ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ | ಬಿತ್ತನೆ ಬೀಜ ಹೆಚ್ಚಿನ ದರಕ್ಕೆ ಮಾರಿದರೆ ಪರವಾನಗಿ ಅಮಾನತು

‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಜಂಟಿ ಕೃಷಿ ನಿರ್ದೇಶಕ ರವಿ ಎಚ್ಚರಿಕೆ
Published 12 ಜೂನ್ 2024, 6:10 IST
Last Updated 12 ಜೂನ್ 2024, 6:10 IST
ಅಕ್ಷರ ಗಾತ್ರ

ಯಾದಗಿರಿ: ಬಿತ್ತನೆ ಬೀಜ, ರಸಗೊಬ್ಬರವನ್ನು ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಅಂಗಡಿಯ ಪರವಾನಗಿ ಅಮಾನತು ಮಾಡಲಾಗುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕ ಕೆ.ಎಚ್‌.ರವಿ ಎಚ್ಚರಿಕೆ ನೀಡಿದರು.

ಮಂಗಳವಾರ ಹಮ್ಮಿಕೊಂಡಿದ್ದ ‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಹಲವು ರೈತರು ಕರೆ ಮಾಡಿ ಜಂಟಿ ಕೃಷಿ ನಿರ್ದೇಶಕರಿಂದ ಮಾಹಿತಿ ಪಡೆದುಕೊಂಡರು.

ಮುಂಗಾರು ಹಂಗಾಮಿಗೆ ಬಿತ್ತನೆ ಬೀಜ ಲಭ್ಯತೆ ಹೇಗಿದೆ? ಕೃಷಿ ಇಲಾಖೆಯಿಂದ ರೈತರಿಗೆ ಸಿಗುವ ಸೌಲಭ್ಯಗಳೇನು? ಹತ್ತಿಗೆ ಬಳಕೆ ಮಾಡಬೇಕಾದ ರಾಸಾಯನಿಕಗಳು ಯಾವುವು? ಕೃಷಿ ಪರಿಕರಗಳ ಲಭ್ಯತೆ ಹೇಗಿದೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಜಂಟಿ ಕೃಷಿ ನಿರ್ದೇಶಕರು ಉತ್ತರ ನೀಡಿದರು.

ಆರ್‌.ವಿಶ್ವನಾಥರೆಡ್ಡಿ, ಯಾದಗಿರಿ

ಕೃಷಿ ಇಲಾಖೆ ಅಧಿಕಾರಿಗಳು ಕಾಲಕಾಲಕ್ಕೆ ಜಮೀನುಗಳಿಗೆ ಭೇಟಿ ನೀಡುತ್ತಿಲ್ಲ. ಇದರಿಂದ ರೈತರ ಸಮಸ್ಯೆಗಳು ಪರಿಹಾರ ಕಾಣುತ್ತಿಲ್ಲ.

– ಕೃಷಿ ಇಲಾಖೆಯಲ್ಲಿ ಹಲವಾರು ಹುದ್ದೆಗಳು ಖಾಲಿ ಇವೆ. ಹೀಗಾಗಿ ಎಲ್ಲ ಕಡೆ ನಮ್ಮ ಸಿಬ್ಬಂದಿ ಭೇಟಿ ನೀಡಲು ಆಗುತ್ತಿಲ್ಲ. ಆದರೆ, ಮುಂಗಾರು ಹಂಗಾಮು, ಕೃಷಿ ಪರಿಕರದ ಬಗ್ಗೆ ವ್ಯಾಪಕ ಪ್ರಚಾರ ಕೈಗೊಳ್ಳಲಾಗುತ್ತಿದೆ. ರೈತರಿಗೆ ಹೋಬಳಿ ಕೇಂದ್ರದಲ್ಲಿ ಸೌಲಭ್ಯ ನೀಡಲಾಗುತ್ತಿದೆ. ಹೀಗಾಗಿ ಅಲ್ಲಿಗೆ ಭೇಟಿ ನೀಡಬಹುದು.

ಅಶೋಕ ಮಾಧವಾರ, ಗುರುಮಠಕಲ್‌

ಕೃಷಿ ಹೊಂಡ ಜಾಸ್ತಿ ಮಾಡಬೇಕು. ಹೆಚ್ಚು ಚೆಕ್‌ ಡ್ಯಾಂ ನಿರ್ಮಿಸಬೇಕು.

– ಕೃಷಿ ಹೊಂಡ ನಿರ್ಮಾಣಕ್ಕೆ ಸಮಸ್ಯೆ ಇಲ್ಲ. ಆದರೆ, ಚೆಕ್‌ ಡ್ಯಾಂ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಆದೇಶ ಬರಬೇಕಿದೆ. ಸ್ಥಳದ ಬಗ್ಗೆ ಸೂಕ್ತ ನಿರ್ದೇಶನ ನೀಡಲಾಗುವುದು.

ಸಂಗನಗೌಡ ಧನರೆಡ್ಡಿ, ಹುಣಸಗಿ

ಕೃಷಿ ಇಲಾಖೆಯಲ್ಲಿ ಅಂಗವಿಕಲರಿಗೆ ಶೇ 5ರಷ್ಟು ಸೌಲಭ್ಯಗಳು ನೀಡಬೇಕು

– ಶೇ 5ರಷ್ಟಲ್ಲದೆ ಆದ್ಯತೆ ಮೇಲೆ ಅಂಗವಿಕಲರಿಗೆ ಇಲಾಖೆಯಲ್ಲಿ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ ಹೀಗೆ ಹಲವರಿಗೆ ರಿಯಾಯಿತಿ ನೀಡಲಾಗುತ್ತಿದೆ.

ನಿಂಗು ಜಡಿ, ವಡಗೇರಾ

ತೊಗರಿ ಬೀಜಕ್ಕೆ ನೀಡಿದಂತೆ ಹತ್ತಿ ಬಿತ್ತನೆ ಬೀಜಕ್ಕೂ ರಿಯಾಯಿತಿ ನೀಡಬೇಕು.

– ಈಗಾಗಲೇ ತೊಗರಿ, ಹೆಸರು, ಭತ್ತದ ಬಿತ್ತನೆ ಬೀಜಕ್ಕೂ ರಿಯಾಯಿತಿ ನೀಡಲಾಗುತ್ತಿದೆ. ಹತ್ತಿಗೆ ರಿಯಾಯಿತಿ ನೀಡುವ ಕುರಿತು ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಬೇಕು.

ರಾಘವೇಂದ್ರ ಭಕ್ರಿ, ಸುರಪುರ

ಕೃಷಿ ಇಲಾಖೆ ಸೌಲಭ್ಯಗಳ ಮಾಹಿತಿ ನೀಡಿ

– ಮುಂಗಾರು ಹಂಗಾಮಿಗೆ ತೊಗರಿ, ಭತ್ತ, ಹೆಸರು ಬಿತ್ತನೆ ಬೀಜಕ್ಕೆ ರಿಯಾಯಿತಿ ದರವಿದೆ. ಪೀಡೆ ನಾಶಕಗಳು ಸಹಾಯಧನದಲ್ಲಿ ಸಿಗುತ್ತಿವೆ. ಪಹಣಿ ಇದ್ದರೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ. ಅಲ್ಲದೇ ಕೃಷಿ ಉಪಕರಣಗಳಿಗೆ ಅರ್ಜಿ ಸಲ್ಲಿಸಿದರೆ ಸಿಗುತ್ತವೆ. ಹೆಚ್ಚಿನ ಮಾಹಿತಿಗೆ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬಹುದು.

ಸಾಬಣ್ಣ ಯರಗೋಳ, ಯಾದಗಿರಿ

ಬಿತ್ತನೆ ಬೀಜ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಕ್ರಮ ತೆಗೆದುಕೊಳ್ಳಿ.

– ಹೆಚ್ಚಿನ ದರಕ್ಕೆ ಬಿತ್ತನೆ ಬೀಜ ಮಾರಾಟ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಎರಡು ಅಂಗಡಿಗಳ ಪ‍ರವಾನಗಿ ಅಮಾನತು ಮಾಡಲಾಗಿದೆ. ಜಿಲ್ಲೆಯಲ್ಲಿ ಮೇ ತಿಂಗಳಲ್ಲೇ ರಸಗೊಬ್ಬರ, ಬಿತ್ತನೆ ಬೀಜ ದಾಸ್ತಾನು ಮಾಡಿಕೊಳ್ಳಲಾಗಿದೆ.

ಹೊನ್ನಪ್ಪ ಕೊಳ್ಳೂರು, ಶಹಾಪುರ

ಹತ್ತಿಯ ಕೆಲವು ತಳಿಯ ಬಿತ್ತನೆ ಬೀಜಕ್ಕೆ ಬೇಡಿಕೆ ಸೃಷ್ಟಿಸಲಾಗಿದೆ. ಪರಿಚಯವಿದ್ದವರಿಗೆ ಮಾತ್ರ ನೀಡಲಾಗುತ್ತಿದೆ.

– ಕೆಲವು ಕಂಪನಿಯವರು ಜಿಲ್ಲೆಗೆ ಇಂತಿಷ್ಟು ಎಂದು ಬೀಜ ನೀಡಲು ಒಪ್ಪಂದ ಮಾಡಿಕೊಂಡಿರುತ್ತಾರೆ. ಹೀಗಾಗಿ ಅವರಿಗೆ ಹೆಚ್ಚು ನೀಡಿ ಎಂದು ಹೇಳಲು ಬರುವುದಿಲ್ಲ. ಬೇರೆ ಕಂಪನಿಯ ಬಿತ್ತನೆ ಬೀಜ ಖರೀದಿಸಿ.

ಉಮೇಶ ಮುದ್ನಾಳ, ಯಾದಗಿರಿ, ನವಾಜ್‌ ಜಾನ್‌ ಸೈಯದ್‌ ಮಾಧವಾರ

ಪಕ್ಕದ ತೆಲಂಗಾಣ, ಆಂಧ್ರಪ್ರದೇಶದಿಂದ ನಕಲಿ ಬೀಜ ಬರುತ್ತಿವೆ. ಏನು ಕ್ರಮ ತೆಗೆದುಕೊಂಡಿದ್ದೀರಿ?

– ಈಗಾಗಲೇ ಜಿಲ್ಲೆಯ ತೆಲಂಗಾಣ ಗಡಿಗೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ರೈತರಿಗೆ ಜಾಗೃತಿ ಮೂಡಿಸಲಾಗಿದೆ. ಬ್ಯಾನರ್‌ ಕೂಡ ಅಳವಡಿಸಲಾಗಿದೆ. ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ ಆ ಅಂಗಡಿಯ ಪರವಾನಗಿ ಅಮಾನತು ಮಾಡಲಾಗುತ್ತದೆ. ರೈತರು ಬಿಲ್‌ ಇಲ್ಲದಿದ್ದರೂ ದೂರು ನೀಡಿದರೆ ಸಾಕು.

ನಾಗಪ್ಪ ಬೆಳಗೇರಾ, ಯಾದಗಿರಿ

ಹತ್ತಿ ಬೀಜ ಗುಣಮಟ್ಟದ ಬಗ್ಗೆ ರೈತರಲ್ಲಿ ಗೊಂದಲಗಳಿವೆ. ಖಾಸಗಿ ಅಂಗಡಿಗಳು ಒಂದನ್ನೇ ಶಿಫಾರಸು ಮಾಡುತ್ತವೆ.

– ಹೆಚ್ಚು ಕ್ರಿಮಿನಾಶಕ ಬಳಸುವುದರಿಂದ ಪರಿಸರದ ಮೇಲೆ ದುಷ್ಪಾರಿಣಾಮ ಉಂಟಾಗುತ್ತದೆ. ಹೀಗಾಗಿ ಅಗತ್ಯಕ್ಕೆ ತಕ್ಕಷ್ಟು ಮಾತ್ರ ರಸಗೊಬ್ಬರ ಬಳಕೆ ಮಾಡಬೇಕು. ಒಂದೇ ಕಂಪನಿಯ ಹತ್ತಿ ಬೀಜ ಖರೀದಿಸುವುದಕ್ಕಿಂತ ಮುಂಚೆ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ.

ಜಗದೀಶ ಸಾವೂರ, ಯಾದಗಿರಿ

ಬೆಳೆಹಾನಿ ಪರಿಹಾರ ಪಡೆಯಲು ಯಾವ ದಾಖಲೆ ಸಲ್ಲಿಸಬೇಕು.

– ಬೆಳೆಹಾನಿ ಪರಿಹಾರ ಪಡೆಯಲು ಯಾವ ದಾಖಲೆಯೂ ಸಲ್ಲಿಸಬೇಕಿಲ್ಲ. ಫ್ರೂಟ್ಸ್‌ ಐಡಿ ಮೇಲೆ ಪರಿಹಾರ ಬರುತ್ತದೆ. ಒಣ ಭೂಮಿಗೆ ₹8,500, ನೀರಾವರಿಗೆ ₹17 ಸಾವಿರ, ತೋಟಗಾರಿಕೆ ಬೆಳೆ ಹಾನಿಗೆ ಹೆಕ್ಟೇರ್‌ಗೆ ₹22 ಸಾವಿರ ಪರಿಹಾರದ ಹಣ ಜಮಾ ಮಾಡಲಾಗುತ್ತಿದೆ. ಕಂದಾಯ ಇಲಾಖೆಗೆ ದಾಖಲೆ ಸಲ್ಲಿಸಿದರೆ ಸಾಕು. 

ಕಾಂತು ಪಾಟೀಲ ಶಹಾಪುರ

ಕೆಲವು ಹತ್ತಿ ಬಿತ್ತನೆ ಬೀಜ ಲಭ್ಯವಿಲ್ಲ. ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ. ಇದಕ್ಕೆ ಕ್ರಮ ಅಗತ್ಯ.

– ಒಂದೇ ಕಂಪನಿಗಿಂತ ಹಲವಾರು ಕಂಪನಿಗಳಿವೆ. ಅವುಗಳನ್ನು ಬಿತ್ತನೆ ಮಾಡಬಹುದು. ಅವುಗಳು ಕೂಡ ಅಷ್ಟೆ ಇಳುವರಿ ನೀಡುತ್ತವೆ. ಹತ್ತಿ ಬೀಜದ 60 ಕಂಪನಿಗಳಿವೆ. ಹೆಚ್ಚಿನ ದರಕ್ಕೆ ಮಾರಾಟ ಮಾಡಿದ್ದರಿಂದ ಎರಡು ಅಂಗಡಿಗಳ ಪರವಾನಗಿ ರದ್ದು ಮಾಡಲಾಗಿದೆ. ಪ್ರತಿ ತಿಂಗಳು ವಿವಿಧ ಕಂಪನಿಯ ಬಿತ್ತನೆ ಬೀಜ ರಸಗೊಬ್ಬರ ಕ್ರಿಮಿನಾಶಕಗಳ ಮಾದರಿ ಸಂಗ್ರಹ ಮಾಡಲಾಗುತ್ತಿದೆ. ಈಗಾಗಲೇ 10ಕ್ಕೂ ಹೆಚ್ಚು ಕ್ರಿಮಿನಲ್‌ ಕೇಸ್‌ ದಾಖಲಾಗಿದೆ.

ಫೋನ್‌ ಇನ್‌ ನಿರ್ವಹಣೆ: ಬಿ.ಜಿ.ಪ್ರವೀಣಕುಮಾರ, ರಾಜಕುಮಾರ ನಳ್ಳಿಕರ, ಮಹಾಂತೇಶ ಬಸಗೊಂಡೆ

‘ಒಂದಕ್ಕೆ ಜೋತು ಬೀಳಬೇಡಿ’

ರೈತರು ಒಂದೇ ಬಿತ್ತನೆ ಬೀಜಕ್ಕೆ ಜೋತು ಬೀಳಬೇಡಿ. ಹಲವಾರು ಕಂಪನಿಗಳಿವೆ. ಅವುಗಳನ್ನು ಬಿತ್ತನೆ ಮಾಡಬಹುದು. ಅಲ್ಲದೇ ಡಿಎಪಿಯಲ್ಲಿ ಪೋಟಾಷ್ ಇರುವುದಿಲ್ಲ. 20:20 ಇದಕ್ಕೆ ಪರ್ಯಾಯವಾಗಿದೆ. ಪೋಟಾಷ್‌ ಬಳಸುವುದರಿಂದ 15 ದಿನ ಮಳೆ ಬಾರದಿದ್ದರೂ ತೇವಾಂಶ ಇರುವಂತೆ ಮಾಡುತ್ತದೆ. ಕಾಯಿಗಳು ಬಲಿಷ್ಠವಾಗುತ್ತವೆ. ಉತ್ತಮ ಇಳುವರಿ ಬರುತ್ತದೆ. ಹೀಗಾಗಿ ರೈತರು ಪರ್ಯಾಯ ಗೊಬ್ಬರ ಬಿತ್ತನೆ ಬೀಜಗಳನ್ನು ಖರೀದಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕರು ಸಲಹೆ ನೀಡಿದರು.

ಶೇ 18.08ರಷ್ಟು ಬಿತ್ತನೆ

ಜಿಲ್ಲೆಯಲ್ಲಿ 2023ರ ಮುಂಗಾರು ಹಂಗಾಮಿನಲ್ಲಿ 9603 ಪ್ರಸ್ತಾವಗಳು ಸ್ವೀಕೃತವಾಗಿದ್ದು ₹11.67 ಲಕ್ಷ ವಿಮೆ ಬಾಕಿ ಇದೆ. ಜಿಲ್ಲೆಯಲ್ಲಿ 31371.38 ಕ್ವಿಂಟಲ್ ಯೂರಿಯಾ ಡಿಎಪಿ 5892.74 ಎಂಒಪಿ 399.25 ಕಾಂಪ್ಲೆಕ್ಸ್‌ 22973.36 ಎಸ್‌ಎಸ್‌ಪಿ 403.30 ಒಟ್ಟು 61040.03 ಕ್ವಿಂಟಲ್ ರಸಗೊಬ್ಬರ ದಾಸ್ತಾನು ಇದೆ. ಜಿಲ್ಲೆಯಲ್ಲಿ ಶೇ 18.08 ರಷ್ಟು ಬಿತ್ತನೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT