇನ್ನಾವುದೆ ಬೇರೆ ಕಾರಣ ಇರುವುದನ್ನು ಅಲ್ಲಗಳೆಯುವಂತೆ ಇಲ್ಲ. ಮೇಲ್ನೋಟಕ್ಕೆ ಇದು ಪೈಶಾಚಿಕ ಕೃತ್ಯ. ಇದರ ಆಳ ಮತ್ತು ಅಗಲ ತನಿಖೆ ನಡೆಸುವುದು ಅಗತ್ಯವಾಗಿದೆ’ ಎಂದು ಅವರು ತಿಳಿಸಿದ್ದಾರೆ.
ಮಹಜರು: ‘ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ, ಸೋಮವಾರ ಬೆಳಿಗ್ಗೆ ಆರೋಪಿಗಳನ್ನು ವಶಕ್ಕೆ ಪಡೆಯಲಾಯಿತು. ಬಳಿಕ ಅವರನ್ನು ತಾಲ್ಲೂಕಿನ ರಸ್ತಾಪುರ ಕ್ರಾಸ್ ಬಳಿ ಕರೆದೊಯ್ದು ಮಹಜರು ಮಾಡಲಾಯಿತು’ ಎಂದು ಪೊಲೀಸರು ತಿಳಿಸಿದರು.
‘ಸಂತ್ರಸ್ತೆ ಮಹಿಳೆಯನ್ನು ಪತ್ತೆ ಮಾಡಿ, ಆಕೆಯನ್ನು ಶಹಾಪುರ ಪೊಲೀಸ್ ಠಾಣೆಗೆ ಕರೆಯಿಸಿ, ದೂರು ದಾಖಲಿಸಿಕೊಂಡು ತನಿಖೆ ನಡೆಸಲಾಗಿದೆ’ ಎಂದು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಮಾಹಿತಿ ನೀಡಿದರು.
ಯಾದಗಿರಿ ಡಿವೈಎಸ್ಪಿ ಸಂತೋಷ ಬನ್ನಟ್ಟಿ, ಶಹಾಪುರ ಸಿಪಿಐ ಶ್ರೀನಿವಾಸ್ ಅಲ್ಲಾಪುರೆ. ಪಿಐ ಚೆನ್ನಯ್ಯ ಹೀರೆಮಠ, ಪಿಎಸ್,ಐ ಚಂದ್ರಕಾಂತ ಮಾಕಲೆ, ಶಾಮಸುಂದರನಾಯಕ, ಹಣಮಂತ ಬಂಕಲಿಗಿ ಇದ್ದರು.
ಸಡಿಲ ನಿಯಮ
‘ಎರಡು ತಿಂಗಳ ಹಿಂದೆ ಇಬ್ಬರು ಯುವಕರು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಘಟನೆಯ ಬಳಿಕ ನಗರದಲ್ಲಿ ಕಠಿಣ ನಿಯಮಗಳು ಜಾರಿಗೆ ತರುವುದಾಗಿ ಪೊಲೀಸರು ಹೇಳಿದ್ದರು. ಆದರೆ ಅದು ಕಾರ್ಯರೂಪಕ್ಕೆ ಬಂದಿಲ್ಲ’ ಎಂದು ಸ್ಥಳೀಯರು ಆರೋಪಿಸಿದ್ದಾರೆ.
‘ನಗರದ ಆಟೊ ಚಾಲಕರ ಹಾಗೂ ವಾಹನಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುವುದು. ರಾತ್ರಿ ವೇಳೆ ಆಟೊ ಚಾಲಕರು ಠಾಣೆಗೆ ಬಂದು ವರದಿ ಸಲ್ಲಿಸುವ, ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು ಎಂಬ ನಿಯಮಗಳನ್ನು ಪೊಲೀಸರು ಜಾರಿಗೆ ತಂದಿದ್ದರು. ಆದರೆ, ಅವು ಪಾಲನೆ ಆಗುತ್ತಿಲ್ಲ’ ಎಂದು ದೂರಿದ್ದಾರೆ.
‘ಇಂತಹ ಘಟನೆ ನಡೆದಾಗ ಎಚ್ಚೆತ್ತುಕೊಳ್ಳುವ ಪೊಲೀಸರು, ಆರೋಪಿಗಳನ್ನು ಬಂಧಿಸಿದ ತಕ್ಷಣ ತಮ್ಮ ಕರ್ತವ್ಯ ಮುಗಿಯಿತು ಎನ್ನುವಂತೆ ಭಾವಿಸಿದ್ದಾರೆ. ಇಂತಹ ಘಟನೆಗಳ ಮರುಕಳಿಸಂದತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು’ ಎಂದು ಸ್ಥಳೀಯರು ಪೊಲೀಸರಿಗೆ ಮನವಿ ಮಾಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.