ಮಂಗಳವಾರ, ಸೆಪ್ಟೆಂಬರ್ 21, 2021
25 °C
ರೈತರಿಗೆ ಕಲ್ಲಂಗಡಿ ಬೆಳೆಯ ಸುಧಾರಿತ ಬೇಸಾಯ ತರಬೇತಿ

‘ಕಲ್ಲಂಗಡಿ ಅಧಿಕ ಲಾಭ ಕೊಡುವ ಬೆಳೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಟಾಟಾ ಟ್ರಸ್ಟ್‌ ಮತ್ತು ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದ ವತಿಯಿಂದ ನಗರದ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದ ಕಚೇರಿಯಲ್ಲಿ ಜಿಲ್ಲೆಯ ರೈತರಿಗಾಗಿ ಕಲ್ಲಂಗಡಿ ಬೆಳೆಯ ಸುಧಾರಿತ ಬೇಸಾಯ ಕುರಿತು ತರಬೇತಿ ಕಾರ್ಯಕ್ರಮ ನಡೆಯಿತು.

ಘಟಕದ ಮುಖ್ಯಸ್ಥ ಡಾ.ರೇವಣಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಕಲ್ಲಂಗಡಿ ಬೆಳೆಯು ಪ್ರಸ್ತುತ ಋತುವಿನಲ್ಲಿ ಬೆಳೆಯುವುದು ಸೂಕ್ತ. ಇದರಲ್ಲಿ ಹೆಚ್ಚಿನ ಶೇಕಡ 90ರಷ್ಟು ನೀರಿನಾಂಶ ಇದ್ದು, ದೇಹಕ್ಕೆ ಬೇಕಾದ ಅನ್ನಾಂಗ ಸಿ ಹಾಗೂ ಪ್ರಮುಖವಾದ ಲವಣಗಳನ್ನು ಹೊಂದಿದೆ’ ಎಂದರು.

‘ಕಲ್ಲಂಗಡಿ ಹಣ್ಣು ತಿಂದ ಬಳಿಕ ಸಿಪ್ಪೆ ಮತ್ತು ಬೀಜಗಳನ್ನು ಬಿಸಾಡಲಾಗುತ್ತದೆ. ಸಿಪ್ಪೆಯನ್ನು ಉಪ್ಪಿನಕಾಯಿಗಾಗಿ ಮತ್ತು ಬೀಜಗಳನ್ನು ಗುಣಮಟ್ಟದ ಏಣ್ಣೆ ತಯಾರಿಕೆಯಲ್ಲಿ ಉಪಯೋಗಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು.

‘ಕಲ್ಲಂಗಡಿ 3 ತಿಂಗಳ ಅವಧಿಯಲ್ಲಿ ಬೆಳೆಯಬಹುದಾಗಿದ್ದು, ಇದು ಅಧಿಕ ಲಾಭಕೊಡುವ ಬೆಳೆಯಾಗಿದೆ. ಹೊಸ ತಂತ್ರಜ್ಞಾನಗಳಾದ ಏರುಮಡಿ, ಹನಿ ನೀರಾವರಿ, ಪ್ಲಾಸ್ಟಿಕ್ ಹೊದಿಕೆಗಳ ಬಳಕೆ ಮತ್ತು ಪ್ರೋಟ್ರೆಗಳ ಬಳಕೆ ಮಾಡಿದಲ್ಲಿ ಹೆಚ್ಚಿನ ಇಳುವರಿ ಪಡೆಯಬಹುದು. ಬೀಜ ನೇರವಾಗಿ ಊರುವುದರಿಂದ 85 ರಿಂದ 90 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಆದರೆ, ಸಸಿ ಮಾಡಿ ಬೆಳೆದರೆ ಸುಮಾರು 25 ದಿನ ಕೂಲಿ ಮತ್ತು ನೀರು ಉಳಿತಾಯ ಮಾಡಬಹುದು. ಪ್ಲಾಸ್ಟಿಕ್ ಹೊದಿಕೆಯಿಂದ ನೀರಿನ ಉಳಿತಾಯದ ಜೊತೆಗೆ ಕಳೆಗಳನ್ನು ಹತೋಟಿಯಲ್ಲಿಡಬಹುದು’ ಎಂದರು.

‘ತಾಂತ್ರಿಕ ಬೇಸಾಯ ಕ್ರಮಗಳಾದ ಸೂಕ್ತ ತಳಿಗಳ ಆಯ್ಕೆ, ಪೋಷಕಾಂಶಗಳ ನಿರ್ವಹಣೆ, ಹೆಚ್ಚಿನ ಕವಲುಗಳಿಗಾಗಿ ಕುಡಿ ಚಿವುಟುವಿಕೆ, ನೀರು ನಿರ್ವಹಣೆ, ಸಸ್ಯ ಪ್ರಚೋದಕಗಳ ಬಳಕೆ ಮತ್ತು ಕಳೆ ನಿರ್ವಹಣೆ ಮಾಡಿದಲ್ಲಿ ಹೆಚ್ಚಿನ ಮತ್ತು ಗುಣಮಟ್ಟದ ಇಳುವರಿ ಪಡೆಯಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.

ಸಹಾಯಕ ಪ್ರಾಧ್ಯಾಪಕ ಡಾ.ಪ್ರಶಾಂತ ಅವರು ಕಲ್ಲಂಗಡಿ ಬೆಳೆಗೆ ಬರುವ ಕೀಟ ಮತ್ತು ರೋಗಗಳ ಪರಿಚಯ ಮತ್ತು ನಿರ್ವಹಣೆ ಕುರಿತು ರೈತರಿಗೆ ಮಾಹಿತಿ ನೀಡಿದರು.

ಶರಣಪ್ಪ ಕ್ಯಾಸಪ್ಪನಹಳ್ಳಿ ಮತ್ತು ಸಾಬಣ್ಣ ಅರಕೆರಾ (ಬಿ) ಅವರು ಕಲ್ಲಂಗಡಿ ಬೆಳೆಯ ಅನುಭವವನ್ನು ಕಾರ್ಯಕ್ರಮದಲ್ಲಿ ಪಾಲ್ಗೊಂಡ ರೈತರೊಂದಿಗೆ ಹಂಚಿಕೊಂಡರು.

ಕಾರ್ಯಕ್ರಮ ಸಂಯೋಜಕರಾದ ಮಂಜುನಾಥ, ಉಮೇಶ ಕಟ್ಟಿಮನಿ, ಶಾಂತಗೌಡ ಹಾಗೂ 35ಕ್ಕೂ ಹೆಚ್ಚು ರೈತರು ಇದ್ದರು. ಸಹಾಯಕ ಕಾರ್ಯಕ್ರಮ ಅಧಿಕಾರಿ ಆನಂದ ಬೆಂಗೆರಿ ನಿರೂಪಿಸಿ, ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು