ಭಾನುವಾರ, ಸೆಪ್ಟೆಂಬರ್ 26, 2021
21 °C
ನಗರದಲ್ಲಿ ಪ್ರತಿ ದಿನ 29 ಟನ್‌ ತ್ಯಾಜ್ಯ ಸಂಗ್ರಹ, ಇದರಲ್ಲಿ ಶೇ 70 ರಷ್ಟು ಒಣ ಕಸ

ಯಾದಗಿರಿ: ಕಸದಿಂದ ಗೊಬ್ಬರ ಉತ್ಪಾದನೆ

ಬಿ.ಜಿ.ಪ್ರವೀಣಕುಮಾರ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ನಗರದಲ್ಲಿ ಪ್ರತಿನಿತ್ಯ 29 ಟನ್‌ ಹಸಿ ಮತ್ತು ಒಣ ತ್ಯಾಜ್ಯ ಸಂಗ್ರಹವಾಗುತ್ತಿದ್ದು, ನಗರ ಹೊರವಲಯದ ಬಬಲಾದ ಬಳಿ ಅದನ್ನು ವಿಂಗಡಿಸಿ ಗೊಬ್ಬರ ತಯಾರಿಸುವ ಕೆಲಸಕ್ಕೆ ನಗರಸಭೆ ಮುಂದಾಗಿದೆ. ಒಂದು ತಿಂಗಳ ಹಿಂದೆ ಈ ಪ್ರಯತ್ನ ಆರಂಭಗೊಂಡಿದೆ.

ಇಲ್ಲಿಯವರೆಗೆ ನಗರಸಭೆ ಸಿಬ್ಬಂದಿ ಟ್ರ್ಯಾಕ್ಟರ್‌, ಆಟೊ ಇನ್ನಿತರ ವಾಹನಗಳಲ್ಲಿ ಕಸ ತಂದು ಬಬಲಾದ ಬಳಿ ಸುರುವಿ ಬರುತ್ತಿದ್ದರು. ಇದರಿಂದ ತ್ಯಾಜ್ಯ ದುರ್ವಾಸನೆ ಬೀರುತ್ತಿತ್ತು. ಬಬಲಾದ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿ ಘನತ್ಯಾಜ್ಯ ಘಟಕವನ್ನು ಅಲ್ಲಿಂದ ಸ್ಥಳಾಂತರಿಸುವಂತೆ  ಪ್ರತಿಭಟನೆಗಳು ಕೂಡ ನಡೆದಿದ್ದವು. ಅಲ್ಲದೆ ಮಾಂಸದ ತ್ಯಾಜ್ಯಕ್ಕಾಗಿ ನಾಯಿಗಳು ಹೆಚ್ಚಾಗಿದ್ದವು. ಈಗ ಅವುಗಳಿಗೆ ಮುಕ್ತಿ ಸಿಕ್ಕಿಂತಾಗಿದೆ. 

ಘನ ತ್ಯಾಜ್ಯ ನಿರ್ವಹಣೆ ಘಟಕವೂ 17 ಎಕರೆ ಇದೆ. ಇದರಲ್ಲಿ 2 ಎಕರೆಯನ್ನು ವೈದ್ಯಕೀಯ ತ್ಯಾಜ್ಯ ವಿಲೇವಾರಿಗೆ ಮೀಸಲಾಡಲಾಗಿದೆ. ಜಿಲ್ಲೆಯ ಎಲ್ಲ ವೈದ್ಯಕೀಯ ತ್ಯಾಜ್ಯಗಳನ್ನು ಇದರಲ್ಲಿ ಬೇರ್ಪಡಿಸಲಾಗುತ್ತಿದೆ. 

ಈ ಮುಂಚೆ ಇಲ್ಲಿ ಆಳೆತ್ತರದ ಕಸದ ಗುಡ್ಡೆಗಳು ಕಾಣಿಸುತ್ತಿದ್ದವು. ಈಗ ಅಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಬೇರ್ಪಪಡಿಸಲಾಗುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯ ಸ್ವಚ್ಛತಾ ಸೇವಾ ಅಭಿಯಾನದಡಿ ವಾಡಿ ಹತ್ತಿರದ ಐಸಿಸಿ ಸಿಮೆಂಟ್‌ ಕಂಪನಿಗೆ ಈಗಾಗಲೇ ಲಾರಿ ಮೂಲಕ ಪ್ಲಾಸ್ಟಿಕ್ ತ್ಯಾಜ್ಯ ರವಾನಿಸಲಾಗಿದೆ. 

ಹೊಸ ಯಂತ್ರ‌:

ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ ಆದೇಶದನ್ವಯ ಕಸದ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿಯುವಂತಿಲ್ಲ. ಹೀಗಾಗಿ ನಗರಸಭೆಯು ಕಸದ ಬೇರ್ಪಡಿಸಲು ಯಂತ್ರಗಳನ್ನು ಖರೀದಿಸಲು ಮುಂದಾಗಿದೆ. 

ಪ್ಲಾಸ್ಟಿಕ್ ತ್ಯಾಜ್ಯ ಒತ್ತಲು ಬಳಸುವ ಯಂತ್ರ (ಬೇಲಿಂಗ್‌ ಮಶಿನ್), ಕಸವನ್ನು ಗಾತ್ರದ ಆಧಾರದ ಮೇಲೆ ಸೋಸುವ ಯಂತ್ರ (ಸ್ಕ್ರೀನಿಂಗ್ ಮಶಿನ್), ಕಸ ವಿಂಗಡಿಸುವ ಯಂತ್ರ  (ಬೆಲ್ಟ್‌ ಕನ್ವೇಯರ್) ಖರೀಸಲು ಯೋಜನೆ ರೂಪಿಸಲಾಗಿದೆ. ಇದರಿಂದ ಕಾರ್ಮಿಕರ ಕೆಲಸವು ಕಡಿಮೆಯಾಗಲಿದೆ.

***

ಇನ್ನು ಒಂದು ತಿಂಗಳಲ್ಲಿ ಎರೆಹುಳ ತಂದು ಉತ್ಕೃಷ್ಟ ಗೊಬ್ಬರ ತಯಾರಿಸಲು ಯೋಜನೆ ರೂಪಿಸಲಾಗಿದೆ. ಹೀಗಾಗಿ ಎರೆಹುಳ ಗೊಬ್ಬರ ತಯಾರಿಸಲು ಶೆಡ್‌ ನಿರ್ಮಾಣ ಮಾಡಲಾಗುತ್ತಿದೆ. 
– ಸುರೇಶ ಶೆಟ್ಟಿ, ಕಿರಿಯ ಆರೋಗ್ಯ ನಿರೀಕ್ಷಕ, ನಗರಸಭೆ

***

ಇಲ್ಲಿ ಉತ್ಪಾದಿಸಿದ ಗೊಬ್ಬರವನ್ನು ಕೃಷಿ ಇಲಾಖೆಗೆ ಉಚಿತವಾಗಿ ನೀಡಲು ತೀರ್ಮಾನಿಸಲಾಗಿದೆ. ಪರೀಕ್ಷೆಗೆ ಒಳಪಟ್ಟ ನಂತರ ಸಾರ್ವಜನಿಕರು ಇದನ್ನು ಕೊಂಡೊಯ್ಯಬಹುದು
– ಸಂಗಮೇಶ ಪನಿಶೆಟ್ಟಿ, ಪರಿಸರ ಎಂಜಿನಿಯರ್, ನಗರಸಭೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು