ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ: ಕೊರತೆಗಳ ಮಧ್ಯೆ ಶಾಲಾರಂಭಕ್ಕೆ ಸಿದ್ಧತೆ

Published 27 ಮೇ 2024, 5:11 IST
Last Updated 27 ಮೇ 2024, 5:11 IST
ಅಕ್ಷರ ಗಾತ್ರ

ಯಾದಗಿರಿ: ಇದೇ ಮೇ 29ರಂದು ಶಾಲೆಗಳು ಪುನಾರಂಭವಾಗಲಿದ್ದು, ಕೊರತೆಗಳ ಮಧ್ಯೆ ಆರಂಭಕ್ಕೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಿದ್ಧತೆ ಮಾಡಿಕೊಂಡಿದೆ.

ಜಿಲ್ಲೆಯಲ್ಲಿ 929 ಪ್ರಾಥಮಿಕ, 141 ಪ್ರೌಢಶಾಲೆಗಳಿದ್ದು, ಈ ಬಾರಿ ಶಿಕ್ಷಕರ ಕೊರತೆಯೂ ಕಾಡುತ್ತಿದೆ. ಮಳೆಗಾಲದಲ್ಲಿ ಶಾಲೆಗಳು ಆರಂಭವಾಗುವುದರಿಂದ ಹಲವಾರು ಕೊಠಡಿಗಳು ದುರಸ್ತಿಗಾಗಿ ಕಾದಿವೆ.

ಜಿಲ್ಲೆಯ ಮೂರು ಹಳೆ ತಾಲ್ಲೂಕುಗಳನ್ನು ಒಳಗೊಂಡಂತೆ ಪ‍್ರಾಥಮಿಕ ಶಾಲೆಯಲ್ಲಿ 4,938 ಕೊಠಡಿಗಳಿದ್ದು, ಇದರಲ್ಲಿ 3,862 ಶಾಲೆಗಳು ಉತ್ತಮ ಸ್ಥಿತಿಯಲ್ಲಿವೆ. 467 ಸಣ್ಣಪುಟ್ಟ ದುರಸ್ತಿಯಾಗಬೇಕಿದೆ. 609 ದೊಡ್ಡಮಟ್ಟದ ದುರಸ್ತಿಯಾಗಬೇಕಿದೆ. ಪ್ರೌಢಶಾಲೆಗೆ ಸಂಬಂಧಿಸಿದಂತೆ 963 ಶಾಲಾ ಕೊಠಡಿಗಳಿದ್ದು, 749 ಉತ್ತಮ ಸ್ಥಿತಿಯಲ್ಲಿವೆ. 120 ಕೊಠಡಿಗಳು ಸಣ್ಣಪುಟ್ಟ ದುರಸ್ತಿ ಮಾಡಬೇಕಿದೆ. 94 ದೊಡ್ಡ ಮಟ್ಟದ ದುರಸ್ತಿಗಾಗಿ ಕಾದಿವೆ.

ಮೂಲಸೌಲಭ್ಯ ಕೊರತೆ: 929 ಪ್ರಾಥಮಿಕ ಶಾಲೆಗಳಿದ್ದು, 714 ಬಾಲಕರ ಶೌಚಾಲಯ, 791 ಬಾಲಕಿಯರ ಶೌಚಾಲಯ, 924 ಶಾಲೆಗಳಲ್ಲಿ ಕುಡಿಯುವ ನೀರು ವ್ಯವಸ್ಥೆ, 844 ಶಾಲೆಗಳಲ್ಲಿ ವಿದ್ಯುತ್‌ ಸೌಲಭ್ಯ, 516 ಆವರಣ ಗೋಡೆ, 403ರಲ್ಲಿ ಆಟದ ಮೈದಾನ, 699 ಶಾಲೆಗಳಲ್ಲಿ ರ್‍ಯಾಂಪ್‌ ವ್ಯವಸ್ಥೆ ಇದೆ.

141 ಪ್ರೌಢಶಾಲೆಗಳಲ್ಲಿ 115 ಬಾಲಕರ ಶೌಚಾಲಯ, 130 ಬಾಲಕಿಯರ ಶೌಚಾಲಯ, 121 ವಿದ್ಯುತ್‌ ವ್ಯವಸ್ಥೆ, 74 ಆವರಣಗೋಡೆ, 96 ಆಟದ ಮೈದಾನ, 98 ಶಾಲೆಗಳಲ್ಲಿ ರ‍್ಯಾಂಪ್‌ ವ್ಯವಸ್ಥೆ ಇದೆ.

‘ಜಿಲ್ಲೆಯ ವಿವಿಧೆಡೆ ಶಾಲಾ ಕಟ್ಟಡಗಳಿದ್ದು, ಅದಕ್ಕೆ ತಕ್ಕಂತೆ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ. ಶೈಕ್ಷಣಿಕ ಸುಧಾರಣೆಗೆ ಪ್ರಸಕ್ತ ಸಾಲಿನಲ್ಲಿ ಆದ್ಯತೆಯಾಗಲಿ’ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತ ಬಸವರಾಜ ಮೇಲಿನಮನಿ.

ಜಿಲ್ಲೆಯಲ್ಲಿ 634 ಜಿಪಿಟಿ ಶಿಕ್ಷಕರು ಆಯ್ಕೆಯಾಗಿದ್ದು, 616 ಕೌನ್ಸೆಲಿಂಗ್‌ಗೆ ಹಾಜರಾಗಿದ್ದಾರೆ. 582 ಶಿಕ್ಷಕರಿಗೆ ನೇಮಕಾತಿ ಆದೇಶ ನೀಡಲಾಗಿದೆ. 32 ಶಿಕ್ಷಕರಿಗೆ ನೇಮಕಾತಿ ಆದೇಶ ಬಾಕಿ ಇದೆ. ಶೇಕಡವಾರು 94.79 ಪ್ರಗತಿ ಇದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮೂಲಗಳು ತಿಳಿಸಿವೆ.

‘ಹೆಸರಿಗೆ ಮಾತ್ರ ಶೌಚಾಲಯಗಳಿದ್ದು, ನಿರ್ವಹಣೆ ಕೊರತೆಯಿದೆ. ಆಟದ ಮೈದಾನ ಮಾತ್ರವಿದ್ದು, ಸೌಲಭ್ಯಗಳಿಲ್ಲ. ಶಿಕ್ಷಕರ ಕೊಠಡಿಗಳಲ್ಲಿ ವಿದ್ಯುತ್‌ ಸೌಲಭ್ಯವಿದ್ದು, ವಿದ್ಯಾರ್ಥಿಗಳಿಗಿಲ್ಲ. ಆವರಣಗೋಡೆಗಳು ಹಲವೆಡೆ ಬಿದ್ದಿವೆ. ಆಟದ ಮೈದಾನದಲ್ಲಿ ಮಳೆ ನೀರು ನಿಂತು ಕೆಸರುಮಯವಾಗಿರುತ್ತದೆ. ಸಮತಟ್ಟು ಇಲ್ಲ. ಹೀಗೆ ಶಾಲಾವರಣದಲ್ಲಿ ಮಕ್ಕಳಿಗೆ ಸೌಲಭ್ಯಗಳಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಹೇಗೆ ಅಧ್ಯಯನ ಮಾಡಬೇಕು’ ಎಂದು ಪ್ರಶ್ನಿಸುತ್ತಾರೆ ಪಾಲಕರಾದ ಮಲ್ಲಿಕಾರ್ಜುನ ಸ್ವಾಮಿ, ರಶ್ಮಿ ನಾಯಕ, ಚಂದಮ್ಮ. 

ಯಾದಗಿರಿ ನಗರದ ಕೋಟಗಾರವಾಡ ಶಾಲೆಯ ಆವರಣಗೋಡೆ ಶಿಥಿಲಾವಸ್ಥೆಯಲ್ಲಿದೆ
ಯಾದಗಿರಿ ನಗರದ ಕೋಟಗಾರವಾಡ ಶಾಲೆಯ ಆವರಣಗೋಡೆ ಶಿಥಿಲಾವಸ್ಥೆಯಲ್ಲಿದೆ
ಯಾದಗಿರಿ ನಗರದ ಕೋಟಗಾರವಾಡ ಶಾಲೆಯ ನೆಲಹಾಸು ಕಿತ್ತು ಬಂದಿರುವುದು
ಯಾದಗಿರಿ ನಗರದ ಕೋಟಗಾರವಾಡ ಶಾಲೆಯ ನೆಲಹಾಸು ಕಿತ್ತು ಬಂದಿರುವುದು
ಜಿಲ್ಲೆಯಲ್ಲಿ ಶಾಲಾ ಶಿಕ್ಷಕರ ಕೊರತೆ ಕೊಠಡಿ ದುರಸ್ತಿಗೆ ಸಂಬಂಧಿಸಿದಂತೆ ಕೆಕೆಆರ್‌ಡಿಬಿಗೆ ಪತ್ರ ಬರೆಯಲಾಗಿದ್ದು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ
ಜೆ.ಎಚ್‌.ಮಂಜುನಾಥ ಉಪನಿರ್ದೇಶಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ
ತಾಲ್ಲೂಕಿನ ಶಿಕ್ಷಣದ ಗುಣಮಟ್ಟ ಮೂಲಸೌಕರ್ಯಗಳು ಸುಧಾರಣೆಯ ಬಗ್ಗೆ ಶಿಕ್ಷಣ ತಜ್ಞರಿಂದ ಸಮಗ್ರ ತನಿಖೆಯಾಗಬೇಕು. ಅಧಿಕಾರಿಗಳು ಮೊದಲ ಆದ್ಯತೆಯಾಗಿ ಈ ಕಾರ್ಯ ತೆಗೆದುಕೊಳ್ಳಬೇಕು
ಅಹ್ಮದ್ ಪಠಾಣ ಪಾಲಕ ಸುರಪುರ
ಫಲಿತಾಂಶ ಸುಧಾರಣೆಗೆ ಮಾರ್ಗಸೂಚಿಯ ಪ್ರಕಾರ ಎಲ್ಲ ಚಟುವಟಿಕೆಗಳನ್ನು ನಡೆಸಲಾಗಿತ್ತು. ಈ ನಿಟ್ಟಿನಲ್ಲಿ ಪಾಲಕರ ಸಹಕಾರವೂ ಮುಖ್ಯವಾಗಿರುತ್ತದೆ. ಎಲ್ಲರೂ ಸೇರಿ ಸುಧಾರಣೆಗೆ ಯತ್ನಿಸೋಣ
ಪಂಡಿತ ನಿಂಬೂರ ಕ್ಷೇತ್ರ ಸಮನ್ವಯಾಧಿಕಾರಿ ಸುರಪುರ
ಎಸ್‌ಡಿಎಂಸಿ ರಚನೆಯಲ್ಲಿ ರಾಜಕಾರಣ ಮಾಡಬಾರದು. ಸುಧಾರಣೆ ದೃಷ್ಟಿಕೋನ ಇರುವ ಪಾಲಕರಿಗೆ ಅವಕಾಶ ಮಾಡಿಕೊಡಬೇಕು. ಮುಖ್ಯ ಶಿಕ್ಷಕ ಪಾಲಕರು ಮತ್ತು ಸಮುದಾಯದ ಸಹಕಾರ ಮುಖ್ಯ
ಮಹಾದೇವಪ್ಪ ಗಡ್ಡದರ ಎಸ್‌ಡಿಎಂಸಿ ಅಧ್ಯಕ್ಷ ದೇವಿಕೇರಿ
ಯಾದಗಿರಿ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದ ಶಿಕ್ಷಕರ ಸಂಖ್ಯೆ ಕೊರತೆಯಲ್ಲಿದೆ. ಇದರಿಂದಾಗಿ ಸರ್ಕಾರಿ ಶಾಲೆಗಳಿಂದ ಶೈಕ್ಷಣಿಕ ಮಟ್ಟ ಸುಧಾರಿಸಲು ಸಾಕಷ್ಟು ಪ್ರಯತ್ನಿಸಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಶಿಕ್ಷಕರನ್ನು ನಿಯೋಜಿಸುವ ಮೂಲಕ ಹುಣಸಗಿ ತಾಲ್ಲೂಕು ಸೇರಿದಂತೆ ಯಾದಗಿರಿ ಜಿಲ್ಲೆ ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಮುಂದಾಗಲಿ
ಮಹಾದೇವಿ ಬೇನಾಳಮಠ ರೈತ ಸಂಘದ ಪ್ರಮುಖರು
ತಾಲ್ಲೂಕಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಯಲ್ಲಿ ಶಿಕ್ಷಕರ ಸಂಖ್ಯೆ ಕೊರತೆ ಇರುವುದರಿಂದಾಗಿ ಮಕ್ಕಳಿಂದ ಗುಣಮಟ್ಟದ ಶಿಕ್ಷಣ ನಿರೀಕ್ಷಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನುರಿತ ಶಿಕ್ಷಕರನ್ನು ವಿಷಯವಾರು ತುಂಬಿಕೊಳ್ಳುವ ಮೂಲಕ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪ್ರಯತ್ನಿಸಲಿ
ಬಸವರಾಜ ಹಗರಟಗಿ ಮಾದಿಗ ದಂಡೋರ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ

ಶಿಕ್ಷಕಿಯರ ಗೋಳು ಹೇಳತೀರದು

‘ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುವ ಶಿಕ್ಷಕಿಯರ ಪಾಡು ಹೇಳ ತೀರದಾಗಿದೆ. ಕನಿಷ್ಠ ಸೌಲಭ್ಯಗಳು ಶಾಲೆಯಲ್ಲಿ ಇರುವುದಿಲ್ಲ. ಶಾಲೆಯ ಮುಂದುಗಡೆ ಕಸದ ರಾಶಿ ತಿಪ್ಪೆಯ ಗುಂಡಿ ಹಾಗೂ ರಾತ್ರಿ ಸಮಯದಲ್ಲಿ ಶಾಲೆಯ ಒಳಗಡೆ ಮೇಕೆ ಜಾನುವಾರುಗಳನ್ನು ನಿಲ್ಲಿಸುತ್ತಾರೆ. ಕಲಿಕೆಗೆ ಪೂರಕ ವಾತಾವರಣ ಇಲ್ಲವಾಗಿದೆ. ಪಾಲಕರು ಇದರ ಬಗ್ಗೆ ಗಮನಹರಿಸಬೇಕು. ತಮ್ಮ ಮಕ್ಕಳು ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ ಎಂಬ ಅರಿವು ಬರಬೇಕು. ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಹಲವಾರು ಶಾಲೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿ ಇವೆ. ದುರಸ್ತಿ ಕಾರ್ಯ ಮಾಡಬೇಕು’ ಎನ್ನುತ್ತಾರೆ ಶಿಕ್ಷಕಿಯೊಬ್ಬರು.

ಎಸ್‌ಡಿಎಂಸಿ ಅವಧಿ ಮುಗಿದರೂ ದರ್ಬಾರ್‌

ಶಾಲಾಭಿವೃದ್ಧಿ ಮತ್ತು‌ ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ) ರಚನೆ ರಾಜಕೀಯವಾಗಿ ಮಲಿನವಾಗಿದೆ. ಆಯಾ ಪಕ್ಷದ ಹಿಂಬಾಲಕರು ಎಸ್‌ಡಿಎಂಸಿ ಅಧ್ಯಕ್ಷರಾಗಿ ಹಲವಾರು ವರ್ಷದಿಂದ ಉಳಿದುಕೊಂಡಿದ್ದಾರೆ. ಪಾಲಕರ ಮಕ್ಕಳು ಉನ್ನತ ಅಭ್ಯಾಸಕ್ಕೆ ಬೇರೆ ಶಾಲೆಗೆ ತೆರಳಿದ್ದರೂ ಇನ್ನೂ ಕೆಲ ಶಾಲೆಯಲ್ಲಿ ಅವರದ್ದೇ ದರ್ಬಾರ್‌ ಮುಂದುವರಿದಿದೆ.

ಜ್ಞಾನ ದೇಗುಲದಲ್ಲಿ ರಾಜಕೀಯ ಬೇಕಾಗಿಲ್ಲ. ಶಾಲಾ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸಮನ್ವಯದಿಂದ ಕೆಲಸ ಮಾಡಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ಆಗಬೇಕು ಎನ್ನುತ್ತಾರೆ ಶಿಕ್ಷಣ ಪ್ರೇಮಿಗಳು.

‘ತಳವೂರಿದ ಸಿಬ್ಬಂದಿ ವರ್ಗಾಯಿಸಿ’

ಶಹಾಪುರ: ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಹೆಚ್ಚಿನ ಶಿಕ್ಷಕರು ಶಾಲೆಗೆ ಚಕ್ಕರ್‌ ಹೊಡೆಯುತ್ತಾರೆ. ಕಟ್ಟುನಿಟ್ಟಾಗಿ ಇದನ್ನು ನಿಯಂತ್ರಿಸಬೇಕು. ಹಲವಾರು ವರ್ಷದಿಂದ ಶಿಕ್ಷಣ ಇಲಾಖೆಯಲ್ಲಿ ಕಾಯಂ ಆಗಿ ತಳವೂರಿದ ಸಿಬ್ಬಂದಿಯನ್ನು ವರ್ಗಾವಣೆ ಮಾಡಿ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಪ್ರತಿಯೊಬ್ಬರು ಯತ್ನಿಸಬೇಕಾಗಿದೆ ಎನ್ನುತ್ತಾರೆ ಶಾಲಾ ಮಕ್ಕಳ ಪಾಲಕರು. ‘ಶಿಕ್ಷಕರ ಕೊರತೆ ಇರುವ ಕಡೆ ಕೆಲ ಶಿಕ್ಷಕರು ನಿಯೋಜನೆ ಮೇಲೆ ತೆರಳಿದ್ದಾರೆ.

ಈಗ ಹೊಸದಾಗಿ ಶಿಕ್ಷಕರು ಅಲ್ಲಿಗೆ ಬಂದಿದ್ದರೂ ಮೂಲ ಸ್ಥಾನಕ್ಕೆ ಹಾಜರಾಗುತ್ತಿಲ್ಲ. ಸರ್ಕಾರಿ ಕೆಲಸವೆಂದು ನಗರಕ್ಕೆ ಬರುವ ಶಿಕ್ಷಕರ ಮೇಲೆ ನಿಗಾವಹಿಸಬೇಕು. ಶಾಲೆಯಲ್ಲಿ ಕಡ್ಡಾಯವಾಗಿ ಹಾಜರಾತಿ ಆಗಿರುವ ಬಗ್ಗೆ ಪಾಲಕರು ದಿನಾಲೂ ಖಾತರಿಪಡಿಸಬೇಕು. ಶಿಕ್ಷಕರು ವೃತ್ತಿ ಧರ್ಮ ಪಾಲಿಸಬೇಕು. ಮಕ್ಕಳಿಗೆ ಪಾಠ ಪ್ರವಚನ ಹೇಳಬೇಕು’ ಎನ್ನುತ್ತಾರೆ ಮುಡಬೂಳ ಗ್ರಾಮದ ಅಶೋಕರಾವ. ಗ್ರಾಮೀಣ ಪ್ರದೇಶದಲ್ಲಿ ಹೊಸದೊಂದು ತಲೆನೋವು ಶುರುವಾಗಿದೆ. ಅತಿಥಿ ಶಿಕ್ಷಕರ ನೇಮಕದಲ್ಲಿ ಪಾರದರ್ಶಕವಾಗಿ ನಡೆಯುತ್ತಿಲ್ಲ. ರಾಜಕೀಯ ಪ್ರಭಾವ ಬಳಸಿಕೊಂಡು ಹೆಚ್ಚಿನ ಅತಿಥಿ ಶಿಕ್ಷಕರು ಶಾಲೆಗೆ ಸೇರ್ಪಡೆಯಾಗುತ್ತಾರೆ. ಸರಿಯಾಗಿ ಪಾಠ ಮಾಡುವುದಿಲ್ಲ ಎಂಬ ಆರೋಪವೂ ಪಾಲಕರಿಂದ ಕೇಳಿ ಬರುತ್ತಲಿದೆ.

ಸುರಪುರ: ಶಿಕ್ಷಕರದ್ದೇ ದೊಡ್ಡ ಕೊರತೆ

ಸುರಪುರ: ಸುರಪುರ ಮತ್ತು ಹುಣಸಗಿ ತಾಲ್ಲೂಕು ಒಳಗೊಂಡಂತೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಕಾರ್ಯನಿರ್ವಹಿಸುತ್ತಿದೆ. ಕಳೆದ ಒಂದೂವರೆ ವರ್ಷದಲ್ಲಿ 14 ಬಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬದಲಾವಣೆಯಾಗಿದ್ದು ವಿಶೇಷ. ಇದರಿಂದ ಎರಡೂ ತಾಲ್ಲೂಕುಗಳ ಶಾಲೆಗಳ ಮೇಲೆ ನಿಯಂತ್ರಣ ಸಾಧಿಸಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ ಎನ್ನುತ್ತಾರೆ ಪಾಲಕರು.

ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫಲಿತಾಂಶ ಶೋಚನೀಯವಾಗಿತ್ತು. ಯಾದಗಿರಿ ಜಿಲ್ಲೆಗೆ ಸುರಪುರಕ್ಕೆ ಕೊನೆಯ ಸ್ಥಾನ ಬಂದಿದೆ. ಶೇ 60ಕ್ಕಿಂತ ಹೆಚ್ಚು ಶಿಕ್ಷಕ ಹುದ್ದೆಗಳು ಖಾಲಿ ಇವೆ. ಅತಿಥಿ ಶಿಕ್ಷಕರಿಗೆ ಅನುಭವದ ಕೊರತೆ ಇದೆ. ಪ್ರಾಥಮಿಕ ಹಂತದಲ್ಲಿ ಉತ್ತಮ ಅಡಿಪಾಯದ ಶಿಕ್ಷಣ ಮಕ್ಕಳಿಗೆ ಸಿಗುತ್ತಿಲ್ಲ. ಇದೇ ಮೊದಲ ಬಾರಿಗೆ ವೆಬ್‌ಕಾಸ್ಟ್ ಅಳವಡಿಸಿದ್ದರಿಂದ ವಿದ್ಯಾರ್ಥಿಗಳು ಆತಂಕ ಪಡುವಂತಾಯಿತು ಎನ್ನುವುದು ಬಹುತೇಕ ಪೋಷಕರ ಅಭಿಪ್ರಾಯ. 348 ಪ್ರಾಥಮಿಕ ಮತ್ತು 49 ಪ್ರೌಢಶಾಲೆಗಳಿವೆ. ಪ್ರಾಥಮಿಕ ಶಾಲೆಯಲ್ಲಿ 30ಕ್ಕೂ ಹೆಚ್ಚು ಏಕೋಪಾಧ್ಯಾಯ ಶಾಲೆಗಳಿವೆ. 4 ಏಕೋಪಾಧ್ಯಾಯ ಪ್ರೌಢಶಾಲೆಗಳು ಇವೆ. 4 ಶಾಲೆಗಳು ಇತರ ಇಲಾಖೆಯ ಕಟ್ಟಡಗಳಲ್ಲಿ ನಡೆಯುತ್ತಿವೆ. ಉಳಿದ ಶಾಲೆಗಳು ಸ್ವಂತ ಕಟ್ಟಡ ಹೊಂದಿವೆ. 149 ಶಾಲಾ ಹಳೆಯದ್ದಾಗಿವೆ. ಅದರಲ್ಲಿ ಕೆಲವು ಶಾಲೆಗಳು ಭಾಗಶಃ ಮಳೆ ಬಂದರೆ ಸೋರುತ್ತವೆ. ಈ ಬಗ್ಗೆ ವರದಿ ಸಲ್ಲಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಪೂರಕ ಮಾಹಿತಿ: ಟಿ.ನಾಗೇಂದ್ರ, ಅಶೋಕ ಸಾಲವಾಡಗಿ, ಭೀಮಶೇನರಾವ ಕುಲಕರ್ಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT