ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ತರಗತಿಗೆ ಬಹಿಷ್ಕಾರ; ಅಭ್ಯಾಸಕ್ಕೆ ಬರೆ

ಧರಣಿ ನಿರತ ‘ಅತಿಥಿ’ಗಳು; ಪರೀಕ್ಷಾ ಕಾರ್ಯದಲ್ಲಿ ಕಾಯಂ ಉಪನ್ಯಾಸಕರು
Published 8 ಡಿಸೆಂಬರ್ 2023, 16:35 IST
Last Updated 8 ಡಿಸೆಂಬರ್ 2023, 16:35 IST
ಅಕ್ಷರ ಗಾತ್ರ

ಯಾದಗಿರಿ: ಸೇವೆ ಕಾಯಂಗೊಳಿಸುವಂತೆ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಪ್ರತಿಭಟನೆ ನಡೆಸುತ್ತಿರುವುದು ಒಂದಡೆಯಾದರೆ, ಇನ್ನೊಂದಡೆ ಕಾಯಂ ಆಗಿ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರು ಕಾಲೇಜಿಗೆ ಚಕ್ಕರ್‌ ಹೊಡೆಯುತ್ತಿರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಅತಂತ್ರ ಸ್ಥಿತಿಗೆ ಸಿಲುಕಿದೆ.

ಜಿಲ್ಲೆಯಲ್ಲಿ ಯಾದಗಿರಿ, ಶಹಾಪುರ, ಸುರಪುರ, ಗುರುಮಠಕಲ್‌, ಕೆಂಭಾವಿಯಲ್ಲಿ ಪದವಿ ಕಾಲೇಜುಗಳಿದ್ದು, ಅತಿಥಿ ಉಪನ್ಯಾಸಕರ ಮೇಲೆಯೇ ತರಗತಿಗಳು ಅವಲಂಬನೆಯಾಗಿವೆ. ಸರ್ಕಾರಿ ಪದವಿ ಕಾಲೇಜುಗಳಲ್ಲಿ ಅನಿರ್ದಿಷ್ಟಾವಧಿ ತರಗತಿ ಬಹಿಷ್ಕರಿಸಿ ಅತಿಥಿ ಉಪನ್ಯಾಸಕರು ಹೋರಾಟ ನಡೆಸುತ್ತಿದ್ದರೆ, ವಿದ್ಯಾರ್ಥಿಗಳಿಗೆ ಸಂಕಷ್ಟ ಉಂಟಾಗಿದೆ.

ನಗರದ ಪದವಿ, ಸ್ನಾತಕೋತ್ತರ ಕಾಲೇಜಿನಲ್ಲಿ 2,500ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಆದರೆ, ಕಾಯಂ ಉಪನ್ಯಾಸಕರಿಗಿಂತ ಅತಿಥಿ ಉಪನ್ಯಾಸಕರೇ ಹೆಚ್ಚಾಗಿದ್ದಾರೆ. ನವೆಂಬರ್‌ 23ರಿಂದ ಅತಿಥಿ ಉಪನ್ಯಾಸಕರು ಧರಣಿ ನಡೆಸುತ್ತಿದ್ದಾರೆ. ಇನ್ನೂ ಮಹಿಳಾ ಪದವಿ ಕಾಲೇಜಿನಲ್ಲಿ 690ಕ್ಕೂ ಹೆಚ್ಚು ವಿದ್ಯಾರ್ಥಿನಿಯರಿದ್ದು, ಕೆಲ ವಿಷಯಗಳಿಗೆ ಕಾಯಂ ಉಪನ್ಯಾಸಕರ ಕೊರತೆ ಇದೆ.

ವಿದ್ಯಾರ್ಥಿಗಳು ಕಾಲೇಜಿಗೆ ಬರುವುದಿಲ್ಲ ಎನ್ನುವುದನ್ನು ಸಾಮಾನ್ಯವಾಗಿ ಕೇಳುತ್ತೇವೆ. ಆದರೆ, ಇಲ್ಲಿ ಲಕ್ಷಾಂತರ ರೂಪಾಯಿ ವೇತನ ಪಡೆಯುವ ಕಾಯಂ ಉಪನ್ಯಾಸಕರು ಕಾಲೇಜಿಗೆ ಬಾರದೆ ಪಾಠ ಮಾಡುತ್ತಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿರುವುದು ಉನ್ನತ ಶಿಕ್ಷಣ ಇಲಾಖೆಯ ಸಮಸ್ಯೆಯ ಭೀಕರತೆಯನ್ನು ತೆರೆದಿಟ್ಟುಕೊಂಡಿದೆ.

‘ನಮಗೆ ತರಗತಿಗಳು ನಡೆಯುತ್ತಿಲ್ಲ. ಕಾಯಂ ಉಪನ್ಯಾಸಕರು ಕೆಲವರು ತರಗತಿಗಳಿಗೆ ಬರುವುದಿಲ್ಲ ಸರ್. ಮೊದಲಿಂದಲೂ ಅವರು ಕಾಲೇಜಿಗೆ ಬರುತ್ತಿರಲಿಲ್ಲ. ಆದರೆ, ಅತಿಥಿ ಉಪನ್ಯಾಸಕರು ಇದ್ದುದರಿಂದ ಸಮಸ್ಯೆ ಕಡಿಮೆಯಿತ್ತು. ಈಗ ಅವರೂ ಪ್ರತಿಭಟನೆ ಮಾಡುತ್ತಿರುವ ಕಾರಣ ತರಗತಿಗಳೇ ಇಲ್ಲದಂತಾಗಿದೆ’ ಎಂದು ಕಲಾ ವಿಭಾಗದ ವಿದ್ಯಾರ್ಥಿಯೊಬ್ಬರು ವಿವರವಾಗಿ ತಿಳಿಸಿದರು.

ಸದ್ಯ ಎಲ್ಲಾ ವಿಭಾಗಗಳ (ಕಲಾ, ವಾಣಿಜ್ಯ ಮತ್ತು ವಿಜ್ಞಾನ) ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳು ಮಾತ್ರ ತರಗತಿಗಳಿಗೆ ಬರುತ್ತಿದ್ದಾರೆ. ಮೂರನೇ ಮತ್ತು ಐದನೇ ಸೆಮಿಸ್ಟರ್‌ನವರ ಪ್ರವೇಶ ನಡೆಯುತ್ತಿದ್ದು, ಅವರಿನ್ನೂ ಬರುತ್ತಿಲ್ಲ. ಮೂರೂ ವಿಭಾಗಗಳ ಎಲ್ಲಾ ವಿದ್ಯಾರ್ಥಿಗಳು ತರಗತಿಗಳಿಗೆ ಬಂದಾಗ ಸಾವಿರಾರು ವಿದ್ಯಾರ್ಥಿಗಳ ಸಂಖ್ಯೆ ಆಗುತ್ತದೆ. ಆದರೆ, ಉಪನ್ಯಾಸಕರು ಎಲ್ಲಿದ್ದಾರೆ? ಎಂದು ವಿದ್ಯಾರ್ಥಿಗಳು ಹೇಳಿದರು.

‌‘ಯುಜಿಸಿ ನಿಯಮಾವಳಿಗಳ ಪ್ರಕಾರ ಅತಿಥಿ ಉಪನ್ಯಾಸಕರಿಗೆ ಕಾಯಂ ಉಪನ್ಯಾಸಕರಿಗೆ ನೀಡುವಷ್ಟೇ ವೇತನ ಹಾಗೂ ಸೌಲಭ್ಯ ನೀಡಬೇಕು. ಆದರೆ, ಸರ್ಕಾರ ಎಲ್ಲ ನಿಯಮಾವಳಿಗಳನ್ನು ಗಾಳಿಗೆ ತೂರಿ ನಮ್ಮೆಲ್ಲರನ್ನು ಜೀತದಾಳುಗಳಂತೆ ನಡೆಸಿಕೊಳ್ಳುತ್ತಿದೆ’ ಎಂದು ಉಪನ್ಯಾಸಕರು ಬೇಸರ ವ್ಯಕ್ತಪಡಿಸಿದರು.

‘ಸೇವಾ ಭದ್ರತೆ ಒದಗಿಸಿ ಹಂತ–ಹಂತವಾಗಿ ಎಲ್ಲಾ ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸುವಂತೆ ಪ್ರತಿ ಸರ್ಕಾರಗಳನ್ನು ಒತ್ತಾಯಿಸುತ್ತಲೇ ಬಂದಿದ್ದು, ನಿರಂತರ ಪ್ರತಿಭಟನೆ ಹಾಗೂ ಮುಷ್ಕರ ಮಾಡುತ್ತಲೇ ಬಂದಿದ್ದೇವೆ.
ಇಲ್ಲಿಯವರೆಗಿನ ಎಲ್ಲಾ ಸರ್ಕಾರಗಳು ನಮ್ಮ ಬೇಡಿಕೆಗಳಿಗೆ ಸ್ಪಂದಿಸದೆ ನಿರ್ಲಕ್ಷ್ಯ ವಹಿಸುತ್ತಾ ಬಂದಿವೆ.
ಈ ಬಾರಿ ನಮ್ಮ ಏಕ ಮಾತ್ರ ಬೇಡಿಕೆ ಸೇವಾ ಕಾಯಂಗೆ ಆಗ್ರಹಿಸಿ ಇಡೀ ರಾಜ್ಯದಾದ್ಯಂತ ಕಾಲೇಜುಗಳ ತರಗತಿಗಳನ್ನು ಬಹಿಷ್ಕರಿಸಿ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳುತ್ತಿದ್ದೇವೆ’ ಎಂದು ಹೇಳುತ್ತಾರೆ.

‘ಸುರಪುರ ತಾಲ್ಲೂಕಿನಲ್ಲಿ ಎರಡು ಸರ್ಕಾರಿ ಪದವಿ ಕಾಲೇಜುಗಳಿವೆ. ಸುರಪುರದಲ್ಲಿ 33 ಅತಿಥಿ ಉಪನ್ಯಾಸಕರು, ಕೆಂಭಾವಿಯಲ್ಲಿ 15 ಜನ ಅತಿಥಿ ಉಪನ್ಯಾಸಕರಿದ್ದಾರೆ. ಸುರಪುರದಲ್ಲಿ 20, ಕೆಂಭಾವಿಯಲ್ಲಿ 10 ಜನ ಕಾಯಂ ಉಪನ್ಯಾಸಕರು ಇದ್ದಾರೆ. ಶೇ 75–80 ಅತಿಥಿ ಉಪನ್ಯಾಸಕರ ಮೇಲೆ ಅವಲಂಬನೆ ಇರುವುದರಿಂದ ತರಗತಿಗಳು ನಡೆಯುತ್ತಿಲ್ಲ’ ಎಂದು ವಿದ್ಯಾರ್ಥಿಗಳು ದೂರಿದರು.

ಪ್ರತಿಭಟನೆಯಿಂದಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಎಲ್ಲಿ ಕುಂಠಿತವಾಗುತ್ತದೆಯೋ ಎಂದು ಆತಂಕ ಪಡುವಂತಾಗಿದೆ ಎಂದು ಕೆಲ ಪಾಲಕರು ದೂರಿದರು.

ಪೂರಕ ವರದಿ: ಟಿ.ನಾಗೇಂದ್ರ, ಅಶೋಕ ಸಾಲವಾಡಗಿ, ಭೀಮಶೇನರಾವ ಕುಲಕರ್ಣಿ, ಎಂ.ಪಿ.ಚಪೆಟ್ಲಾ

ಶಹಾಪುರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ
ಶಹಾಪುರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕಟ್ಟಡ
ಗುರುಮಠಕಲ್ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಎಡಿಸಿ ಶರಣಬಸಪ್ಪ ಕೋಟೆಪ್ಪಗೊಳ ಅವರಿಗೆ ಮನವಿ ಪತ್ರ ನೀಡಿದರು
ಗುರುಮಠಕಲ್ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಎಡಿಸಿ ಶರಣಬಸಪ್ಪ ಕೋಟೆಪ್ಪಗೊಳ ಅವರಿಗೆ ಮನವಿ ಪತ್ರ ನೀಡಿದರು

ಅತಿಥಿ ಉಪನ್ಯಾಸಕರು ಸೇವಾ ಕಾಯಂಕಾತಿಗೆ ತರಗತಿ ಬಹಿಷ್ಕರಿಸಿ ಪ್ರತಿಭಟನೆ ಕೈಗೊಂಡಿದ್ದು ಇದರಿಂದ ತರಗತಿ ನಡೆಸಲು ತೊಂದರೆಯಾಗಿದೆ. ಪದವಿ ಸ್ನಾತಕೋತ್ತರ ಕೇಂದ್ರದಲ್ಲಿ 22 ಜನ ಕಾಯಂ 77 ಜನ ಅತಿಥಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ.

-ಪ್ರೊ. ಸುಭಾಶ್ಚಂದ್ರ ಕೌಲಗಿ ಪ್ರಾಂಶುಪಾಲ ಪದವಿ ಕಾಲೇಜು ಯಾದಗಿರಿ

ಈಗ ಅತಿಥಿ ಉಪನ್ಯಾಸಕರ ಧರಣಿಯಿಂದ ಮತ್ತು ನಮ್ಮ ಕೆಲ ಕಾಯಂ ಸಿಬ್ಬಂದಿ ಪರೀಕ್ಷಾ ಕಾರ್ಯ ಮೌಲ್ಯಮಾಪನ ಮತ್ತು ಕಾರ್ಯಾಗಾರಕ್ಕೆ ಹೋಗಿರುವ ಹಿನ್ನೆಲೆಯಲ್ಲಿ ತರಗತಿಗಳು ನಡೆಸುವಲ್ಲಿ ಸ್ವಲ್ಪ ವ್ಯತ್ಯಯವಾಗಿದೆ. ಆದರೆ ಇದ್ದವರಿಂದಲೇ ತರಗತಿಗಳನ್ನು ನಿರ್ವಹಿಸುತ್ತಿದ್ದೇವೆ

-ಗಚ್ಚಿನಮನಿ ಮೋನಪ್ಪ ಪದವಿ ಕಾಲೇಜು ಪ್ರಾಂಶುಪಾಲ ಗುರುಮಠಕಲ್‌

ಪ್ರತಿದಿನ ಮೂರು ತರಗತಿಗಳು ಮಾತ್ರ ನಡೆಯುತ್ತಿದ್ದು ಉಳಿದ ತರಗತಿ ತೆಗೆದುಕೊಳ್ಳುವವರು ಯಾರೂ ಇಲ್ಲದಂತೆ ಆಗಿದೆ. ಇದರಿಂದ ನಮ್ಮ ಭವಿಷ್ಯ ಅತಂತ್ರವಾಗಿದೆ.

-ಪ್ರಭಾವತಿ ಪದವಿ ವಿದ್ಯಾರ್ಥಿನಿ

ಸರ್ಕಾರಿ ಪದವಿ ಕಾಲೇಜುಗಳಲ್ಲಿ ಪ್ರಥಮ ಸೆಮಿಸ್ಟರ್‌ ತರಗತಿ ನಡೆಯದ ಕಾರಣ ಉತ್ಸಾಹದಿಂದ ಬಂದ ವಿದ್ಯಾರ್ಥಿಗಳಿಗೆ ನಿರಾಶೆ ಉಂಟಾಗಿದೆ. ಪ್ರತಿದಿನ ಕಾಲೇಜಿಗೆ ಬಂದು ಹೋಗುವಂತೆ ಆಗಿದೆ

-ರಮೇಶ ಕುಮಾರ ವಿದ್ಯಾರ್ಥಿ

ತಿಂಗಳಿಡೀ ಹಾಜರಿಗೆ ಸಹಿ!

ಯಾದಗಿರಿ: ಜಿಲ್ಲೆಯ ಯಾದಗಿರಿ ಗುರುಮಠಕಲ್‌ ಸೇರಿದಂತೆ ಎಲ್ಲ ತಾಲ್ಲೂಕುಗಳಲ್ಲಿ ಕೆಲ ಕಾಯಂ ಉಪನ್ಯಾಸಕರು ‘ಹುಣ್ಣಿಮೆಗಷ್ಟೇ ಕಾಣುವ ಪೂರ್ಣಚಂದ್ರ’ನಂತೆ ತಿಂಗಳಿಗೊಮ್ಮೆ ಬರುತ್ತಾರೆ ಮತ್ತು ತಿಂಗಳಿಡೀ ಹಾಜರಿಗೆ ಸಹಿ ಹಾಕಿ ಹೋಗುತ್ತಾರೆ. ಅವರನ್ನು ಪ್ರಶ್ನಿಸುವಂತಿಲ್ಲ. ಅವರಲ್ಲಿ ಕೆಲವರಿಗೆ ‘ದೊಡ್ಡವರ ಬೆಂಬಲ’ವಿರುತ್ತದೆ ಮತ್ತೆ ಕೆಲವರು ಸಮುದಾಯದ ಪ್ರಭಾವವನ್ನೂ ಬಳಸುತ್ತಾರೆ. ಅಂಥವರ ವಿರುದ್ಧ ಯಾರೊಬ್ಬರೂ ಮಾತನಾಡುವುದಿಲ್ಲ. ವಿದ್ಯಾರ್ಥಿಗಳು ಎಷ್ಟೇ ಅಳಲು ತೋಡಿಕೊಂಡರೂ ಕ್ರಮವಾಗುವುದಿಲ್ಲ. ಒಂದೊಮ್ಮೆ ಕ್ರಮಕ್ಕೆ ಮುಂದಾದರೆ ಪ್ರಾಂಶುಪಾಲರ ಕುರ್ಚಿಗೂ ಸಮಸ್ಯೆ. ಆದ್ದರಿಂದ ಅವರು ‘ಕಾಲೇಜಿಗೆ ಬಾರದೇ ಲಕ್ಷ–ಲಕ್ಷದ ವೇತನ ಪಡೆದು ಮೋಜು ಮಾಡುತ್ತಾರೆ’ ಎನ್ನುವ ಆರೋಪಗಳು ಕೇಳಿಬರುತ್ತಿವೆ.

ಅತಂತ್ರ ಸ್ಥಿತಿಯಲ್ಲಿ ವಿದ್ಯಾರ್ಥಿಗಳು

ಶಹಾಪುರ: ‘ಶಹಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 65 ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದು ಹತ್ತು ದಿನಗಳಿಂದ ಕಾಲೇಜಿನಿಂದ ಹೊರಗುಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಕಾಯಂ ಸೇವೆಯಲ್ಲಿರುವ ಹೆಚ್ಚಿನ ಉಪನ್ಯಾಸಕರು ಸಹ ಹಿಂದೆ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ಕಾಯಂಗೊಂಡವರು ಆಗಿದ್ದಾರೆ. ಅದರಲ್ಲಿ ಹೆಚ್ಚಿನ ಉಪನ್ಯಾಸಕರು ಸ್ಥಳೀಯ ನಿವಾಸಿಗಳು ಹಾಗೂ ನೆರೆ ತಾಲ್ಲೂಕಿನವರು ಆಗಿದ್ದಾರೆ. ನಿಗದಿಪಡಿಸಿದ ಸಮಯಕ್ಕೆ ಕಾಲೇಜಿಗೆ ಬರುವುದಿಲ್ಲ ಮತ್ತು ಸರಿಯಾಗಿ ಪಾಠ ಮಾಡುವುದಿಲ್ಲ’ ಎಂದು ಆರೋಪಿಸಿ ಈಚೆಗೆ ವಿದ್ಯಾರ್ಥಿಗಳು ಪ್ರತಿಭಟನೆಗಿಳಿದಿರುವುದು ಇಡೀ ಶಿಕ್ಷಣ ವ್ಯವಸ್ಥೆಯ ಅಧೋಗತಿಗೆ ಹಿಡಿದ ಕೈಗನ್ನಡಿಯಾಗಿದೆ' ಎನ್ನುತ್ತಾರೆ ಶಿಕ್ಷಣ ಚಿಂತಕರು ಒಬ್ಬರು. ‘ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಲವು ವರ್ಷದಿಂದ ಕೆಲ ಉಪನ್ಯಾಸಕರು ಠಿಕಾಣಿ ಹೂಡಿದ್ದಾರೆ. ಪಾಠ ಮಾಡುವುದಿಲ್ಲ ಮತ್ತು ಸರಿಯಾಗಿ ಕಾಲೇಜಿಗೂ ಆಗಮಿಸುವುದಿಲ್ಲ ಎಂಬ ಆರೋಪವನ್ನು ಕೆಲ ವಿದ್ಯಾರ್ಥಿಗಳು ಮಾಡಿದ್ದಾರೆ. ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಅನಿರೀಕ್ಷಿತವಾಗಿ ಕಾಲೇಜಿಗೆ ಭೇಟಿ ನೀಡಿ ಹದಗೆಟ್ಟುಹೋಗಿರುವ ವ್ಯವಸ್ಥೆಯನ್ನು ಸರಿಪಡಿಸಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಬೇಕು’ ಎಂದು ಶಿಕ್ಷಣ ಪ್ರೇಮಿಗಳು ಮನವಿ ಮಾಡಿದ್ದಾರೆ. ಆದರೆ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಇಂಥ ಸಮಸ್ಯೆ ಇಲ್ಲ. ಇಲ್ಲಿ ಹೆಚ್ಚಿನ ಉಪನ್ಯಾಸಕರು ಕಾಯಂ ಸೇವೆಯಲ್ಲಿದ್ದಾರೆ. ಅತಿಥಿ ಉಪನ್ಯಾಸಕರ ಹೊರೆಯನ್ನು ತಾತ್ಕಾಲಿಕವಾಗಿ ನಿಭಾಯಿಸಿಕೊಂಡು ಪಾಠ ಮಾಡುತ್ತಿರುವುದು ವಿವಿಧ ಕಾಲೇಜುಗಳಿಗೆ ಭೇಟಿ ನೀಡಿದಾಗ ಕಂಡು ಬಂದಿತು.

‘ತರಗತಿ ನಡೆಸುವಂತೆ ಕೋರುವ ವಿದ್ಯಾರ್ಥಿಗಳು’

ಗುರುಮಠಕಲ್: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯದ ಅತಿಥಿ ಉಪನ್ಯಾಸಕರು ಬೇಡಿಕೆ ಈಡೇರಿಕೆಗೆ ಧರಣಿಯಲ್ಲಿ ನಿರತರಾಗಿದ್ದರೆ ಇರುವ 8 ಕಾಯಂ ಉಪನ್ಯಾಸಕರಲ್ಲಿ ಕೆಲವರಿಗೆ ಪರೀಕ್ಷಾ ಕಾರ್ಯ ಮತ್ತು ಮೌಲ್ಯಮಾಪನ ಕಾರ್ಯಕ್ಕೆ ನಿಯೋಜಿಸಿದ್ದರಿಂದ ಸದ್ಯ ತರಗತಿಗಳು ನಡೆಯುತ್ತಿಲ್ಲ. ಕಾಲೇಜಿನ ಒಟ್ಟು 44 ಜನ ಬೋಧಕ ಸಿಬ್ಬಂದಿಯಲ್ಲಿ 36 ಜನ ಅತಿಥಿ ಉಪನ್ಯಾಸಕರೇ ಕಾರ್ಯನಿರ್ವಹಿಸುತ್ತಿದ್ದಾರೆ. ಕೇವಲ 8 ಜನ ಮಾತ್ರ ಪೂರ್ಣಾವಧಿ ಕಾಯಂ ಉಪನ್ಯಾಸಕರಿದ್ದಾರೆ. ಅವರಲ್ಲಿ ಕೆಲವರಿಗೆ ಈಗ ಪರೀಕ್ಷಾ ಮತ್ತು ಮೌಲ್ಯಮಾಪನ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ಪ್ರಾಂಶುಪಾಲ ಗಚ್ಚಿನಮನಿ ಮೋನಪ್ಪ ಮಾಹಿತಿ ನೀಡಿದರು. ಸದ್ಯ ಕಾಲೇಜಿನಲ್ಲಿ ಗಚ್ಚಿನಮನಿ ಮೋನಪ್ಪ(ಅರ್ಥಶಾಸ್ತ್ರ) ಬಾಬುರಾಯ ದೊರೆ (ಕನ್ನಡ) ಒಡ್ಕರ್ ಚನ್ನಬಸಪ್ಪ (ಅರ್ಥಶಾಸ್ತ್ರ) ಪುರುಷೋತ್ತಮ ಜೋಶಿ (ಭೌತಶಾಸ್ತ್ರ) ಇಮ್ರಾನ್ ಖಾಜಿ (ವಾಣಿಜ್ಯಶಾಸ್ತ್ರ) ಮಾಲತಿ (ವಾಣಿಜ್ಯ ಶಾಸ್ತ್ರ) ಅವರು ಬೋಧನೆ ಮಾಡುತ್ತಿದ್ದಾರೆ. ಉಳಿದವರು ಪರೀಕ್ಷಾ ಕಾರ್ಯ ಮತ್ತು ಮೌಲ್ಯಮಾಪನಕ್ಕೆ ನಿಯುಕ್ತರಾಗಿದ್ದಾರೆ ಎಂದು ಕಾಲೇಜಿನಲ್ಲಿ ಮಾಹಿತಿ ನೀಡಿದರು. ಸಂಬಂಧಿಸಿದವರು ಏನಾದರೂ ಮಾಡಿ ಕಾಲೇಜಿನಲ್ಲಿ ನಿತ್ಯ ಪಾಠ ಜರುಗುವಂತೆ ಕ್ರಮವಹಿಸಿದರೆ ಮಾತ್ರ ವಿದ್ಯಾರ್ಥಿಗಳಿಗೆ ಸಹಾಯವಾಗುತ್ತದೆ. ಇಲ್ಲವಾದರೆ ಶೈಕ್ಷಣಿಕ ಗುಣಮಟ್ಟದ ಮೇಲೆ ವ್ಯತಿರಿಕ್ತ ಪ್ರಭಾವ ಬೀರಲಿದೆ ಎಂದು ಸಾಮಾಜಿಕ ಕಾರ್ಯಕರ್ತ ಸಂಜು ಅಳೆಗಾರ ಕೋರಿದರು.

ಹುಣಸಗಿ: ವಿದ್ಯಾರ್ಥಿಗಳು ಕಂಗಾಲು

ಹುಣಸಗಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರ ಪ್ರತಿಭಟನೆಯಿಂದಾಗಿ ಸಾಕಷ್ಟು ತರಗತಿಗಳು ನಡೆಯದೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಿನ್ನಡೆಯಾಗಿದೆ ಎಂಬ ಮಾತುಗಳು ಪಾಲಕರಿಂದ ಕೇಳಿ ಬರುತ್ತಿವೆ. ‘ಹಲವಾರು ಸೌಲಭ್ಯಗಳ ಕೊರತೆಯ ಮಧ್ಯೆಯೂ ಹುಣಸಗಿ ಪಟ್ಟಣದಲ್ಲಿ ಕಳೆದ 2013ರಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜನ್ನು ಆರಂಭಿಸಲಾಯಿತು. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ತಕ್ಕಂತೆ ಆಯಾ ವಿಷಯಗಳ ಬೋಧಕರನ್ನು ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಪ್ರಾಂಶುಪಾಲರು ಸೇರಿದಂತೆ ಒಟ್ಟು ಆರು ಕಾಯಂ ಉಪನ್ಯಾಸಕರಿದ್ದು 13 ಅತಿಥಿ ಉಪನ್ಯಾಸಕರು ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ಪ್ರಾಂಶುಪಾಲ ಚನ್ನಬಸಯ್ಯ ಹಿರೇಮಠ ತಿಳಿಸಿದರು. ‘ಬಿಎ. ಬಿಕಾಂ ತರಗತಿಗಳಲ್ಲಿ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಆದರೆ ಕನ್ನಡ ಇಂಗ್ಲಿಷ್ ತರಗತಿಗಳು ನಡೆಯುತ್ತಿದ್ದು ಉಳಿದ ವಿಷಯಕ್ಕೆ ತರಗತಿ ನಡೆಯದೇ ಇರುವುದರಿಂದ ವಿದ್ಯಾರ್ಥಿಗಳು ಮಧ್ಯದ ಅವಧಿಯಲ್ಲೇ ಮನೆಗೆ ತೆರಳುತ್ತಿದ್ದಾರೆ. ಇತರ ವಿಷಯದ ಉಪನ್ಯಾಸಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವುದರಿಂದಾಗಿ ಯಾರು ಕಾಲೇಜಿಗೆ ಬರುತ್ತಿಲ್ಲ. ಅವರ ಮಾಹಿತಿಯನ್ನು ಪ್ರತಿದಿನ ಇಲಾಖೆಗೆ ಕಳಿಸಿಕೊಡಲಾಗುತ್ತಿದೆ’ ಎಂದು ಪ್ರಾಂಶುಪಾಲ ಹಿರೇಮಠ ಅವರು ತಿಳಿಸಿದರು.

‘ತರಗತಿಗಳು ನಡೆಸುವಂತೆ ಮಾಡಿ ಸರ್

ಗುರುಮಠಕಲ್: ‘ಅತಿಥಿ ಉಪನ್ಯಾಸಕರು ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಧರಣಿ ನಡೆಸುತ್ತಿರುವುದರಿಂದ ನಮಗೆ ಒಂದೆರಡು ತರಗತಿಗಳು ಬಿಟ್ಟರೆ ಉಳಿದ ತರಗತಿಗಳು ನಡೆಯುತ್ತಿಲ್ಲ. ನಮಗೆ ತರಗತಿಗಳು ನಡೆಸುವಂತೆ ಮಾಡಿ ಸರ್’ ಎಂದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚುವರಿ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಅವರಿಗೆ ಮನವಿ ಮಾಡಿದರು. ಪಟ್ಟಣದ ಸರ್ಕಾರಿ ಕಾಲೇಜಿನಲ್ಲಿ ಆಯೋಜಿಸಿದ್ದ ಬಿಎಲ್ಒಗಳ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಹಿಂದಿರುಗುವ ವೇಳೆ ಭೇಟಿಯಾದ ವಿದ್ಯಾರ್ಥಿಗಳು ಮನವಿ ಪತ್ರ ನೀಡಿ ತಮ್ಮ ಸಮಸ್ಯೆಯನ್ನು ವಿವರಿಸಿದರು. ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ‘ಅತಿಥಿ ಉಪನ್ಯಾಸಕರ ಸಮಸ್ಯೆ ಸರ್ಕಾರದ ಹಂತದಲ್ಲಿ ಬಗೆಹರಿಯಬೇಕಿದೆ. ನಿಮ್ಮ ಮನವಿಯನ್ನು ಸರ್ಕಾರಕ್ಕೆ ತಲುಪಿಸುವೆ. ನಿಮಗೆ ತರಗತಿಗಳು ನಡೆಸುವಂತೆ ಕಾಯಂ ಉಪನ್ಯಾಸಕರಿಗೆ ನಿರ್ದೇಶಿಸುವ ಜತೆಗೆ ನನ್ನಿಂದಾದ ಸಹಕಾರ ನೀಡುತ್ತೇನೆ’ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT