ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರಪುರ: ತಾಪಮಾನ ಇಳಿದರೂ ಧಗೆಯ ಬೇಗುದಿ

Published 23 ಮೇ 2024, 5:13 IST
Last Updated 23 ಮೇ 2024, 5:13 IST
ಅಕ್ಷರ ಗಾತ್ರ

ಸುರಪುರ: ಕಳೆದ ವಾರ ಎರಡು ದಿನ ಮುಖ ತೋರಿಸಿದ್ದ ಮಳೆರಾಯ ಮೋಡದಲ್ಲಿ ಮರೆಯಾಗಿಬಿಟ್ಟಿದ್ದಾನೆ. ಪರಿಣಾಮ ಧಗೆ ಜನರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ.

ಮೇ ಮೊದಲ ಮತ್ತು ಎರಡನೇ ವಾರದಲ್ಲಿ ತಾಪಮಾನ 42 ರಿಂದ 43 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿತ್ತು. ಜನರು ಬಿಸಿಲಿನ ತಾಪಕ್ಕೆ ತತ್ತರಿಸಿದ್ದರು. ವೃದ್ಧರು, ಮಕ್ಕಳ ಪರಿಸ್ಥಿತಿಯಂತೂ ಹೇಳತೀರದಾಗಿತ್ತು.

ಕೆಲ ದಿನಗಳ ಹಿಂದೆ ವರುಣ ಭರ್ಜರಿಯಾಗಿಯೇ ಎಂಟ್ರಿ ಕೊಟ್ಟ. ಗುಡುಗು, ಮಿಂಚಿನಿಂದ  ಆರ್ಭಟಿಸಿದ. ಎರಡು, ಮೂರು ದಿನ ರಾತ್ರಿಯಿಡೀ ಸುರಿದು ಇಳೆಯನ್ನು ತಂಪಾಗಿಸಿದ. ಜನರು ಬಿಸಿಲಿನ ಬದಲಿಗೆ ಚಳಿ ಚಳಿ ಎನ್ನುವಂತಾಯಿತು. ತಾಪಮಾನವೂ 36 ಡಿಗ್ರಿ ಸೆಲ್ಸಿಯಸ್‌ವರೆಗೆ ಜರ‍್ರನೇ ಇಳಿಯಿತು.
ನಂತರ ಧಗೆ ಹೆಚ್ಚಾಯಿತು. ಬೆಳಿಗ್ಗೆಯೇ ಬೆವರಿನ ಸ್ನಾನ ಆಗುತ್ತಿದೆ. ಫ್ಯಾನ್, ಏರಕೂಲರ್, ಎ.ಸಿ. ಇಲ್ಲದೇ ಜೀವನ ಸಾಗದಂತಾಗಿದೆ. ವರುಣ ದೇವ ಜನರನ್ನು ಅಕ್ಷರಶಃ ಬಾಣಲೆಯಿಂದ ಬೆಂಕಿಗೆ ದೂಡಿದಂತಾಗಿದೆ.

ಯುವಕರು, ಮಕ್ಕಳು ಧಗೆಯಿಂದ ತಪ್ಪಿಸಿಕೊಳ್ಳಲು ಗಂಟೆಗಟ್ಟಲೇ ಬಾವಿಯಲ್ಲಿ ಈಜಾಡುತ್ತಾರೆ. ನಗರದ ಐತಿಹಾಸಿಕ ದೇವರಬಾವಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಈಜುಗಾರರಿಂದ ತುಂಬಿರುತ್ತದೆ.
ಎಳೆ ಮಕ್ಕಳು, ಹಸುಗೂಸುಗಳು, ವೃದ್ಧರು ಒದ್ದಾಡುವಂತಾಗಿದೆ. ವಿದ್ಯುತ್ ಸಂಪರ್ಕ ಹೋದರಂತೂ ನರಕಸದೃಶ್ಯವಾಗುತ್ತದೆ. ಹೊರಗೆ ತಿರುಗಾಡಿದರೆ ಉತ್ತಮ ಎಂದು ಧಗೆ ತಪ್ಪಿಸಿಕೊಳ್ಳಲು ಪುರುಷರು ಮನೆಯ ಹೊರಗೆ, ಗಿಡದ ನೆರಳಿಗೆ ಕಾಲ ಕಳೆಯುತ್ತಿದ್ದಾರೆ.

ಬಿಸಿಲಿನ ತಾಪದಿಂದ ತಣಿಸಿಕೊಳ್ಳಲು ಜನರು ತಂಪುಪಾನೀಯ, ಎಳನೀರು, ಐಸ್‍ಕ್ರೀಮ್, ಮಜ್ಜಿಗೆಗೆ ಮೊರೆ ಹೋಗುತ್ತಿದ್ದರು. ಆದರೆ ಇವು ಧಗೆಯ ಬೇಗುದಿಗೆ ಶಮನ ನೀಡುತ್ತಿಲ್ಲ.

ರೈತರಿಗೆ ತಪ್ಪದ ಗೋಳು: ಕಳೆದ ವರ್ಷ ಬರಗಾಲದಿಂದ ಜರ್ಜರಿತನಾಗಿದ್ದ ರೈತ ಈ ವರ್ಷದ ಮುಂಗಾರು ಬೇಗನೇ ಪ್ರವೇಶವಾಗಿದೆ ಎಂದು ಹರ್ಷಭರಿತನಾಗಿದ್ದ. ಹಲವಾರು ರೈತರು ಭೂಮಿ ಹದ ಮಾಡುವ ಕಾರ್ಯದಲ್ಲಿ ತೊಡಗಿದ್ದರು.  ಚೆನ್ನಾಗಿ ಮಳೆ ಬಂದು ಭೂಮಿಯಲ್ಲಿ ತೇವಾಂಶ ಉಂಟಾದರೆ ಬಿತ್ತನೆಯ ಸಿದ್ಧತೆಯಲ್ಲೂ ತೊಡಗಿದ್ದರು. ವರ್ತಕರೂ ಬಿತ್ತನೆ ಬೀಜಗಳ ಭರ್ಜರಿ ಸಂಗ್ರಹ ಮಾಡಿದ್ದರು.
ಆದರೆ ರೈತರ ಮೂಗಿಗೆ ತುಪ್ಪ ಸವರಿದ ಮಳೆರಾಯ ಅವರನ್ನು ತಲೆ ಮೇಲೆ ಕೈಹೊತ್ತು ಮುಗಿಲ ಕಡೆ ನೋಡುವಂತೆ ಮಾಡಿದ್ದಾನೆ.

ತಾಪಮಾನ ಕಡಿಮೆಯಾಗಿ ಉಸ್ಸಪ್ಪಾ ಎನ್ನುತ್ತಿದ್ದಂತೆ ಧಗೆಯ ಬೇಗುದಿ ಹಿಂದೆಯೇ ಬೇತಾಳದಂತೆ ಬಂದಿದೆ. ಕಳೆದ ಐದಾರು ವರ್ಷಗಳಲ್ಲಿ ಈ ಮಟ್ಟಿನ ಧಗೆ ಅನುಭವಿಸಿರಲಿಲ್ಲ
ಕೃಷ್ಣಭಟ್ಟ ಜೋಷಿ ಹಿರಿಯ ನಾಗರಿಕ
ಬರಗಾಲದಿಂದ ಸಂಕಷ್ಟದಲ್ಲಿದ್ದ ರೈತನಿಗೆ ಕೆಲ ದಿನಗಳ ಹಿಂದೆ ಸುರಿದ ಮಳೆ ಆಶಾಭಾವನೆ ಮೂಡಿಸಿತ್ತು. ಆದರೆ ಬಂದಷ್ಟೇ ವೇಗದಲ್ಲಿ ವರುಣ ತೆರೆಮರೆಗೆ ಸರಿದಿದ್ದು ಅನ್ನದಾತನಿಗೆ ಬರೆ ಎಳೆದಂತಾಗಿದೆ
ಶಿವಪ್ಪ ಸಕ್ರಿ ರೈತ
ಈ ವರ್ಷ ಉತ್ತಮ ಮಳೆಯ ಮುನ್ಸೂಚನೆ ಇದೆ. ಮುಂಗಾರು ಬೇಗನೆ ಪ್ರವೇಶ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ. ಕೃಷಿ ಇಲಾಖೆ ಅಗತ್ಯ ಬಿತ್ತನೆ ಬೀಜಗಳನ್ನು ದಾಸ್ತಾನು ಮಾಡಿದೆ
ಭೀಮರಾಯ ಹವಾಲ್ದಾರ ಸಹಾಯಕ ಕೃಷಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT