ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಜಿಲ್ಲೆಯ 153 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ

ಈ ಬಾರಿ ಹೆಕ್ಟೇರ್‌ಗೆ 9–10 ಕ್ವಿಂಟಲ್‌ ಬಂ‍ಪರ್‌ ಇಳುವರಿ ನಿರೀಕ್ಷೆ
Last Updated 2 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ 153 ಹೆಕ್ಟೇರ್‌ ಪ್ರದೇಶದಲ್ಲಿ ಮಾವಿನ ಬೆಳೆ ಇದ್ದು, ಮಾವಿನ ಗಿಡಗಳು ಹೂ ಬಿಟ್ಟು ಕಾಯಿ ಕಟ್ಟುವ ಹಂತಕ್ಕೆ ಬಂದಿವೆ. ಗಿಡದಲ್ಲಿ ಹೆಚ್ಚಿನ ಹೂವುಗಳಿದ್ದು, ಈ ಬಾರಿ ಬಂ‍ಪರ್‌ ಇಳುವರಿ ನಿರೀಕ್ಷಿಸಲಾಗಿದೆ.

ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕ್ಷೇತ್ರ ವೀಕ್ಷಣೆ ಕೈಗೊಂಡಿದ್ದು, ಹೆಚ್ಚಿನ ಇಳುವರಿ ಬರಲಿದೆ ಎಂಬ ನಿರೀಕ್ಷೆ ಹೊಂದಿದ್ದಾರೆ. ಮಾವು ಬೆಳೆಗಾರರು ಹಣ್ಣುಗಳ ರಾಜ ಮಾವು ನಮ್ಮ ಕೈ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ದಶೇಹ, ದಶೇಹರಿ ತಳಿಗಳನ್ನು ಹೆಚ್ಚಾಗಿ ಬೆಳೆದಿದ್ದು, ಈಗೀಗ ಮಲ್ಲಿಕಾ, ಕೇಸರಿ ಬೆಳೆಯಲಾಗಿದೆ. ಆದರೆ, ಇದರ ಇಳುವರಿ ಇನ್ನೂ ಬಂದಿಲ್ಲ.

ಹೈದರಾಬಾದ್ ಮಾರುಕಟ್ಟೆ: ಜಿಲ್ಲೆಯಲ್ಲಿ ಬೆಳೆದ ಮಾವಿನ ಹಣ್ಣುಗಳನ್ನು ಪಕ್ಕದ ತೆಲಂಗಾಣದ ಹೈದರಾಬಾದ್‌, ಮಹಾರಾಷ್ಟ್ರದ ಸೊಲ್ಲಾಪುರ, ಬೆಂಗಳೂರು, ಕಲಬುರ್ಗಿ, ರಾಯಚೂರು ಹಾಗೂ ಸ್ಥಳೀಯವಾಗಿ ಮಾರಾಟ ಮಾಡಲಾಗುತ್ತಿದೆ.

ಕಳೆದವರ್ಷಕೋವಿಡ್‌ ಲಾಕ್‌ಡೌನ್‌ ಕಾರಣದಿಂದ ಬೇರೆ ರಾಜ್ಯ, ಜಿಲ್ಲೆಗೆ ಸಾಗಿಸಲು ಸಾಧ್ಯವಾಗಿರಲಿಲ್ಲ. ಆಗ ಯಾದಗಿರಿ ಜಿಲ್ಲೆಯ ರೈತ ಉತ್ಪಾದಕ ಸಂಘದ ವತಿಯಿಂದ ಆಟೊದಲ್ಲಿ ತೆರಳಿ ಮಾರಾಟ ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

9 ರಿಂದ 10 ಕ್ವಿಂಟಲ್‌ ನಿರೀಕ್ಷೆ: ಕಳೆದ ವರ್ಷ 3 ರಿಂದ 4 ಕ್ವಿಂಟಲ್‌ ಮಾವಿನ ಇಳುವರಿ ಬಂದಿತ್ತು. ಈ ಬಾರಿ ಹೆಕ್ಟೇರ್‌ಗೆ 9 ರಿಂದ 10 ಕ್ವಿಂಟಲ್‌ ಇಳುವರಿ ಬರುವ ನಿರೀಕ್ಷೆ ಹೊಂದಲಾಗಿದೆ.

2019ರ ಅಕ್ಟೋಬರ್, ನವೆಂಬರ್ ತಿಂಗಳಲ್ಲಿ ಚಳಿ ಇರಲಿಲ್ಲ. ಇದರಿಂದ ಮಾವಿನ ಬೆಳೆ ಮೇಲೆ ಪ್ರತಿಕೂಲ ಪರಿಣಾಮ ಬೀರಿತ್ತು. ಇದರಿಂದ 2020ರಲ್ಲಿ ಮಾವಿನ ಬೆಳೆ ನಿರೀಕ್ಷಿಸಿದಷ್ಟು ಬಂದಿಲ್ಲ. ಶೇ 50ರಷ್ಟು ಇಳುವರಿ ಕುಂಠಿತವಾಗಿತ್ತು. ಜತೆಗೆ ಪ್ರತಿ ವರ್ಷವೂ ಇಳುವರಿ ಬರುವುದಿಲ್ಲ. ಒಂದು ವರ್ಷ ಹೆಚ್ಚಾದರೆ ಇನ್ನೊಂದು ವರ್ಷ ಕಡಿಮೆ ಇಳುವರಿ ಬರುತ್ತಿದೆ. ಇದು ಸಹಜ ಪ್ರಕ್ರಿಯೆ ಎನ್ನುತ್ತಾರೆ ಕವಡಿಮಟ್ಟಿ ಕೃಷಿ ಕೇಂದ್ರದ ವಿಜ್ಞಾನಿಗಳು.

ಮಾವಿಗೆ ಬೂದಿ ರೋಗ: ‘ಜಿಲ್ಲೆಯ ಕೆಲ ಮಾವಿನ ತೋಟಗಳಲ್ಲಿ ಸ್ವಲ್ಪ ಪ್ರಮಾಣದ ಬೂದಿ ರೋಗ ಕಂಡು ಬಂದಿದೆ. ಹೂ ಗೊಂಚಲು ಹಾಗೂ ಎಲೆಗಳ ಮೇಲೆ ಬೂದಿಯಂಥ ಬೆಳವಣಿಗೆ ಆಗಿ ನಂತರ ಹೂ ಗೊಂಚಲು ಒಣಗಿ ಉದುರುತ್ತವೆ. ಎಲೆಗಳು ಮುಟುರುತ್ತವೆ. ಎಳೆಯ ಕಾಯಿಗಳು ಕೂಡಾ ಉದುರುತ್ತವೆ.‌‌ಮಾವಿನ ಬೆಳೆಗಾರರು ಸಸ್ಯ ಸಂರಕ್ಷಣೆಯ ಕ್ರಮಗಳಾದ 3 ಗ್ರಾಂ ವೆಟ್ಟೆಬಲ್ ಸಲ್ಫರ್ ಅಥವಾ 1 ಗ್ರಾಂ ಟ್ರೈಡಿಮೇಫಾನ್ 50 ಡಬ್ಲ್ಯೂಪಿ ಅಥವಾ 1 ಗ್ರಾಂ ಕಾರ್ಬನಡಜಿಮ್ 50 ಡಬ್ಲ್ಯೂಪಿ ಅಥವಾ 1 ಮೀ.ಲಿ ಹೆಕ್ಸಾಕೋನೋಜೋಲ್ 5 ಇ.ಸಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಣೆ ಕೈಗೊಳ್ಳಬೇಕು’ ಎನ್ನುತ್ತಾರೆ ಕವಡಿಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಅಮರೇಶ ವೈ.ಎಸ್ ಅವರು. ‌

ಅರ್ಕಾ ಮಾವು ಸ್ಪೆಷಲ್ ಸಿಂಪಡಿಸಿ
ಮಾವಿಗೆ ಹುಳು ಬಾಧೆ ತಡೆಯಲು ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ ಬಿಡುಗಡೆ ಮಾಡಿರುವ ‘ಅರ್ಕಾ ಮಾವು ಸ್ಪೆಷಲ್’ ಸಿಂಪಡಿಸಬೇಕು ಎಂದು ಕವಡಿಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಅಮರೇಶ ವೈ.ಎಸ್, ತೋಟಗಾರಿಕೆ ವಿಜ್ಞಾನಿ ಡಾ. ಸತೀಶಕುಮಾರ ಕಾಳೆ ಸಲಹೆ ನೀಡಿದ್ದಾರೆ.

ಲಘುಪೋಷಕಾಂಶಗಳ ಮಿಶ್ರಣವು ನೀರಿನಲ್ಲಿ ಸುಲಭವಾಗಿ ಕರಗುವುದರಿಂದ ಸಿಂಪರಣೆ ಮಾಡುವುದು ಸರಳ ಹಾಗೂ ಲಾಭದಾಯಕವಾಗಿದೆ. ಪ್ರತಿ ಲೀಟರ್ ನೀರಿಗೆ 5 ಗ್ರಾಂ ಮಾವು ಸ್ಪೆಷಲ್ ಮತ್ತು ಎರಡು ನಿಂಬೆಹಣ್ಣಿನ ರಸ ಹಾಗೂ ಒಂದು ರೂಪಾಯಿ ಮೌಲ್ಯದ ಒಂದು ಶ್ಯಾಂಪುವನ್ನು ಚೆನ್ನಾಗಿ ಮಿಶ್ರಣಮಾಡಿ ತಯಾರಿಸಿದ ದ್ರಾವಣವನ್ನು ಎಲೆಗಳಿಗೆ ಸಿಂಪರಣೆ ಮಾಡಬೇಕು. ಮಾವು ಸ್ಪೆಷಲ್ ಸಿಂಪರಣೆಯಿಂದ ಗುಣಮಟ್ಟ ಫಸಲಿನೊಂದಿಗೆ ಶೇಕಡಾ 15-20 ಇಳುವರಿ ಹೆಚ್ಚಾಗಿ ಪಡೆಯಬಹುದು ಎಂದು ಸಲಹೆ ನೀಡಿದ್ದಾರೆ.

*
ನಮ್ಮ 10 ಎಕರೆ ಹೊಲದಲ್ಲಿ ಮಾವು ಬೆಳೆದಿದ್ದೇನೆ. ಕಳೆದ ಬಾರಿಗಿಂತ ಈ ಬಾರಿ ಹೂ ಹೆಚ್ಚು ಕಂಡು ಬಂದಿದೆ. ಇದರಿಂದ ಇಳುವರಿಯೂ ಹೆಚ್ಚು ನಿರೀಕ್ಷೆ ಮಾಡಲಾಗಿದೆ.
-ಬಸವಂತರಾಯಗೌಡ ಚಾಮನಳ್ಳಿ, ಮಾವು ಬೆಳೆಗಾರ

***
ಬೂದಿ ರೋಗ ಮತ್ತು ಜಿಗಿ ಹುಳು ಹತೋಟಿಗಾಗಿ ಮುಂಜಾಗೃತೆಯ ಕ್ರಮವಾಗಿ 3 ಮಿ.ಲೀ ಬೇವಿನ ಎಣ್ಣೆ ಮತ್ತು 0.3 ಮಿ.ಲೀ ಇಮಿಡಾಕ್ಲೊಪ್ರೀಡ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು.
-ಕವಡಿಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಅಮರೇಶ ವೈ.ಎಸ್

***

ಜಿಲ್ಲೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಮಾವಿನ ಇಳುವರಿ ಬರುವ ನಿರೀಕ್ಷೆ ಇದೆ. ಬೆಳೆಗಾರರು ಯಾವುದೇ ಕೀಟ ಬಾಧೆ, ತೊಂದರೆ ಅನುಭವಿಸುತ್ತಿದ್ದರೆ ಸಂಪರ್ಕಿಸಬಹುದು.
-ರಾಘವೇಂದ್ರ ಉಕ್ಕನಾಳ, ತೋಟಗಾರಿಕೆ ಉಪ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT