ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Budget 2023 | ಯಾದಗಿರಿ ಜಿಲ್ಲೆಯ ಅಭಿವೃದ್ಧಿಗೆ ಬಜೆಟ್‌ ನಾಂದಿಯಾಗಲಿ

ಕಾಂಗ್ರೆಸ್‌ ಸರ್ಕಾರದಲ್ಲಿ ಗಿರಿ ಜಿಲ್ಲೆಗೆ ಬೇಕಿದೆ ಕೈಗಾರಿಕೆ ಉತ್ತೇಜನ
Published 6 ಜುಲೈ 2023, 6:30 IST
Last Updated 6 ಜುಲೈ 2023, 6:30 IST
ಅಕ್ಷರ ಗಾತ್ರ

ಯಾದಗಿರಿ: ಕಲ್ಯಾಣ ಕರ್ನಾಟಕದ ಅತಿ ಹಿಂದುಳಿದ ಜಿಲ್ಲೆಯಾಗಿರುವ ಯಾದಗಿರಿ ಜಿಲ್ಲೆಗೆ ಅಭಿವೃದ್ಧಿ ಪಥದಲ್ಲಿ ಮುನ್ನುಗ್ಗಲು ವಿಶೇಷ ಪ್ಯಾಕೇಜ್‌ ನೀಡಬೇಕು ಎನ್ನುವುದು ಈ ಭಾಗದ ಜನರ ಆಶೋತ್ತರವಾಗಿದೆ.

ಜುಲೈ7 ರಂದು ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್‌ ಮಂಡಿಸಲಿದ್ದು, ಜಿಲ್ಲೆಯ ಜನರು ಹಲವಾರು ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಕಳೆದ ಬಿಜೆಪಿ ಸರ್ಕಾರದಲ್ಲಿ ಬಜೆಟ್‌ ಘೋಷಣೆಗೆ ಸೀಮಿತವಾಗಿತ್ತು. 

ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶರಣಬಸಪ್ಪ ದರ್ಶನಾ‍‍ಪುರ ತವರೂರಲ್ಲಿ ಕೈಗಾರಿಕೆಗಳ ಪರ್ವ ಆರಂಭವಾಗಬೇಕಿದೆ.

ಪ್ರತಿ ಬಾರಿಯೂ ಕಲ್ಯಾಣ ಕರ್ನಾಟಕ ಭಾಗದ ಜನತೆಗೆ ಸರ್ಕಾರ ಮಲತಾಯಿಯೇ ಆಗುತ್ತದೆ. ಈ ಭಾಗದ ನಿಜವಾದ ಕಲ್ಯಾಣಕ್ಕೆ ಬಜೆಟ್‌ನಲ್ಲಿ ಆದ್ಯತೆ ನೀಡಬೇಕು. ಅತಿವೃಷ್ಟಿಯಿಂದ ಬೆಳೆ ಕಳೆದುಕೊಂಡ ರೈತರು ಈಗ ಅನಾವೃಷ್ಟಿಯಿಂದ ಕಂಗಾಲಾಗಿದ್ದಾರೆ. ರೈತರ ಜೀವ ಉಳಿಸುವ ಬಜೆಟ್‌ ನೀಡಿದರೆ ಸಕಾಲಿಕವಾಗಲಿದೆ.

ತರಕಾರಿ ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸಲು ಹೆಣಗುವಂತಾಗಿದೆ. ಬಡ ಮತ್ತು ಮಾಧ್ಯಮ ವರ್ಗದ ಶ್ರೇಯಸ್ಸಿಗೆ ಆದ್ಯತೆ ನೀಡುವ ಬಜೆಟ್‌ನ ಅವಶ್ಯಕತೆಯಿದೆ. ಮೂಲಭೂತ ಸೌಕರ್ಯಗಳು ಕಲ್ಪಿಸಲು ಪ್ರತಿ ಬಾರಿಯೂ ಬಜೆಟ್‌ನಲ್ಲಿ ಹೇಳಲಾಗುತ್ತಿದೆ. ಆದರೆ, ಈವರೆಗೂ ಬಜೆಟ್‌ ಅವೈಜ್ಞಾನಿಕವಾಗಿ ಅನುಷ್ಠಾನದಿಂದ ನಿರೀಕ್ಷಿತ ಪ್ರಗತಿಯಾಗದು. ಕಾರ್ಯಸಾಧುವಾದ ಜನಪರ ಬಜೆಟ್‌ ನೀಡಲಿ ಎನ್ನುವುದು ಜಿಲ್ಲೆಯ ಸಾರ್ವಜನಿಕರ ಆಗ್ರಹವಾಗಿದೆ.

ರಾಜ್ಯ ಸರ್ಕಾರ ಗ್ಯಾರಂಟಿಗಳನ್ನು ಘೋಷಿಸಿ ಅವುಗಳನ್ನು ಅನುಷ್ಠಾನಗೊಳಿಸಲು ಸಾಕಷ್ಟು ಪ್ರಯತ್ನಿಸುತ್ತಿದ್ದು, ಈ ನಿಟ್ಟಿನಲ್ಲಿ ಜನರಿಗೆ ಹತ್ತಿರವಾಗುತ್ತಿದೆ. ಆದರೆ, ಪ್ರಸಕ್ತ ಬಜೆಟ್‌ನಲ್ಲಿ ಜಿಲ್ಲೆಗೆ ಹೊಸ ಯೋಜನೆ ರೂಪಿಸಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ. ಕೇಂದ್ರ ಸರ್ಕಾರದ ಮಹಾತ್ವಕಾಂಕ್ಷಿ ಜಿಲ್ಲೆಯಾಗಿರುವ ಯಾದಗಿರಿ ಜಿಲ್ಲೆಯ ಅತಿ ಹಿಂದುಳಿದ ಜಿಲ್ಲೆಯಾಗಿದೆ. ಹೀಗಾಗಿ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಸ್ಥಳೀಯ ಬೇಡಿಕೆಗಳನ್ನು ಈಡೇರಿಸುವ ಕೆಲಸ ಆಗಬೇಕು ಎನ್ನುವುದು ಜಿಲ್ಲೆಯ ಜನರ ಆಗ್ರಹವಾಗಿದೆ.

ಹೊಸ ತಾಲ್ಲೂಕು ಕೇಂದ್ರಗಳು ಘೋಷಣೆಯಾಗಿ 6–7 ವರ್ಷಗಳಾಗಿದ್ದು, ಇನ್ನೂ ನಿರೀಕ್ಷಿತ ಮಟ್ಟದಲ್ಲಿ ತಾಲ್ಲೂಕು ಕಚೇರಿಗಳು ಇಲ್ಲ. ಇದರಿಂದಾಗಿ ನೂತನ ತಾಲ್ಲೂಕುಗಳಲ್ಲಿ ಸಾರ್ವಜನಿಕ ಸೇವೆಗೆ ಸಾಕಷ್ಟು ತೊಂದರೆಯಾಗುತ್ತಿದೆ. ಸರ್ವೇ, ಕೋರ್ಟ್, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ತೋಟಗಾರಿಕೆ ಸೇರಿದಂತೆ ಇತರ ತಾಲ್ಲೂಕು ಮಟ್ಟದ ಕಚೇರಿಗಳನ್ನು ಆರಂಭಿಸುವಲ್ಲಿ ಬಜೆಟ್‌ನಲ್ಲಿ ಕ್ರಮ ಕೈಗೊಳ್ಳಬೇಕಿದೆ.

ರಾಜ್ಯದಲ್ಲಿ ಅತ್ಯಂತ ಹೆಚ್ಚು ನೀರಾವರಿ ಕ್ಷೇತ್ರ ಎಂಬ ಹೆಗ್ಗಳಿಕೆ ಹೊಂದಿರುವ ಬಸವಸಾಗರ ಜಲಾಶಯ ಇದ್ದು, ಈ ಜಲಾಶಯದ ಮುಂಭಾಗದಲ್ಲಿ ಪ್ರವಾಸೋದ್ಯಮ ಇಲಾಖೆಯಡಿ ಹಾಗೂ ಕೃಷ್ಣಾಭಾಗ್ಯ ನಿಗಮದಲ್ಲಿ ಆಶ್ರಯದಲ್ಲಿ ದೊಡ್ಡಮಟ್ಟದ ಉದ್ಯಾನವನ ಹಾಗೂ ರಾಕ್ ಗಾರ್ಡನ್ ಆರಂಭಿಸಬೇಕೆನ್ನುವುದು ಇಲ್ಲಿನ ಜನರ ಬೇಡಿಕೆಯಾಗಿದೆ.

ಶಹಾಪುರ, ಸುರಪುರ, ಹುಣಸಗಿ ತಾಲ್ಲೂಕಿನಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭತ್ತ, ಮೆಣಸಿನಕಾಯಿ ಬೆಳೆಯುತ್ತಿದ್ದು, ಬೆಲೆ ಕುಸಿತವಾದ ಸಂದರ್ಭದಲ್ಲಿ ಅದನ್ನು ಶೇಖರಣೆ ಮಾಡಿಟ್ಟುಕೊಳ್ಳಲು ಶೀತಲೀಕರಣ ಘಟಕದ ದಾಸ್ತಾನು ಮಳಿಗೆ ವ್ಯವಸ್ಥೆ ಇಲ್ಲ. ಆದ್ದರಿಂದ ರೈತರು ಇದ್ದ ಕಡಿಮೆ ಬೆಲೆಗೆ ಭತ್ತವನ್ನು ಮಾರಾಟ ಮಾಡಬೇಕಾದ ಅನಿವಾರ್ಯತೆ ಇದೆ. ಅಲ್ಲಲ್ಲಿ ದಾಸ್ತಾನು ಮಳಿಗೆ ನಿರ್ಮಾಣಕ್ಕೆ ಮುಂದಾಗಬೇಕಿದೆ.

ಜಿಲ್ಲೆಯ ಗಡಿ ಭಾಗದ ಜನರಲ್ಲಿ ಆರೋಗ್ಯ ಸಮಸ್ಯೆಯಾದರೆ ತೆಲಂಗಾಣ ರಾಜ್ಯ, ನೆರೆ ಜಿಲ್ಲೆಗಳಿಗೆ ಮುಖಮಾಡುವ ಅನಿವಾರ್ಯತೆಯಿದೆ. ಆಸ್ಪತ್ರೆಗಳು ಮತ್ತು ವೈದ್ತಕೀಯ ಕೊರತೆಗಳು ನೀಗಿಸಲು ಆದ್ಯತೆ ನೀಡಬೇಕು ಎನ್ನುವುದು ಆ ಭಾಗದ ಜನರ ಒತ್ತಾಯವಾಗಿದೆ.

Quote - ಸರ್ಕಾರ ವಿದ್ಯುತ್ ದರವನ್ನು ಗಣನೀಯವಾಗಿ ಹೆಚ್ಚಳ ಮಾಡಿರುವುದರಿಂದ ಸಣ್ಣ ಕೈಗಾರಿಕೆಗಳು ಮುಚ್ಚುವ ಹಂತಕ್ಕೆ ಬಂದಿವೆ. ಸಣ್ಣ ಕೈಗಾರಿಕೆ ಸಚಿವರು ನಮ್ಮವರೇ ಆಗಿದ್ದು ವಿದ್ಯುತ್ ರಿಯಾಯಿತಿ ಒದಗಿಸಬೇಕು
– ಕಿಶೋರಚಂದ್ ಜೈನ್ , ವಾಣಿಜ್ಯೋದ್ಯಮಿ ವರ್ತಕರ ಸಂಘದ ಅಧ್ಯಕ್ಷ ಸುರಪುರ
ಹಣದುಬ್ಬರ ಉಲ್ಬಣಗೊಳ್ಳದಂತೆ ಸಾಮಾನ್ಯ ಜನತೆಗೆ ಹೊರೆಯಾಗದ ಮತ್ತು ಅಗತ್ಯ ವಸ್ತುಗಳು ಎಲ್ಲರ ಕೈಗೆಟುಕುವಂತೆ ಬಜೆಟ್‌ ತಯಾರಿಸಬೇಕು
- ವೀರೇಶ ಆವಂಟಿ ಅರ್ಥಶಾಸ್ತ್ರ ಉಪನ್ಯಾಸಕ
ಜಿಲ್ಲೆಗೆ ಬಜೆಟ್‌ನಲ್ಲಿ ಪ್ರಾಶಸ್ತ್ಯ ನೀಡಬೇಕು. ಶಿಕ್ಷಣ ಕೈಗಾರಿಕಾ ಕ್ಷೇತ್ರದಲ್ಲಿ ಹೊಸ ನೀತಿ ಜಾರಿಗೆ ತರಬೇಕು. ಕೃಷ್ಣಾ ಅಚ್ಚುಕಟ್ಟು ಪ್ರದೇಶವಾಗಿರುವುದರಿಂದ ಇಲ್ಲಿ ಬೆಳೆಯವು ವಾಣಿಜ್ಯ ಬೆಳೆಗಳಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸಬೇಕು. ಜಿಲ್ಲೆಯಲ್ಲಿ ಸಿದ್ದ ಉಡುಪುಗಳು ತಯಾರಾಗವಂತ ಕಾರ್ಖಾನೆ ಸ್ಥಾಪನೆ ಮಾಡಬೇಕು
–ಅಶೋಕ ಮಲ್ಲಾಬಾದಿ ರಾಜ್ಯ ಕೃಷಿ ಮಾಜಿ ಸಲಹೆಗಾರರು

ಯಾದಗಿರಿ ತಾಲ್ಲೂಕಿನ ನಿರೀಕ್ಷೆಗಳು –ಗುಳೆ ತಡೆಗೆ ಸಣ್ಣ ಕೈಗಾರಿಕೆಗಳ ಸ್ಥಾಪನೆ – ಜಿಲ್ಲಾ ಕೇಂದ್ರದಲ್ಲಿ ನಗರ ಸೌಂದರ್ಯೀಕರಣ – ಎಂಜಿನಿಯರಿಂಗ್‌ ಕಾಲೇಜು ಸ್ಥಾಪನೆಗೆ ಒತ್ತು –ಸರ್ಕಾರಿ ಡಿಪ್ಲೋಮಾ ಕಾಲೇಜು ಸ್ಥಾಪನೆಗೆ ಕ್ರಮ – ಶೈಕ್ಷಣಿಕ ವಿಷಯದಲ್ಲಿ ಹಿಂದುಳಿದಿದ್ದು ಶಿಕ್ಷಕರ ಕೊರತೆ ನೀಗಿಸಬೇಕು

ಸುರಪುರ ತಾಲ್ಲೂಕಿನ ನಿರೀಕ್ಷೆಗಳು –ಗುಳೆ ತಪ್ಪಿಸಲು ಕಾರ್ಖಾನೆಗಳ ಸ್ಥಾಪನೆ –ಕೃಷಿ ಕಾರ್ಮಿಕರಿಗೆ ನರೇಗಾ ಮಾದರಿ ಯೋಜನೆ ಜಾರಿ –ಭತ್ತ ಹತ್ತಿ ತೊಗರಿ ಮೆಣಸಿನಕಾಯಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ – ವೈದ್ಯಕೀಯ ಕ್ಷೇತ್ರ ಚುರುಕುಗೊಳಿಸುವುದು ತಜ್ಞ ವೈದ್ಯರ ನೇಮಕ –ಪ್ರತಿ 10 ಹಳ್ಳಿಗಳಿಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಆರಂಭಿಸುವುದು –ಜಾನುವಾರುಗಳ ಸಂಖ್ಯೆಗೆ ಅನುಗುಣವಾಗಿ ಪಶು ವೈದ್ಯರ ನೇಮಕ –ಪಶು ಚಿಕಿತ್ಸಾಲಯಗಳಿಗೆ ಮಂಜೂರು –ಶಿಕ್ಷಕರ ಖಾಲಿ ಹುದ್ದೆಗಳ ನೇಮಕಕ್ಕೆ ಕ್ರಮ

ಹುಣಸಗಿ ತಾಲ್ಲೂಕು ನಿರೀಕ್ಷೆಗಳು – ತಾಲ್ಲೂಕು ಕಚೇರಿಗಳನ್ನು ಆರಂಭಿಸಬೇಕು -ಶಿಕ್ಷಕರ ಕೊರತೆ ನೀಗಿಸುವದು -ಪದವಿ ಪೂರ್ವ ಕಾಲೇಜು ಸ್ಥಾಪನೆ -ತಾಂತ್ರಿಕ ಕಾಲೇಜು ಸ್ಥಾಪನೆ -ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವುದು – ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ

ವಡಗೇರಾ ತಾಲ್ಲೂಕು ನಿರೀಕ್ಷೆಗಳು –ತಾಲ್ಲೂಕು ಕಚೇರಿಗಳನ್ನು ಆರಂಭಿಸಬೇಕು -ಮಿನಿ ವಿಧಾನಸೌಧಕ್ಕೆ ಅಡಿಗಲ್ಲು -ಗ್ರಾ.ಪಂನಿಂದ ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೆ -ಶೈಕ್ಷಣಿಕ ತಾಲ್ಲೂಕು ಕೇಂದ್ರದ ಘೋಷಣೆ -ಗ್ರಾಮೀಣ ಕೂಡು ರಸ್ತೆಗಳ ಅಭಿವೃದ್ಧಿ - ಕೊನೆ ಅಂಚಿನ ಗ್ರಾಮದ ರೈತರ ಜಮೀನುಗಳಿಗೆ ನೀರು -ಗ್ರಾಮೀಣ ಹಾಗೂ ವಿದ್ಯಾರ್ಥಿಗಳಿಗಾಗಿ ಸಾರಿಗೆ ಸೌಲಭ್ಯ -ಎಪಿಎಂಸಿ ಹಾಗೂ ಉಪ ಮಾರುಕಟ್ಟೆ ಸ್ಥಾಪನೆಗೆ ಕ್ರಮ -ವಿದ್ಯಾರ್ಥಿಗಳಿಗಾಗಿ ವಸತಿಗೃಹ ಆರಂಭ

ಗುರುಮಠಕಲ್‌ ತಾಲ್ಲೂಕು ನಿರೀಕ್ಷೆ –ತಾಲ್ಲೂಕು ಕೇಂದ್ರವಾಗಿಸಲು ಬೇಕಾದ ವಿಶೇಷ ಕಾಳಜಿ – ಗಡಿ ತಾಲ್ಲೂಕಿನಲ್ಲಿ ಜನತೆಗೆ ಆರೋಗ್ಯ ಸೇವೆಗಳು ಸಿಗಲಿ –ಶೈಕ್ಷಣಿತ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಅಗತ್ಯ ಸೌಲಭ್ಯ ಬೇಕು – ರೈತರ ಬೆಳೆಗಳ ಮಾರಾಟಕ್ಕೆ ಫುಡ್‌ ಪಾರ್ಕ್‌ ಮಾದರಿ ಮಾರುಕಟ್ಟೆ – ತಾಲ್ಲೂಕಿನಾದ್ಯಂತ ಮೂಲ ಸೌಕರ್ಯ ಕಲ್ಪಿಸಬೇಕು

Cut-off box - ಶಹಾಪುರ ತಾಲ್ಲೂಕು ನಿರೀಕ್ಷೆಗಳು –ಶಹಾಪುರದಲ್ಲಿ ಉಪವಿಭಾಗಾಧಿಕಾರಿ ಕಚೇರಿ ಸ್ಥಾಪನೆ –ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನ –ಶಹಾಪುರಕ್ಕೆ ಪ್ರತ್ಯೇಕ ಬೈಪಾಸ್ ರಸ್ತೆ ನಿರ್ಮಾಣ –ನಗರದಲ್ಲಿ ಒಳಜರಂಡಿ ನಿರ್ಮಾಣ ತ್ವರಿತವಾಗಬೇಕು –ಎಂಜಿನಿಯರಿಂಗ್ ಕಾಲೇಜು ಸ್ಥಾಪನೆಗೆ ಒತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT