ಗುರುಮಠಕಲ್: 'ಜಾನುವಾರುಗಳ ಆರೋಗ್ಯ ಕಾಳಜಿ ಅಗತ್ಯ'

ಗುರುಮಠಕಲ್: ‘ಕೃಷಿಕರಿಗೆ ಹೈನು ಗಾರಿಕೆಯು ಅತ್ಯಂತ ಲಾಭದಾಯಕ ಹಾಗೂ ಕೈ ಹಿಡಿಯುವ ಕೃಷಿಯ ಸಹ ಚಟುವಟಿಕೆಯಾಗಿದೆ. ಆದ್ದರಿಂದ ರೈತರು ಜಾನುವಾರುಗಳ ಆರೋಗ್ಯದ ಕುರಿತು ಕಾಳಜಿ ವಹಿಸಬೇಕು’ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ವಿಜಯಕುಮಾರ ಸಲಹೆ ನೀಡಿದರು.
ತಾಲ್ಲೂಕಿನ ಚಪೆಟ್ಲಾ ಪಶು ಚಿಕಿತ್ಸಾ ಕೇಂದ್ರದ ವ್ಯಾಪ್ತಿಯಲ್ಲಿನ ಯದ್ಲಾಪುರ, ಯದ್ಲಾಪುರ ತಾಂಡಾದಲ್ಲಿ ಇಲಾಖೆಯ ವತಿಯಿಂದ ಸೋಮವಾರ ಆಯೋಜಿಸಿದ್ದ ಪಶು ಆರೋಗ್ಯ ಶಿಬಿರದಲ್ಲಿ ಅವರು ಮಾತನಾಡಿದರು.
‘ವಾತಾವರಣದಲ್ಲಿನ ಬದಲಾವಣೆಗೆ ಉಂಟಾಗುವಂತಹ ಆರೋಗ್ಯ ಸಮಸ್ಯೆಗಳ ಜೊತೆಗೆ ಅಕಾಲಿಕವಾಗಿ ಜಾನುವಾರುಗಳಲ್ಲಿ ಉಂಟಾಗಿರುವ ಬದಲಾವಣೆಯನ್ನು ಗುರುತಿಸಿ ಕೂಡಲೇ ಚಿಕಿತ್ಸೆ ಕೊಡಿಸಬೇಕು’ ಎಂದರು.
‘ಹೈನುಗಾರಿಕೆಯ ಉತ್ಪನ್ನಗಳಾದ ಹಾಲು, ಮೊಸರು, ಬೆಣ್ಣೆ, ತುಪ್ಪದಂತಹ ಪದಾರ್ಥಗಳಿಂದ ಬರುವ ಹಣ ಕೃಷಿಯಲ್ಲಿ ಸಿಗುವ ಹೆಚ್ಚುವರಿ ಲಾಭ. ಜಾನುವಾರುಗಳ ಸೆಗಣಿ ಜಮೀನಿಗೆ ಅತ್ಯುತ್ತಮವಾದ ಪೋಷಕಾಂಶ ಒದಗಿಸುವ ಮೂಲಕ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದರಿಂದ ಸಾಮಾನ್ಯವಾಗಿಯೆ ಇಳುವರಿಯೂ ಹೆಚ್ಚುತ್ತದೆ. ಇನ್ನು ಹೈನು ಉತ್ಪನ್ನಗಳಿಂದ ಸಿಗುವ ಹಣವು ಕೃಷಿ ಚಟುವಟಿಕೆಗಳಿಗೆ ಹಾಗೂ ಕುಟುಂಬದ ನಿರ್ವಹಣೆಗೆ ಸಹಕಾರಿಯಾಗಲಿದೆ. ಇಷ್ಟೊಂದು ಲಾಭವನ್ನು ನೀಡುವ ಜಾನುವಾರುಗಳ ಕುರಿತು ರೈತರು ಕಾಳಜಿ ವಹಿಸಬೇಕು’ ಎಂದರು.
ಶಿಬಿರದಲ್ಲಿ ಜಾನುವಾರುಗಳಿಗೆ ಲಿಂಪಿಸ್ಕಿನ್ ವೈರಾಣು ತಡೆಗೆ ಲಸಿಕೆ, ಕುರಿ, ಆಡು ಹಾಗೂ ಕರುಗಳಿಗೆ ಜಂತು ಹುಳು ನಿವಾರಕ ಔಷಧ, ಗರ್ಭ ಧರಿಸದ ಜಾನುವಾರುಗಳಿಗೆ ಪೋಷಕಾಂಶಯುಕ್ತ ಮಿಶ್ರಣ ನೀಡಲಾಯಿತು. ಸಾಮಾನ್ಯ ರೋಗಗಳಿಗೆ ಚಿಕಿತ್ಸೆಯನ್ನು ಕೂಡ ನೀಡಲಾಯಿತು.
ಹಿರಿಯ ಪಶು ಆರೋಗ್ಯ ತಪಾಸಕ ರಾದ ನಿಸಾರ ಅಹ್ಮದ್, ಅಶೋಕ ಕುಮಾರ, ಪ್ರೇಮರಾಜ, ಸಹಾಯಕ ರಾದ ಸಿದ್ದಲಿಂಗಪ್ಪ, ಮಹೇಶ ಇದ್ದರು.
***
ಗರ್ಭ ಧರಿಸದ ಜಾನುವಾರು ಗಳಿಗೆ ಪೌಷ್ಟಿಕಾಂಶವಿರುವ ಮಿಶ್ರಣ ತಿನ್ನಿಸುವುದು ಹಾಗೂ ಕೃತಕ ಗರ್ಭಧಾರಣೆಯಿಂದ ದೇಸಿ ತಳಿಗಳನ್ನು ಅಭಿವೃದ್ಧಿಪಡಿಸಿದರೆ ಲಾಭದಾಯಕ
- ಡಾ.ವಿಜಯಕುಮಾರ, ಸಹಾಯಕ ನಿರ್ದೇಶಕ ಪಶುಪಾಲನಾ ಇಲಾಖೆ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.