ಗುರುವಾರ , ಮೇ 26, 2022
23 °C

ಕಕ್ಕೇರಾ, ಕೆಂಭಾವಿ ಚುನಾವಣೆ ಪುರಸಭೆ ಫಲಿತಾಂಶ; ಹಾಲಿ ಶಾಸಕರಿಗೆ ಮುಖಭಂಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯ ಕಕ್ಕೇರಾ, ಕೆಂಭಾವಿ ಪುರಸಭೆ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಹಾಲಿ ಶಾಸಕರಿಗೆ ಮುಖಭಂಗವಾಗಿದೆ. ಮಾಜಿ ಶಾಸಕರಿಗೆ ಗೆಲುವು ಸಿಕ್ಕಿದ್ದು, ಉತ್ಸಾಹ ಇಮ್ಮಡಿಗೊಳಿಸಿದೆ.

ಸುರಪುರ ತಾಲ್ಲೂಕು ವ್ಯಾಪ್ತಿಗೆ ಕಕ್ಕೇರಾ, ಕೆಂಭಾವಿ ಒಳಪಟ್ಟಿದ್ದು, ಕೆಂಭಾವಿ ಶಹಾಪುರ ಮತಕ್ಷೇತ್ರಕ್ಕೆ, ಕಕ್ಕೇರಾ ಸುರಪುರ ಮತಕ್ಷೇತ್ರದಲ್ಲಿದೆ. ಶಹಾಪುರ ಹಾಲಿ ಶಾಸಕ ಶರಣಬಸಪ್ಪಗೌಡ ದರ್ಶನಾಪುರ, ಸುರಪುರ ಶಾಸಕ ನರಸಿಂಹನಾಯಕ (ರಾಜೂಗೌಡ) ಅವರಿಗೆ ತೀವ್ರ ಮುಖಭಂಗವಾಗಿದ್ದು, ಮಾಜಿ ಶಾಸಕರ ಕೈ ಮೇಲುಗೈಯಾಗಿದೆ.

ಕಕ್ಕೇರಾ ಪುರಸಭೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದ್ದು, ಕೆಂಭಾವಿಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಇದೆ. ಹಾಲಿ, ಮಾಜಿ ಶಾಸಕರ ನಡುವಿನ ಪೈಪೋಟಿಯಲ್ಲಿ ಹಾಲಿ ಶಾಸಕರು ತಮ್ಮ ವ್ಯಾಪ್ತಿಯ ಪುರಸಭೆಯಲ್ಲಿ ಅಧಿಕಾರ ಕೈಚೆಲ್ಲಿದ್ದಾರೆ.

ಕಕ್ಕೇರಾದಲ್ಲಿ 16 ಸ್ಥಾನ ಕಾಂಗ್ರೆಸ್‌, 6 ಬಿಜೆಪಿ, 1 ಸ್ಥಾನ ‍ಪಕ್ಷೇತರರ ಪಾಲಾಗಿದೆ. ಇನ್ನೂ ಕೆಂಭಾವಿಯಲ್ಲಿ ಬಿಜೆಪಿ 13 ಸ್ಥಾನ ಪಡೆದು ಸ್ಪಷ್ಟ ಬಹುಮತ ಪಡೆದಿದೆ. ಆಡಳಿತರೂಢ ಕಾಂಗ್ರೆಸ್ ಪಕ್ಷ ಕೇವಲ 8 ಸ್ಥಾನ ಪಡೆದು ವಿರೋಧ ಪಕ್ಷದಲ್ಲಿ ಕೂಡುವ ಪರಿಸ್ಥಿತಿ ಏರ್ಪಟ್ಟಿದೆ. ಪಕ್ಷೇತರರು 2 ಸ್ಥಾನ ಪಡೆದಿದ್ದಾರೆ.

ಆಡಳಿತ ವಿರೋಧಿ ಅಲೆ: ಕೆಂಭಾವಿಯಲ್ಲಿ ಕಾಂಗ್ರೆಸ್‌ ಪಕ್ಷ 5 ವರ್ಷ ಆಡಳಿತ ನಡೆಸಿತ್ತು. ಆದರಂತೆ ಕಕ್ಕೇರಾದಲ್ಲಿ ಬಿಜೆಪಿ ಆಡಳಿತರೂಢ ಪಕ್ಷವಾಗಿತ್ತು. ಆದರೆ, ಇಲ್ಲಿ ಆಡಳಿತ ವಿರೋಧಿ ಅಲೆ ಎದ್ದಿದ್ದು, ವಿರೋಧ ಪಕ್ಷವಾಗಿದ್ದವರಿಗೆ ಮತದಾರರು ಮಣೆಹಾಕಿದ್ದಾರೆ. ಇದು ಮುಂದಿನ ದಿನಗಳಲ್ಲಿ ಯಾವ ರೀತಿ ಸ್ವರೂಪ ಪಡೆದುಕೊಳ್ಳಲಿದೆ ಎನ್ನುವುದು ಕುತೂಹಲ ಮೂಡಿಸಿದೆ.

ಪುರಸಭೆಯನ್ನು ಮತ್ತೆ ತಮ್ಮ ಕೈವಶ ಮಾಡಿಕೊಳ್ಳಬೇಕು ಎಂದು ಆಯಾ ಕ್ಷೇತ್ರದ ಶಾಸಕರು ಶತಯಗತಾಯ ‍ಪ್ರಯತ್ನ ಮಾಡಿದ್ದರೂ ಮತದಾರರು ಕೈಕೊಟ್ಟಿದ್ದಾರೆ. ಕಕ್ಕೇರಾ, ಕೆಂಭಾವಿ ಎರಡು ‍ಪುರಸಭೆಯಲ್ಲಿ ಕಾಂಗ್ರೆಸ್‌ ಗೆಲ್ಲಲಿದೆ ಎನ್ನುವ ಅಂತೆ ಕಂತೆ ಮಾತುಗಳು ಮತದಾನದ ನಂತರ ಕೇಳಿ ಬಂದಿದ್ದವು. ಆದರೆ, ಆಡಳಿತ ಪಕ್ಷವನ್ನು ವಿರೋಧ ಪಕ್ಷವನ್ನಾಗಿ ಮತದಾರರು ಕೂಡಿಸಿದ್ದಾರೆ.

ಎಡವಿದ ಪಕ್ಷಗಳು: ಚುನಾವಣೆ ದಿನಾಂಕ ಪ್ರಕಟಗೊಂಡು ನಾಮಪತ್ರ ಕೊನೆ ದಿನಾಂಕವರೆಗೂ ಅಭ್ಯರ್ಥಿಗಳನ್ನು ಅಂತಿಮಗೊಳಿಸುವಲ್ಲಿ ಆಯಾ ಪಕ್ಷಗಳು ಎಡವಿವೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಹಿರಿಯರನ್ನು ದೂರವಿಟ್ಟು, ತಮಗೆ ಬೇಕಾದವರನ್ನು ಅಭ್ಯರ್ಥಿಯಾಗಿ ನಿಲ್ಲಿಸಿದ್ದರಿಂದ ಸೋಲಾಗಿದೆ ಎಂದು ಮುಖಂಡರು ಒಪ್ಪಿಕೊಳ್ಳುತ್ತಿದ್ದಾರೆ. ಪಕ್ಷ ಸಂಘಟನೆಯಲ್ಲಿ ಎಡಿವಿ ಸಣ್ಣಪುಟ್ಟ ತಪ್ಪುಗಳಾಗಿವೆ ಎಂದು ಮುಖಂಡರು ಬಹಿರಂಗವಾಗಿ ಹೇಳಿಕೊಳ್ಳುತ್ತಿದ್ದಾರೆ.

ಯಾರೂ ಸೋಲುತ್ತಾರೆ ಎಂದು ಅಂದುಕೊಂಡಿದ್ದರೊ ಅವರೆ ಅಚ್ಚರಿ ಗೆಲುವು ಕಂಡಿದ್ದಾರೆ. ಚುನಾವಣೆಯಲ್ಲಿ ಆಡಳಿತ ಪಕ್ಷದವರು ಲೆಕ್ಕವಿಲ್ಲದ್ದಷ್ಟು ಹಣ ಖರ್ಚು ಮಾಡಿದರೂ ಮತದಾರರನ್ನು ಒಲಿಸಿಕೊಳ್ಳಲು ಆಗಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಮಾಜಿ ಶಾಸಕರಿಗೆ ಗೆಲುವಿನ ಹುರುಪು: ಶಹಾಪುರ ಮತಕ್ಷೇತ್ರದ ಮಾಜಿ ಶಾಸಕ ಗುರಪಾಟೀಲ ಶಿರವಾಳ, ಸುರಪುರ ಮತಕ್ಷೇತ್ರ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕರಿಗೆ ಆಯಾ ಪುರಸಭೆಗಳಲ್ಲಿ ಗೆಲುವು ದಕ್ಕಿರುವುದು ಗೆಲುವಿನ ಬೂಸ್ಟ್‌ ಸಿಕ್ಕಂತೆ ಆಗಿದೆ. ವಿಧಾನಸಭಾ ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಕಾಲವಿದ್ದು, ಈ ಚುನಾವಣೆ ಫಲಿತಾಂಶ ಮತ್ತಷ್ಟು ಹುರುಪು ತಂದುಕೊಟ್ಟಿದೆ.

ಬಿರುಸಿನ ಪ್ರಚಾರ ನಡೆಸಿದ್ದ ಶಾಸಕರು: ಎರಡು ಪುರಸಭೆಗಳಲ್ಲಿ ಹಾಲಿ ಶಾಸಕರು ಬಿರುಸಿನ ಪ್ರಚಾರ ಕೈಗೊಂಡಿದ್ದರು. ಹಳ್ಳಿ, ದೊಡ್ಡ, ವಾರ್ಡ್‌ವಾರು ಸುತ್ತಾತ ಮಾಡಿ ಅನೇಕರನ್ನು ತಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದರು. ಎರಡನೇ ಬಾರಿಗೆ ತಮ್ಮ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂದು ತಮ್ಮ ಬೆಂಬಲಿಗರ ಬಳಿ ಹೇಳಿಕೊಂಡಿದ್ದರು. ಆದರೆ, ಮತದಾರರು ನಾಯಕರಿಗೆ ಗುನ್ನಾ ಕೊಟ್ಟಿದ್ದಾರೆ.

***

403 ನೋಟಾಗೆ ಮತ

ಕೆಂಭಾವಿ, ಕಕ್ಕೇರಾ ಪುರಸಭೆಗೆ ನಡೆದ ಮತದಾನದಲ್ಲಿ 403 ಮತಗಳು ನೋಟಾಗೆ ಬಿದ್ದಿವೆ. ಕೆಂಭಾವಿಯಲ್ಲಿ 154, ಕಕ್ಕೇರಾದಲ್ಲಿ 249 ಮತಗಳು ನೋಟಾ ಪಾಲಾಗಿದೆ. ಕಕ್ಕೇರಾ ಪುರಸಭೆಯ 15ನೇ ವಾರ್ಡ್‌ನಲ್ಲಿ 34 ಮಂದಿ ನೋಟಾ ಗುಂಡಿಯನ್ನು ಒತ್ತಿದ್ದಾರೆ. 10ನೇ ವಾರ್ಡ್‌ನಲ್ಲಿ 1 ಮತ ನೋಟಾ ಆಗಿದೆ.

ಕೆಂಭಾವಿ ಪುರಸಭೆಯ 14ನೇ ವಾರ್ಡ್‌ನಲ್ಲಿ 16 ಮತಗಳು ನೋಟಾಗೆ ಬಿದ್ದಿವೆ. ಕೆಂಭಾವಿ ಪುರಸಭೆಯಲ್ಲಿ 5,177 ಮತಗಳನ್ನು ಕಾಂಗ್ರೆಸ್‌ ಪಡೆದಿದ್ದರೆ, 5,851 ಮತಗಳನ್ನು ಬಿಜೆಪಿ ಪಕ್ಷ ಪಡೆದಿದೆ.

ಕಕ್ಕೇರಾ ಪುರಸಭೆಯಲ್ಲಿ 7,663 ಮತಗಳನ್ನು ಕಾಂಗ್ರೆಸ್‌ ಪಡೆದಿದ್ದರೆ, 5,912 ಬಿಜೆಪಿ ಪಡೆದಿದೆ.

***
6 ಅವಿರೋಧ, 5 ಫಲಿತಾಂಶ ಪ್ರಕಟ

ಯಾದಗಿರಿ: ಜಿಲ್ಲೆಯ 11 ಗ್ರಾಮ ಪಂಚಾಯಿತಿ ಉಪ ಚುನಾವಣೆಗೆ ಸಂಬಂಧಿಸಿದಂತೆ 6 ಅವರೋಧ ಆಯ್ಕೆಯಾಗಿದ್ದು, 5 ಕ್ಷೇತ್ರಗಳಿಗೆ ಚುನಾವಣೆ ನಡೆಸಲಾಗಿತ್ತು.

ಯಾದಗಿರಿ ತಾಲ್ಲೂಕಿನ, ಅರಿಕೇರಾ (ಬಿ) ಗ್ರಾ.ಪಂ.ಯ ಸಿದ್ಧಾರ್ಥನಗರ ಮೋಹನ್ ಶಂಕರ, ಅಲ್ಲಿಪುರ ಗ್ರಾ.ಪಂ. ಕಂಚಗಾರಹಳ್ಳಿ ತಾಂಡಾದ ಪೂಜಾ ರಾಮು, ಬಂದಳ್ಳಿ ಗ್ರಾ.ಪಂ.ಯ ಬಂದಳ್ಳಿ ಮರೆಮ್ಮ ಶ್ರೀನಿವಾಸ, ಗುರುಮಠಕಲ್ ತಾಲ್ಲೂಕಿನ ಪುಟಪಾಕ್ ಗ್ರಾ.ಪಂ.ಯ ಪುಟಪಾಕ್ ಮೌಲಾನಾ, ಸುರಪುರ ತಾಲ್ಲೂಕಿನ ಕರಡಕಲ್ ಗ್ರಾ.ಪಂ.ಯ ಕರಡಕಲ್ ಕ್ಷೇತ್ರಕ್ಕೆ ಸಂಗಮ್ಮ ದೇವಿಂದ್ರಪ್ಪ ಮತ್ತು ಹುಣಸಗಿ ತಾಲ್ಲೂಕಿನ ಜೋಗುಂಡಭಾವಿ ಗ್ರಾ.ಪಂ.ಯ ಅಮ್ಮಾಪುರ (ಎಸ್.ಕೆ) ಕ್ಷೇತ್ರಕ್ಕೆ ಬಾಬು ಹರಿಶ್ಚಂದ್ರ ರಾಠೋಡ್ ಒಬ್ಬೊಬ್ಬರೇ ಕಣದಲ್ಲಿದ್ದರಿಂದ 6 ಕ್ಷೇತ್ರಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಉಳಿದ 5 ಕ್ಷೇತ್ರಗಳಿಗೆ ಮತದಾನ ನಡೆದಿತ್ತು. ಗುರುಮಠಕಲ್ ತಾಲ್ಲೂಕಿನ ಚಂಡ್ರಿಕಿ ಗ್ರಾ.ಪಂ.ಯ ಕೇಶ್ವಾರ ಕ್ಷೇತ್ರಕ್ಕೆ ಜಿ.ಹಣಮಂತ ನಾಯಕ್, ಶಹಾಪುರ ತಾಲ್ಲೂಕಿನ ಕನ್ಯಾಕೊಳ್ಳುರ ಗ್ರಾ.ಪಂ.ಯ ಕನ್ಯಾಕೊಳ್ಳೂರ ಕ್ಷೇತ್ರಕ್ಕೆ ಕಮಲದಾಸ ಕಬೀರದಾಸ, ವಡಗೇರಾ ತಾಲ್ಲೂಕಿನ ಕುರಕುಂದಾ ಗ್ರಾ.ಪಂ.ಯ ಕುರಕುಂದಾ ಕ್ಷೇತ್ರಕ್ಕೆ ಆಯೀಶಾಬೇಗಂ ಲತೀಫ್‌ ಪಾಷಾ, ಸುರಪುರ ತಾಲ್ಲೂಕಿನ ದೇವಾಪುರ ಗ್ರಾ.ಪಂ.ಯ ಅರಳಹಳ್ಳಿ ದಂಡಮ್ಮ ಬಿಶೆಟೆಪ್ಪ, ಹುಣಸಗಿ ತಾಲ್ಲೂಕಿನ ಅಗ್ನಿ ಗ್ರಾ.ಪಂ.ಯ ಕರಿಭಾವಿ ಕ್ಷೇತ್ರಕ್ಕೆ ಭೀಮಣ್ಣ ಮಲ್ಲಣ್ಣ ಕರಿಭಾವಿ ಆಯ್ಕೆಯಾಗಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು