ಭಾನುವಾರ, ಏಪ್ರಿಲ್ 11, 2021
29 °C
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು

ಮಹಿಳಾ ದಿನಾಚರಣೆ: ‌ಶರಣಮ್ಮ ಬದುಕಿಗೆ ‘ಕೌದಿ’ ಆಸರೆ

ಬಿ.ಜಿ.ಪ‍್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ನನಗೆ ಸುಮಾರು 15–20 ವರ್ಷ ಇರುವಾಗಲಿಂದ ತಾಯಿ, ಅಕ್ಕಪಕ್ಕದ ಮನೆಯವರನ್ನು ನೋಡಿ ಕೌದಿ ಹೊಲಿಯುವುದನ್ನು ಕಲಿತೆ. ಇದೇ ನನಗೆ ರಾಜ್ಯೋತ್ಸವ ಪ್ರಶಸ್ತಿ ತಂದುಕೊಟ್ಟಿದೆ’.

ಹೀಗೆ ಹೇಳುವ ಶರಣಮ್ಮ ಮಲ್ಲಪ್ಪ ಅವರು ಇಲ್ಲಿನ ಅಂಬೇಡ್ಕರ್ ನಗರದ ನಿವಾಸಿ. ಮನೆಯಲ್ಲಿ ತಾಯಿಯಿಂದ ಕೌದಿ ಹೊಲಿಯುವುದು ಕಲಿತ ಅವರು ಮದುವೆಯಾದ ಬಳಿಕ ಪತಿಯ ನೆರವಿನೊಂದಿಗೆ ಚಪ್ಪಲಿ ಹೊಲಿಯುವುದು ಕಲಿತರು.

‘ನಮಗೆ 6 ಪುತ್ರಿಯರು. ಎಲ್ಲರ ಮದುವೆಯಾಗಿದೆ. ನನ್ನ ಆಸರೆಗಾಗಿ ಕೊನೆಯ ಮಗಳನ್ನು ನಮ್ಮ ಮನೆಯಲ್ಲಿ ಇಟ್ಟುಕೊಂಡಿರುವೆ. ಐದು ವರ್ಷಗಳ ಹಿಂದೆ ಪತಿ ತೀರಿಕೊಂಡರು. ಜೀವನ ಕಷ್ಟವಾಗಿದೆ’ ಎಂದು ಶರಣಮ್ಮ ತಿಳಿಸಿದರು.

‘ಚಿಕ್ಕ ಮಕ್ಕಳಿಗೆ 2 ಮೊಳ, ದೊಡ್ಡವರಿಗೆ 4ರಿಂದ 6 ಮೊಳ ತನಕ ಕೌದಿ ಬೇಕು. ಅವರೇ ತುಂಡು ಬಟ್ಟೆಗಳನ್ನು ತಂದು ಕೊಟ್ಟರೆ ನಾವು ಅದಕ್ಕೆ ಅಂದವಾಗಿ ಕೌದಿ ಹೊಲಿಯುತ್ತೇವೆ. ತುಂಬಾ ನಾಜೂಕಿನ ಕೆಲಸ. ಸಣ್ಣವಳಿದ್ದಾಗ ನಾನು ಎಂಟಾಣೆಗೆ ಕೌದಿ ಹೊಲಿದಿರುವೆ. ಕೆಲವರು ಹಣ ಕೊಟ್ಟರೆ ಇನ್ನೂ ಕೆಲವರು ದವಸ ಧಾನ್ಯ ನೀಡುತ್ತಿದ್ದರು. ಕೌದಿ ಹೊಲಿಯಲು ಈಗ ₹ 200 ಕೂಲಿ ಇದೆ. ಇದೇನೂ ವರ್ಷ ಪೂರ್ತಿ ಇರುವ ಕೆಲಸವಲ್ಲ’ ಎಂದರು.

‘ಪತಿ ಚಪ್ಪಲಿ ಹೊಲಿಯುವಾಗ, ಚರ್ಮ ಹದಗೊಳಿಸುವುದು ಸೇರಿದಂತೆ ಸಣ್ಣಪುಟ್ಟ ಕೆಲಸ ಮಾಡಿಕೊಡುತ್ತಿದ್ದೆ. ಇದಾದ ನಂತರ ನಾನೇ ಚಪ್ಪಲಿ ಹೊಲೆಯುವುದನ್ನು ಕಲಿತೆ. ವಿವಿಧೆಡೆ ತೆರಳಿ ಚಪ್ಪಲಿ ಮಾರಾಟವೂ ಮಾಡಿರುವೆ. ನನ್ನನ್ನು ಸರ್ಕಾರದವರು ಗುರುತಿಸಿ 2017ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ನೀಡಿ ಪುರಸ್ಕರಿಸಿದ್ದಾರೆ. ಇದಾದ ನಂತರವೂ ಕನ್ನಡ ಸಾಹಿತ್ಯ ಪರಿಷತ್‌ ಕೆಲ ಸಂಘ ಸಂಘಟನೆಗಳು ಮನೆ ತನಕ ಬಂದು ಸನ್ಮಾನಿಸಿದ್ದಾರೆ’ ಎಂದರು.

‘ಜಾಗವಿದ್ದರೂ ಮನೆ ಕಟ್ಟಿಕೊಳ್ಳಲು ಬಡತನ ಅಡ್ಡಿಯಾಗಿತ್ತು. ನಾನು ಕೆಲಸ ಮಾಡುವ ಮನೆಗಳವರೇ ತಲಾ ಇಂತಿಷ್ಟು ಹಣ ಸಂಗ್ರಹಿಸಿ ನಮಗೆ ಮನೆ ನಿರ್ಮಿಸಿಕೊಟ್ಟಿದ್ದಾರೆ’ ಎಂದು ತಿಳಿಸಿದರು.

‘ಸ್ವಾವಲಂಬಿ ಜೀವನ ನಡೆಸುವ ಶರಣಮ್ಮ ಅಜ್ಜಿ ನಮಗೆ ಮಾದರಿಯಾಗದ್ದಾರೆ. ಮಹಿಳೆಯಾಗಿದ್ದರೂ ಪುರುಷರು ಮಾಡುವ ಕೆಲಸಗಳನ್ನು ಇವರು ಮಾಡುತ್ತಿರುವುದು ಹೆಮ್ಮೆಯ ವಿಷಯ. ಇವರಿಗೆ ಸರ್ಕಾರದಿಂದ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು’ ಎನ್ನುತ್ತಾರೆ ದುರ್ಗಪ್ಪ ಪೂಜಾರಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು