ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ ಜಿಲ್ಲೆಯ ತಾಲ್ಲೂಕು ಆಸ್ಪತ್ರೆಯಲ್ಲಿಲ್ಲ ನೇತ್ರ ತಜ್ಞರು!

ಸುರಪುರ: ತಾಲ್ಲೂಕು ಕೇಂದ್ರದಲ್ಲಿಯೂ ನೇಮಕವಾಗದ ಹುದ್ದೆ, ನೇತ್ರ ಶಸ್ತ್ರಚಿಕಿತ್ಸೆಗೆ ಸಾರ್ವಜನಿಕರ ಪರದಾಟ
Last Updated 15 ನವೆಂಬರ್ 2021, 21:15 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯಲ್ಲಿ ಮೊದಲಿಂದಲೂ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾಮಾನ್ಯ ವೈದ್ಯರ ಕೊರತೆ ಇದೆ. ಇದರ ಜೊತೆಗೆ ತಾಲ್ಲೂಕು ಕೇಂದ್ರದಲ್ಲಿ ನೇತ್ರ ತಜ್ಞರು ಇಲ್ಲದೇ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಮೂರೇ ನೇತ್ರ ತಜ್ಞರ ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಯಾದಗಿರಿ ಜಿಲ್ಲಾಸ್ಪತ್ರೆಯಲ್ಲಿ ಎರಡು ಹುದ್ದೆ, ಶಹಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಂದು ಹುದ್ದೆ ಸೃಷ್ಟಿಸಲಾಗಿದೆ. ಆದರೆ, ಸುರಪುರ ತಾಲ್ಲೂಕಿನಲ್ಲಿ ನೇತ್ರ ಪರಿಣಿತರು ನೇಮಕವಾಗಿಲ್ಲ. ಇದರಿಂದ ಖಾಸಗಿ ಆಸ್ಪತ್ರೆಗಳತ್ತ ಸಾರ್ವಜನಿಕರು ತೆರಳುವುದು ಸಾಮಾನ್ಯವಾಗಿದೆ.

ನಾಯಕ ನಟ ಪುನೀತ್‌ ರಾಜ್‌ಕುಮಾರ್ ನಿಧನದ ನಂತರ ಜಿಲ್ಲೆಯಲ್ಲಿ ನೇತ್ರದಾನ ಬಗ್ಗೆ ಜಾಗೃತಿ ಬಂದಿದ್ದು, ನೇತ್ರದಾನ ಮಾಡುತ್ತಿದ್ದಾರೆ. ಜೊತೆಗೆ ನೇತ್ರ ಪರೀಕ್ಷೆ ಮಾಡಿಸಿಕೊಳ್ಳುತ್ತಿದ್ದಾರೆ. ಆದರೆ, ನೇತ್ರದ ಶಸ್ತ್ರಚಿಕಿತ್ಸಕರೇ ಸುರಪುರದಲ್ಲಿ ಲಭ್ಯರಿಲ್ಲ. ಕಲಬುರಗಿ, ವಿಜಯಪುರ, ಹುಬ್ಬಳ್ಳಿಗೆ ಶಿಫಾರಸು ಮಾಡಲಾಗುತ್ತಿದೆ. ಇದರಿಂದ ಸಾರ್ವಜನಿಕರ ಸಮಯ, ಹಣ ವ್ಯರ್ಥ್ಯವಾಗುತ್ತಿದೆ.

ಜಿಲ್ಲೆಯ ಯಾದಗಿರಿ, ಶಹಾಪುರ, ಸುರಪುರ ತಾಲ್ಲೂಕಿನಲ್ಲಿ 9 ನೇತ್ರ ಅಧಿಕಾರಿಗಳು ಮಾತ್ರ ಇದ್ದಾರೆ. ಇವರು ಕಣ್ಣು ತಪಾಸಣೆ ಮಾಡಿ ತಜ್ಞ ವೈದ್ಯರ ಬಳಿ ಶಸ್ತ್ರಚಿಕಿತ್ಸೆಗೆ ಕಳುಹಿಸುತ್ತಾರೆ. ಸರ್ಕಾರಿ ಶಾಲಾ–ಕಾಲೇಜಿಗೆ ತೆರಳಿಯೂ ವಿದ್ಯಾರ್ಥಿಗಳ ನೇತ್ರ ತಪಾಸಣೆ ಮಾಡುತ್ತಾರೆ. ಆದರೆ, ಸುರಪುರ ತಾಲ್ಲೂಕು ಕೇಂದ್ರವಾದರೂ ಪರಿಣಿತ ವೈದ್ಯರ ಹುದ್ದೆಯಿಂದ ವಂಚಿತವಾಗಿದೆ.

ಖಾಸಗಿ ಆಸ್ಪತ್ರೆಗಳೊಂದಿಗೆ ಒಪ್ಪಂದ

ಸುರಪುರ ತಾಲ್ಲೂಕಿನಲ್ಲಿ ನೇತ್ರ ತಜ್ಞರಿಲ್ಲದ ಪರಿಣಾಮ ನೆರೆಯ ಜಿಲ್ಲೆಗಳಾದ ವಿಜಯಪುರ, ಕಲಬುರಗಿ ಖಾಸಗಿ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡು ತಿಂಗಳಿಗೂ, ಹದಿನೈದು ದಿನಕ್ಕೊಮ್ಮೆ ನೇತ್ರ ಶಿಬಿರ ಮಾಡಲಾಗುತ್ತಿದೆ. ಇಲ್ಲಿ ತಪಾಸಣೆ ಮಾಡಿದ ನಂತರ ಆ ಆಸ್ಪತ್ರೆಗಳಿಗೆ ಫಲಾನುಭವಿಗಳು ತೆರಳಿ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಬೇಕು. ಒಬ್ಬರಿಗೆ 2 ಸಾವಿರದಂತೆ ಶಸ್ತ್ರಚಿಕಿತ್ಸೆಗಾಗಿ ಮಾತ್ರ ಸರ್ಕಾರ ಹಣ ನೀಡುತ್ತಿದೆ. ಆದರೆ, ಊಟ, ಹೋಗಿ ಬರುವ ಖರ್ಚು ತಾವೇ ಭರಿಸಬೇಕಾಗಿದೆ. ಇದರಿಂದ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ಈ ಹಿಂದೆ ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆ, ಕಲಬುರಗಿಯ ಗೋರ್ಕಾ ನೇತ್ರಾಲಯದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ವಿಜಯಪುರದ ಅನುಗ್ರಹ ಕಣ್ಣಿನ ಆಸ್ಪತ್ರೆ ತಾಂತ್ರಿಕ ತೊಂದರೆಯಿಂದ ಈಗ ಸುರಪುರದವರಿಗೆ ತಪಾಸಣೆ ಮಾಡುತ್ತಿಲ್ಲ. ಹುಬ್ಬಳ್ಳಿಯ ಆಸ್ಪತ್ರೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಹಲವಾರು ಆಸ್ಪತ್ರೆಗಳಿಗೆ ವಿಚಾರಿಸಿದರೂ ಯಾರೂ ಒಪ್ಪಂದಕ್ಕೆ ಒಪ್ಪುತ್ತಿಲ್ಲ ಎಂದು ಅಧಿಕಾರಿಗಳು ನೀಡುವ ಮಾಹಿತಿಯಾಗಿದೆ.

ಕಾಮನ್ ರಿವೀವ್ ಮಿಷನ್ (ಸಿಆರ್‌ಎಂ) ಕೇಂದ್ರದ ತಂಡದ ಎದುರು ಸುರಪುರ ತಾಲ್ಲೂಕಿನ ನಿವಾಸಿಗಳು ನೇತ್ರತಜ್ಞರ ಬಗ್ಗೆ ಪ್ರಸ್ತಾಪ ಸಲ್ಲಿಸಲಾಯಿತು. ಈ ವೇಳೆ ಸೂಕ್ತವಾಗಿ ಸ್ಪಂದಿಸಿದ ಅಧಿಕಾರಿಗಳು ಕ್ರಮಕ್ಕೆ ಸೂಚಿಸಿದರು.

ಸುರಪುರ ತಾಲ್ಲೂಕಿನಲ್ಲಿ ಆಡಳಿತ ಬಿಜೆಪಿ ಪಕ್ಷದ ಶಾಸಕ ನರಸಿಂಹ ನಾಯಕ (ರಾಜೂಗೌಡ) ಇದ್ದು, ಶೀಘ್ರವೇ ನೇತ್ರ ತಜ್ಞರನ್ನು ನೇಮಕ ಮಾಡಿಸಬೇಕು ಎಂದು ಸುರಪುರ ಜನತೆಯ ಆಗ್ರಹವಾಗಿದೆ.

***

ಜಿಲ್ಲೆಯಲ್ಲಿ ಸುರಪುರ ತಾಲ್ಲೂಕಿನಲ್ಲಿ ನೇತ್ರ ತಜ್ಞರ ಹುದ್ದೆ ಇಲ್ಲ. ಎನ್‌ಜಿಒ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಂಡು ನೇತ್ರ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ
ಡಾ.ಭಗವಂತ ಅನವಾರ, ಅಂಧತ್ವ ನಿವಾರಣ ಅಧಿಕಾರಿ

***

ಸುರಪುರ ಸರ್ಕಾರಿ ಆಸ್ಪತ್ರೆಯಲ್ಲಿ ನೇತ್ರ ಪರಿಣಿತರಿಲ್ಲದೆ ಹಿರಿಯ ನಾಗರಿಕರಿಗೆ ತೊಂದರೆಯಾಗಿದೆ. ಶೀಘ್ರ ತಜ್ಞ ವೈದ್ಯರನ್ನು ನೇಮಕ ಮಾಡಬೇಕು
ಶ್ರೀಹರಿರಾವ ಆದವಾನಿ, ಹಿರಿಯ ನಾಗರಿಕ ಸುರಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT