ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂರ್ಯಕಾಂತಿ ಬೆಳೆಗೆ ಉತ್ತೇಜನ ನೀಡಿ

ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ: ಸಚಿವ ಡಾ.ವಿ.ಕೆ.ಸಿಂಗ್ ಸಲಹೆ
Last Updated 18 ಏಪ್ರಿಲ್ 2022, 16:27 IST
ಅಕ್ಷರ ಗಾತ್ರ

ಯಾದಗಿರಿ: ‘ರಷ್ಯಾ-ಉಕ್ರೇನ್ ನಡುವೆ ಯುದ್ಧ ನಡೆಯುತ್ತಿರುವ ಕಾರಣ ಸೂರ್ಯಕಾಂತಿ ಅಡುಗೆ ಎಣ್ಣೆ ಆಮದಿನಲ್ಲಿ ಸಮಸ್ಯೆಯಾಗುತ್ತಿದೆ. ಹೀಗಾಗಿ ಸೂರ್ಯಕಾಂತಿ ಬೆಳೆ‌ ಬೆಳೆಯಲು ರೈತರಿಗೆ ಉತ್ತೇಜನ ನೀಡಬೇಕು’ ಎಂದು ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಹಾಗೂ ವಿಮಾನಯಾನ ರಾಜ್ಯ ಸಚಿವ ‌ಡಾ.ವಿ.ಕೆ.ಸಿಂಗ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನೀತಿ ಆಯೋಗದ ಮಹತ್ವಾಕಾಂಕ್ಷೆ ಜಿಲ್ಲೆ ಯೋಜನೆ ಹಾಗೂ ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.

‘ನಮ್ಮ ದೇಶ ಉಕ್ರೇನ್‌ನಿಂದ ಹೆಚ್ಚು ಸೂರ್ಯಕಾಂತಿ ಎಣ್ಣೆ ಆಮದು ಮಾಡಿಕೊಳ್ಳುತ್ತಿದೆ. ಯುದ್ಧದಿಂದಾಗಿ ಆಮದು ಕಷ್ಟವಾಗಲಿದೆ. ಹೀಗಾಗಿ ಸ್ಥಳೀಯ ರೈತರಿಗೆ ಸೂರ್ಯಕಾಂತಿ ಬೆಳೆಯಲು ಪ್ರೋತ್ಸಾಹ ನೀಡಬೇಕು’ ಎಂದರು.

‘ಬ್ಲ್ಯಾಕ್ ಸ್ಪಾಟ್ ಗುರುತಿಸಿ’: ‘ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿಗಳ ಮಧ್ಯೆ ಬರುವ ಅಪಘಾತ ವಲಯಗಳನ್ನು ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳಿಗೆ ಸೂಚಿಸಿದರು.
‌‘ಶಾಲೆ ಆಕರ್ಷಕವಾಗಿರಲಿ’: ‘ಶಾಲಾ‌ ಕಟ್ಟಡ ಮತ್ತು ಅಲ್ಲಿನ ಪರಿಸರವನ್ನು ಆಕರ್ಷಕವಾಗಿರುವಂತೆ‌ ನೋಡಿಕೊಳ್ಳಬೇಕು. ಗುಣಮಟ್ಟದ ಕಲಿಕೆಗೆ ಆದ್ಯತೆ‌ ನೀಡಬೇಕು. ಕುಡಿಯುವ‌ ನೀರು, ಶೌಚಾಲಯ, ಅಟದ‌ ಮೈದಾನ ಹೀಗೆ ಎಲ್ಲ ಮೂಲ ಸೌಕರ್ಯ ಇರಬೇಕು. ಉತ್ತರ ಪ್ರದೇಶದಲ್ಲಿ ಕಾಯಕಲ್ಪ ಹೆಸರಲ್ಲಿ ಇದನ್ನು ಮಾಡಲಾಗಿದೆ‌’ ಎಂದರು.

‘ವೈದ್ಯಕೀಯ ಮಹಾವಿದ್ಯಾಲಕ್ಕೆ ಲೋಕಾರ್ಪಣೆಗೆ ಮುನ್ನವೇ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಬೇಕು. ಜನರಿಗೆ ಆರೋಗ್ಯ ಸೇವೆ ಒದಗಿಸಬೇಕು’ ಎಂದು ಮಹಾವಿದ್ಯಾಲಯದ ಅಧಿಕಾರಿಗೆ ಸೂಚಿಸಿದರು.

‘ತಾಯಿ-ಮಕ್ಕಳ ಮರಣ ಪ್ರಮಾಣ ಜಿಲ್ಲೆಯಲ್ಲಿ ಕಡಿಮೆಯಾಗಿದ್ದು, ಒಳ್ಳೆಯ ಬೆಳವಣಿಗೆ. ಆದರೆ‌, 6 ವರ್ಷದೊಳಗಿನ ಮಕ್ಕಳಲ್ಲಿನ ಅಪೌಷ್ಟಿಕತೆ‌ ನಿವಾರಣೆ ಮತ್ತು ಕಡಿಮೆ ತೂಕವಿರುವ ಮಕ್ಕಳ ಕಡೆ ಜಿಲ್ಲಾಡಳಿತ ಹೆಚ್ಚಿನ ಗಮನಹರಿಸಬೇಕು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಅಂಗನವಾಡಿಗಳ ಕಟ್ಟಡ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಲವರ್ಧನೆಯ ಅಗತ್ಯವಿದೆ. ಇದರಿಂದ ಸರ್ಕಾರದ ಯೋಜನೆಗಳು ಪಂಚಾಯಿತಿ ಮಟ್ಟಕ್ಕೆ ತಲುಪಲು ಸಾಧ್ಯ. ನೀತಿ ಆಯೋಗ ಗುರುತಿಸಿರುವ 112 ಮಹತ್ವಾಕಾಂಕ್ಷೆ ಜಿಲ್ಲೆಗಳಲ್ಲಿ‌ ಒಂದಾಗಿರುವ ಜಿಲ್ಲೆಯಲ್ಲಿ ಶಿಕ್ಷಣ, ಆರೋಗ್ಯ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿನ ಇತ್ತೀಚಿನ ಗಮನಾರ್ಹ ಸಾಧನೆ ತೃಪ್ತಿ ತಂದಿದೆ’ ಎಂದರು.

ಸಭೆಯಲ್ಲಿ ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ, ಕರ್ನಾಟಕ ‌ನಗರ‌ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ರಾಜೂಗೌಡ, ಯಾದಗಿರಿ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ, ಶಹಾಪುರ ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ, ಜಿಲ್ಲಾ ಪಂಚಾಯಿತಿ ಸಿಇಒ ಅಮರೇಶ‌ ನಾಯ್ಕ್, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಗೌಡ ಸೋಮನಾಳ, ಉಪವಿಭಾಗಾಧಿಕಾರಿ ಶಾಲಂ ಹುಸೇನ್ ಇದ್ದರು.

***

‘₹11 ಕೋಟಿ ಅನುದಾನ ಬಿಡುಗಡೆ’

ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಜಿಲ್ಲೆಯಲ್ಲಿ ನೀತಿ ಅಯೋಗದನ್ವಯ ನಡೆಯುತ್ತಿರುವ ಕಾರ್ಯಗಳ ಕುರಿತು ಪ್ರಾತ್ಯಕ್ಷಿಕೆ ನೀಡಿ ಮಾತನಾಡಿ, ‘ಮಹತ್ವಾಕಾಂಕ್ಷೆ ಜಿಲ್ಲೆಗೆ ನೀತಿ ಆಯೋಗ‌ದಿಂದ 2019ರಲ್ಲಿ ₹11 ಕೋಟಿ ಅನುದಾನ ಬಿಡುಗಡೆಯಾಗಿದೆ. ಇದನ್ನು ಶಿಕ್ಷಣ, ಅರೋಗ್ಯ, ಕೃಷಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸೇರಿದಂತೆ ಇನ್ನಿತರ ಕ್ಷೇತ್ರಗಳ ಅಭಿವೃದ್ಧಿಗೆ ವಿನಿಯೋಗಿಸಲಾಗುತ್ತಿದೆ’ ಎಂದರು.

‘ನೀತಿ ಆಯೋಗದ ಅನುದಾನದಡಿ ₹2.14 ಕೋಟಿಗಳಲ್ಲಿ 10 ಅಂಗನವಾಡಿಗಳನ್ನು ಕಟ್ಟಡ ನಿರ್ಮಿಸಲಾಗುತ್ತಿದೆ. ₹48.60 ಲಕ್ಷ‌ ವೆಚ್ಚದಲ್ಲಿ ಜಿಲ್ಲೆಯಲ್ಲಿ 4 ಮಾದರಿ ಶಾಲೆಗಳನ್ನು ನಿರ್ಮಿಸಲಾಗುತ್ತಿದೆ. ಶಾಲಾ ಮಕ್ಕಳಿಗೆ 500 ಟ್ಯಾಬ್ ವಿತರಿಸಲಾಗುತ್ತಿದೆ. ಮಿಲ್ಲರ್‌ ಫಾರ್ಮಿಂಗ್‌ಗೆ ₹50 ಲಕ್ಷ‌ ವ್ಯಯ ಮಾಡಲಾಗುತ್ತಿದೆ. ಶಹಾಪುರ‌ ಮತ್ತು ಸುರಪುರ ತಾಲ್ಲೂಕು ಆಸ್ಪತ್ರೆಗಳಿಗೆ ವೈದ್ಯಕೀಯ ಉಪಕರಣ‌ ಖರೀದಿಗೆ ₹1.11 ಕೋಟಿ ನೀಡಲಾಗಿದೆ. ಜಿಜೆಎಸ್‌ ಸಂಸ್ಥೆಯ ಸಹಯೋಗದೊಂದಿಗೆ ಜಿಲ್ಲೆಯ ಹಳಿಗೇರಾ, ಆಶನಾಳ, ಕೊಯಿಲೂರ ಹಾಗೂ ವಡವಟ್ಟದಲ್ಲಿ ಜಲಮೂಲಗಳ‌ ಪುನರುಜ್ಜೀವನ ಮಾಡಲಾಗುತ್ತಿದೆ. ₹72 ಲಕ್ಷ‌ಗಳಲ್ಲಿ ಯಾದಗಿರಿಯಲ್ಲಿ ಕೌಶಲ ಕೇಂದ್ರ ಸ್ಥಾಪಿಸಲಾಗುತ್ತಿದೆ’ ಎಂದು ಸಚಿವರಿಗೆ ಮಾಹಿತಿ ನೀಡಿದರು.

***

ಜಿಲ್ಲೆಯಲ್ಲಿನ ಶಿಕ್ಷಕರ ‌ಕೊರತೆ‌ ನೀಗಿಸಲು ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಆನ್‌ಲೈನ್ ಶಿಕ್ಷಕರನ್ನು ಬಳಸಿಕೊಳ್ಳಬೇಕು
ಡಾ.ವಿ.ಕೆ.ಸಿಂಗ್, ಕೇಂದ್ರ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT