ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ | ಜುಲೈನಲ್ಲಿ ಮಳೆ ಕೊರತೆ: ಕಡಿಮೆ ಬಿತ್ತನೆ

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಶೇ 81 ರಷ್ಟು ಬಿತ್ತನೆ, ಹೆಸರಿಗೆ ಹಳದಿ ರೋಗ
Published 3 ಆಗಸ್ಟ್ 2024, 5:39 IST
Last Updated 3 ಆಗಸ್ಟ್ 2024, 5:39 IST
ಅಕ್ಷರ ಗಾತ್ರ

ಯಾದಗಿರಿ: ಈ ವರ್ಷದ ಮುಂಗಾರು ಹಂಗಾಮಿನಲ್ಲಿ ಮೇ, ಜೂನ್‌ ತಿಂಗಳಲ್ಲಿ ಆಶಾದಾಯಕವಾಗಿದ್ದ ಮಳೆ ಜುಲೈನಲ್ಲಿ ವಾಡಿಕೆಗಿಂತ ಕಡಿಮೆಯಾಗಿದೆ. ಇದರಿಂದ ಮುಂಗಾರಿನಲ್ಲಿ ಬಿತ್ತನೆ ಶೇ 81.74 ರಷ್ಟಾಗಿದೆ.

ಜೂನ್‌ ತಿಂಗಳಲ್ಲಿ ವಾಡಿಕೆ ಮಳೆ 129.6 ಮಿಲಿ ಮೀಟರ್‌ (ಎಂಎಂ) ಇದ್ದು, 121.7 ಎಂಎಂ ಮಳೆಯಾಗಿದೆ. ಜುಲೈ ತಿಂಗಳಲ್ಲಿ 138.8 ವಾಡಿಕೆ ಮಳೆ ಇದ್ದು, 69.1 ಎಂಎಂ ಮಳೆ ಸುರಿದಿದೆ. ಇದು ಬಿತ್ತನೆ ಕಡಿಮೆಯಾಗಲು ಕಾರಣವಾಗಿದೆ.

ಜಿಲ್ಲೆಯಲ್ಲಿ ಜೂನ್‌ 1ರಿಂದ ಆಗಸ್ಟ್‌ 1 ರವರೆಗೆ 273.9 ಎಂಎಂ ವಾಡಿಕೆ ಮಳೆ ಇತ್ತು. 198 ಎಂಎಂ ಮಳೆಯಾಗಿದೆ. ಜನವರಿ 1ರಿಂದ ಆಗಸ್ಟ್‌ 1 ರವರೆಗೆ 361.3 ಎಂಎಂ ವಾಡಿಕೆ ಮಳೆ ಇದ್ದು, 307.7 ಎಂಎಂ ಮಳೆಯಾಗಿದೆ. ಶೇ 15 ರಷ್ಟು ಮಳೆ ಕೊರತೆಯಾಗಿದೆ.

ಹೆಸರು ಬೆಳೆಗೆ ಹಳದಿ ರೋಗ:

ಮುಂಗಾರಿನ ಹೆಸರು ಬೆಳೆಗೆ ಹಳದಿ ರೋಗ ಕಾಣಿಸಿಕೊಂಡಿದೆ. ಎಲೆ ಹಳದಿಯಾಗಿದ್ದು, ಹಂತ ಹಂತವಾಗಿ ಗಿಡಕ್ಕೆ ಆವರಿಸುತ್ತಿದೆ. ಮೋಡ ಕವಿದ ವಾತಾವರಣ ಹಾಗೂ ಆಗಾಗ ಮಳೆ ಸುರಿಯುತ್ತಿದ್ದರಿಂದ ಬಿಸಿಲಿನ ವಾತಾವರಣ ಕಡಿಮೆಯಾಗಿದೆ. ಹೀಗಾಗಿ ಹಸಿರೆಲೆ ರೋಗ ಕಾಣಿಸಿಕೊಂಡಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳುವ ಮಾತಾಗಿದೆ.

ಬೆಳೆ ವಿವರ:

ಆಗಸ್ಟ್‌ 1ರ ಮಾಹಿತಿಯಂತೆ ಮುಂಗಾರಿನಲ್ಲಿ 4.26 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ ಇದ್ದು, 3.91 ಹೆಕ್ಟೇರ್‌ ಬಿತ್ತನೆಯಾಗಿದೆ. ಇದರಲ್ಲಿ ಪ್ರಮುಖವಾಗಿ ಭತ್ತ 42,115 ಹೆಕ್ಟೇರ್‌, ಜೋಳ 30 ಹೆಕ್ಟೇರ್‌, ಮೆಕ್ಕೆಜೋಳ 26 ಹೆಕ್ಟೇರ್‌, ಸಜ್ಜೆ 4,820 ಹೆಕ್ಟೇರ್‌, ತೊಗರಿ 1,00,013 ಹೆಕ್ಟೇರ್‌, ಹೆಸರು 17,868 ಹೆಕ್ಟೇರ್‌, ಉದ್ದು 110 ಹೆಕ್ಟೇರ್‌, ಇತರೆ ದ್ವಿಧಾನ್ಯ 50 ಹೆಕ್ಟೇರ್‌, ಶೇಂಗಾ 428 ಹೆಕ್ಟೇರ್‌, ಸೂರ್ಯಕಾಂತಿ 292 ಹೆಕ್ಟೇರ್‌, ಹತ್ತಿ 1,62,731 ಹೆಕ್ಟೇರ್‌, ಕಬ್ಬು 662 ಹೆಕ್ಟೇರ್‌ ಸೇರಿದಂತೆ 3,29,145 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. 

ಹೆಸರು ಬೆಳೆ
ಹೆಸರು ಬೆಳೆ
ಮುಂಗಾರು ಹಂಗಾಮಿನಲ್ಲಿ ಜುಲೈ ತಿಂಗಳಲ್ಲಿ ಮಳೆ ಕೊರತೆಯಾಗಿದೆ. ಆದರೆ ಬಿತ್ತನೆ ಬೀಜ ರಸಗೊಬ್ಬರಕ್ಕೆ ಯಾವುದೇ ಕೊರತೆ ಇಲ್ಲ. ಇನ್ನೆರಡು ದಿನದಲ್ಲಿ ಇಫ್ಕೋ ಆರ್‌ಸಿಎಫ್‌ ಕಂಪನಿಯಿಂದ ರಸಗೊಬ್ಬರ ಪೂರೈಕೆಯಾಗಲಿದೆ
ಕೆ.ಎಚ್‌.ರವಿ ಕೃಷಿ ಜಂಟಿ ನಿರ್ದೇಶಕ
ಮುಂಗಾರು ಹಂಗಾಮಿನ ಹೆಸರು ಬೆಳೆಗೆ ವಿವಿಧ ರೋಗಗಳು ಬರುತ್ತಿವೆ. ಕೃಷಿ ಇಲಾಖೆ ಅಧಿಕಾರಿಗಳು ಜಮೀನುಗಳಿಗೆ ಭೇಟಿ ನೀಡಿ ಸೂಕ್ತ ಸಲಹೆ ಮಾರ್ಗದರ್ಶನ ನೀಡಬೇಕು
ಉಮೇಶ ಕೆ ಮುದ್ನಾಳ ಸಾಮಾಜಿಕ ಹೋರಾಟಗಾರ
ಕಾಲುವೆ ಜಾಲದಲ್ಲಿ ಪ್ರಗತಿ
ಮುಂಗಾರು ಹಂಗಾಮಿನಲ್ಲಿ ಹೆಸರು ಬೆಳೆ ಕಾಯಿ ಬಲಿಯುವ ಹಂತ ಹಾಗೂ ಕೆಲವೆಡೆ ಹೂವಾಡುವ ಹಂತಕ್ಕೆ ಬಂದಿದೆ. ಹತ್ತಿ ಬೆಳೆಯಲ್ಲಿ ಎಡೆ ಹೊಡೆಯುತ್ತಿರುವುದು ಕಂಡು ಬರುತ್ತಿದೆ. ಯಾದಗಿರಿ ಗುರುಮಠಕಲ್‌ ತಾಲ್ಲೂಕಿನಲ್ಲಿ ಭತ್ತ ನಾಟಿ ಮುಗಿದಿದ್ದು ಶಹಾಪುರ ಸುರಪುರ ವಡಗೇರಾ ಹುಣಸಗಿ ತಾಲ್ಲೂಕಿನಲ್ಲಿ ಭತ್ತ ನಾಟಿ ಪ್ರಗತಿಯಲ್ಲಿದೆ. ಕಾಲುವೆ ಜಾಲದಲ್ಲಿ ನೀರು ಹರಿಸುತ್ತಿದ್ದರಿಂದ ಭತ್ತಕ್ಕೆ ಭರದ ಸಿದ್ಧತೆ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT