ಶುಕ್ರವಾರ, ಜೂಲೈ 10, 2020
22 °C
ಕಾರ್ಮಿಕರಿಗೆ ಬೀಳ್ಕೊಡುಗೆ

ಹುಣಸಗಿ: ಕ್ವಾರಂಟೈನ್‌ ಕೇಂದ್ರದಿಂದ ಹೊರಟ ಕಾರ್ಮಿಕರಿಗೆ ಹೋಳಿಗೆ ಊಟ, ಸೀರೆ, ರವಿಕೆ

ಭೀಮಶೇನರಾವ ಕುಲಕರ್ಣಿ Updated:

ಅಕ್ಷರ ಗಾತ್ರ : | |

Prajavani

ಹುಣಸಗಿ: ಪಟ್ಟಣದ ಸುಬ್ಬಮ್ಮ ಗೌಡತಿ ಕಲ್ಯಾಣ ಮಟಪದಲ್ಲಿ ಶನಿವಾರ ಸಾಯಂಕಾಲ ಹಬ್ಬದ ವಾತಾವರಣ ಮನೆ ಮಾಡಿತ್ತು.

ಕ್ವಾರಂಟೈನ್ ಕೇಂದ್ರದಲ್ಲಿದ್ದವರಿಗೆ ಯಾವಾಗ ನಮ್ಮ ಮನೆಗೆ ಹೋಗುತ್ತೇವೋ ಎನ್ನುವ ತವಕ. ತಾಲ್ಲೂಕು ಆಡಳಿತಕ್ಕೆ ಕಾರ್ಮಿಕರನ್ನು ಸುರಕ್ಷಿತವಾಗಿ ಬೀಳ್ಕೊಡುವ ಹುಮ್ಮಸ್ಸು ಜೋರಾಗಿತ್ತು.

ಮಹಾರಾಷ್ಟ್ರ ಸೇರಿದಂತೆ ಮತ್ತಿತರ ಕಡೆಗಳಿಂದ ಆಗಮಿಸಿದ 80ಕ್ಕೂ ಹೆಚ್ಚು ಕೂಲಿ ಕಾರ್ಮಿಕರಿಗೆ ಕಳೆದ 2 ವಾರಗಳ ಹಿಂದೆ ಇಲ್ಲಿನ ಸುಬ್ಬಮ್ಮ ಗೌಡತಿ ಕಲ್ಯಾಣ ಮಂಟಪದಲ್ಲಿ ಕ್ವಾರಂಟೈನ್‌ ಮಾಡಲಾಗಿತ್ತು.

ಇದೀಗ ಈ ಎಲ್ಲರ ಗಂಟಲು ದ್ರವದ ವರದಿಗಳು ನೆಗೆಟಿವ್ ಬಂದಿದ್ದು, ಇವರ ಕ್ವಾರಂಟೈನ್ ಅವಧಿ ಮುಗಿದಿದ್ದರಿಂದಾಗಿ ಶನಿವಾರ ಅವರನ್ನು ಮನೆಗೆ ಕಳಿಸಿಕೊಡಲಾಯಿತು.

ಈ ವೇಳೆ ಬೆಂಗಳೂರು ಮೂಲದ ಡಿ.ಎಸ್.ಮ್ಯಾಕ್ಸ್ ಕಂಪನಿ, ಸ್ಪೂರ್ತಿ ಗ್ರೂಪ್ಸ್‌ ಹಾಗೂ ಶಾಸಕ ರಾಜುಗೌಡ ಅವರ ಸಹಕಾರದಿಂದ ಎಲ್ಲರಿಗೂ ಹೋಳಿಗೆ ಸಿಹಿ ಊಟದ ವ್ಯವಸ್ಥೆ ಮಾಡಲಾಗಿತ್ತು.  ಊಟದ ಬಳಿಕ ಉಡುಗೊರೆಯಾಗಿ 33 ಮಹಿಳೆಯರಿಗೆ ಸೀರೆ, ರವಿಕೆ, 48 ಪುರುಷರಿಗೆ ಟವೆಲ್‌ ನೀಡಿ ಗೌರವಿಸಲಾಯಿತು.

ಹುಣಸಗಿ ತಹಶೀಲ್ದಾರ್ ವಿನಯಕುಮಾರ ಪಾಟೀಲ ಮಾತನಾಡಿ, ಎಲ್ಲರೂ ಆರೋಗ್ಯವಾಗಿದ್ದು, ನಿಮ್ಮ ಮನೆಗಳಿಗೆ ತೆರಳುತ್ತಿರುವ ಈ ಸಂದರ್ಭದಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಇದೇ ವಾತಾವರಣ ನಿಮ್ಮ ಮನೆಗಳಲ್ಲಿಯೂ ಇರುವಂತೆ ನೋಡಿಕೊಳ್ಳಬೇಕು. ಸುರಕ್ಷಿತ ಅಂತರ ಶುಚಿತ್ವಕ್ಕೆ ಒತ್ತು ನೀಡಬೇಕು. ನಿಮ್ಮ ಗ್ರಾಮಗಳಲ್ಲಿ ನೀವು ಮಾದರಿಯಾಗಿ ಕಾಣುವಂತಾಗಬೇಕು ಎಂದು ಹೇಳಿದರು.

ಡಿ.ಎಸ್. ಮ್ಯಾಕ್ಸ್ ಕಂಪನಿಯಿಂದ ಗೃಹ ರಕ್ಷಕ ದಳದವರಿಗೆ ₹25,000 ಪುರಸ್ಕಾರವನ್ನು ಮುಖಂಡ ಚಂದ್ರಶೇಖರ ಪಟ್ಟಣಶೆಟ್ಟಿ ನೀಡಿ ಗೌರವಿಸಿದರು.

ಗ್ರೇಡ್ –2 ತಹಶೀಲ್ದಾರ್ ಸುರೇಶ ಚವಲರ್, ಹುಣಸಗಿ ಪಿಎಸ್.ಐ ನಚಿಕೇತ ಜನಗೌಡ, ವೈದ್ಯಾಧಿಕಾರಿ ಡಾ. ಮಹೇಶ್ವರಿ, ಶರಣಗೌಡ ಪಾಟೀಲ ವಜ್ಜಲ, ನಾನಾಗೌಡ ಪಾಟೀಲ, ರಮೇಶ ಪಾಟೀಲ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು