ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ: ಮಾವಿನ ಹಣ್ಣಿನ ಉತ್ತಮ ಇಳುವರಿ

ಲಾಕ್‍ಡೌನ್‍ನಿಂದ ವ್ಯಾಪಾರ ಇಳಿಮುಖ, ಬೆಳೆಗಾರರಿಗೆ ನಷ್ಟ
Last Updated 6 ಮೇ 2021, 11:31 IST
ಅಕ್ಷರ ಗಾತ್ರ

ಸುರಪುರ: ಈ ಬಾರಿ ಮಾವಿನ ಹಣ್ಣಿನ ಫಸಲು ಚೆನ್ನಾಗಿ ಬಂದಿದೆ. ಕಳೆದ ಎರಡು ಮೂರು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಬಂಪರ್ ಇಳುವರಿ ಬಂದಿದೆ ಎಂದು ಮಾವು ಬೆಳೆಗಾರರು ಹರ್ಷಗೊಂಡಿದ್ದರು. ಆದರೆ ಕೊರೊನಾ ಈ ಹರ್ಷವನ್ನು ಕಸಿದುಕೊಂಡಿದೆ.

ತಾಲ್ಲೂಕಿನಲ್ಲಿ ಮೊದಲಿನಿಂದಲೂ ಕೆಲವು ರೈತರು ಮಾವು ಬೆಳೆಯುತ್ತಾರೆ. ಶೇಕಡಾ 50ಕ್ಕಿಂತ ಹೆಚ್ಚು ಜವಾರಿ ತಳಿ ಇದೆ. ಉಳಿದದ್ದು ಹೈಬ್ರಿಡ್ ತಳಿ. ಅಂದಾಜಿನ ಪ್ರಕಾರ ಈ ವರ್ಷ 5 ಸಾವಿರ ಮೆಟ್ರಿಕ್ ಟನ್ ಇಳುವರಿ ಬಂದಿರಬಹುದೆಂದು ಅಧಿಕಾರಿಗಳು ಊಹಿಸಿದ್ದಾರೆ.

ಜವಾರಿ ಅಲ್ಲದೆ ಕೇಸರಿ, ಆಪೂಸ್, ಮಲಗೂಬಾ, ಬೇನಿಶನ್, ರಸಪೂರಿ, ನೀಲಂ ತಳಿಗಳನ್ನು ಬೆಳೆಯಲಾಗುತ್ತಿದೆ. ಬೇರೆ ಊರುಗಳಿಂದಲೂ ಸಾಕಷ್ಟು ಮಾವು ನಗರಕ್ಕೆ ಬರುತ್ತದೆ. ಸಾಕಷ್ಟು ಮಂಡಿಗಳೂ ಇವೆ.

ಮುಖ್ಯರಸ್ತೆಯಲ್ಲಿ, ವೃತ್ತಗಳಲ್ಲಿ, ಬಸ್‍ನಿಲ್ದಾಣದಲ್ಲಿ ಎಲ್ಲೆಂದರಲ್ಲಿ ವ್ಯಾಪಾರಿಗಳು ಕುಳಿತು ಮಾವು ಮಾರಾಟ ಮಾಡುತ್ತಿದ್ದರು. ತಲೆ ಮೇಲೆ ಪುಟ್ಟಿ ಹೊತ್ತುಕೊಂಡು ಮಾರಾಟ ಮಾಡುವವರ ಸಂಖ್ಯೆಯೂ ಅಧಿಕವಾಗಿತ್ತು. ಆದರೆ ಲಾಕ್‍ಡೌನ್ ಮಾಡಿದ್ದರಿಂದ ಬೆಳಗಿನ 10 ಗಂಟೆವರೆಗೆ ಮಾತ್ರ ಮಾರಾಟಕ್ಕೆ ಅವಕಾಶವಿದೆ. ಎಲ್ಲೆಂದರಲ್ಲಿ ಕುಳಿತು ಮಾರಾಟ ಮಾಡಲು ಅವಕಾಶವಿಲ್ಲ. ಗ್ರಾಮೀಣ ಜನರು ನಗರಕ್ಕೆ ಬರುತ್ತಿಲ್ಲ. ನಗರದ ಜನರು ಹೊರಗೆ ಕಾಲಿಡುತ್ತಿಲ್ಲ.

ಇದರಿಂದ ಮಾವು ವ್ಯಾಪಾರ ಗಣನೀಯವಾಗಿ ಕಡಿಮೆಯಾಗಿದೆ. ತೋಟಗಳನ್ನು ಗುತ್ತಿಗೆ ಹಿಡಿದ ಗುತ್ತಿಗೆದಾರರು ಆತಂಕದಲ್ಲಿದ್ದಾರೆ. ಬೆಲೆಯೂ ಕುಸಿದು ಬಿಟ್ಟಿದೆ. ಕೊರೊನಾ ಹೆದರಿಕೆಯಿಂದ ಹಣ್ಣುಗಳ ಖರೀದಿಗೆ ಜನರು ಹಿಂದೇಟು ಹಾಕುತ್ತಿದ್ದಾರೆ.

‘ಏಪ್ರಿಲ್, ಮೇ ಮತ್ತು ಜೂನ್ ಮಾವಿನ ಹಣ್ಣಿನ ಸೀಜನ್. ದಿನಾಲೂ ಹಣ್ಣು ತಿನ್ನುತ್ತಿದ್ದೆವು. ಹಣ್ಣುಗಳ ರಾಜ ಎಂದು ಕರೆಸಿಕೊಳ್ಳುವ ಮಾವಿನ ಹಣ್ಣಿನ ಸೀಕರಣಿ ಬಲು ರುಚಿ. ಕೊರೊನಾ ಹೆದರಿಕೆಯಿಂದ ಹಣ್ಣು ಕೊಳ್ಳುತ್ತಿಲ್ಲ’ ಎನ್ನುತ್ತಾರೆ ಗೃಹಿಣಿ ರಾಧಾಬಾಯಿ ಜೋಷಿ.

’10 ಎಕರೆ ಮಾವಿನ ತೋಟ ಮಾಡಿದ್ದೇನೆ. ಕೇಸರಿ, ಆಪೂಸ್ ತಳಿ ಇದೆ. ಸಾಕಷ್ಟು ಇಳುವರಿ ಬಂದಿದೆ. ಮಾರಾಟ ಇಲ್ಲ. ಹೀಗಾಗಿ ಈ ವರ್ಷ ಲಕ್ಷಾಂತರ ಹಣ ನಷ್ಟವಾಗಿದೆ. ಕಳೆದ ಬಾರಿಯೂ ಇದೇ ಪರಿಸ್ಥಿತಿ ಇತ್ತು’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಲಕ್ಷ್ಮಣನಾಯಕ ಇನಾಂದಾರ.

ವಿಟಾಮಿನ್‍ಗಳಿಂದ ಸಮೃದ್ಧಿ: ‘ಮಾವಿನಲ್ಲಿ ವಿಟಾಮಿನ್ ಎ ಮತ್ತು ಸಿ ಹೆಚ್ಚಿನ ಪ್ರಮಾಣದಲ್ಲಿದೆ. ಇದು ರೋಗ ನಿರೋಧಕತೆಯ ಶಕ್ತಿ ಹೊಂದಿದೆ. ಮಾವಿನ ಹಣ್ಣಿನಲ್ಲಿ ಮ್ಯಾಗ್ನೇಶಿಯಮ್‌, ಪೋಟ್ಯಾಶಿಯಂ ಹೆಚ್ಚು ಇರುವುದರಿಂದ ಹೃದಯ ಸಂಬಂಧಿತ ರೋಗವನ್ನು ಮತ್ತು ಕ್ಯಾನ್ಸರ್ ರೋಗವನ್ನು ತಡೆಗಟ್ಟುವ ಶಕ್ತಿ ಹೊಂದಿದೆ’ ಎಂದು ಕವಡಿಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಅಮರೇಶ ವೈ.ಎಸ್ ತಿಳಿಸುತ್ತಾರೆ.

ಹಣ್ಣು ಮಾಗಿಸಲು ಕಾರ್ಬೈಡ್ ಬಳಕೆ: ‘ಕ್ಯಾಲ್ಸಿಯಂ ಕಾರ್ಬೈಟ್, ಕಾರ್ಬೈಡ್ ಎಂದೇ ಪರಿಚಿತ. ಸದ್ಯ ಮಾರುಕಟ್ಟೆಯಲ್ಲಿ ಮಾವಿನ ಹಣ್ಣುಗಳನ್ನು ಕೃತಕವಾಗಿ ಮಾಗಿಸಲು ಇದನ್ನು ಬಳಸಲಾಗುತ್ತಿದೆ. ಈ ಕಾರ್ಬೈಡ್ ಆರ್ಸೆನಿಕ್ ಮತ್ತು ಫಾಸ್ಪರಸ್ ನಂತಹ ರಾಸಾಯನಿಕಗಳನ್ನು ಒಳಗೊಂಡಿದ್ದು, ಇವು ಮಾನವ ದೇಹದ ಅಂಗಾಂಗಳಿಗೆ ಸಂಚಕಾರ ತರಬಲ್ಲವು. ಮುಖ್ಯವಾಗಿ ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳನ್ನು ತಂದೊಡ್ಡಬಲ್ಲದು’ ಎಂದು ಎಚ್ಚರಿಸುತ್ತಾರೆ ಕೃಷಿ ವಿಜ್ಞಾನಿ ಡಾ.ಸತೀಶಕುಮಾರ ಕಾಳೆ.

‘ಒಣ ಹುಲ್ಲಿನ ಅಥವಾ ಭತ್ತದ ಹುಲ್ಲು ಚೆನ್ನಾಗಿ ಬಲಿತ ಕಾಯಿಗಳನ್ನು ಮುಚ್ಚಿಡುವುದು ಅತ್ಯಂತ ನೈಸರ್ಗಿಕ ವಿಧಾನ. ಅದನ್ನು ಬಿಟ್ಟರೆ ಎಥಿಲಿನ್ ನಂತಹ ಹಾನಿಕಾರಕವಲ್ಲದ ದ್ರಾವಣಗಳನ್ನು ಬಳಸಿ ಹಣ್ಣನ್ನು ಮಾಗಿಸಬಹುದು. ಇದರಿಂದ ಆರೋಗ್ಯಕ್ಕೆ ಹೆಚ್ಚು ಹಾನಿಯಾಗುವುದಿಲ್ಲ. ಹಣ್ಣನ್ನು ಬಳಸುವ ಮುನ್ನ ನೀರಿನಲ್ಲಿ ಒಂದೆರಡು ನಿಮಿಷ ನೆನಸಿ ಚೆನ್ನಾಗಿ ತೊಳೆದೇ ತಿನ್ನಬೇಕು’ ಎಂದು ಸಲಹೆ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT