ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ಕೃಷಿ ಸೌಲಭ್ಯ ಒದಗಿಸಲು ತಾಲ್ಲೂಕು ಪಂಚಾಯಿತಿ ಸದಸ್ಯರ ಸೂಚನೆ

ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳಿಗೆ ಸಲಹೆ
Last Updated 10 ಫೆಬ್ರುವರಿ 2021, 3:32 IST
ಅಕ್ಷರ ಗಾತ್ರ

ಯಾದಗಿರಿ: ‘ಕೃಷಿ ಇಲಾಖೆ ವತಿಯಿಂದ ರೈತರಿಗೆ ಸಿಗುವ ಸೌಲಭ್ಯಗಳ ಮಾಹಿತಿ ನೀಡಬೇಕು’ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯರು ಅಧಿಕಾರಿಗಳಿಗೆ ಸೂಚಿಸಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಅಧ್ಯಕ್ಷೆ ಭೀಮವ್ವ ಮಲ್ಲೇಶಪ್ಪ ಅಚ್ಚೋಲ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಸಾಮಾನ್ಯ ಸಭೆ ನಡೆಯಿತು.

‘ಶೇಂಗಾ ಬೆಳೆ ರಾಶಿ ಮಾಡುವ ಹಂತಕ್ಕೆ ಬಂದಿದೆ. ರೈತರಿಗೆ ಇನ್ನೂ ತಾಡಪಾಲ್‌ ವಿತರಿಸಿಲ್ಲ. ರೈತರಿಗೆ ಸರಿಯಾದ ಮಾಹಿತಿ ಇಲ್ಲ. ಇದರಿಂದ ಅಧಿಕಾರಿಗಳು ಸರ್ಕಾರದಿಂದ ಸಿಗುವ ಸೌಲಭ್ಯಗಳ ಮಾಹಿತಿ ನೀಡಬೇಕು’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಶ್ವೇತಾ ತಾಳೆಮರದ ಅವರಿಗೆ ಸದಸ್ಯರು ಸೂಚಿಸಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಶ್ವೇತಾ ತಾಳೆಮರದ ಮಾತನಾಡಿ, ‘ಹತ್ತಿಕುಣಿ ಹೋಬಳಿಯಲ್ಲಿ ನಿಗದಿತ ಸಮಯಕ್ಕೆ ಶೇಂಗಾ ಬಿತ್ತನೆ ಮಾಡಲಾಗಿದೆ. ಸೈದಾಪುರ ಹೋಬಳಿಯಲ್ಲಿ ಬೀಜದ ಕೊರತೆಯಿಂದ ಐದು ದಿನ ತಡವಾಗಿದೆ. ಈಗ ಕಟಾವು ಹಂತಕ್ಕೆ ಬಂದಿದೆ. ಒಂದು ಕಂಪನಿಯಿಂದ ತಾಡಪಾಲ್‌ ಬಂದಿದೆ. ಇನ್ನೊಂದು ಕಂಪನಿಯಿಂದ ಬಂದ ನಂತರ ರೈತರಿಗೆ ವಿತರಿಸಲಾಗುವುದು’ ಎಂದು ತಿಳಿಸಿದರು.

ಈ ವೇಳೆ ಮಾತನಾಡಿದ ಸದಸ್ಯ ಮಕ್ಬೂಲ್‌ ಪಟೇಲ್‌, ‘ಕೃಷಿ ಹೊಂಡ ಯೋಜನೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಿದೆ. ಬೋಗಸ್‌ ಬಿಲ್‌ ಸೃಷ್ಟಿಯಾಗುತ್ತಿದೆ. ಇದನ್ನು ತಡೆಗಟ್ಟಿ’ ಎಂದು ತಾಳೆಮರದ ಅವರಿಗೆ ಆಗ್ರಹಿಸಿದರು.

ನಿರ್ದೇಶಕಿ ಶ್ವೇತಾ ತಾಳೆಮರದ ಮಾತನಾಡಿ, ‘ಆತ್ಮ ಯೋಜನೆಗೆ ರೈತರು ಅರ್ಜಿ ಸಲ್ಲಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ್ದೇನೆ’ ಎಂದರು.

‘ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಗಳಿಗೆ ಸರ್ಕಾರದಿಂದ ₹5 ಲಕ್ಷ ಸಿಗುತ್ತದೆ. ಬ್ಯಾಂಕ್‌ನಿಂದ ನೋಟಿಸ್‌ ಪಡೆದಿರಬೇಕು. ಅವಿಭಕ್ತ ಕುಟುಂಬದಲ್ಲಿದ್ದವರಿಗೆ ಪರಿಹಾರ ಸಿಗುತ್ತದೆ’ ಎಂದು ಮಾಹಿತಿ ನೀಡಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಧಾ ಮಣ್ಣೂರು ಮಾತನಾಡಿ, ‘ತಾಲ್ಲೂಕು ವ್ಯಾಪ್ತಿಯಲ್ಲಿ 243ರಲ್ಲಿ 240 ಅಂಗನವಾಡಿ ಕಾರ್ಯಕರ್ತೆಯರಿದ್ದಾರೆ. ಮೂರು ಕಡೆ ಖಾಲಿ ಉಳಿದಿವೆ. ಈಗಾಗಲೇ ಅರ್ಜಿಯನ್ನು ಕರೆಯಲಾಗಿದೆ. ಎಸ್ಸೆಸ್ಸೆಲ್ಸಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಒಂದು ತಿಂಗಳು ಕಾಲಾವಕಾಶ ಇದೆ. ಸಹಾಯಕರ ಹುದ್ದೆಗೂ ಅರ್ಜಿ ಆಹ್ವಾನಿಸಲಾಗಿದೆ’ ಎಂದು ಸಭೆಗೆ ಮಾಹಿತಿ ನೀಡಿದರು.

‘243 ಅಂಗನವಾಡಿ ಕೇಂದ್ರಗಳ ಪೈಕಿ 167 ಕಡೆ ಮಾತ್ರ ಅಂಗನವಾಡಿ ಸ್ವತಂ ಕಟ್ಟಡವಿದ್ದು, 76 ಕಡೆ ಜಾಗವಿಲ್ಲದೆ ಶಾಲೆ, ಸಮುದಾಯ ಭವನ ಸೇರಿದಂತೆ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಕೆಲ ಗ್ರಾಮದಲ್ಲಿ ಎರಡು ವರ್ಷದಿಂದಲೂ ಜಾಗ ಸಿಗುತ್ತಿಲ್ಲ. ಇದರಿಂದ ಸಮಸ್ಯೆ ಆಗಿದೆ. 81 ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ’ ಎಂದು ತಿಳಿಸಿದರು.

ನಂತರ ತೋಟಗಾರಿಕೆ ಇಲಾಖೆ, ಜೆಸ್ಕಾ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು.

ಯಾದಗಿರಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಲಲಿತಾ ಮರೆಪ್ಪ ಪೂಜಾರಿ ಠಾಣಾಗುಂದಿ, ಸದಸ್ಯರಾದ ಚಂದಪ್ಪ, ಬಾಷು ರಾಠೋಡ, ತಿಪ್ಪಣ್ಣ, ಮಹಿಳಾ ಸದಸ್ಯೆಯರು, ತಾಲ್ಲೂಕು ಪಂಚಾಯಿತಿ ಇಒ ಬಸವರಾಜ ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

ಬೇಸಿಗೆ ಸಮೀಪಿಸುತ್ತಿದ್ದು, ಅಧಿಕಾರಿಗಳು ಗ್ರಾಮೀಣ ಭಾಗದಲ್ಲಿ ನೀರಿನ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಮೂಲ ಸೌಕರ್ಯ ಒದಗಿಸಬೇಕು.

ಭೀಮವ್ವ ಮಲ್ಲೇಶಪ್ಪ ಅಚ್ಚೋಲ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT