ಬುಧವಾರ, ಮೇ 12, 2021
26 °C
ಕಸಾಪ: ಮೂರನೇ ಬಾರಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ

ಕನ್ನಡ ಸಾಹಿತ್ಯ ಪರಿಷತ್‌: ಸಿದ್ದಪ್ಪ ಹೊಟ್ಟಿ ‘ಹ್ಯಾಟ್ರಿಕ್’ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಮೂರನೇ ಬಾರಿಗೆ ಸಿದ್ದಪ್ಪ ಹೊಟ್ಟಿ ಅವಿರೋಧ ಆಯ್ಕೆಯಾಗುವ ಮೂಲಕ ‘ಹ್ಯಾಟ್ರಿಕ್’ ಸಾಧನೆ ಮಾಡಿದ್ದಾರೆ. ಎರಡು ಬಾರಿ ಚುನಾವಣೆ ಎದುರಿಸಿ, ಇದೇ ಮೊದಲ ಬಾರಿ ಅವಿರೋಧ ಆಯ್ಕೆಯಾಗಿದ್ದಾರೆ.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಸಿದ್ದಪ್ಪ ಹೊಟ್ಟಿ ಹಾಗೂ ಶ್ರೀಶೈಲ ಪೂಜಾರಿ ನಾಮಪತ್ರ ಸಲ್ಲಿಸಿದ್ದರು. ಶ್ರೀಶೈಲ ಪೂಜಾರಿ ಸಿದ್ದಪ್ಪ ಹೊಟ್ಟಿಯವರನ್ನು ಬೆಂಬಲಿಸಿ ತಮ್ಮ ನಾಮಪತ್ರ ಹಿಂದಕ್ಕೆ ಪಡೆದರು. ಇದರಿಂದಾಗಿ ಹೊಟ್ಟಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದು ರಾಜ್ಯದಲ್ಲಿಯೇ ಅವಿರೋಧ ಆಯ್ಕೆ ಪ್ರಥಮದ್ದಾಗಿದೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಗಳು ಅನೇಕರಿದ್ದರೂ ನನಗೆ ಮೂರನೇ ಬಾರಿಗೆ ಅವಕಾಶ ಸಿಕ್ಕಿದೆ. ಕಸಾಪ ಕಟ್ಟಡದ ಕೆಲಸವನ್ನು ಪೂರ್ಣಗೊಳಿಸಲಾಗುವುದು. ಗಡಿ ಭಾಗದಲ್ಲಿ ಹಲವಾರು ಹೆಸರುಗಳು ತೆಲುಗಿನ ಪಲ್ಲಿಗಳಿವೆ. ಅವುಗಳನ್ನು ಬದಲಾಯಿಸಲು ಮನವಿ ಸಲ್ಲಿಸಲಾಗುವುದು. ಗ್ರಾಮೀಣ ಯುವ ಸಾಹಿತಿಗಳಿಗೆ ಮೊದಲ ಆದ್ಯತೆ ನೀಡುತ್ತೇನೆ ಎಂದರು.

ಕಸಾಪಕ್ಕೆ ನಿವೇಶನ ಇಲ್ಲದ ಕಡೆ ಪಡೆದ ಕಟ್ಟಡ ಕಟ್ಟಲು ಪ್ರಯತ್ನಿಸುತ್ತೇನೆ. ಸೈದಾಪುರ ವಲಯದ ಕಟ್ಟಡ ಪೂರ್ಣಗೊಳಿಸುತ್ತೇನೆ. ದೇವಾಪುರದ ಕವಿ ಲಕ್ಷ್ಮೀಶ ಅವರ ಬಗ್ಗೆ ಇರುವ ಗೊಂದಲವನ್ನು ರಾಜ್ಯ ಮಟ್ಟದಲ್ಲಿ ಚರ್ಚಿಸಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಈಗಾಗಲೇ 38 ಪುಸ್ತಕಗಳನ್ನು ಪ್ರಕಟಿಸಿದ್ದು, 5 ವರ್ಷಗಳ ಅಧಿಕಾರವಧಿಯಲ್ಲಿ 100 ಪುಸ್ತಕಗಳನ್ನು ಪ್ರಕಟಿಸುವ ಯೋಜನೆ ಇದೆ. ಮುಂದಿನ ದಿನಗಳಲ್ಲಿ ವಲಯ, ತಾಲ್ಲೂಕು ಮತ್ತು ಜಿಲ್ಲಾ ಸಮ್ಮೇಳನಗಳನ್ನು ಸಂಘಟಿಸಿ 100 ಪುಸ್ತಕಗಳನ್ನು ಪ್ರಕಟಿಸುವುದಾಗಿ ತಿಳಿಸಿದರು.
ನಾಮಪತ್ರ ಹಿಂಪಡೆದ ಶ್ರೀಶೈಲ ಪೂಜಾರಿ ಮಾತನಾಡಿ, ಕನ್ನಡ ಸೇವೆ ಮಾಡಲು ಒಗ್ಗಟ್ಟಾಗಿದ್ದು, ಯಾವುದೇ ಬೇಡಿಕೆ ಇಲ್ಲದೇ ನಾಮಪತ್ರ ವಾಪಸ್ ಪಡೆದಿದ್ದೇನೆ. ಮುಂದೆ ನಮಗೂ ಅವಕಾಶ ಸಿಗಬಹುದು. ಹೀಗಾಗಿ ಅವಿರೋಧ ಆಯ್ಕೆಗೆ ಸಹಕರಿಸಿದ್ದೇನೆ ಎಂದರು.

12ಕ್ಕೆ ಅಧಿಕೃತ ಘೋಷಣೆ: ಇಬ್ಬರು ನಾಮಪತ್ರ ಸಲ್ಲಿಸಿದ್ದರಿಂದ ಒಬ್ಬರು ಹಿಂಪಡೆದಿದ್ದರಿಂದ ಅವಿರೋಧ ಆಯ್ಕೆಯಾದಂತೆ ಆಗಿದೆ. ಆದರೆ, ಅಧಿಕೃತವಾಗಿ ತಹಶೀಲ್ದಾರ್ ಅವರು ಸೋಮವಾರ (ಏ.12)ರಂದು ಅವಿರೋಧ ಆಯ್ಕೆ ಪ್ರಕಟಿಸಲಿದ್ದಾರೆ.

ವಿಜಯೋತ್ಸವ: ಸಿದ್ದಪ್ಪ ಹೊಟ್ಟಿ ಅವಿರೋಧ ಆಯ್ಕೆಯಾಗುತ್ತಿದ್ದಂತೆಯೇ ಗಾಂಧಿ ವೃತ್ತದ ಬಳಿ ಅಭಿಮಾನಿಗಳು, ಕಸಾಪ ಪದಾಧಿಕಾರಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಡಾ.ಸುಭಾಶ್ಚಂದ್ರ ಕೌಲಗಿ, ಅಯ್ಯಣ್ಣ ಹುಂಡೇಕಾರ, ಸ್ವಾಮಿದೇವ ದಾಸನಕೇರಿ, ಪ್ರೊ.ಸಿ.ಎಂ.ಪಟ್ಟೇದಾರ, ಡಾ.ಗಾಳೆಪ್ಪ ಪೂಜಾರಿ, ಡಾ. ಭೀಮರಾಯ ಲಿಂಗೇರಿ, ಡಾ.ಎಸ್.ಎಸ್.ನಾಯಕ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.