ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ | ಜೆಜೆಎಂ ಯೋಜನೆ ಅನುಷ್ಠಾನ: 695 ಕಾಮಗಾರಿಗಳಲ್ಲಿ 384 ಪೂರ್ಣ

Published 25 ಮಾರ್ಚ್ 2024, 5:41 IST
Last Updated 25 ಮಾರ್ಚ್ 2024, 5:41 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಜಲ ಜೀವನ ಮಿಷನ್‌ (ಜೆಜೆಎಂ) ಯೋಜನೆಯಡಿ 2020ರ ಅಕ್ಟೋಬರ್‌ನಲ್ಲಿ ಮನೆ ಮನೆಗೆ ನೀರು ಕಲ್ಪಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಇಲ್ಲಿಯತನಕ ಎಲ್ಲಿಯೂ ಪೂರ್ಣ ಪ್ರಮಾಣದಲ್ಲಿ ನೀರು ನಲ್ಲಿಯಲ್ಲಿ ಹರಿದಿಲ್ಲ.

ಜಿಲ್ಲೆಯಲ್ಲಿ ನಾಲ್ಕು ಹಂತಗಳಲ್ಲಿ ಕಾಮಗಾರಿ ಕೈಗೊಳ್ಳಲಾಗಿದ್ದು, 695 ಕಾಮಗಾರಿಗಳಲ್ಲಿ ಕೇವಲ 384 ಪೂರ್ಣಗೊಂಡಿದೆ. ಉಳಿದೆಡೆ ಕುಂಟುತ್ತಾ ಸಾಗುತ್ತಿದೆ.

ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ ಗ್ರಾಮ ಮುಖ್ಯ ರಸ್ತೆಯನ್ನು ಕೊರೆದು ಕಳಪೆಮಟ್ಟದ ಪೈಪು ಅಳವಡಿಸಿದರು. ರಸ್ತೆಯು ಹಾಳು ಮಾಡುವುದರ ಜೊತೆಗೆ ಕಳಪೆ ಕಾಮಗಾರಿಯಿಂದ ಮತ್ತಷ್ಟು ನಷ್ಟವನ್ನು ಸಾರ್ವಜನಿಕರು ಅನುಭವಿಸುವಂತಾಯಿತು.

ಕಳಪೆ ಕಾಮಗಾರಿ ನಡೆದ ಬಗ್ಗೆ ಮೇಲಧಿಕಾರಿಗೆ ದೂರು ನೀಡಲು ಮುಂದಾದರೆ ಸ್ಥಳೀಯ ರಾಜಕೀಯ ಮುಖಂಡರು ತಮ್ಮ ಪ್ರಭಾವ ಬಳಸಿಕೊಂಡು ಅಲ್ಲೆ ಚಿವುಟಿ ಹಾಕಿದರು. ನಾಮಕಾವಸ್ತೆ ನಲ್ಲಿ(ನಳ) ಜೋಡಣೆ ಮೀಟರ್ ಅಳವಡಿಕೆ ಕಾಣುತ್ತವೆ. ನೀರು ಮಾತ್ರ ನಲ್ಲಿಯಲ್ಲಿ ಜಿನುಗುತ್ತಿಲ್ಲ. ಜಿಲ್ಲೆಯ ಬಹುತೇಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ಅಕ್ರಮದ ಸಿಂಹ ಪಾಲು ಇದಾಗಿದೆ ಎಂದು ಗ್ರಾಮಸ್ಥರು ದೂರುತ್ತಾರೆ.

ಏನಿದು ಯೋಜನೆ?: ಜಿಲ್ಲೆಯ ಗ್ರಾಮಾಂತರ ಪ್ರದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಗೆ ಪ್ರತಿನಿತ್ಯ 55 ಲೀಟರ್ ಶುದ್ಧವಾದ ನೀರನ್ನು ಈ ಯೋಜನೆ ಮುಖಾಂತರ ಪೂರೈಸಲಾಗುತ್ತದೆ. ಈ ಮೂಲಕ ಪ್ರತಿಯೊಬ್ಬರಿಗೆ ಶುದ್ಧ ಕುಡಿಯುವ ನೀರು ಸಿಗಬೇಕು ಎನ್ನುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ. ಆದರೆ, ಉದ್ದೇಶ ಮಾತ್ರ ಈಡೇರುತ್ತಿಲ್ಲ.

ಪ್ರಶ್ನಿಸುವುದನ್ನು ಮರೆತ ಜನತೆ: ‘ಕೋಟ್ಯಂತರ ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳ್ಳುತ್ತಿರುವಾಗ ಸಮರ್ಪಕವಾಗಿ ಯೋಜನೆ ಜಾರಿಯಾಗುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಆಯಾ ಗ್ರಾಮದ ಮುಖಂಡರು, ಸಂಘ–ಸಂಸ್ಥೆಯ ನಾಯಕರು ಜಾಣ ಕಿವುಡರಾಗಿ ಮರೆತರು. ಕಳಪೆ ಕಾಮಗಾರಿಯ ಬಗ್ಗೆ ಪ್ರಶ್ನಿಸುವುದನ್ನು ಜನತೆ ಮರೆತರು‘ ಎನ್ನುತ್ತಾರೆ ರೈತ ಮಾನಯ್ಯ.

ಪೂರಕ ವರದಿ: ಟಿ.ನಾಗೇಂದ್ರ, ಅಶೋಕ ಸಾಲವಾಡಗಿ, ಭೀಮಶೇನರಾವ ಕುಲಕರ್ಣಿ

ಯಾದಗಿರಿ ತಾಲ್ಲೂಕಿನ ಯಡ್ಡಳ್ಳಿಯಲ್ಲಿ ಜೆಜೆಎಂ ಯೋಜನೆಯಡಿ ನಳ ಅಳವಡಿಸಿರುವುದು
ಪ್ರಜಾವಾಣಿ ಚಿತ್ರಗಳು/ ರಾಜಕುಮಾರ ನಳ್ಳಿಕರ
ಯಾದಗಿರಿ ತಾಲ್ಲೂಕಿನ ಯಡ್ಡಳ್ಳಿಯಲ್ಲಿ ಜೆಜೆಎಂ ಯೋಜನೆಯಡಿ ನಳ ಅಳವಡಿಸಿರುವುದು ಪ್ರಜಾವಾಣಿ ಚಿತ್ರಗಳು/ ರಾಜಕುಮಾರ ನಳ್ಳಿಕರ
ಯಾದಗಿರಿ ತಾಲ್ಲೂಕಿನ ಬಂದಳ್ಳಿಯಲ್ಲಿ ಜೆಜೆಎಂ ಕಾಮಗಾರಿಗಾಗಿ ಪೈಪ್‌ ಹಾಕಿರುವುದು
ಪ್ರಜಾವಾಣಿ ಚಿತ್ರಗಳು/ ರಾಜಕುಮಾರ ನಳ್ಳಿಕರ
ಯಾದಗಿರಿ ತಾಲ್ಲೂಕಿನ ಬಂದಳ್ಳಿಯಲ್ಲಿ ಜೆಜೆಎಂ ಕಾಮಗಾರಿಗಾಗಿ ಪೈಪ್‌ ಹಾಕಿರುವುದು ಪ್ರಜಾವಾಣಿ ಚಿತ್ರಗಳು/ ರಾಜಕುಮಾರ ನಳ್ಳಿಕರ
ಯಾದಗಿರಿ ತಾಲ್ಲೂಕಿನ ಬಂದಳ್ಳಿಯಲ್ಲಿ ಜೆಜೆಎಂ ಯೋಜನೆಯಡಿ ಪೈಪ್‌ ಹಾಕಿರುವುದು
ಪ್ರಜಾವಾಣಿ ಚಿತ್ರಗಳು/ ರಾಜಕುಮಾರ ನಳ್ಳಿಕರ
ಯಾದಗಿರಿ ತಾಲ್ಲೂಕಿನ ಬಂದಳ್ಳಿಯಲ್ಲಿ ಜೆಜೆಎಂ ಯೋಜನೆಯಡಿ ಪೈಪ್‌ ಹಾಕಿರುವುದು ಪ್ರಜಾವಾಣಿ ಚಿತ್ರಗಳು/ ರಾಜಕುಮಾರ ನಳ್ಳಿಕರ
ಜಿಲ್ಲೆಯಲ್ಲಿ ನಾಲ್ಕು ಹಂತಗಳಲ್ಲಿ ಜಲ ಜೀವನ್‌ ಮಿಷನ್ ಯೋಜನೆ ಆರಂಭಗೊಂಡಿದೆ. ಕೆಲವು ಕಡೆ ಜಲ ಮೂಲಗಳ ಸಮಸ್ಯೆಯಿಂದ ನೀರು ಪೂರೈಕೆಯಾಗಿಲ್ಲ. ಉಳಿದಂತೆ ಎಲ್ಲ ಕಾಮಗಾರಿ ಪೂರ್ಣಗೊಳಿಸಲಾಗುವುದು
ಆನಂದ ಕಾರ್ಯನಿರ್ವಾಹಕ ಎಂಜಿನಿಯರ್‌ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ
ಅಡ್ಡೊಡಗಿ ಚಂದಲಾಪುರ ಹೆಮ್ಮಡಗಿ ಇತರ ಕೆಲ ಗ್ರಾಮಗಳಲ್ಲಿ ನೀರಿನ ಕೊರತೆ ಇದೆ. ಹೀಗಾಗಿ ಕಾಮಗಾರಿ ಆಗುತ್ತಿಲ್ಲ. ಗ್ರಾಮಸ್ಥರು ಸಹಕರಿಸಬೇಕು
ಎಚ್.ಡಿ. ಪಾಟೀಲ ಎಇಇ ಗ್ರಾಮೀಣ ನೀರು ಸರಬರಾಜು ಇಲಾಖೆ
ಸುರಪುರ ತಾಲ್ಲೂಕಿನ ಚಂದಲಾಪುರ ಗ್ರಾಮದಲ್ಲಿ ಯೋಜನೆ ಕಾಮಗಾರಿ ಒಂದು ವರ್ಷದಿಂದ ಕುಂಟುತ್ತಾ ಸಾಗಿದೆ. ಅಧಿಕಾರಿಗಳು ಇಲ್ಲದ ನೆಪ ಹೇಳುತ್ತಿದ್ದಾರೆ
ವಿಶ್ವರಾಜ ಒಂಟೂರ ಗ್ರಾಮದ ಮುಖಂಡ
ಜೆಜೆಎಂ ಕಾಮಗಾರಿ ವಿವರ
ತಾಲ್ಲೂಕು; ಕಾಮಗಾರಿ; ಪೂರ್ಣ ಶಹಾಪುರ;197;138 ಸುರಪುರ;275;113 ಯಾದಗಿರಿ;223;133 ಒಟ್ಟು;695;384 ಆಧಾರ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ
ಅನುಷ್ಠಾನ ಮಾಡದೇ ಮಣ್ಣು ಪಾಲು
ಶಹಾಪುರ: ತಾಲ್ಲೂಕಿನಲ್ಲಿ ಜಲ ಜೀವನ ಮಿಷನ್ (ಜೆಜೆಎಂ) ಯೋಜನೆ ಅನುಷ್ಠಾನದ ಅಡಿಗಲ್ಲು ಕಾರ್ಯಕ್ರಮಕ್ಕೆ ಜನಪ್ರತಿನಿಧಿಗಳು ಭರ್ಜರಿಯಾಗಿ ಚಾಲನೆ ನೀಡಿದರು. ನಂತರ ಸ್ಥಳೀಯ ರಾಜಕೀಯ ಮುಖಂಡರು ಹಾಗೂ ಆಯಾ ಗ್ರಾಮ ಪಂಚಾಯಿತಿ ಸದಸ್ಯರ ಅನೈತಿಕ ಹೊಂದಾಣೆಕೆಯಿಂದ ಯೋಜನೆ ಅನುಷ್ಠಾನ ಮಾಡದೆ ಮಣ್ಣು ಪಾಲು ಮಾಡಿದರು. ‘ಹಳೆಯ ನೀರಿನ ಟ್ಯಾಂಕ್‌ಗೆ ಹಾಗೂ ಪೈಪು ಮತ್ತು ಇನ್ನಿತರ ಸಾಮಗ್ರಿಗಳನ್ನು ಮರು ಬಳಕೆ ಮಾಡಿಕೊಂಡು ಸುಣ್ಣಬಣ್ಣ ಹಚ್ಚಿ ನೀರು ಹರಿಸಿದೆ ಎಂಬ ಷರಾ ಪಡೆದುಕೊಂಡು ಹಣವನ್ನು ಗುತ್ತಿಗೆದಾರರ ಜೇಬಿಗೆ ಸೇರಿಕೊಂಡಿತು. ಆಯಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಕೈ ಬೆಚ್ಚಗೆ ಮಾಡಿ ಯೋಜನೆ ಹಸ್ತಾಂತರಗೊಂಡಿತು. ಈಗ ಆಯಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯು ಹೊಸ ವರಸೆ ಶುರು ಮಾಡಿದ್ದು ಅಂತರ್ಜಲಮಟ್ಟ ಕುಸಿತವಾಗಿದೆ. ಕೊಳವೆಬಾವಿ ಹಾಗೂ ಯೋಜನೆ ಅನುಷ್ಠಾನಕ್ಕೆ ನಿರ್ಮಿಸಿದ ಜಲಮೂಲ ಖಾಲಿಯಾಗಿದೆ. ಏನು ಮಾಡಲು ಸಾಧ್ಯವಿಲ್ಲ ಎಂಬ ಸಮಜಾಯಿಷಿ ಉತ್ತರ ನೀಡುತ್ತಾರೆ’ ಎಂದು ಸಾಮಾಜಿಕ ಕಾರ್ಯಕರ್ತ ಮಾನಪ್ಪ ಹಡಪದ ಆರೋಪಿಸಿದರು. ಯೋಜನೆ ಅನುಷ್ಠಾನದ ಬಗ್ಗೆ ಮಾಹಿತಿ ಪಡೆಯಲು ಸಂಬಂಧಪಟ್ಟ ಅಧಿಕಾರಿಗೆ ‘ಪ್ರಜಾವಾಣಿ’ ಸಂಪರ್ಕಿಸಿದರೆ ‘ಸಭೆ ನಡೆದಿದೆ ಸಮಯವಿಲ್ಲ ಮುಂದೆ ಮಾಹಿತಿ ನೀಡಲಾಗುವುದು’ ಎಂಬ ಹಾರಿಕೆ ಉತ್ತರ ಅಧಿಕಾರಿಯಿಂದ ಬಂದಿತು.
ಟ್ಯಾಂಕರ್ ಮೂಲಕ ನೀರು
ಶಹಾಪುರ: ತಾಲ್ಲೂಕಿನ ಹೆಚ್ಚಿನ ಗ್ರಾಮ ಪಂಚಾಯಿತಿಯಲ್ಲಿ ಜೆಜೆಎಂ ಯೋಜನೆ ಅನುಷ್ಠಾನಗೊಂಡಿದೆ. ಆದರೆ ಬೇಸಿಗೆ ಕಾಲ ನೀರಿನ ಬವಣೆ ಉಂಟಾಗಿದೆ ಎಂದು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಟೆಂಡರ್ ಕರೆದಿರುವುದು ಯೋಜನೆ ಅನುಷ್ಠಾನದಲ್ಲಿ ಆದ ಅಕ್ರಮಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಜೆಜೆಎಂ ಯೋಜನೆಗೆ ನೀರಿನ ಕೊರತೆ
ಸುರಪುರ: ಜೆಜೆಎಂ (ಜಲ ಜೀವನ್‌ ಮಿಷನ್) ಯೋಜನೆಯ ಅನುಷ್ಠಾನಕ್ಕೆ ನೀರಿನ ಕೊರತೆ ಎದುರಾಗಿದೆ. ಮಳೆ ಅಭಾವದಿಂದ ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿದಿದ್ದು ಮನೆ ಮನೆಗೆ ನೀರು ಸರಬರಾಜು ಸಾಧ್ಯವಾಗುತ್ತಿಲ್ಲ. ಇದರಿಂದ ಗ್ರಾಮಸ್ಥರು ಸಂಬಂಧಿಸಿದ ಗ್ರಾಮೀಣ ನೀರು ಸರಬರಾಜು ಇಲಾಖೆಗೆ ದೂರು ಸಲ್ಲಿಸುವುದು ಸಾಮಾನ್ಯವಾಗಿದೆ. ಅಧಿಕಾರಿಗಳು ಅಸಹಾಯಕ ಸ್ಥಿತಿಯಲ್ಲಿದ್ದಾರೆ. ತಾಲ್ಲೂಕಿನ 122 ಗ್ರಾಮಗಳಿಗೆ ಯೋಜನೆ ಮಂಜೂರಿಯಾಗಿದ್ದು 53 ಗ್ರಾಮಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಉಳಿದ 69 ಗ್ರಾಮಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಯೋಜನೆಯ ನಂತರ ಪ್ರತಿ ಗ್ರಾಮಗಳಲ್ಲಿ 10-20 ಮನೆಗಳು ಹೆಚ್ಚಾಗಿವೆ. ಈ ಮನೆಯ ಮಾಲಿಕರು ತಮಗೂ ನಲ್ಲಿ ಸಂಪರ್ಕ ನೀಡುವಂತೆ ಮನವಿ ಸಲ್ಲಿಸುತ್ತಿದ್ದಾರೆ. ಯೋಜನೆಗೆ ಕೊರೆದ ಹಲವು ಗ್ರಾಮಗಳ ಬೋರವೆಲ್‌ಗಳಲ್ಲಿ ನೀರು ಕಡಿಮೆಯಾಗಿದೆ. ಜಲಮೂಲಗಳು ಬತ್ತಿವೆ. ಹೀಗಾಗಿ ಯೋಜನೆ ಬೇಸಿಗೆ ಮುಗಿಯುವವರೆಗೆ ಹಲವು ಕಡೆ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.
ಇನ್ನೂ ಸಾಕಾರವಾಗದ ಜೆಜೆಎಂ ಯೋಜನೆ
ಹುಣಸಗಿ: ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಜೆಜೆಎಂ ಯೋಜನೆ ಅಡಿಯಲ್ಲಿ ಕುಡಿಯುವ ನೀರಿನ ಸಂಪರ್ಕಕ್ಕಾಗಿ ಯೋಜನೆ ಆರಂಭಿಸಲಾಗಿದೆ. ಈ ಯೋಜನೆ ಅಡಿಯಲ್ಲಿ ಪ್ರತಿ ಮನೆಗೂ ನೀರು ಒದಗಿಸುವ ಉದ್ದೇಶದಿಂದಾಗಿ ಕಾಮಗಾರಿ ಆರಂಭವಾಗಿದೆ. ಆದರೆ ತಾಲ್ಲೂಕಿನಲ್ಲಿ ಒಂದೆರಡು ಗ್ರಾಮಗಳನ್ನು ಹೊರತುಪಡಿಸಿದರೆ ಇನ್ನೂ ಯಾವುದೇ ಗ್ರಾಮಗಳಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ. ಬಹುತೇಕ ಗ್ರಾಮಗಳಲ್ಲಿ ರಸ್ತೆಗಳನ್ನು ತೋಡಿ ಪೈಪ್‌ಗಳನ್ನು ಅಳವಡಿಸುವ ಕಾರ್ಯಕ್ಕೆ ಮಾತ್ರ ಯೋಜನೆ ಸೀಮಿತಗೊಂಡಂತಾಗಿದೆ. ಮಾಳನೂರು ಗ್ರಾಮದಲ್ಲಿ ಈ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ರಸ್ತೆ ಸರಿಪಡಿಸಬೇಕಿದೆ. ಪೈಪ್‌ಲೈನ್ ಮುಖಾಂತರ ಪ್ರಾಯೋಗಿಕವಾಗಿ ನೀರುಹರಿಸಲಾಗಿದೆ ಎಂದು ಗ್ರಾಮದ ಪ್ರಭುಗೌಡ ತಿಳಿಸಿದರು. ‘ಕಲ್ಲದೇವನಹಳ್ಳಿ ವಜ್ಜಲ ಚೆನ್ನೂರು ಹೆಬ್ಬಾಳ ಕೆ ಸೇರಿದಂತೆ ಇತರ ಗ್ರಾಮಗಳಲ್ಲಿ ಈ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಸುಮಾರು ಐವತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ಈ ಕಾಮಗಾರಿ ಪ್ರಗತಿಯಲ್ಲಿದ್ದು ಹತ್ತಕ್ಕೂ ಹೆಚ್ಚು ಗ್ರಾಮಗಳಲ್ಲಿ ಬಹುತೇಕ ಪೂರ್ಣಗೊಂಡಿದೆ. ಆದರೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವಲ್ಲಿ ಜಲಮೂಲಗಳ ಅಗತ್ಯ ಇರುವುದರಿಂದಾಗಿ ಇನ್ನೂ ಸಂಪರ್ಕ ಕಲ್ಪಿಸಲು ಸಾಧ್ಯವಾಗಿಲ್ಲ’ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್.ಡಿ.ಪಾಟೀಲ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT